ಸ್ವಾತಂತ್ರ್ಯ ನಂತರದ ಈ ಎಪ್ಪತ್ತು ವರ್ಷಗಳ ಅವಧಿಯಲ್ಲಿ ದರ್ಖಾಸ್ತು ಕಾನೂನಿನ ಮೂಲಕ, ಉಳುವವನೆ ಹೊಲದೊಡೆಯ ಕಾನೂನಾದ ಭೂ ಮಸೂದೆಯ ಮೂಲಕ, ಅಕ್ರಮ ಸಕ್ರಮದ ಮೂಲಕ, ನಿವೇಶನ ರಹಿತರಿಗೆ ನಿವೇಶನ ನೀಡುವ ಮೂಲಕ, ಆಶ್ರಯ ಯೋಜನೆಯ ಮೂಲಕ, 94ಸಿ ಹಾಗೂ 94ಸಿಸಿಗಳ ಮೂಲಕ ಈ ದೇಶದ ಶೇಕಡಾ 99ರಷ್ಟು ಜನರಿಗೆ ಭೂಮಿಯನ್ನು ವಿತರಿಸಿದ ಪಕ್ಷ ಕಾಂಗ್ರೆಸ್ ಪಕ್ಷ. ಮರೆವು ಮನುಷ್ಯನ ಸಹಜ ಗುಣ, ಆ ಕಾರಣಕ್ಕಾಗಿ ಅದರ ಫಲಾನುಭವಿಗಳು ತಮ್ಮ ಹಿರಿಯರಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ದೊರೆತ ಸವಲತ್ತುಗಳು ಏನೆಂಬುವುದನ್ನು ಮರೆತಿದ್ದಾರೆ. ಅದನ್ನು ನೆನಪಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು ಹೇಳಿದ್ದಾರೆ.
ಅವರು ಆದಿತ್ಯವಾರ ಕುಂದಾಪುರ ತಾಲೂಕಿನ ಬೆಳ್ವೆಯಲ್ಲಿ ನಡೆದ ಹಾಲಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ದಿಸಿದವರ ಮತ್ತು ವಿಜೇತರಾದ ನೂತನ ಸದಸ್ಯರನ್ನು ಅಭಿನಂದಿಸಿ ಮಾತನಾಡಿದರು.
ಒಂದು ಕಾಲದಲ್ಲಿ ಕೇವಲ ಶ್ರೀಮಂತರಿಗೆ ಮಾತ್ರವೇ ದೊರೆಯುತ್ತಿದ್ದ ಇಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ವೃತ್ತಿಪರ ಶಿಕ್ಷಣ ಇಂದು ಆರ್ಥಿಕವಾಗಿ ಹಿಂದುಳಿದ ವರ್ಗದ ವಿಧ್ಯಾರ್ಥಿಗಳಿಗೆ ದೊರೆಯುವಂತಾದುದು ವಿರಪ್ಪ ಮೊಯಿಲಿಯವರು ತಂದ ಸಿಇಟಿ ಕಾನೂನಿನಿಂದಾಗಿ. ಇಂದು ರಾಜಕೀಯ ಇನ್ನಿತರ ಕ್ಷೇತ್ರಗಳಲ್ಲಿ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರು ಹೆಚ್ಚಿನ ಸ್ಥಾನಗಳನ್ನು ಪಡೆಯುವಂತಾದುದು ಕಾಂಗ್ರೆಸ್ ತಂದ ಮೀಸಲಾತಿಯ ಕಾರಣದಿಂದಾಗಿ ಎಂದವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಗೂ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಗ್ರಾಮ ಪಂಚಾಯತ್ ಸ್ಪರ್ಧಿಸಿದ, ವಿಜೇತರಾದ ಸದಸ್ಯರನ್ನು ಅಭಿನಂದಿಸಿದರು.