ಪ್ರತ್ಯಕ್ಷ ವರದಿ: ಓಸ್ಕರ್ ಲುವಿಸ್
ಗುಜರಾತ್ ಮಾಡೆಲ್ ಎಂದು ಬರೋಬ್ಬರಿ ಹತ್ತು ವರ್ಷ ಬೋಂಗು ಬಿಟ್ಟು ಇಡೀ ರಾಷ್ಟ್ರವನ್ನೇ ಯಾಮಾರಿಸಿದ್ದ, ಅದೇ ಅಭಿವೃದ್ಧಿಯ ಸುಳ್ಳುಗಳನ್ನು ಮಂದಿಟ್ಟುಕೊಂಡು ಪ್ರಧಾನಮಂತ್ರಿಯ ಪಟ್ಟಕ್ಕೇರಿದ ಮೋದಿಯವರ 'ಅಭಿವೃದ್ಧಿ ಸ್ವರ್ಗ'ದಲ್ಲಿ ಕೋವಿಡ್ ರೋಗಿಗಳ ದುರವಸ್ಥೆಯ ಕುರಿತು ಚರ್ಚೆಯಾಗುತ್ತಿದೆ. ಅದೇ ವೇಳೆ ಮೋದಿ ಭಕ್ತರ ಲೇಟೆಸ್ಟ್ ಸ್ವರ್ಗ 'ಯು ಪಿ ಮಾಡೆಲ್' ಎಂದು ಕರೆಸಿಕೊಳ್ಳುವ ಅಜಯ್ ಕುಮಾರ್ ಬಿಶ್ಟ್ ಆಡಳಿತದಲ್ಲಿರುವ ಉತ್ತರಪ್ರದೇಶದಲ್ಲೂ ಇದನ್ನೂ ಮೀರಿಸುವ ದುರವಸ್ಥೆಗಳಿವೆ.. ಕೊರೋನಾ ವೈರಸ್'ನ ಹೆಡೆಮುರಿ ಕಟ್ಟಲು ತಟ್ಟೆ, ಜಾಗಟೆ ಸದ್ದು ಮತ್ತು ಗೋಮೂತ್ರದ ಮದ್ದು ಹಿಡಿದುಕೊಂಡು ಹೋರಾಡಿದವರಲ್ಲಿ ಮುಂಚೂಣಿಯಲ್ಲಿದ್ದ UP ಮುಖ್ಯಮಂತ್ರಿ, ಕೆಲವೇ ದಿನಗಳ ಹಿಂದೆ ವ್ಯಾಕ್ಸಿನ್ ಪಡೆದುಕೊಂಡರೂ ಈಗ ಕೋವಿಡ್ ಪಾಸಿಟಿವ್ ಆಗಿ ಐಸೋಲೇಷನ್'ನಲ್ಲಿದ್ದಾರೆ.
ಇನ್ನು ಕೋವಿಡ್ ಮಹಾಸ್ಫೋಟಕ್ಕೆ ಕಾರಣವಾಗಿರುವ ಕುಂಭಮೇಳವು ನಡೆಯುತ್ತಿರುವ ಹರಿದ್ವಾರವು ಉತ್ತರಪ್ರದೇಶದ ಗಡಿಜಿಲ್ಲೆ ಮುಜಫರ್ ನಗರಕ್ಕೆ ತಾಗಿಕೊಂಡೇ ಇದೆ. ಭಾರತದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾಗಗಳಿಂದ ಹರಿದ್ವಾರಕ್ಕೆ ಬರುವವರು ದೆಹಲಿ ಇಲ್ಲವೇ ಉತ್ತರಭಾರತದ ಮೂಲಕವೇ ಹಾದು ಹೋಗಬೇಕು. ಇದು ಉತ್ತರಭಾರತದಲ್ಲಿ 'ಕುಂಭ ವೈರಸ್' ಹರಡುವಿಕೆ ಮುಖ್ಯ ಕಾರಣವಾಗಿದೆ!
ಇನ್ನು ಲಕ್ನೋ, ಕಾನ್ಪುರ್, ವಾರಣಾಸಿ, ಮಥುರಾ, ಅಲಹಾಬಾದ್ ಮುಂತಾದ ಉತ್ತರಪ್ರದೇಶದ ಪ್ರಮುಖ ನಗರಗಳಲ್ಲಿ ವೈದ್ಯಕೀಯ, ಶೈಕ್ಶಣಿಕ, ಸಾರಿಗೆ ಮುಂತಾದ ಎಲ್ಲಾ ಮುಖ್ಯ ಜನೋಪಯೋಗಿ ಸೇವೆಗಳು - ನಮ್ಮ ರಾಜ್ಯದ ಸಾಧಾರಣ ಹಳ್ಳಿಯೊಂದರಲ್ಲಿರುವುದಕ್ಕಿಂತಲೂ ಕಳಪೆಯಾಗಿವೆ. ಕಳೆದ ವರ್ಷ ಕೋವಿಡ್ ಕೇಂದ್ರಗಳಾಗಿ ಮಾರ್ಪಾಡಾದ ಬಹುತೇಕ ಕಟ್ಟಡಗಳಲ್ಲಿ ಇಂದಿಗೂ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ.. ಎಷ್ಟೋ ಆಸ್ಪತ್ರೆಗಳಲ್ಲಿ ಬೆಡ್'ಗಳಿಲ್ಲ, ಕೆಲವು ಕಡೆ ರೋಗಿಗಳನ್ನು ನೆಲದ ಮೇಲೆ ಇನ್ನೂ ಕೆಲವೆಡೆ ಒಂದೇ ಬೆಡ್ ಮೇಲೆ ಮೂರು ಮೂರು ರೋಗಿಗಳನ್ನು ಮಲಗಿಸುತ್ತಿದ್ದಾರೆ.. ಎಷ್ಟೋ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ.. ಕೋವಿಡ್'ನಿಂದ ಮೃತರಾದವರ ದೇಹಗಳನ್ನು ಸುಡಲೆಂದೇ ಮಾಡಲಾಗಿರುವ ಸ್ಮಶಾನಗಳದ್ದೂ ಇದೇ ಕಥೆ.. ಆಸ್ಪತ್ರೆಯ ಹೊರಗೆ ರೋಗಿಗಳು, ಸ್ಮಶಾನದ ಹೊರಗೆ ಮೃತಪಟ್ಟ ರೋಗಿಯ ಕುಟುಂಬಿಕರು ದಿನವಿಡೀ ಸಾಲುಗಟ್ಟಿ ನಿಲ್ಲುವಂತಾಗಿದೆ.