'ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಸಾವು' ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ದುರಂತ: ಸಚಿವ ಎಸ್. ಸುರೇಶ್ ಕುಮಾರ್
'ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೇ 24 ಮಂದಿ ಸಾವು' ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ದುರಂತ: ಸಚಿವ ಎಸ್. ಸುರೇಶ್ ಕುಮಾರ್
Advertisement
ಕೊರೋನಾ ರಣಕೇಕೆ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಸಂಭವಿಸಿದ ಮಹಾ ದುರಂತದಲ್ಲಿ ಆಕ್ಸಿಜನ್ ಕೊರತೆಯಿಂದ ನಿನ್ನೆ ಬೆಳಗ್ಗೆಯಿಂದ ಇಂದು ಬೆಳಗ್ಗೆಯವರೆಗೆ 24 ಸಾವು ಸಂಭವಿಸಿರುವ ಕುರಿತು ವರದಿಯಾಗಿದೆ. ಈ ಕುರಿತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ದುರಂತ ನಡೆದಿದೆ ಎಂದು ಹೇಳಿಕೆ ನೀಡಿದ್ದು ಆ ಹೇಳಿಕೆಯ ವಿವರಗಳು ಇಂತಿದೆ:
ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಿಂದ ಆಕ್ಸಿಜನ್ ಸರಬರಾಜಾಗದೆ ಈ ದುರಂತ ಸಂಭವಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
'ನಮಗೆಲ್ಲ ತಿಳಿದಂತೆ ಮೈಸೂರಿನಲ್ಲಿ ಸಾಕಷ್ಟು ಆಕ್ಸಿಜನ್ ಸಿಲಿಂಡರ್‌ಗಳ ಶೇಖರಣೆ ಇದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಣಾಮ ಹೆಚ್ಚಿದೆ ಎಂಬ ಕಾರಣಕ್ಕೆ ಒಳ್ಳೆಯ ಉದ್ದೇಶದಿಂದಲೇ ಅವರು ಅಮ್ಲಜನಕ ಹೆಚ್ಚಾಗಿ ಇಟ್ಟುಕೊಂಡಿರಬಹುದು. ಆದರೆ. ಮೈಸೂರಿನಿಂದ ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗೆ ಆಕ್ಸಿಜನ್ ಸರಬರಾಜು ಅಲ್ಲಿಂದಲೇ ಆಗಬೇಕು. ಇದರಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂದು ಅವರು ಹೇಳಿದ್ದಾರೆ. ಇದೇವೇಳೆ, ಮೈಸೂರಿನಲ್ಲಿ ನಿಷ್ಕ್ರಿಯವಾಗಿರುವ ಆಕ್ಸಿಜನ್ ಪ್ಲಾಂಟ್ ಇದೆ. ಅದನ್ನು ನಮಗೆ ನೀಡಿ, ನಾವೇ ನಿರ್ವಹಣೆ ಮಾಡಿಕೊಳ್ಳುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇವೆ' ಎಂದು ಸುರೇಶ್ ಕುಮಾರ್ ಮಾಧ್ಯಮಗಳಿಗೆ ಹೇಳಿದ್ಧಾರೆ.
ಸಚಿವರ ಹೇಳಿಕೆಗೆ ವ್ಯಾಪಕ ಆಕ್ರೋಶ: ಪ್ರಕರಣ ಇಷ್ಟು ಗಂಭೀರವಾಗಿದ್ದರೂ, ಸರ್ಕಾರದಿಂದ ಸರಿಯಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಸಾಧ್ಯವಾಗದಿದ್ದರೂ ಸಚಿವರು ಈ ರೀತಿ ಜಾರುವಂತೆ ನಯವಾಗಿ ಹೇಳಿಕೆ ನೀಡುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
'ಚಾಮರಾಜನಗರ ದುರಂತ: ಇದು ಸಾವೋ, ಕೊಲೆಯೋ? ಈ ದುರಂತದಂತೆ ಮತ್ತೆಷ್ಟು ಜನ ಬಳಲಬೇಕು? ಮಲಗಿರುವ ವ್ಯವಸ್ಥೆ ಎದ್ದೇಳಬೇಕು' : ರಾಹುಲ್ ಗಾಂಧಿ
ಚಾಮರಾಜನಗರ ಆಕ್ಸಿಜನ್ ದುರಂತ ದೆಹಲಿ ಅಂಗಳಕ್ಕೆ ತಲುಪಿದ್ದು, ಈ ಬಗ್ಗೆ ಟ್ವೀಟ್ ಮಾಡಿ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ದುರಂತದ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಇದು ಸಾವೋ ಅಥವಾ ಕೊಲೆಯೋ ಎಂದು ಪ್ರಶ್ನೆ ಮಾಡಿದ್ದಾರೆ. ಈ ದುರಂತದಂತೆ ಮತ್ತೆಷ್ಟು ಜನ ಬಳಲಬೇಕು? ಮಲಗಿರುವ ವ್ಯವಸ್ಥೆ ಎದ್ದೇಳಬೇಕು ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಉಂಟಾದ 24ಸಾವುಗಳಿಗೆ ಕರ್ನಾಟಕದ ಬಿಜೆಪಿ ಸರ್ಕಾರವೇ ಹೊಣೆ: ಈ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಸುಧಾಕರ್ ರಾಜೀನಾಮೆ ನೀಡಲಿ: ಸಿದ್ದರಾಮಯ್ಯ ಆಗ್ರಹ.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ
ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಜನ ರೋಗಿಗಳು ಸಾವಿಗೀಡಾಗಿರುವ ಘಟನೆ ತಿಳಿದು ಸಂಕಟವಾಯಿತು. ಮೃತರ ಶೋಕತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು. ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಆಕ್ಸಿಜನ್ ಸಿಗದೆ ಉಂಟಾಗಿರುವ ಸರಣಿ ಸಾವುಗಳ ಮುಂದುವರೆದ ಭಾಗವಿದು. ಈ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರ, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದು ಅತ್ಯಂತ ಗಂಭೀರ ಹಾಗೂ ಅಮಾನವೀಯ ಪ್ರಕರಣ. ರಾಜ್ಯದಲ್ಲಿ ಆಡಳಿತಯಂತ್ರ ಕುಸಿದುಬಿದ್ದಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೆ? ಬಿಜೆಪಿಗರ ಅಧಿಕಾರದ ಲಾಲಸೆಗೆ ಇನ್ನಷ್ಟು ಅಮಾಯಕ ಜನರು ಬಲಿಯಾಗುವುದು ಬೇಡ. ಜನರ ಜೀವ ರಕ್ಷಿಸಲಾಗದ ಇಂಥಾ ಸರ್ಕಾರ ಇರುವುದಕ್ಕಿಂತ ತೊಲಗುವುದೇ ಲೇಸು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ಪ್ರಕರಣದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಈ ಪ್ರಕರಣದ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದ ಸಮಿತಿಯ ಮೂಲಕ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಯವರನ್ನು ಒತ್ತಾಯಿಸುತ್ತೇನೆ ಎಂದವರು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ನಿಂದ #ResignSudhakar #ResignBSY ಹ್ಯಾಶ್ಟ್ಯಾಗ್ ಅಭಿಯಾನ
'ಮುಖ್ಯಮಂತ್ರಿ ಯಡಿಯೂರಪ್ಪ ನವರೆ, ನಿಮ್ಮ ತನಿಖೆಗಳೆಲ್ಲವೂ ವೈಫಲ್ಯ ಮುಚ್ಚಿಕೊಳ್ಳುವ ತಂತ್ರಗಳು. ಶಿವಮೊಗ್ಗ ಜಿಲೆಟಿನ್ ಸ್ಫೋಟದಿಂದ ಹಿಡಿದು ರಮೇಶ್ ಜಾರಕಿಹೊಳಿ ಅತ್ಯಾಚಾರ ಪ್ರಕರಣದವರೆಗೂ ನಿಮ್ಮ ಬೂಟಾಟಿಕೆ ತನಿಖೆಗಳನ್ನು ರಾಜ್ಯ ಕಂಡಿದೆ. ಮೊದಲು ಹೊಣೆ ಹೊತ್ತು ನೀವು ರಾಜೀನಾಮೆ ನೀಡುವಿರಾ ಅಥವಾ ಸುಧಾಕರ್ ರಾಜೀನಾಮೆ ಪಡೆಯುವಿರಾ ಹೇಳಿ.
'ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರ ಎಚ್ಚರಗೊಳ್ಳಲು ಇನ್ನೆಷ್ಟು ಬಲಿ ಬೇಕು?
ಸಚಿವ ಸುಧಾಕರ್ ಅವರೇ ನೀವು ರಾಜೀನಾಮೆ ನೀಡಲು ಇನ್ನೂ ಎಷ್ಟು ದುರಂತಗಳು ಸಂಭವಿಸಬೇಕು? ಇನ್ನೂ ಎಷ್ಟು ಪ್ರಾಣಗಳು ಹೋಗಬೇಕು?
ಆಪರೇಷನ್ ಕಮಲಕ್ಕೆ ತೋರಿದ ಆಸಕ್ತಿ ಸೋಂಕಿತರ ಚಿಕಿತ್ಸೆಗೆ ತೋರಿಲ್ಲವೇಕೆ?ಶಾಸಕರಿಗೆ ವಿಮಾನ ಹತ್ತಿಸಿದಂತೆ ಸೋಂಕಿತರಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲವೇಕೆ? ಬಾಂಬೆ ಹೋಟೆಲ್‌ನಲ್ಲಿ ಬೆಡ್ ವ್ಯವಸ್ಥೆ ಮಾಡಿದವರು ಸೋಂಕಿತರಿಗೆ ಬೆಡ್ ಕೊಡಲಿಲ್ಲವೇಕೆ? ಶಾಸಕರಿಗೆ ಭಕ್ಷ್ಯ ಭೋಜನ ಕೊಟ್ಟವರು ಆಕ್ಸಿಜನ್ ಕೊಡಲಿಲ್ಲವೇಕೆ?
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಪ್ರತಿನಿತ್ಯ 70 ಟನ್ ಆಕ್ಸಿಜನ್ ಬೇಡಿಕೆ ಇದೆ. ಆದರೆ ಕೇವಲ 20 ಟನ್ ಪೂರೈಕೆ. ಈ ಲೋಪಗಳಿದ್ದರೂ ಆರೋಗ್ಯ ಮಂತ್ರಿಗಳು ಗಮನ ಹರಿಸದೆ, ಸುಳ್ಳು ಹೇಳುತ್ತಲೇ 24 ಸಾವುಗಳಿಗೆ ಕಾರಣರಾಗಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ, ಇಷ್ಟೆಲ್ಲ ವೈಫಲ್ಯವಿದ್ದರೂ ಸಚಿವರ ತಲೆದಂಡಕ್ಕೆ ಮಿನಾಮೇಷವೇಕೆ?
ಜಿಲ್ಲಾ ಉಸ್ತುವಾರಿ ಸಚಿವರ ಬೇಜವಾಬ್ದಾರಿತನ, ಆರೋಗ್ಯ ಸಚಿವರ ನಿರ್ಲಕ್ಷ್ಯ, ಮುಖ್ಯ ಮಂತ್ರಿಗಳ ಕುರುಡುತನ, ಪ್ರಧಾನಿಯ ದುರಾಹಂಕಾರ ಈ ಮಾರಣಹೋಮಕ್ಕೆ ಕಾರಣ. ಈ ಸಾವುಗಳ ಹೊಣೆಯನ್ನು ಯಾರು ಹೊತ್ತುಕೊಳ್ಳುತ್ತಿರಿ?
ಇದು ಸೋಂಕಿನಿಂದಾದ ಸಾವುಗಳಲ್ಲ, ಅವ್ಯವಸ್ಥೆಯ ಸರ್ಕಾರದಿಂದಾದ ಕೊಲೆ.
ತಜ್ಞರ ಅಭಿಪ್ರಾಯದ ಪ್ರಕಾರ ರಾಜ್ಯಕ್ಕೆ ಪ್ರತಿನಿತ್ಯ 1.500 ಟನ್ ಆಕ್ಸಿಜನ್ ಅಗತ್ಯವಿದೆ. ಆದರೆ ಒಕ್ಕೂಟ ಸರ್ಕಾರ ರಾಜ್ಯದ ಆಕ್ಸಿಜನ್ ಬಳಕೆಗೆ 802 ಟನ್ ಮಿತಿ ಹೇರಿದ್ದೇಕೆ? ಹಿಂದೆಯೇ ಆಕ್ಸಿಜನ್ ಪ್ಲಾಂಟ್‌ಗಳಿಗೆ ಹಣ ಬಿಡುಗಡೆಯಾದರೂ ಆರೋಗ್ಯ ಸಚಿವ ಕಡತಗಳಿಗೆ ಸಹಿ ಹಾಕದೆ ಕುಳಿತಿದ್ದೇಕೆ?
ಇತ್ತ ಆಕ್ಸಿಜನ್ ಕೊರತೆಯ ದೂರುಗಳು ಬರುತ್ತಿದ್ದರೂ ಅತ್ತ ಆರೋಗ್ಯ ಸಚಿವ ಸುಧಾಕರ್, ಕೊರತೆಯೇ ಇಲ್ಲ ಎಂದು ಸುಳ್ಳುವಾದದಲ್ಲಿ ನಿರತರಾಗಿದ್ದರು.
ಆಕ್ಸಿಜನ್ ಕೊರತೆ ನೀಗಿಸುವ ಒಂದೇ ಒಂದು ಪ್ರಯತ್ನ ಈ ಸರ್ಕಾರ ಮಾಡಿಲ್ಲ.
ವೈಫಲ್ಯಗಳನ್ನು ಹೊತ್ತ ಸರ್ಕಾರ ನಾಚಿಕೆ ಬಿಟ್ಟು ಗೊಡ್ಡು ಸಮರ್ಥನೆಗೆ ಇಳಿದಿದೆ.
ಸಾವುಗಳೊ? ಕೊಲೆಯೋ? "ವ್ಯವಸ್ಥೆ" ಎಚ್ಚರಗೊಳ್ಳಲು ಇನ್ನೆಷ್ಟು ಬಲಿಯಾಗಬೇಕು?ಈ ಸಾವುಗಳು ಯಡಿಯೂರಪ್ಪ ಸರ್ಕಾರದ ನಿರ್ಲಕ್ಷ್ಯದಿಂದಾದ ಕೊಲೆ. ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಯಡಿಯೂರಪ್ಪನವರೇ, ಈ ಸಾವುಗಳಿಗೆ ತಾವು ನೈತಿಕ ಹೊಣೆ ಹೊತ್ತುಕೊಳ್ಳುತ್ತೀರಾ?
ಸೋಂಕಿತರ ಸಾವು ಸೋಂಕಿನಿಂದಾದ ಸಾವಲ್ಲ "ಸರ್ಕಾರಿ ಕೊಲೆ" ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಇಲ್ಲದೆ ಮೃತಪಟ್ಟ 24 ಸೋಂಕಿತರ ಸಾವಿಗೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹಾಗೂ ಸಚಿವ ಸುಧಾಕರ್ ನೇರ ಹೊಣೆ.ಕೂಡಲೇ ಈ ಇಬ್ಬರೂ ಸಚಿವರು ರಾಜಿನಾಮೆ ನೀಡಬೇಕು.
ಚಾಮರಾಜನಗರದ ಉಸ್ತುವಾರಿ ಮಂತ್ರಿ ಸುರೇಶ್ ಕುಮಾರ್ ಅವರೇ, ಜಿಲ್ಲೆಗೆ ನೀವು ಕಾಲಿಟ್ಟಿದ್ದೀರಾ? ಕುಂದು ಕೊರತೆಗಳ ಬಗ್ಗೆ, ಕೋವಿಡ್ ನಿರ್ವಹಣೆಯ ಬಗ್ಗೆ ಗಮನ ಹರಿಸಿದ್ದೀರಾ? ಆಕ್ಸಿಜನ್ ಕೊರತೆಯಿಂದ ನಿಮ್ಮ ಸಹಾಯಕರೇ ತೀರಿಕೊಂಡಮೇಲೂ ತಾವು ಎಚ್ಚರಗೊಳ್ಳದೆ, ಸರ್ಕಾರದ ಗಮನ ಸೆಳೆಯದೆ ಕುಳಿತಿದ್ದೇಕೆ?
ನಾಲಾಯಕ್ ಸರ್ಕಾರದ ಅಸಮರ್ಥ ಆಡಳಿತದಿಂದ ಚಾಮರಾಜನಗರ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಸೋಂಕಿತರು ಒಂದೇ ರಾತ್ರಿಯಲ್ಲಿ ತೀರಿದ್ದಾರೆ. ಹಲವು ದಿನಗಳಿಂದಲೂ ಆಕ್ಸಿಜನ್ ಕೊರತೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದರೂ ಸರ್ಕಾರಕ್ಕೆ ಗಂಭೀರ್ಯತೆ ಅರ್ಥವಾಗಿಲ್ಲ.
ಆಪರೇಷನ್ ಕಮಲ ಎನ್ನುವ ಅನೈತಿಕತೆಯನ್ನ ಸಂಭ್ರಮಿಸುವ ಪಕ್ಷಕ್ಕೆ ಲಜ್ಜೆ ಎಂಬುದೇ ಇಲ್ಲ. ತಜ್ಞರ, ವಿಜ್ಞಾನಿಗಳ ಎಚ್ಚರಿಕೆಯನ್ನು ಕಡೆಗಣಿಸಿ ಚುನಾವಣೆಯನ್ನೇ ಮುಖ್ಯವಾಗಿಸಿಕೊಂಡು ಕರೋನಾ ನಡುವೆಯೇ ಪ್ರಚಾರ ನಡೆಸಿದ ನರೇಂದ್ರ ಮೋದಿಯವರಿಗೆ ದೇಶವಾಸಿಗಳನ್ನು ಬಲಿ ಕೊಡುತ್ತಿರುವುದಕ್ಕೆ ಕೊಂಚವೂ ಪಾಪಪ್ರಜ್ಞೆ ಕಾಡುತ್ತಿಲ್ಲ. ಈ ಸರ್ಕಾರಕ್ಕೆ ಎಚ್ಚರಿಕೆ ಮಾತುಗಳು ಹಾಗೂ ಸಲಹೆಗಳು 'ಕೋಣದ ಮುಂದೆ ಕಿನ್ನೂರಿ ನುಡಿಸಿದಂತೆ' ಆಕ್ಸಿಜನ್, ಬೆಡ್, ವೆಂಟಿಲೇಟರ್ ಮುಂತಾದವುಗಳ ಕೊರತೆಯ ಕೂಗು ಕೇಳಿ ಬರುತ್ತಲೇ ಇದೆ. ಆದರೆ ಈ ಕುರಿತು ಸರ್ಕಾರ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳದೆ ಲಾಕ್‌ಡೌನ್ ಒಂದೇ ಕರೋನಾಗೆ ಮದ್ದು ಎಂದು ನಂಬಿ ಕುಳಿತಂತಿದೆ. ಸರ್ಕಾರಕ್ಕೆ ಜೀವವಿಲ್ಲದ ಕಾರಣ ಜನರ ಜೀವ ಹೋಗುತ್ತಿದೆ. ಸೋಂಕಿತರು ಸಾಯುತ್ತಿರುವುದು ಕರೋನಾದ ಪ್ರಭಾವದಿಂದಲ್ಲ, ಸರ್ಕಾರದ ನಿರ್ಲಕ್ಷ್ಯ ಹಾಗೂ ಅವ್ಯವಸ್ಥೆಯಿಂದ. ಹಾಗಾಗಿ ಇವೆಲ್ಲವೂ ಬಿಜೆಪಿ ಸರ್ಕಾರ ನಡೆಸುತ್ತಿರುವ ಮಾರಣಹೋಮ. ಇವುಗಳು ರಾಜ್ಯ ಕಾಂಗ್ರೆಸ್ ನಡೆಸಿದ ಟ್ವೀಟ್ ಅಭಿಯಾನದ ಪ್ರಮುಖ ಅಂಶಗಳು.
ವರದಿ: ವಿವಿಧ ಮೂಲಗಳಿಂದ
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.