ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ?
Advertisement
ಲಸಿಕೆಯ ಬಗ್ಗೆ ಅಪಪ್ರಚಾರ ಮಾಡಿದ್ದಕ್ಕೆ ಇಂತಹ ದುಸ್ಥಿತಿ: ಕೊರೊನ ಹೆಚ್ಚಳ ಹಾಗೂ ಸಾವಿಗೆ ಕಾಂಗ್ರೆಸ್ ಕಾರಣ ಎಂದು ಸಂಸದ, ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮುಂತಾದ ಬಿಜೆಪಿ ನಾಯಕರು ಹೇಳಿಕೆ ನೀಡಿದ್ದಾರೆ. ಈ ನಡುವೆ ಲಸಿಕಾ ಕೇಂದ್ರದ ಬಳಿ ನಿರಂತರವಾಗಿ ಪ್ರತಿದಿನವೂ ಜನರಿಗೆ ಸಹಕರಿಸುವ ನೆಲೆಯಲ್ಲಿ ನಿಲ್ಲುವ ಬಿಜೆಪಿ ಮತ್ತದರ ಮಾತೃ ಸಂಘಟನೆಯ ಕಾರ್ಯಕರ್ತರು ಕೂಡ ಇದೇ ಮಾತನ್ನು ಹೇಳಿಲುತ್ತಿದ್ದಾರೆ ಮತ್ತು ಈ ಹಿಂದೆ ಲಸಿಕೆ ಕೊಡುತ್ತಿದ್ದಾಗ ನೀವುಗಳು ಬಂದು ಲಸಿಕೆ ಪಡೆದುಕೊಂಡಿಲ್ಲ, ಅದು ವೇಸ್ಟ್ ಆಗಿ ಹೋಯಿತು. ಇದೀಗ ಸ್ಟಾಕ್ ಇಲ್ಲದಾಗ ಮುಗಿ ಬೀಳುತ್ತಿದ್ದೀರಿ ಎಂದು ಜನರನ್ನೆ ಗದುರುತಿದ್ದಾರೆ... ಆ ಕುರಿತು ಬಿಜೆಪಿಗರನ್ನು ಪ್ರಶ್ನಿಸಿ ಈ ಸಂಪಾದಕೀಯ!
ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಮಾಡಿದ್ದೆ ಕಾರಣ ಎನ್ನುವ ಬಿಜೆಪಿಗರೆ ಉತ್ತರಿಸಿ, ನೀವು ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿಗೆ ಹೋಯ್ತು?... ಒಂದು ವೇಳೆ ನೀವು ಹೇಳಿದ್ದು ನಿಜವೇ ಆಗಿದ್ದರೆ ದೇಶದ 137 ಕೋಟಿ ಜನರಿಗೆ ಕೊಡಲೆಂದು ಸಿದ್ದಪಡಿಸಿದ 274ಕೋಟಿ ಡೋಸ್ ಲಸಿಕೆ ಈಗಲೂ ಆರೋಗ್ಯ ಇಲಾಖೆಯ ಬಳಿ ಸ್ಟಾಕ್ ಇರಬೇಕಿತ್ತಲ್ಲವೇ? ಕಾಂಗ್ರೆಸ್ ಕುರಿತು ಅಪಾದಿಸಲು, ಅವರೇನಾದರೂ ಸರ್ಕಾರದ ಲಸಿಕಾ ಗೋದಾಮಿಗೆ ನುಗ್ಗಿ ಲಸಿಕೆ ಹೊತ್ತೊಯ್ದು ಚರಂಡಿಗೆ ಸುರಿದರೇ? ಒಂದು ವೇಳೆ ಜನ ಲಸಿಕೆ ಪಡೆದುಕೊಳ್ಳದೆ ವಾಯಿದೆ ಮೀರಿ ಹೋಗಿ ಅದನ್ನು ನಾಶ ಪಡಿಸಲಾಗಿತ್ತಾದರೆ ಅದನ್ನು ಟೆಂಡರ್ ಮೂಲಕ ಖರೀದಿಸಿದ ಕುರಿತು ಹಳೆಯ ತಾರೀಕಿನ ದಾಖಲೆಗಳನ್ನು ನೀವು ಬಿಡುಗಡೆ ಮಾಡಬೇಕಿತ್ತಲ್ಲವೇ? (ಹಾಗೆ ಹೇಳಲು ಸಾಧ್ಯವಿಲ್ಲ, ಏಕೆಂದರೆ ಭಾರತದಲ್ಲಿ ಲಸಿಕೆ ಅಭಿಯಾನ ಆರಂಬಿಸಿದ್ದೆ 2021 ಜನವರಿ 16ರಿಂದ) ಒಟ್ಟಾರೆಯಾಗಿ ನಿಮ್ಮ ಆರೋಪಗಳು ಎಲ್ಲಾದರೂ ಒಂದು ಕಡೆ ಒಂದಕ್ಕೊಂದು ಹೊಂದಾಣಿಕೆ ಆಗಬೇಕಲ್ಲವೇ? ಆರೋಪವೊಂದು 'ಹಿಟ್ ಎ್ಯಂಡ್ ರನ್' ಆಗಬಾರದು ಅಲ್ಲವೇ? ನಿಮ್ಮಲ್ಲಿ ಸ್ಟಾಕ್ ಇದ್ದರೆ, ಜನ ಇದೀಗ ಖಾಲಿ ಹೊಟ್ಟೆಯಲ್ಲಿ, ನಸುಕಿನಲ್ಲೆ ಎದ್ದು ಬಂದು ಲಸಿಕಾ ಕೇಂದ್ರದ ಮುಂದೆ ಸಾಲಾಗಿ ನಿಂತು ಆರೋಗ್ಯ ಇಲಾಖೆಯ ಸಿಬ್ಬಂದಿ ಒಂಭತ್ತುವರೆಗೋ, ಹತ್ತು ಗಂಟೆಗೋ ಬಂದು ಇಂದು ಲಸಿಕೆ ಸಪ್ಲೈ ಇಲ್ಲ ಎಂದು ಹೇಳುವ ತನಕವೂ ಕಾದು ವಾಪಾಸಾಗಲು ಕಾರಣವೇನು? ಜನರಿಗೆ ಬೇಕಾದ ಸ್ಟಾಕ್ ಇಡಬೇಕಿರುವುದು ಆಡಳಿತ ಸರ್ಕಾರದ ಜವಬ್ದಾರಿಯೇ ಹೊರತೂ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ನ ಹೊಣೆ ಅಲ್ಲ ಅಲ್ಲವೇ?
ಲಸಿಕೆಯ ಕುರಿತು ನಿಜಕ್ಕೂ ವಿರೋಧಿಸಲಾಗಿತ್ತೇ? ಹಾಗಾದರೆ ವಿರೋಧಿಸಿದವರು ಯಾರು?
ಮೂರನೆಯ ಹಂತದ ಟ್ರಾಯಲ್ ಗೆ 2021 ನವೆಂಬರ್ ತನಕ ಕಾಲಾವಕಾಶ ಹೊಂದಿರುವ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಮೋದಿ ಸರ್ಕಾರ ಏಕಾಏಕಿ ದೇಶದ ಜನರ ಮೇಲೆ ಪ್ರಯೋಗಿಸಲು ಮುಂದಾದಾಗ ಆರೋಗ್ಯ ತಜ್ಞರು, ಪತ್ರಕರ್ತರು, ಬುದ್ದಿಜೀವಿಗಳು ಮತ್ತು ವಿರೋಧ ಪಕ್ಷಗಳು ದೇಶದ ಜನರನ್ನು ಪ್ರಯೋಗ ಪಶುಗಳಾಗಿ ಮಾಡಬೇಡಿ ಎಂದು ಸರ್ಕಾರದ ತೀರ್ಮಾನವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗೂ ವೈಜ್ಞಾನಿಕ ನೆಲೆಯಲ್ಲಿ ವಿರೋಧಿಸಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.
ಭಾರತ ಸರ್ಕಾರದ ಲಸಿಕೆ ಅಭಿಯಾನದ ವಿವರ;
ಜನವರಿ 16: ಲಸಿಕೆಯನ್ನು ಮೊದಲ ಹಂತದಲ್ಲಿ, ಮೊದಲ ಆದ್ಯತೆಯ ಮೇರೆಗೆ ಕೊರೋನಾ ವಾರಿಯರ್ಸ್'ಗಳಾದ ಒಟ್ಟು 3 ಕೋಟಿ ಮಂದಿ ಅರೋಗ್ಯ ಕಾರ್ಯಕರ್ತರಿಗೆ ಗುರಿ ಇಟ್ಟುಕೊಂಡು ಜನವರಿ 16 ರಿಂದ ಲಸಿಕೆ ನೀಡಲು ಆರಂಬಿಸಲಾಗಿತ್ತು.
ಫೆಬ್ರುವರಿ 2: ಎರಡನೇ ಹಂತದಲ್ಲಿ ಲಸಿಕಾ ಕಾರ್ಯಕ್ರಮ ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಸುಮಾರು 2 ಕೋಟಿ ಕಾರ್ಯಕರ್ತರ ಗುರಿ ಇಟ್ಟುಕೊಂಡು ಫೆಬ್ರುವರಿ 2ರಿಂದ ಕೊಡಲು ಆರಂಬಿಸಲಾಗಿತ್ತು.
ಏಪ್ರಿಲ್ 01: ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ಎಪ್ರಿಲ್ ಒಂದರಿಂದ ಆರಂಬಿಸಲಾಗಿತ್ತು. ಒಟ್ಟು 1.66 ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಘೋಷಿಸಲಾಗಿತ್ತು.
ಮೇ 01: 18 ರಿಂದ 44 ವರ್ಷದ ವರೆಗಿನವರಿಗೆ ಲಸಿಕೆಯ ಕುರಿತು ಕೋವಿನ್ ಆ್ಯಪ್ ಮತ್ತು ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಸೂಚಿಸಲಾಯಿತು.
ಆದರೆ ಈ ಮೇಲಿನವರಿಗೆ ಯಾರಿಗೂ ಸಮರ್ಪಕವಾಗಿ ವ್ಯಾಕ್ಸಿನ್ ನೀಡಲಾಗಿಲ್ಲ. ಮೊದಲ ದಿನ ಹಿರಿಯ ನಾಗರಿಕರಿಗೆ ಮೊದಲ ಡೋಸ್ ಅಥವಾ ಎರಡನೆಯ ಡೋಸ್ ಕೊಟ್ಟರೆ ಎರಡನೆಯ ದಿನ 45ವರ್ಷ ಮೇಲ್ಪಟ್ಟವರಿಗೆ ಮೊದಲ ಡೋಸ್ ಕೊಡಲಾಗುತ್ತಿತ್ತು. 18ರಿಂದ 44 ವರ್ಷವರಿಗಿನವರಿಗೆ ಮೂರ್ನಾಲ್ಕು ದಿನಗಳ ಕಾಲವಷ್ಟೇ ಮೊದಲ ಡೋಸ್ ಕೊಟ್ಟು ನಿಲ್ಲಿಸಲಾಗಿತ್ತು.
ಮೊದಲಿಗೆ ಕೋವ್ಯಾಕ್ಸಿನ್ ಎರಡನೆಯ ಡೋಸ್ ಪಡೆಯಲು ಆರೋಗ್ಯ ಇಲಾಖೆ ಕಡ್ಡಾಯವಾಗಿ 4 ವಾರಗಳ ಗಡುವು ಹಾಗೂ ಕೋವಿಶಿಲ್ಡ್ 5ವಾರಗಳ ಗಡುವು ವಿಧಿಸಿ ಮೊಬೈಲ್‌ಗೆ ಮೆಸೇಜ್ ಕೂಡ ಮಾಡಿತ್ತು. ಆದರೆ 28ದಿನ ಕಳೆದು ಲಸಿಕಾ ಕೇಂದ್ರಕ್ಕೆ ಬಂದ ಕೊವ್ಯಾಕ್ಸಿನ್ ಪಡೆದವರಿಗೆ (ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ ಕೇವಲ ಲಸಿಕೆ ಪೂರೈಕೆ ಮಾಡಲಾಗದ ಕಾರಣಕ್ಕಾಗಿ) 45 ದಿನ ಬಿಟ್ಟು ಬರುವಂತೆ ಹಾಗೂ ಕೋವಿಶಿಲ್ಡ್ ಗೆ 12ವಾರ ಬಿಟ್ಟು ಬರುವಂತೆ ಸೂಚಿಸಲಾಗುತ್ತಿದೆ.
ವರದಿಯೊಂದರ ಪ್ರಕಾರ : ಲಸಿಕೆ ಪಡೆದುಕೊಂಡವರ ವಿವರ-
91,28,146 ಆರೋಗ್ಯ ಸಿಬ್ಬಂದಿಗಳು ಮೊದಲ ಡೋಸ್ ಲಸಿಕೆ ಪಡೆದುಕೊಂಡಿದ್ದರೆ, 57,08,223 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನು 1,12,33,415 ಮಂದಿ ಫ್ರಂಟ್‌ಲೈನ್ ವಾರಿಯರ್ಸ್ ಮೊದಲ ಡೋಸ್ ಪಡೆದುಕೊಂಡಿದ್ದರೆ, 55,10,238 ಮಂದಿ 2ನೇ ಡೋಸ್ ಪಡೆದುಕೊಂಡಿದ್ದಾರೆ.
ಇನ್ನು 60 ವರ್ಷ ಮೇಲ್ಪಟ್ಟವರಲ್ಲಿ 4,55,94,522 ಮಂದಿ ಮೊದಲ ಡೋಸ್ ಹಾಗೂ 38,91,294 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನು 45 ರಿಂದ 60 ವರ್ಷದೊಳಗಿನವರಲ್ಲಿ 4,04,74,993 ಮಂದಿ ಮೊದಲ ಡೋಸ್ ಹಾಗೂ 10,81,759 ಮಂದಿ ಎರಡನೆ ಡೋಸ್ ಪಡೆದುಕೊಂಡಿದ್ದಾರೆ.
ಓದುಗರೆ, ಇದೀಗ ನೀವೇ ನಿರ್ಧರಿಸಿ: ಈ ಲಸಿಕಾ ಅವಾಂತರಕ್ಕೆ ಆಳುವ ನರೇಂದ್ರ ಮೋದಿ ಸರ್ಕಾರ ಹೊಣೆಯೋ ಅಥವಾ ವಿರೋಧ ಪಕ್ಷವಾದ ಕಾಂಗ್ರೆಸ್ ಹೊಣೆಯೋ?
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.