ಕೊವಿಡ್ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಉಚಿತವಾಗಿ ನೀಡಬೇಕು: 18ರ ಮೇಲಿನ ಪ್ರಾಯದವರಿಗೆ ಘೋಷಿಸಲ್ಪಟ್ಟ ವ್ಯಾಕ್ಸಿನೇಷನ್ ಕೇವಲ ಪ್ರಚಾರಕ್ಕೆ ಸೀಮಿತವೇ : ಕೊಡವೂರು
ಕೊವಿಡ್ ವ್ಯಾಕ್ಸಿನ್ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಉಚಿತವಾಗಿ ನೀಡಬೇಕು: 18ರ ಮೇಲಿನ ಪ್ರಾಯದವರಿಗೆ ಘೋಷಿಸಲ್ಪಟ್ಟ ವ್ಯಾಕ್ಸಿನೇಷನ್ ಕೇವಲ ಪ್ರಚಾರಕ್ಕೆ ಸೀಮಿತವೇ : ಕೊಡವೂರು
Advertisement
ಉಡುಪಿ: 'ಮೇ 1 ರಿಂದ 18-45 ವಯೋಮಾನದವರಿಗೆ ಕೋವಿಡ್ 19 ನಿಂದ ರಕ್ಷಿಸಲು ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನ್ ನೀಡುವ ಕುರಿತು ಬಿಜೆಪಿ ಸರ್ಕಾರದಿಂದ ಘೋಷಿಸಲ್ಪಟ್ಟು ಬಾರಿ ಭರ್ಜರಿ ಪ್ರಚಾರದೊಂದಿಗೆ ಸಾಂಕೇತಿಕವಾಗಿ ಎಂಬಂತೆ ಆರಂಭಗೊಂಡು ಮರುದಿನದಿಂದಲೇ ಅದು ನಾಪತ್ತೆಯಾಗಿದೆ. ಮತ್ತು ಆ ಮೂಲಕ ಅದು ಕೇವಲ ಪ್ರಚಾರಕ್ಕಾಗಿ ಘೋಷಿಸಲ್ಪಟ್ಟ ಒಂದು ಯೋಜನೆ ಎಂಬುದು ಸಾಭೀತಾಗಿದೆ' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
'ಕೇಂದ್ರ ಮೋದಿ ಸರ್ಕಾರ ಹಾಗೂ ರಾಜ್ಯದ ಯಡಿಯೂರಪ್ಪ ಸರಕಾರಗಳು ದೇಶದ ಜನರಿಗೆ ಸಾಕಾಗುವಷ್ಟು ದೊಡ್ಡ ಪ್ರಮಾಣದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ವ್ಯಾಕ್ಸಿನ್‍ಗಳನ್ನು ತಯಾರಿಸಿ, ಅಗತ್ಯ ಇರುವಲ್ಲಿ ಪೂರೈಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಒಂದನೆಯ ಡೋಸ್ ಪಡೆದು ಕೇವಲ 4ವಾರ ಮುಗಿದ ಕೂಡಲೇ ಎರಡನೆಯ ಡೋಸ್ ನೀಡಬೇಕು ಎಂದು ಆರೋಗ್ಯ ತಜ್ಞರ ನಿರ್ದೇಶನ ಇದ್ದರೂ ಕೂಡಾ ಸ್ಟಾಕ್ ಇಲ್ಲ ಎಂಬ ನೆಪವೊಡ್ಡಿ ಇದೀಗ 6-8 ವಾರಗಳಾದರೂ ಎರಡನೇಯ ಡೋಸ್ ವ್ಯಾಕ್ಸಿನ್ ಅನ್ನು ನೀಡದಿರುವುದು ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಆ ಕಾರಣಕ್ಕಾಗಿ ಹಿರಿಯ ನಾಗರಿಕರು ಮುಂತಾದವರು ಪರದಾಡುವಂತಾಗಿದೆ. ಎರಡನೆಯ ಡೋಸ್ ಗೆ ಸಮಯ ಮೀರುವ ಭಯದಿಂದ ಜನರು ವ್ಯಾಕ್ಸಿನ್ ಎಲ್ಲಿ ದೊರೆಯುತ್ತದೆ ಎಂದು ಮಾಹಿತಿ ಇಲ್ಲದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಸುತ್ತಾಡುವಂತಾಗಿದೆ' ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
'2019-2020ರಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡು ವ್ಯಾಪಕವಾಗಿ ಜನ ಸೋಂಕು ಪೀಡಿತರಾಗಿ ಸಾಕಷ್ಟು ಸಾವು ನೋವು, ಆರ್ಥಿಕ ಸಂಕಷ್ಟ ಎದುರಾಗಿತ್ತು ಮತ್ತು ಈ ಮದ್ಯೆ ಸಾಕಷ್ಟು ಸಮಯಾವಕಾಶ ದೊರೆತಿದ್ದರೂ ಕೂಡಾ ಅಸಡ್ಡೆ ತೋರಿದ ಪರಿಣಾಮವಾಗಿ 2ನೇ ಅಲೆ ಎದುರಿಸಲು ಪೂರ್ವ ತಯಾರಿ ಮಾಡಿಕೊಳ್ಳುವಲ್ಲಿ ಸರಕಾರಗಳು ಮುಗ್ಗರಿಸಿವೆ. ಹಿಂದೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸರಕಾರದ ಮೇಲೆ ವಿಶ್ವಾಸವಿರಿಸಿದ್ದ ಜನತೆ ಇಂದು ಸರ್ಕಾರದ ವಿರುದ್ಧ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನ ತೀರ್ಪಿಗೆ ಕಾಯುವಂತಾಗಿದೆ.
ಉಡುಪಿ ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ತಮ್ಮದೇ ಪಕ್ಷದ ಆಡಳಿತವಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ವರಿಷ್ಠರಿಗೆ ಒತ್ತಡ ಹಾಕಿ ಸಾಕಷ್ಟು ವ್ಯಾಕ್ಸಿನ್ ಉಡುಪಿ ಜಿಲ್ಲೆಗೆ ಲಭಿಸುವಂತೆ ಮಾಡಿ ಯುವಜನತೆಯ ಜೀವ ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಅಲ್ಲದೆ ವ್ಯಾಕ್ಸಿನ್ ಅನ್ನು ಸರಕಾರಿ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲದೆ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತವಾಗಿ ನೀಡಬೇಕು' ಎಂದವರು ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸತೀಶ್‍ಅಮೀನ್ ಪಡುಕೆರೆ, ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್‍ಕಾಂಚನ್, ಬ್ಲಾಕ್ ಎಸ್.ಸಿ. ಘಟಕದ ಅಧ್ಯಕ್ಷರಾದ ಗಣೇಶ್ ನೆರ್ಗಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸದಾಶಿವ ಅಮೀನ್‍ಕಟ್ಟೆಗುಡ್ಡೆ, ಬ್ಲಾಕ್‍ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್, ಮಾಜಿ ನಗರಸಭಾ ಸದಸ್ಯರುಗಳಾದ ಶಶಿರಾಜ್ ಕುಂದರ್, ಸುಕೇಶ್ ಕುಂದರ್ ಮುಂತಾದವರು ಧ್ವನಿಗೂಡಿಸಿದರು.
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.