Advertisement

'ವ್ಯಾಕ್ಸಿನ್ ಹೆಸರಲ್ಲಿ ರಾಜಕೀಯ' ಕುರಿತಾಗಿ ಕಾರ್ಟೂನ್: ಸತೀಶ್ ಆಚಾರ್ಯ ವಿರುದ್ಧ ಬಿಜೆಪಿಗರ ಟ್ರೋಲ್: ಸತೀಶ್ ಪರ ಅಭಿಯಾನ: #IamWithSatishAcharya

Advertisement

ವಿಶ್ವದ ಹತ್ತು ಪ್ರಖ್ಯಾತರಲ್ಲಿ ಒಬ್ಬರು ಎಂದು ಜನಪ್ರಿಯ 'ಪೋರ್ಬ್ಸ್ ಮ್ಯಾಗಜೀನ್' ನಿಂದ ಗುರುತಿಸಲ್ಪಟ್ಟಿದ್ದ ಅಂತರ್ರಾಷ್ಟ್ರೀಯ ಖ್ಯಾತಿಯ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರು 'ಕೋವಿಡ್ ವ್ಯಾಕ್ಸಿನ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವುದರ ವಿರುದ್ಧ'ವಾಗಿ ರಚಿಸಿರುವ ಕೆಲವು ಕಾರ್ಟೂನುಗಳ ಕುರಿತು ಕಳೆದ ಕೆಲವು ದಿನಗಳಿಂದ ಬಿಜೆಪಿಯ ಬೆಂಬಲಿಗರು ಟ್ರೋಲ್ ಆರಂಬಿಸಿದ್ದರು. ಇದೀಗ 'ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನಲ್‌' ಸತೀಶ್ ವಿರುದ್ದ ಅದೇ ವಿಚಾರ ಇಟ್ಟುಕೊಂಡು ಅವರನ್ನು ಹೀಯಾಳಿಸಿ ವಾಗ್ದಾಳಿ ನಡೆಸಿದೆ. ಈ ವಾಗ್ಧಾಳಿ ಅಥವಾ ಬಿಜೆಪಿಯ ಟ್ರೋಲನ್ನು ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸತೀಶ್ ಅಭಿಮಾನಿಗಳು, ಚಿಂತಕರು, ಪತ್ರಕರ್ತರು, ಬರಹಗಾರರು, ವ್ಯಂಗ್ಯಚಿತ್ರಕಾರರು ವಿರೋಧಿಸಿದ್ದಾರೆ. ಅವರ ಪರ ಸರಣಿ ಲೇಖನಗಳು ಪ್ರಕಟ ಗೊಂಡಿವೆ. #IamWithSatishAcharya ಹ್ಯಾಶ್​ಟ್ಯಾಗ್‌ ನಡಿ ಅಭಿಯಾನ ಆರಂಭಗೊಂಡಿದೆ. ಸುದ್ದಿಮನೆಯಲ್ಲಿ ಇರುವವರು ಯಾವುದೇ ಒಂದು ಸುದ್ದಿ ಪ್ರಕಟಿಸುವ ಮೊದಲು ಅದರ ಪೂರ್ವಾಪರ, ಆಳ- ಅಗಲಗಳ ಕುರಿತು ಶೋಧನೆ ಮಾಡಿರಬೇಕು, ಆ ಸುದ್ದಿ ಸತ್ಯಾಂಶದ ಮೇಲೆ ಬೆಳಕು ಚೆಲ್ಲುವಂತಿರಬೇಕು ಎಂಬುವುದು ಪತ್ರಿಕೋದ್ಯಮದ ಒಂದು ನಿಯಮ. ಆದರೆ ಸುವರ್ಣ ನ್ಯೂಸ್ ಆ ಕಾರ್ಟೂನ್ ರಚನೆಗೆ ಕಾರಣವಾದ ಸಮಯ ಸಂಧರ್ಭಗಳ ಕುರಿತು, ಅದರ ಹಿಂದಿನ ವ್ಯಂಗ್ಯಚಿತ್ರಕಾರನ ಪ್ರಾಮಾಣಿಕ ಕಾಳಜಿಯ ಕುರಿತು ಪರಾಮರ್ಶೆ ಮಾಡದೆ ಏಕಾಏಕಿ ಅಂತರ್ರಾಷ್ಟ್ರೀಯ ಮಟ್ಟದ ಓರ್ವ ವ್ಯಂಗ್ಯಚಿತ್ರಕಾರನ ಮಾನಹಾನಿಗೆ ಮುಂದಾದುದು ಅಕ್ಷಮ್ಯ. 'ಕಾರ್ಟೂನಿಸ್ಟ್, ವಿರೋಧ ಪಕ್ಷದ ಮಾದರಿಯಲ್ಲಿ ಕೆಲಸ ಮಾಡಬೇಕು' ಎಂದು ಸದಾ ಹೇಳುವ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರು ಸದಾ ಆಡಳಿತದ ಲೋಪದೋಷಗಳ, ವೈಫಲ್ಯಗಳ ವಿರುದ್ಧ, ವಿರೋಧ ಪಕ್ಷಗಳ ನಿಷ್ಕ್ರೀಯತೆಯ ವಿರುದ್ಧ ಕಾರ್ಟೂನುಗಳನ್ನು ರಚಿಸುತ್ತಲೇ ಇರುವ ಓರ್ವ ಕ್ರಿಯಾಶೀಲ ವ್ಯಂಗ್ಯಚಿತ್ರಕಾರ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಸತೀಶ್ ವಿರೋಧ ಪಕ್ಷಕ್ಕಿಂತಲೂ ಜಾಸ್ತಿ ಕಾಡಿದ್ದರು ಸಿಂಗ್ ಸರ್ಕಾರವನ್ನು. ಆದರೆ ಆಗ ಇವರ ಕಾರ್ಟೂನುಗಳನ್ನು ಖುಷಿಯಿಂದ ಹಂಚಿಕೊಂಡಿದ್ದ ಈ ಬಿಜೆಪಿಗರಿಗೆ ಇದೀಗ ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಸತೀಶ್ ಬರೆಯುವ ಕಾರ್ಟೂನುಗಳನ್ನು ಸಹಿಸಿಕೊಳ್ಳಲಾಗದೆ ಅವರ ವೈಯುಕ್ತಿಕ ತೇಜೋವದೆಗೆ ಇಳಿದಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಭೀಕರ ದಾಳಿಯಾಗಿದೆ. ಪ್ರಧಾನಿ ಮೋದಿಯವರು ಬಿಹಾರ ಚುನಾವಣೆಯ ರ‌್ಯಾಲಿಗಳಲ್ಲಿ ಮತದಾರರನ್ನು ಉದ್ದೇಶಿಸಿ ವ್ಯಾಕ್ಸಿನ್ ಉಚಿತವಾಗಿ ನೀಡುವ ಕುರಿತು ನೀಡಿದ ಹೇಳಿಕೆಗಳು ಮತ್ತು ಇನ್ನೂ ಮೂರನೆ ಹಂತದ ಪರೀಕ್ಷೆಗೆ ಬಾಕಿ ಇರುವ ವ್ಯಾಕ್ಸಿನ್ ಅನ್ನು ಕೇವಲ ಪ್ರಚಾರಕ್ಕಾಗಿ ದೇಶದ ಜನರ ಮೇಲೆ ಪ್ರಯೋಗಿಸಲು ಮುಂದಾದಾಗ ಪ್ರಜಾಪ್ರಭುತ್ವದ ಮಾದರಿಯಲ್ಲಿ ಓರ್ವ ಜವಾಬ್ದಾರಿಯುತ ವ್ಯಂಗ್ಯಚಿತ್ರಕಾರನಾಗಿ ಅದನ್ನು ವಿರೋಧಿಸಿ ಕಾರ್ಟೂನ್ ರಚಿಸಿದ್ದರು ಸತೀಶ್. ಸುದ್ದಿಯ ಹಿನ್ನೆಲೆ: ಇದೀಗ ದೇಶದಾದ್ಯಂತ ಕೊರೊನಾ ಎರಡನೆಯ ಅಲೆ ತಾಂಡವ ವಾಡತೊಡಗಿದೆ. ಆದ್ಯತೆಯ ಮೇಲೆ ಮೊದಲಿಗೆ ಕೊರೋನಾ ವಾರಿಯರ್ಸ್‌ ಗಳಿಗೆ ಮಾತ್ರವೇ ವ್ಯಾಕ್ಸಿನ್ ನೀಡಲಾಗಿತ್ತು. ಆ ನಂತರ 60ರ ಮೇಲ್ಪಟ್ಟವರಿಗೆ, ತದ ನಂತರ 45ರ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಕೊಡಲು ಆರಂಭಿಸಲಾಗಿತ್ತು. ಇದೀಗ ಎಪ್ರಿಲ್ 28ರಿಂದ 18ರಿಂದ 45 ವರ್ಷದ ಪ್ರಾಯದ ವರೆಗಿನವರಿಗೆ ಆ್ಯಪ್ ಮೂಲಕ ನೋದಂಣಿ ಮಾಡಿಕೊಳ್ಳುವಂತೆ ಆ ಮೂಲಕ ಮೇ ಒಂದರಿಂದ ಆರಂಭವಾಗಲಿರುವ ವ್ಯಾಕ್ಸಿನೇಷನ್‌ ಅಭಿಯಾನದ ಉಪಯೋಗ ಪಡೆದುಕೊಳ್ಳುವಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಟಿವಿಯ ಮೂಲಕ ಹೇಳಿಕೆ ನೀಡಿದ್ದರು. ಆದರೆ ಲಸಿಕೆಯ ಕೊರತೆಯ ನೆಪದಲ್ಲಿ 18ರ ಮೇಲಿನವರಿಗೆ ಲಸಿಕೆ ಹಂಚಿಕೆ ಅಭಿಯಾನ ಇನ್ನೂ ಆರಂಭಗೊಂಡಿಲ್ಲ. ಲಸಿಕೆ ಪೂರೈಕೆಯಾದ ನಂತರವಷ್ಟೇ ಆರಂಭಿಸುವುದಾಗಿ ರಾಜ್ಯದ ಯಡಿಯೂರಪ್ಪ ಸರ್ಕಾರ ಹೇಳಿಕೊಂಡಿತ್ತು. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 'ಲಸಿಕೆ ಕೊರತೆ ಇದೆಯೆಂದಾದ ಮೇಲೆ ಪರ ರಾಷ್ಟ್ರಗಳಿಗೆ ಮೋದಿ ಸರ್ಕಾರ ಆರು ಕೋಟಿ ಯುನಿಟ್ ಲಸಿಕೆ ದಾನ ಮಾಡುವ ಅಗತ್ಯವೇನಿತ್ತು? ಆ ಮೂಲಕ ದೇಶದ ಜನ ಲಸಿಕೆಗಾಗಿ ಪರದಾಡುವಂತೆ ಮಾಡಿದ್ದಾರೆ' ಎಂದು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದರು. ಈ ನಡುವೆ ಕೇಂದ್ರದ ಮೋದಿ ಸರ್ಕಾರದ ವಿರುದ್ದ 'ಈ ಒಂದು ವರ್ಷದಲ್ಲಿ ದೇಶದ ಜನರಿಗೆ ಲಸಿಕೆ ನೀಡುವ ಕುರಿತು ಪ್ರಥಮ ಪ್ರಾಶಸ್ತ್ಯ ಕೊಡದೆ, ಆ ಕುರಿತು ಅಸಡ್ಡೆ ತೋರಿಸಿ, ಸ್ವತಃ ಪ್ರಧಾನಿ ಮೋದಿಯವರು ಲಕ್ಷಾಂತರ ಜನ ಸೇರಿಸಿ ಚುನಾವಣಾ ರ‌್ಯಾಲಿ ಮಾಡುವ ಮೂಲಕ, ಕುಂಭಮೇಳಕ್ಕೆ 75ಲಕ್ಷದಷ್ಟು ಜನ ಸೇರಲು ಅವಕಾಶ ಒದಗಿಸುವ ಮೂಲಕ ಕೊರೊನಾ ಎರಡನೆಯ ಅಲೆ ದೇಶದಾದ್ಯಂತ ವ್ಯಾಪಿಸಲು ಮೋದಿ ಸರ್ಕಾರವೇ ಕಾರಣ' ಎಂಬ ಜನಾಭಿಪ್ರಾಯ ಅಥವಾ ಆಕ್ರೋಶ ವ್ಯಕ್ತವಾಗಿತ್ತು. ಬಹುಶಃ ಲಸಿಕೆ ಕೊರತೆ ಮತ್ತು ಅದರ ಪೂರೈಕೆಯಲ್ಲಿ ಸರ್ಕಾರದ ವೈಫಲ್ಯವನ್ನು ಮುಚ್ಚಿಡಲು ಮತ್ತು ಆ ಅಪವಾದದಿಂದ ಹೊರಬರಲು ಬಿಜೆಪಿ ಪಕ್ಷ ಮೊದಲಿಗೆ, ಸಾಮಾಜಿಕ ಜಾಲತಾಣದಲ್ಲಿ ತನ್ನ ಟ್ರೋಲ್ ಪೇಜ್‌ಗಳ ಮೂಲಕ ಕಾಂಗ್ರೆಸ್‌ ಮತ್ತಿತರ ವಿರೋಧ ಪಕ್ಷಗಳು ಲಸಿಕೆಯ ವಿರುದ್ಧ ಅಪಪ್ರಚಾರ ಮಾಡಿದ್ದೆ ಜನ ಲಸಿಕೆ ಹಾಕಿಸಿಕೊಳ್ಳದಿರಲು ಕಾರಣ ಎಂಬಂತೆ ಅಭಿಯಾನ ಮಾಡಿತ್ತು. ನಂತರ ಸತೀಶ್ ರಂತಹವರು ಕಾರ್ಟೂನು ಮಾಡಿದ್ದೆ ಕಾರಣ ಎಂಬಂತೆ ಟ್ರೋಲ್ ಆರಂಬಿಸಿತ್ತು. ಇದೀಗ ಕನ್ನಡದ ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನಲ್‌ನ ನಿರೂಪಕ ಅಜಿತ್ ಹನುಮಕ್ಕನವರ್ ಮೂಲಕ ಸತೀಶ್ ವಿರುದ್ಧ ವಾಗ್ಧಾಳಿ ನಡೆಸಲಾಗಿದೆ. ಸತೀಶರ ಕಾರ್ಟೂನುಗಳನ್ನು ತೋರಿಸಿ ಇಂತಹ ಕಾರ್ಟೂನ್ ಮಾಡುವ ಬದಲು ಕೆರೆನೋ, ಬಾವಿನೋ ನೋಡಿಕೊಳ್ಳಿ ಎಂದು ಹೀಯಾಳಿಸುವ ಮಟ್ಟಕ್ಕೆ ಇಳಿಯಲಾಗಿದೆ. ಈ ಕುರಿತು ಸತೀಶ್ ಪರ ಗಣ್ಯರು, ಬುದ್ದಿಜೀವಿ ಗಳು ಸಾಮಾಜಿಕ ಜಾಲತಾಣದಲ್ಲಿ ಬರೆದ ಕೆಲವು ಬರಹಗಳು ಇಲ್ಲಿವೆ: 'ದುಷ್ಟ ಸಂಹಾರ‌ನಿರತ ಚತುರ್ಭಜರು. ಬಾಡಿಗೆ ಸೈನಿಕರು ಎಷ್ಟೇ ದಾಳಿ‌ ಮಾಡಲಿ, ಗೆಲುವು ಇವರದ್ದೇ ಮತ್ತು ನಮ್ಮದು ಕೂಡಾ' ಎಂದು ಬರೆದು ವ್ಯಂಗ್ಯಚಿತ್ರಕಾರರಾದ ಸತೀಶ್ ಆಚಾರ್ಯ, ಪಿ.ಮಹಮ್ಮದ್, ಪಂಜು ಗಂಗೊಳ್ಳಿ, ದಿನೇಶ್ ಕುಕ್ಕುಜಡ್ಕರವರ ಫೋಟೋ ಗಳನ್ನು ಹಂಚಿಕೊಂಡಿದ್ದಾರೆ ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ, ಜನಪರ ಚಿಂತಕ ದಿನೇಶ್ ಅಮಿನ್ ಮಟ್ಟುರವರು. ಸರ್ವಾಧಿಕಾರಿಯೊಬ್ಬ ತನ್ನ ಬಗ್ಗೆ ವ್ಯಂಗ್ಯ ಚಿತ್ರ ಬರೆದವರನ್ನು ಜೈಲಿಗೆ ಹಾಕಿಸಿದ, ನಾಲ್ಕು ದಿನ ಕಳೆದ ನಂತರ ವ್ಯಂಗ್ಯ ಚಿತ್ರಕಾರರು ಬುದ್ಧಿ ಕಲಿತಿರಬಹುದು ಅವರ ಜೋಲುಮೋರೆ ನೋಡಬಹುದು ಎಂಬ ಆಸೆಯಿಂದ ಆ ಸರ್ವಾಧಿಕಾರಿ ವ್ಯಂಗ್ಯ ಚಿತ್ರಕಾರರನ್ನು ಕೂಡಿ ಹಾಕಿದ ಸೆಲ್ ಬಾಗಿಲ ಬಳಿ ಬಂದ, ಹೊರಗಿನಿಂದ ಇಣುಕಿ ನೋಡುವ ಕಿಟಕಿ ಮಾತ್ರ ಹೊಂದಿದ್ದ ಬಾಗಿಲ ಬಳಿ ಬಂದ ಸರ್ವಾಧಿಕಾರಿ ಕಿಟಕಿ ತೆರೆಸಿ ಒಳಗಿದ್ದವರನ್ನು ನೋಡುತ್ತಿದ್ದಂತೆ ಒಳಗಿದ್ದ ವ್ಯಂಗ್ಯಚಿತ್ರಕಾರರು ಜೋರಾಗಿ ನಗತೊಡಗಿದರು, ಈ ರೀತಿ ಆಗಾಗ ನಡೆಯುತ್ತಿತ್ತು, ಅನುಮಾನಗೊಂಡ ಸರ್ವಾಧಿಕಾರಿ ಸೆಲ್ ಒಳಗೆ ಹೋಗಿ ಪರೀಕ್ಷಿಸಿದ, ಸೆಲ್ ಬಾಗಿಲಿನ ಒಳ ಭಾಗದಲ್ಲಿ ರುಂಡವಿಲ್ಲದ ಬೆತ್ತಲೆ ಚಿತ್ರ ಬಿಡಿಸಲಾಗಿತ್ತು, ಕಿಟಕಿ ತೆಗೆದು ಒಳ ಇಣುಕಿದವರ ತಲೆಗೆ ಆ ದೇಹದ ಚಿತ್ರ ಹೊಂದಿಕೊಳ್ಳುತ್ತಿತ್ತು. ಸರ್ವಾಧಿಕಾರಿ ಇನ್ನಷ್ಟು ಮರ್ಯಾದೆ ಹೋಗಬಹುದು ಎಂದು ವ್ಯಂಗ್ಯ ಚಿತ್ರಕಾರರನ್ನು ರಾತ್ರೋರಾತ್ರಿ ಬಿಡುಗಡೆ ಮಾಡಿ ಕಳಿಸಿದ ಎಂದು ಎಂ.ಆರ್ ಕೃಷ್ಣ ಬರೆದಿದ್ದಾರೆ. ಒಂದು ಕಡೆ ಸಾವಿರಾರು ಜನರು ಕೊರೋನ ಸೋಂಕಿತರಾಗಿ, ಏನು ಮಾಡಬೇಕು, ಎಲ್ಲಿ ಹೋಗಬೇಕು, ಯಾರನ್ನು ಕಾಣಬೇಕು ಎಂಬುದು ಸ್ಪಷ್ಟವಿಲ್ಲದೆ ಆತಂಕದಲ್ಲಿದ್ದಾರೆ, ಅನೇಕರು ಆಕ್ಸಿಜನ್ ಹುಡುಕಿ ಅಲೆಯುತ್ತಿದ್ದಾರೆ, ಹಲವರು ಸಾವನ್ನಪ್ಪುತ್ತಿದ್ದಾರೆ. ನಾಡಿನ ಜನರು ಜಾತಿ-ಮತ-ರಾಜಕಾರಣಗಳ ಹಂಗಿಲ್ಲದೆ ಒಬ್ಬರಿನ್ನೊಬ್ಬರಿಗೆ ಪರಸ್ಪರ ನೆರವಾಗುತ್ತಿದ್ದಾರೆ, ತಮ್ಮ ಸ್ವಂತ ಹಣವನ್ನೂ, ಸಮಯವನ್ನೂ ವ್ಯಯಿಸುತ್ತಿದ್ದಾರೆ. ಹಲವು ಅಧಿಕಾರಿಗಳು ತಮ್ಮ ಆತ್ಮಸಾಕ್ಷಿಯ ಕರೆಗೆ ಬಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ, ಜನರ ಪರವಾಗಿ ದನಿಯೆತ್ತತೊಡಗಿದ್ದಾರೆ. ಅನೇಕ ಪತ್ರಕರ್ತರೂ ತಮ್ಮ ನೌಕರಿಯನ್ನು ತ್ಯಜಿಸಿ ಸ್ವತಂತ್ರವಾಗಿ ತಮ್ಮ ವೃತ್ತಿಧರ್ಮ ಪಾಲಿಸುತ್ತಿದ್ದಾರೆ. ತಮ್ಮ ಸುತ್ತಲೂ ಕಾಣುವ ಓರೆಕೋರೆಗಳನ್ನು ತಮ್ಮ ಬಹು ಶಕ್ತಿಶಾಲಿಯಾದ ಗೆರೆಗಳಲ್ಲೇ ಕಟ್ಟಿಕೊಡುವ ಅನೇಕ ಕಾರ್ಟೂನಿಸ್ಟರು ಕೂಡ ತಮ್ಮ ಕಲೆ ಹಾಗೂ ಸಾಮರ್ಥ್ಯಗಳನ್ನು ಯಾವುದಕ್ಕೂ ಅಡವಿರಿಸದೆ, ತಾವಿದ್ದ ನೌಕರಿಗಳನ್ನೂ ತ್ಯಾಗ ಮಾಡಿ, ಸ್ವತಂತ್ರರಾಗಿ, ಅದೇ ಧೈರ್ಯದಿಂದ ಓರೆಕೋರೆಗಳನ್ನು ಎತ್ತಿ ತೋರಿಸುವ ಕೆಲಸಗಳನ್ನು ಮುಂದುವರಿಸಿದ್ದಾರೆ. ಅಪ್ರತಿಮ ಪ್ರತಿಭೆಯ, ನಮ್ಮ ದೇಶದ ಹೆಮ್ಮೆಯ ಕಲಾವಿದ Satish Acharya ಸತೀಶ್ ಆಚಾರ್ಯ ಕೊರೋನ ಸೋಂಕಿನ ಬಗ್ಗೆ ಬರೆದ ಕಾರ್ಟೂನುಗಳು ವಿಶ್ವಮನ್ನಣೆ ಪಡೆದಿವೆ. ಅದನ್ನೇ ಮುಂದುವರಿಸಿ, ಲಸಿಕೆ ಹಾಕುವ ಕಾರ್ಯಕ್ರಮದ ಎಡರು-ತೊಡರುಗಳನ್ನು ಬರೆದದ್ದಕ್ಕಾಗಿ ಅವರ ಮೇಲೆ ದಾಳಿ ಆರಂಭವಾಗಿದೆ. ಕೊರೋನ ಕಷ್ಟಗಳಲ್ಲಿ ಜನರ ನೋವುಗಳಿಗೆ ಸ್ಪಂದಿಸುವ ಬದಲಿಗೆ ಇಂಥ ದಾಳಿಗಳನ್ನು ಮಾಡುತ್ತಿರುವವರಿಗೆ ಜನರ ಕಷ್ಟಗಳ ಗೊಡವೆಯಿಲ್ಲ ಎನ್ನುವುದು ಸ್ಪಷ್ಟವೇ. ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಆಗಿರುವ ಗೊಂದಲಗಳು, ಅದಕ್ಕಾಗಿ ಮಾಡಿದ ಆಪ್ ನಲ್ಲಿರುವ ಸಮಸ್ಯೆಗಳು, ಪೂರೈಕೆಯ ಸಮಸ್ಯೆಗಳು, ಯಾವ ವಯಸ್ಸಿಗೆ ಯಾರು ಎಷ್ಟರಲ್ಲಿ ಲಸಿಕೆ ನೀಡಬೇಕು ಎಂಬ ಬಗ್ಗೆ ಸರಕಾರಗಳು ದಿನಕ್ಕೊಂಡರಂತೆ ಬದಲಿಸುತ್ತಿರುವ ಹೇಳಿಕೆಗಳು, ಲಸಿಕೆ ಹಾಕುವ ಕೇಂದ್ರಗಳಲ್ಲಿ ಕಾದು ಕಾದು ಉದ್ದುದ್ದವಾಗುತ್ತಿರುವ ಸಾಲುಗಳು, ಆ ಸಂದಣಿಯಲ್ಲಿ ಅಂತರ ಕಾಯಲಾಗದೆ ಉಂಟಾಗಬಹುದಾದ ಅಪಾಯಗಳು ಎಲ್ಲವನ್ನೂ ಎಲ್ಲಾ ಪತ್ರಿಕೆಗಳು ವರದಿ ಮಾಡಿವೆ, ಎದ್ದರೂ, ಬಿದ್ದರೂ ಸರಕಾರದ ಗುಣಗಾನ ಮಾಡಿ ಇತರೆಲ್ಲರನ್ನು ಹಳಿಯುವಂಥವರೂ ಕಷ್ಟಕ್ಕೀಡಾಗಿ ಅಲವತ್ತುಕೊಂಡದ್ದೂ ಆಗಿದೆ. ಅಂತಲ್ಲಿ ಸತೀಶ್ ಬರೆದ ಕಾರ್ಟೂನುಗಳನ್ನು ಹಳಿದು, ಅವರ ಮೇಲೆ ವೈಯಕ್ತಿಕವಾದ ದಾಳಿಗಳನ್ನು ಮಾಡುತ್ತಿರುವವರು ಅಪ್ರಾಮಾಣಿಕರಷ್ಟೇ ಅಲ್ಲ, ತಮಗೂ, ದೇಶದ ಜನತೆಗೂ ಅನ್ಯಾಯ ಮಾಡುತ್ತಿದ್ದಾರೆ. ಹಾಗೆಯೇ ಮೊನ್ನೆ Dinesh Kukkujadka ದಿನೇಶ್ ಬರೆದಿದ್ದ ಅದ್ಭುತವಾದ O2 - ಓಟು ಕಾರ್ಟೂನಿಗೆ ದಾಳಿ ಮಾಡಿದವರೂ ಇಂಥ ಜನವಿರೋಧಿಗಳೇ. ಸತೀಶ್ ಆಚಾರ್ಯ, ದಿನೇಶ್ ಕುಕ್ಕುಜಡ್ಕ, ಪಿಮಹಮ್ಮದ್ ಕಾರ್ಟೂನಿಸ್ಟ್ ಎಲ್ಲರೂ ನಮ್ಮ ನಾಡಿನ ಹೆಮ್ಮೆ, ನಮ್ಮ ಸಾಕ್ಷಿಪ್ರಜ್ಞೆಗಳು. ನೀವು ಹೀಗೆಯೇ ಮುಂದುವರಿಯುತ್ತೀರಿ ಎನ್ನುವುದಕ್ಕೇ ನಿಮ್ಮ ಮೇಲೆ ಈ ನಾಡಿನ ಎಲ್ಲರಿಗೂ ಪ್ರೀತಿ, ಅಭಿಮಾನಗಳಿವೆ, ನಿಮಗೆ ಒಳಿತೇ ಆಗುತ್ತದೆ. ಈ ಕೀಟಲೆಯಿಂದ ನಿಮ್ಮ ಕಾರ್ಟೂನುಗಳು ಇನ್ನಷ್ಟು ಹಂಚಲ್ಪಡುತ್ತವೆ, ಕೀಟಲೆ ಮಾಡುವವರೇ ಹೆಚ್ಚು ಹೆಚ್ಚು ಹಂಚಿಕೊಳ್ಳುತ್ತಾರೆ - ಇವರು ಹೀಗೆ ಬರೆದಿದ್ದಾರೆ ನೋಡಿ, ಹೀಗೆ ಬರೆಯಬಹುದಾ ಅಂತ ಜೋರಾಗಿ ಗೋಳೋ ಎಂದು ಅತ್ತು ಕೊಂಡು ಎಲ್ಲ ಕಡೆ ಹಂಚುತ್ತಾರೆ. ಅವರ ಮೂಲಕವೇ ನಿಮ್ಮ ಕಲೆ, ನಿಮ್ಮ ಕಾಣ್ಮೆ ಎಲ್ಲೆಡೆ ಪಸರಿಸುತ್ತದೆ! ನಾವು ಕರ್ನಾಟಕದಲ್ಲಿದ್ದೇವೆ. ಈ ಹತಾಶರಾದ, ಮೈ ಪರಚಿಕೊಳ್ಳುತ್ತಿರುವ ಕೀಟಲೆಕೋರರು ಎಷ್ಟೇ ಎಗರಾಡಿದರೂ ಇಲ್ಲಿನ ಸರಕಾರ ಇವರಿಗೆ ಯಾವ ಸೊಪ್ಪೂ ಹಾಕುವುದಿಲ್ಲ. ನೀವು ಈ ರಾಜ್ಯದ, ಈ ದೇಶದ ದೊಡ್ಡ ಆಸ್ತಿಗಳು ಎನ್ನುವುದು ನಮ್ಮ ರಾಜ್ಯದ ಸರಕಾರಕ್ಕೆ ಗೊತ್ತಿದೆ, ನಿಮ್ಮ ಮೊನಚು ಗೆರೆಗಳನ್ನು ಅರ್ಥ ಮಾಡಿಕೊಳ್ಳುವ, ಸಹಿಸಿಕೊಳ್ಳುವ, ಆದರಿಸುವ ಸಾಮರ್ಥ್ಯ ಅದಕ್ಕಿದೆ. ನೀವು ಹೀಗೆಯೇ ಗೆರೆಗಳ ಚಾಟಿ ಬೀಸುತ್ತಿರಿ, ನಾಡು ನಿಮ್ಮೊಂದಿಗಿದೆ. ಕೊನೆಗೊಂದು ಸಲಹೆ: ಈ ಕೀಟಲೆಕೋರರಿಗೆ ನೀವು ಬರೆದದ್ದು ಅರ್ಥವಾಗುವುದಿಲ್ಲ ಎನ್ನುವುದು ಗ್ಯಾರಂಟಿ. ಅದಕ್ಕಾಗಿ ಇನ್ನು ಮುಂದೆ, ಸ್ವಲ್ಪ ರಸಭಂಗವಾಗಬಹುದಾದರೂ ಕೂಡ, ನಿಮ್ಮ ಗೆರೆಗಳ ಹಿಂದಿನ ಮರ್ಮ ಏನೆಂದು ಒಂದೆರಡು ವಾಕ್ಯಗಳಲ್ಲಿ ಬರೆಯುವುದು ಒಳ್ಳೆಯದು. ಆಗ ಈ ಕೀಟಲೆಕೋರರು ಅವನ್ನು ಹಂಚುವುದನ್ನು ನಿಲ್ಲಿಸಿಯೇ ಬಿಡುತ್ತಾರೆ, ಪ್ರಯತ್ನಿಸಿ ನೋಡಿ. ಎಂದು ಖ್ಯಾತ ವೈದ್ಯ, ಜನಪರ ಚಿಂತಕ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬರೆದುಕೊಂಡಿದ್ದಾರೆ. ಸಹನೆ ಇಟ್ಟುಕೊಳ್ಳಿ… ಆಟಕ್ಕೆ ಆಟ-ಕಾಸಿಗೆ ಕಾಸು ಸ್ಕೀಮ್ ಇದು! ಅವರಿಗೂ ಗೊತ್ತು, ಗೆಳೆಯ ಸತೀಶ್ ಆಚಾರ್ಯ ( Cartoonist Satish Acharya ) ಅವರಿಗೆ ಈ ಆಟದಿಂದ ಕಿರಿಕಿರಿಗಿಂತ ಹೆಚ್ಚೇನೂ ಆಗೋದಿಲ್ಲ ಅಂತ. ಸತೀಶ್ ತಮ್ಮ ಪ್ರತಿಭೆಯಲ್ಲಿ, ವೃತ್ತಿಯಲ್ಲಿ ಏರಿರುವ ಎತ್ತರದ ಏಣಿಯ ಕೆಳಗಿನ ಹುಲ್ಲುಗಳಿಗಿಂತ ಸಣ್ಣ ಜನ, ಸತೀಶ್ ಅವರ ಎತ್ತರಕ್ಕೆ ಎಂಜಲುಗಿಯಲು ಪ್ರಯತ್ನಿಸಿದ್ದಾರೆ. ಸ್ವಲ್ಪ ಸಹನೆ ಇಟ್ಟು ಕಾದರೆ, ಆ ಎಂಜಲಿನ ವಿಷದ ಭಾರಕ್ಕೆ ಅದು ನೇರ ಹೋಗಿ ಬೀಳುವುದು ಉಗಿದವರ ಮುಖದ ಮೇಲೇ. ಹಾಗಾಗುವ ಮೊದಲೇ, ಸಹನೆ ಇಲ್ಲದೇ, ಎಲ್ಲ ಒಟ್ಟಾಗಿ ಅದನ್ನು ತಟ್ಟಿ ತಟ್ಟಿ ಆಡಲಿ, ಉಗುಳು ಕೆಳಗೆ ಬೀಳುವ ಮೊದಲೇ ಆವಿ ಆಗಲಿ ಎಂದು ಕಾಯುವ, ಆ ತಟ್ಟುವಿಕೆಯಿಂದ ವೈರಲ್ ಆಗುವ ಕ್ಲಿಕ್‌ಗಳಲ್ಲೇ ನಾಲ್ಕು ಕಾಸು ಮಾಡಿಕೊಳ್ಳುವ ಅವರ ಉದ್ದೇಶಿತ ಆಟದಲ್ಲಿ ಪಾಲ್ಗೊಳ್ಳಬೇಡಿ ಪ್ಲೀಸ್. ಹಾಗಾದ್ರೆ ಏನು ಮಾಡಬೇಕು ಅಂತೀರಾ? ವಿಷಜಂತುಗಳು ಹೀಗೆ ಬೆತ್ತಲಾದಾಗ, ಮುಖ ತಿರುಗಿಸಿ, ನಿರ್ಲಕ್ಷಿಸಿ ಬಿಡಿ. ತಮ್ಮದಕ್ಕೆ ಬೆಲೆ ಇಷ್ಟೇ; ಕ್ಲಿಕ್ ಕಾಸೂ ಗಿಟ್ಟೋದಿಲ್ಲ ಅಂತ ಗೊತ್ತಾಗ್ಲಿ ಅವರಿಗೆ. ಈ ಆಟದ ರೂಲ್ ಇಷ್ಟೇ. ಎಂದು ತನ್ನದೇ ವಿಶಿಷ್ಟ ಶೈಲಿಯಲ್ಲಿ ಬರೆದಿದ್ದಾರೆ ಹಿರಿಯ ಪತ್ರಕರ್ತ, ಸಾಮಾಜಿಕ ಚಿಂತಕ ರಾಜಾರಾಂ ತಲ್ಲೂರು. ಪಿಮಹಮ್ಮದ್ ಕಾರ್ಟೂನಿಸ್ಟ್, ದಿನೇಶ್ ಕುಕ್ಕುಜಡ್ಕ, ಪಂಜು ಗಂಗೊಳ್ಳಿ ನನ್ನ ಸ್ನೇಹಿತರು ಸತೀಶ್ ಆಚಾರ್ಯ ನನಗೆ ವೆಯುಕ್ತಿಕ ಪರಿಚಯ ಅಲ್ಲದಿದ್ದರೂ ತನ್ನ ಜಾಗೃತ ಕಾರ್ಟೂನ್ ಮೂಲಕ ಆಪ್ತರಾದವರು. ವರ್ತಮಾನದ ಬಹುಮುಖ್ಯ ಕಾರ್ಟೂನಿಸ್ಟರಾಗಿ ಅಧಿಕಾರಸ್ಥರ, ಅವರ ಕುರುಡು ಹಿಂಬಾಲಕರ ಸಿಟ್ಟಿಗೆ ಗುರಿಯಾಗಿರುವ ಈ ನಾಲ್ವರು ದ್ವೇಷ ಕಾರ್ಖಾನೆ, ಐಟಿ ಸೆಲ್ಲು ಜನಗಳ ಕೇಂದ್ರವಾಗಿರುವ ಅದೇ ಅವಿಭಜಿತ ದ ಕ ಜಿಲ್ಲೆಯವರು ಎಂಬುದು ನನಗಂತೂ ಬಹಳ ಹೆಮ್ಮೆಯ ಸಂಗತಿ. ಇವರ ಮೇಲೆ ಬಿಜೆಪಿ ಐಟಿ ಸೆಲ್ಲುಗಳಿಂದ ನಡೆಯುತ್ತಿರುವ ದಾಳಿಗಳು ಇವರ ಕಾರ್ಟೂನಿನ ಮಹತ್ವವನ್ನು ಎತ್ತಿ ತೋರಿಸುತ್ತದೆ. ಇನ್ನು ಅಜಿತ್ ಹನುಮಕ್ಕನವರ್ ತನ್ನ ನಾಚಿಕೆಗೇಡು ಪತ್ರಿಕಾ ವೃತ್ತಿಗಾಗಿ ಹಾಳು ಬಾವಿ, ಕೆರೆಗೆ ಹಾರುವ ನಿರ್ಧಾರ ಮಾಡಿದರೆ ಕರ್ನಾಟಕದಲ್ಲಿರುವ ಹಾಳು ಬಾವಿ, ಕೆರೆಗಳು ಸಾಕಾಗಲಿಕ್ಲಿಲ್ಲ. ಡೋಂಟ್ ವರಿ ಸತೀಶ್ ಆಚಾರ್ಯ ಇಂತವರು ಹಾಳು ಬಾವಿಯ ಬಳಿ ಹೋದರೆ ಹಾಳು ಬಾವಿಯೇ ನಾಚಿಕೊಂಡೀತು. ಎಂದು ಬರೆದಿದ್ದಾರೆ ಡಿವೈಎಫ್‌ಐ ರಾಜ್ಯ ಅಧ್ಯಕ್ಷ, ಹೋರಾಟಗಾರ ಮುನೀರ್ ಕಾಟಿಪಳ್ಳ ಬರೆದಿದ್ದಾರೆ. ಫ್ಯಾಸಿಸ್ಟ್ ಗಳ ವಿರುದ್ಧ ನಿಂತು ದನಿಯೆತ್ತಲು ಬೇರೆಲ್ಲ ಸಂಸ್ಥೆಗಳು, ವ್ಯಕ್ತಿಗಳು ಹಿಂಜರಿದಾಗ ಪತ್ರಕರ್ತರು ಮತ್ತು ಕಾರ್ಟೂನಿಸ್ಟ್ ಗಳು ಸಾಮಾನ್ಯವಾಗಿ ಆ ಕೆಲಸ ಮಾಡುವುದು ನಡೆದು ಬಂದ ರೂಢಿ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚಿನ ಪತ್ರಕರ್ತರೂ ತಮ್ಮನ್ನು ಫ್ಯಾಸಿಸ್ಟ್ ಗಳ ಸೇವೆಗೆ ಸಮರ್ಪಿಸಿಕೊಂಡಿರುವುದರಿಂದ ಕೆಲವು ಕಾರ್ಟೂನಿಸ್ಟರು ಮಾತ್ರ ನಿಷ್ಟೆಯಿಂದ ಆ ಕೆಲಸ ಮಾಡುತ್ತಿದ್ದಾರೆ. ಹೀಗೆ ದನಿ ಎತ್ತಿ ಎಂದು ಇವರಿಗೆ ಯಾರೂ ಹೇಳುವುದಿಲ್ಲ. ಇವರು ಹಾಗೆ ಮಾಡುವುದು ತಮ್ಮ ಧರ್ಮ ಅಂತಲೋ, ಕರ್ಮ ಅಂತಲೋ ಅಥವಾ ಸುಮ್ಮನೆ ಏನೋ ಒಂದು ಚಟ ಅಂತಲೋ ತಮಗೆ ತಾವೇ ಹೇಳಿಕೊಳ್ಳುವ ಕಾರಣಕ್ಕೆ. ಮತ್ತು ಹೀಗೆ ಮಾಡುತ್ತಿರುವ ಕಾರ್ಟುನಿಸ್ಟರ್ಯಾರೂ ಮುಖ್ಯವಾಹಿನಿಯ ಯಾವುದೇ ಪ್ರಮುಖ ಪತ್ರಿಕೆಯಲ್ಲಿ ಉದ್ಯೋಗದಲ್ಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಇವರೆಲ್ಲಾ ಸಕ್ರಿಯರಾಗಿರಲು ಸಾಧ್ಯವಾಗಿರುವುದು ಸೋಷಿಯಲ್ ಮೀಡಿಯಾ ಕಾರಣಕ್ಕೆ. ಒಂದು ಕಾಲದಲ್ಲಿ ವ್ಯಂಗ್ಯಚಿತ್ರಕ್ಕೆ ಹೆಸರುವಾಸಿಯಾಗಿದ್ದ 'ದಿ ಟೈಮ್ಸ್ ಆಫ್ ಇಂಡಿಯಾ'ದಲ್ಲಿನ ಇಬ್ಬರು ಪ್ರಮುಖ ಕಾರ್ಟೂನಿಸ್ಟರಿಗೆ ಮೋದಿಯ ಕಾರ್ಟೂನ್ ಬರೆಯದಂತೆ ನೇರ ಆದೇಶವೇ ಇದ್ದಂತಿದೆ. ಟಿವಿ ಆಂಕರ್ ಗಳೆಂಬ ಕೂಗುಮಾರಿಗಳು ಪತ್ರಕರ್ತರಲ್ಲ, ಬದಲಿಗೆ, ಪತ್ರಕರ್ತರ ವೇಷ ಹಾಕಿರುವ ಫ್ಯಾಸಿಸ್ಟರ ಏಜಂಟರುಗಳು ಅಥವಾ ಹಿಟ್ ಮ್ಯಾನ್ ಗಳು. ಇಂತಹ ಫ್ಯಾಸಿಸ್ಟ್ ಪಕ್ಷವೊಂದರ ಮುಖವಾಣಿಯಾಗಿರುವ ಕನ್ನಡದ ಟಿವಿ ಚಾನಲೊಂದರ ಕೂಗುಮಾರಿ ಕಾರ್ಟೂನಿಸ್ಟ್ ಸತೀಶ್ ಆಚಾರ್ಯರ ಕಾರ್ಟೂನ್ ಬಗ್ಗೆ ಕಿರಿಚಾಡಿದುದರಲ್ಲಿ ವಿಶೇಷವೇನಿಲ್ಲ. ಪಾಪಃ ಆತನಿಗೂ ತನ್ನ ಹೊಟ್ಟೆಪಾಡು ನೋಡಿಕೊಳ್ಳಬೇಕಾದ ಕರ್ಮ ಇದೆಯಲ್ಲ! ಎಂದು ಪ್ರಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಬರೆದಿದ್ದಾರೆ. ಕನ್ನಡನಾಡು ಕಂಡ ವಿಪರೀತ, ಅವಿವೇಕಿ, ಪರಮ ದುರಂಹಕಾರಿ, ಅಂಡೆಪಿರ್ಕಿ ಮತ್ತು ಮೋದಿ ಬಕೆಟ್, ಬೂಟ್ ಲಿಕ್ಕರ್ ಪತ್ರಕರ್ತ ಅಜಿತ್ ಹನುಮಕ್ಕನವರ್ ನಮ್ಮ ಹೆಮ್ಮೆಯ ಗೆಳೆಯ, ಅಂತರಾಷ್ಟ್ರೀಯ ಮನ್ನಣೆ ಗಳಿಸಿದ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಕುರಿತು ನ್ಯೂಸ್ ಬುಲೆಟಿನ್ ಒಂದರಲ್ಲಿ ಅಪರಿಮಿತ ಉರಿ ಕಾರಿಕೊಂಡಿದ್ದಾನೆ. ಸತೀಶ್ ರಚಿಸುವ ಕಾರ್ಟೂನ್‌ಗಳ ಒಂದು ಗೆರೆಯ ಒಂದು ಬಿಂದುವಿನ ಯೋಗ್ಯತೆ ಇಲ್ಲದ ಈ ಮನುಷ್ಯ ಸತೀಶ್ ಬಗ್ಗೆ ಮಾತನಾಡುತ್ತಿದ್ದಾನೆ. ಕೋವಿಡ್ ನಿರ್ಹವಣೆಯಲ್ಲಿ ಅತ್ಯಂತ ಕಳಪೆ ದರ್ಜೆಯ ನಾಯಕ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಉಗಿಸಿಕೊಂಡ ಮೋದಿಯನ್ನ ಕಳೆದ ಇಷ್ಟೂ ವರ್ಷಗಳಲ್ಲಿ ಅದರಲ್ಲೂ ಕೋವಿಡ್ ವರ್ಷದಲ್ಲಿ ಈ ಹನುಕಕ್ಕ ಎಷ್ಟು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ ಎಂಬುದನ್ನು ನಾವೆಲ್ಲ ನೋಡಿಯೇ ಇದ್ದೇವೆ. ಈತ ಒಂದು ದಿನವಾದರೂ ಮೋದಿ ಸರ್ಕಾರವನ್ನ ಈ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡಿದ್ದರೆ ಇಂದು ದೇಶದಲ್ಲಿ ಜನರು ಕೋವಿಡ್‌ಗೆ ಸೂಕ್ತ ಚಿಕಿತ್ಸೆ, ಆಕ್ಸಿಜನ್, ಬೆಡ್ ಮುಂತಾದವು ಸಿಗದೆ ಸಾಯುತಿರುವ ಸಂದರ್ಭದಲ್ಲಿ ಒಂದಷ್ಟು ಜನರ ಶಾಪದಿಂದ ಆದರೂ ಈತ ಮುಕ್ತನಾಗುತ್ತಿದ್ದ. ಮೋದಿಯ ವೈಫಲ್ಯಗಳನ್ನೇ ಸಾಧನೆ ಎಂದು ಹೊಗಳಿದ ಈ ಹನುಕಕ್ಕ ದೇಶದಲ್ಲಿ ಇಷ್ಟು ಜನರು ಸಾಯುತ್ತಿರುವುದಕ್ಕೆ ಪರೋಕ್ಷವಾಗಿ ಕಾರಣರಾದವರಲ್ಲಿ ಒಬ್ಬ. ಈತ ಸತೀಶ್ ಆಚಾರ್ಯರ ಬಗ್ಗೆ ಮಾತನಾಡುತ್ತಾನೆ. ಸತೀಶ್ ಕಳೆದ ಇಷ್ಟೂ ವರ್ಷಗಳಲ್ಲಿ ನಮ್ಮನ್ನೆಲ್ಲ ಎಚ್ಚರವಾಗಿಟ್ಟವರು. ಇಡೀ ದೇಶದ ಜನಸಮೂಹದ ಬಾಯಿ ಕಟ್ಟಿಸಿರುವ ಈ ಸರ್ಕಾರದ ವಿರುದ್ಧ ಸತೀಶ್ ಅದೇ ಜನಸಮೂಹದ ದನಿಯಾಗಿ ತಮ್ಮ ಚಿತ್ರಗಳನ್ನು ರಚಿಸಿದವರು. ವಿರೋಧ ಪಕ್ಷಗಳೂ ಸುಮ್ಮನೆ ಕುಂತಾಗ ಸತೀಶ್ ಈ ದೇಶದ ಜನಸಾಮಾನ್ಯರ ಪಕ್ಷಪಾತಿಯಾಗಿ ಕಾರ್ಟೂನ್‌ಗಳ ಮೂಲಕ ಮಾತನಾಡಿದವರು. ಅದಕ್ಕೆಂದೇ ಇಂದು ಸತೀಶ್ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದ್ದಾರೆ. ಈ ದೇಶದ ಇಂದು ನಾಳೆಗಳ ಒಳಿತಿಗಾಗಿ ಬೃಹತ್ ಚಳವಳಿಯನ್ನು ಒಬ್ಬ ವ್ಯಕ್ತಿ ಮಾಡುತ್ತಿದ್ದರೆ ಅದು ಸತೀಶ್ ಆಚಾರ್ಯ. ಸತೀಶ್ ಅಂದರೆ ರಾಜಿರಹಿತ ಮನುಷ್ಯ. ವ್ಯವಸ್ಥೆಯ ವಿರುದ್ಧ ಇದ್ದಾರೆ ಎಂದರೆ ಅವರ ಬಗ್ಗೆ ವ್ಯವಸ್ಥೆಗೆ ವಿರೋಧವಿದ್ದೇ ಇರುತ್ತದೆ, ಹನುಕಕ್ಕ ಈ ಜನವಿರೋಧಿ ಆಡಳಿತ ವ್ಯವಸ್ಥೆಯ ಭಾಗ ಮತ್ತು ಭಟ್ಟಂಗಿ. ಅದು ಎಲ್ಲರಿಗೂ ತಿಳಿದಿರುವ ಸತ್ಯ. ಇಡೀ ದೇಶದ ಜನರಿಗೆ ಉಚಿತವಾಗಿ ಸಿಗಬೇಕಾದ ಕೋವಿಡ್ ಲಸಿಕೆಯನ್ನು 'ನಮ್ಮನ್ನು ಈ ರಾಜ್ಯದಲ್ಲಿ ಗೆಲ್ಲಿಸಿದರೆ ನಿಮಗೆ ಉಚಿತವಾಗಿ ಲಸಿಕೆ ನೀಡುತ್ತೇವೆ" ಎಂದು ಕೋವಿಡ್ ಲಸಿಕೆಯನ್ನು ಇಲೆಕ್ಷನ್ ಆಮಿಷದ ಮಟ್ಟಕ್ಕೆ ಇಳಿಸಿರುವ ಜಗತ್ತಿನ ಅತ್ಯಂತ ನಿರ್ಲಜ್ಜ ಪ್ರಧಾನಿ ಮೋದಿಯನ್ನು, ಅವರ ಸರ್ಕಾರವನ್ನು ಹೊಗಳುವುದು ಹನುಕಕ್ಕನಂತಹ ಪರಮ ನಿರ್ಲಜ್ಜನಿಗೆ ಮಾತ್ರ ಸಾಧ್ಯ. ಈ ಸರ್ಕಾರವನ್ನು ಟೀಕಿಸುವ ಹಕ್ಕು ನಮ್ಮದು ಮತ್ತು ಸತೀಶ್ ಸೇರಿದಂತೆ ಎಲ್ಲ ಕಾರ್ಟೂನಿಸ್ಟ್‌ಗಳದ್ದು. ಹನುಕಕ್ಕ ಎಷ್ಟು ಬೊಗಳಿದರೂ ನಾವು ಸತೀಶ್ ಜೊತೆ. ಹಿಂದೆಯೂ ಬರೆದಿದ್ದೆ, ಈಗಲೂ ಬರೆಯುತ್ತಿದ್ದೇನೆ. ಒಂದೊಂದು ಕಾರ್ಟೂನ್ ಸಹ ಆಳುವ ವರ್ಗಕ್ಕೆ ಎಚ್ಚರಿಕೆ. ಒಂದೊಂದು ಕಾರ್ಟೂನ್ ಸಹ ಒಂದು ಹೋರಾಟಕ್ಕೆ ಮುನ್ನುಡಿ ಬರೆಯಬಲ್ಲವು, ಈ ದೇಶದ ಇಂದಿನ ವರ್ತಮಾನಕ್ಕೆ ಇವರು ಪ್ರತಿಕ್ರಿಯಿಸುವ ಪರಿ ಇತಿಹಾಸದಲ್ಲಿ ದಾಖಲಾಗುವಂಥದ್ದು. ಈ ದೇಶದ ಇತಿಹಾಸದಲ್ಲಿ ಈ ಹೆಸರು ಇನ್ನೆಂದೂ ಅಚ್ಚಳಿಯದು. ಸತೀಶ್ ಆಚಾರ್ಯ.ಇದು ಕುಂದಾಪುರದಿಂದ ಹೊರಟು ಜಗತ್ತನ್ನು ನಿಬ್ಬೆರಗುಗೊಳಿಸುವ ಅಚ್ಚರಿ. ಸತೀಶ್ ನಾವು ಸದಾ ನಿಮ್ಮೊಂದಿಗೆ. ಲವ್ ಯೂ. Proud of you. ಎಂದು ಕುಂದಾಪುರ ಪತ್ರಕರ್ತರ ಸಂಘದ ಅಧ್ಯಕ್ಷ, ಕರಾವಳಿ ಕರ್ನಾಟಕ ನ್ಯೂಸ್ ಪೋರ್ಟಲ್ ನ ಸಂಪಾದಕ ಶಶಿಧರ ಹೆಮ್ಮಾಡಿ ಬರೆದಿದ್ದಾರೆ. ಸತೀಶ್ ಆಚಾರ್ಯ ದೇಶದ ಶ್ರೇಷ್ಟ ವೃತ್ತಿಪರ ಕಾರ್ಟೂನಿಸ್ಟರಲ್ಲಿ ಒಬ್ಬರು. ಆಡಳಿತದ ಚುಕ್ಕಾಣಿ ಹಿಡಿದ ಮಂದಿಯ ತಪ್ಪುಗಳನ್ನು ಭೂತಗನ್ನಡಿಯಲ್ಲಿ ಕಾಣಿಸುವುದು ಅವರ ವೃತ್ತಿ. ಓರೆಯಿರುವುದನ್ನು ಅವರು ನಮಗೆ ಕಾಣುವಷ್ಟು ಓರೆಯಾಗಿಸುತ್ತಾರೆ. ಇದನ್ನವರು ದಶಕಗಳಿಂದ ಮಾಡುತ್ತಲೇ ಬಂದವರು. ಅವರ ರೇಖೆಗಳ ತೀಕ್ಷ್ಣತೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ಕಳೆದ ಏಳೆಂಟು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಸತೀಶರ ಗೆರೆಗಳು ಇನ್ನಷ್ಟು ಮೊನಚಾಗಿವೆ. ಸತೀಶರು ಟೀಕೆಗಳನ್ನು ಗೌರವದಿಂದ ನೋಡಬಲ್ಲರು. ಆದರೆ,ಕೆಲವರು ಟೀಕೆಗಳ ಘನತೆಯನ್ನು ಮಣ್ಣುಪಾಲು ಮಾಡುವಂತೆ ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ಮಟ್ಟದಲ್ಲಿ ದಾಳಿ ಮಾಡುತ್ತಿದ್ದಾರೆ. ಇವರಿಗೆಲ್ಲ ಧಿಕ್ಕಾರವಿರಲಿ. ಸತೀಶರು ಇದರಿಂದೆಲ್ಲ ವಿಚಿಲಿತರಾಗದಷ್ಟು ವೃತ್ತಿಪರರು. ಎಂದು ಬರೆದಿದ್ದಾರೆ ಪ್ರಗತಿಪರ ಚಿಂತಕ ಉದಯ್ ಗಾಂವ್ಕರ್. ನನ್ನ ಮೆಚ್ಚಿನ ಸತೀಶ್ ಆಚಾರ್ಯ ರಂತೆ ಜಗತ್ತಿನ ಹಲವು ವ್ಯಂಗ್ಯಚಿತ್ರಗಾರರು ಕೋವಿಡ್ ವ್ಯಾಕ್ಸಿನ್ ಬಗ್ಗೆ ಕಾರ್ಟೂನ್ ಮಾಡಿದ್ದಾರೆ. ಅರಿವಿಲ್ಲದ, ಬಾಲಿಶ ಮೂರ್ಖ ನಿರೂಪಕರು (ಅವರು ಪತ್ರಕರ್ತರಲ್ಲ) ಸತೀಶ್ ಆಚಾರ್ಯರ ಹೆಸರಲ್ಲಿ ಬಿಟ್ಟಿ ಪ್ರಚಾರ ಪಡೆಯಲು ದುಸ್ಸಾಹಸ ಮಾಡುತ್ತಿರುವುದು ಕರೋನಜನಕವಾಗಿದೆ. We are with you Satish Acharya ಎಂದು ವಿನ್ಯಾಸ್ ವಿಶ್ವಾಸ್ ಬರೆದು ಹಲವು ದೇಶ ವಿದೇಶಗಳ ಕಾರ್ಟೂನ್ ಗಳನ್ನು ಹಂಚಿಕೊಂಡಿದ್ದಾರೆ. __________________________________ ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಶನ್ ಶೆಟ್ಟಿ RG ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.

Advertisement
Advertisement
Recent Posts
Advertisement