ವೈದ್ಯಕೀಯ ಆಮ್ಲಜನಕ ಹಾಗೂ ಕೊರೊನಾ ಔಷಧಗಳನ್ನು ವೈಜ್ಞಾನಿಕ, ವೈಚಾರಿಕ ಹಾಗೂ ಸಮಾನತೆಯ ಆಧಾರದಲ್ಲಿ ಸಮರ್ಪಕವಾಗಿ ವಿತರಣೆ ಆಗಬೇಕು ಎಂಬ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ಕಾರ್ಯಪಡೆಯೊಂದನ್ನು ಶನಿವಾರವಷ್ಟೇ ನಿಯೋಜಿಸಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿದೆ. ಆ ಕಾರ್ಯಪಡೆಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ, ಹೃದ್ರೋಗ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ, ಪಶ್ಚಿಮ ಬಂಗಾಳ ಆರೋಗ್ಯ ವಿಜ್ಞಾನ ವಿವಿಯ ಮಾಜಿ ಕುಲಪತಿ ಡಾ. ಭಾಬತೋಷ್ ಬಿಸ್ವಾಸ್, ಗುರ್ಗಾಂವ್‌ನ ವೇದಾಂತ ಹಾಸ್ಪಿಟಲ್ ಎ್ಯಂಡ್ ಹಾರ್ಟ್ ಇನ್ಸ್ಟಿಟ್ಯೂಟ್ ನ ಆಡಳಿತ ನಿರ್ದೇಶಕ ಹಾಗೂ ಚೇರ್ಮನ್ ಡಾ. ನರೇಶ್ ಟ್ರೇಹಾನ್ ಹಾಗೂ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮತ್ತು ಕೇಂದ್ರ ಸಂಪುಟ ಕಾರ್ಯದರ್ಶಿ ಹೀಗೆ ಒಟ್ಟು 12 ಸದಸ್ಯರಿದ್ದಾರೆ. ಈ ಸಮಿತಿಯು ಒಂದು ವಾರದೊಳಗೆ ಕಾರ್ಯಾರಂಭಗೊಳಿಸಲಿದೆ.
ಮೇಲೆ ವಿವರಿಸಲಾದ 'ಆಕ್ಸಿಜನ್ ಹಂಚಿಕೆಯ ಅಧಿಕಾರ'ವನ್ನು ಸುಪ್ರೀಂಕೋರ್ಟ್ ಒಕ್ಕೂಟ ಸರ್ಕಾರದಿಂದ ಕಿತ್ತುಕೊಂಡು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣಗಳೇನು ಎಂಬ ಕುರಿತು ಹಿರಿಯ ಪತ್ರಕರ್ತ, ಬರಹಗಾರ, ಸಾಮಾಜಿಕ ಚಿಂತಕ ದಿನೇಶ್ ಕುಮಾರ್ ಎಸ್.ಸಿ. ಯವರು ಈ ಕೆಳಗಿನ ಕಿರು ಲೇಖನದಲ್ಲಿ ವಿವರಿಸಿದ್ದಾರೆ. ಅಗತ್ಯವಾಗಿ ಓದಿ.
ವಿಕೇಂದ್ರೀಕರಣ (Decentralization) ಆಗದ ಹೊರತು ದೇಶ ಸುಧಾರಿಸದು. ಆದರೆ ಮೋದಿ-ಶಾಗಳ ಸರ್ವಾಧಿಕಾರಿ ಸರ್ಕಾರ ಅದನ್ನು ಎಂದಿಗೂ ಮಾಡುವುದಿಲ್ಲ. ರಾಜ್ಯಗಳ ಅಧಿಕಾರಗಳನ್ನೆಲ್ಲ ಕಿತ್ತುಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ.
ವ್ಯಾಕ್ಸಿನ್ ಕಥೆ ಏನಾಯಿತು ನೋಡಿ. ಮೇ 1 ರವರೆಗೆ ವ್ಯಾಕ್ಸಿನ್ ನೂರಕ್ಕೆ ನೂರು ಒಕ್ಕೂಟ ಸರ್ಕಾರದಿಂದಲೇ ಪಡೆಯಬೇಕಿತ್ತು. ರಾಜ್ಯಗಳಿಗೆ ನೇರವಾಗಿ ಖರೀದಿ ಮಾಡುವ ಅವಕಾಶ ಇದ್ದಿದ್ದರೆ, ಕೋವಿಶೀಲ್ಡ್, ಕೊವ್ಯಾಕ್ಸಿನ್ ಮಾತ್ರವಲ್ಲ ಸ್ಪುಟ್ನಿಕ್ ಮತ್ತಿತರ ವ್ಯಾಕ್ಸಿನ್ ಗಳನ್ನೂ ಆಯಾ ರಾಜ್ಯಗಳು ನೇರವಾಗಿ ಕೊಂಡುಕೊಳ್ಳುತ್ತಿದ್ದವು. ಅದಕ್ಕೆ ಒಕ್ಕೂಟ ಸರ್ಕಾರ ಅವಕಾಶವೇ ಕೊಡಲಿಲ್ಲ.
ಮೋದಿ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ಬಿಲ್ಡ್ ಮಾಡುವ ಹುಚ್ಚು ಹಿಡಿದಿತ್ತು. ಇದಕ್ಕಾಗಿ 95 ದೇಶಗಳಿಗೆ ಭಾರತದಲ್ಲಿ ತಯಾರಾದ ಆರುವರೆ ಕೋಟಿ ವಯಲ್ ವ್ಯಾಕ್ಸಿನ್ ಕಳುಹಿಸಲಾಯಿತು. ಇವುಗಳಲ್ಲಿ ಒಂದಷ್ಟು ವ್ಯಾಕ್ಸಿನ್ ಕಂಪೆನಿಯಿಂದ ಮಾರಾಟವಾದವುಗಳು, ಮಿಕ್ಕವು ಒಕ್ಕೂಟ ಸರ್ಕಾರ ಉದಾರವಾಗಿ ದಾನ ಮಾಡಿದ್ದು. ಇದಕ್ಕಾಗಿ ಸರ್ಕಾರ ಬಳಸಿದ್ದು ಪಿಎಂ ಕೇರ್ಸ್ ಗೆ ಭಾರತೀಯರು ನೀಡಿದ ದೇಣಿಗೆ ಹಣವನ್ನು!
ಈ ಆರುವರೆ ಕೋಟಿ ವ್ಯಾಕ್ಸಿನ್ ಭಾರತೀಯರಿಗೇ ಕೊಡಬಹುದಿತ್ತಲ್ಲವೇ? ಯಾಕೆ ಕೊಡಲಿಲ್ಲ? ಕೊಡುವ ಮನಸ್ಸಿದ್ದ ರಾಜ್ಯಗಳಿಗೆ ಕೊಳ್ಳುವ ಅವಕಾಶವನ್ನೇ ಯಾಕೆ ನಿರಾಕರಿಸಲಾಗಿತ್ತು? ಭಾರತೀಯರ ಹೆಣ ಬಿದ್ದರೂ ಚಿಂತೆಯಿಲ್ಲ, ವಿದೇಶಗಳಿಗೆ ವ್ಯಾಕ್ಸಿನ್ ಕಳಿಸಿ ಫೋಜು ಕೊಡುವ ಹುಚ್ಚಾಟ ಏಕೆ ಬೇಕಿತ್ತು. ನಿಜ, ಬೇರೆ ದೇಶಗಳಿಗೆ ಮಾನವೀಯ ದೃಷ್ಟಿಯಲ್ಲಿ ನಾವು ಸಹಾಯ ಮಾಡಬೇಕು. ಆದರೆ ಯಾವ ಬೆಲೆ ತೆತ್ತು? ಭಾರತೀಯರ ಜೀವದ ಬೆಲೆ ತೆತ್ತು ಇಮೇಜ್ ಬಿಲ್ಡ್ ಅಪ್ ಬೇಕಿತ್ತಾ?
ಅಂದಹಾಗೆ ಅಮೆರಿಕ, ಕೆನಡಾ, ಯೂರೋಪಿಯನ್ ದೇಶಗಳು ತಮ್ಮ ದೇಶದ ಜನರ ವ್ಯಾಕ್ಸಿನ್ ಕೋಟಾ ಮುಗಿಯುವವರೆಗೆ ಬೇರೆ ದೇಶಗಳಿಗೆ ವ್ಯಾಕ್ಸಿನ್ ಕಳಿಸಲೇ ಇಲ್ಲ. ಅಮೆರಿಕದಂಥ ಅಮೆರಿಕಕ್ಕೆ ಇಲ್ಲದ ಇಮೇಜ್ ಬಿಲ್ಡ್ ಅಪ್ ತಿಕ್ಕಲು ನಮಗೇಕೆ ಬೇಕಿತ್ತು?
ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ರಾಜ್ಯಗಳು ಈಗ ಶೇ. 50ರಷ್ಟು ವ್ಯಾಕ್ಸಿನ್ ನೇರವಾಗಿ ಕೊಳ್ಳಲು ಕೇಂದ್ರ ಸರ್ಕಾರ ಮೇ.1 ರಿಂದ ಅವಕಾಶ ನೀಡಿದೆ. ರಾಜ್ಯಸರ್ಕಾರಗಳು ತರಾತುರಿಯಲ್ಲಿ ವ್ಯಾಕ್ಸಿನ್ ಕಂಪೆನಿಗಳಿಗೆ ಆರ್ಡರ್ ಪ್ಲೇಸ್ ಮಾಡಿವೆ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ ದೇಶದ ಕಾಲು ಭಾಗ ಜನರಿಗೆ ಇಷ್ಟು ಹೊತ್ತಿಗೆ ವ್ಯಾಕ್ಸಿನ್ ಕೊಡಬಹುದಿತ್ತಲ್ಲವೇ? ಎಷ್ಟೊಂದು ಸಾವುಗಳು, ಆರ್ಥಿಕ ಸಂಕಷ್ಟ, ಲಾಕ್ ಡೌನ್ ಹಿಂಸೆಗಳನ್ನು ತಪ್ಪಿಸಬಹುದಿತ್ತಲ್ಲವೇ?
ಆಕ್ಸಿಜನ್ ವಿಷಯದಲ್ಲೂ ಹಾಗೇ ಆಯಿತು. ಕರ್ನಾಟಕದಲ್ಲಿ ಈ ಸಂಕಷ್ಟ ಸ್ಥಿತಿಯಲ್ಲಿ ಬೇಕಾದ ಪ್ರಮಾಣದ ಆಕ್ಸಿಜನ್ ತಯಾರಾಗುತ್ತದೆ. ಆದರೆ ನಾವು ಬಹಳಷ್ಟನ್ನು ಕಡ್ಡಾಯವಾಗಿ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಗಳಿಗೆ ಕಳುಹಿಸಲೇಬೇಕು. ನಮಗೆ ಕೊರತೆಯಾಗುತ್ತಿರುವ ಆಕ್ಸಿಜನನ್ನು ದೂರದ ಒರಿಸ್ಸಾದಿಂದ ತರಿಸಿಕೊಳ್ಳಬೇಕು. ಇದು ಹೇಗಿದೆಯೆಂದರೆ ನೀವು ನಿಮ್ಮ ಮನೆಯಲ್ಲಿ ಕಷ್ಟಪಟ್ಟು ಮಾಡಿದ ಅಡುಗೆಯನ್ನು ಪಕ್ಕದ ಮನೆಯವರಿಗೆ ಕೊಡಬೇಕು. ನಿಮಗೆ ಹೊಟ್ಟೆ ಹಸಿವಾದರೆ ಪಕ್ಕದ ಬಡಾವಣೆಯ ಇನ್ಯಾರದೋ ಮನೆಯಲ್ಲಿ ಬೇಡಿ ತಿನ್ನಬೇಕು! ಹೋಗಲಿ, ಆಕ್ಸಿಜನ್ ಹಂಚಿಕೆಗೊಂದು ರಾಷ್ಟ್ರೀಯ ನೀತಿಯಾದರೂ ಒಕ್ಕೂಟ ಸರ್ಕಾರದ ಬಳಿ ಇತ್ತಾ? ಅದೂ ಇಲ್ಲ. ಹೀಗಾಗಿಯೇ ಅದು ಬೇರೆ ಬೇರೆ ಹೈಕೋರ್ಟುಗಳಿಂದ ಕಟುವಾದ ಮಾತು ಕೇಳಬೇಕಾಯಿತು. ಕೊನೆಗೆ ಸುಪ್ರೀಂಕೋರ್ಟ್ ಆಕ್ಸಿಜನ್ ಹಂಚಿಕೆಯ ಅಧಿಕಾರವನ್ನು ಒಕ್ಕೂಟ ಸರ್ಕಾರದಿಂದ ಕಿತ್ತುಕೊಂಡು ತಜ್ಞರ ಕಾರ್ಯಪಡೆಗೆ ವಹಿಸಬೇಕಾಯಿತು.
ಕರೋನಾ ಹೋದರೂ ನಮ್ಮ ಪರದಾಟಗಳು ಮುಗಿಯುವುದಿಲ್ಲ. ರಾಜ್ಯ ಸರ್ಕಾರಗಳು ಕೂರಲು, ನಿಲ್ಲಲು ಒಕ್ಕೂಟ ಸರ್ಕಾರದ ಒಪ್ಪಿಗೆ ಪಡೆಯಬೇಕಾದ ದುಸ್ಥಿತಿಯನ್ನು ಈ ಮೋದಿ-ಶಾಗಳು ನಿರ್ಮಿಸಲಿದ್ದಾರೆ. ಎಲ್ಲ ರಾಜ್ಯಗಳು ಭಾರತ ಒಕ್ಕೂಟದ ಭಾಗವಾಗಿಯೇ ಸ್ವಾಯತ್ತತೆಯನ್ನು ಪಡೆದುಕೊಳ್ಳಲು ನಿರ್ಣಾಯಕ ಹೋರಾಟಕ್ಕೆ ಅಣಿಯಾಗಬೇಕು.
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.