ಶಿವಮೊಗ್ಗ: ಕೊರೊನಾದಿಂದ ಮಹಿಳೆ ಸಾವು- ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು
ಶಿವಮೊಗ್ಗ: ಕೊರೊನಾದಿಂದ ಮಹಿಳೆ ಸಾವು- ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು
Advertisement
ಸೋಮವಾರ ಬೆಳಿಗ್ಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪಾಸಿಟಿವ್ ಗೊಳಗಾಗಿದ್ದ ರುದ್ರಿಬಾಯಿ (47) ಎಂಬ ಮಹಿಳೆ ಮೃತಪಟ್ಟಿರುವ ಕುರಿತು ವರದಿಯಾಗಿದೆ ಮತ್ತು ಆ ಮಹಿಳೆಯ ಅಂತ್ಯಕ್ರಿಯೆಗೆ ಕುಟುಂಬಸ್ಥರು ಮುಂದಾಗದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಮುಸ್ಲಿಂ ಯುವಕರ ತಂಡ ಮೃತರ ಅಂತ್ಯಕ್ರಿಯೆ ನೆರವೇರಿಸಿರುವ ಘಟನೆ ಕೂಡ ನಡೆದಿರುವುದು ತಿಳಿದುಬಂದಿದೆ.
ಹಿಂದೂ ಸಂಪ್ರದಾಯದ ಪ್ರಕಾರ ಶಿಕಾರಿಪುರದಲ್ಲಿ ಅಂತ್ಯಕ್ರಿಯೆ ನಡೆದಿರುವ ಕುರಿತು ತಿಳಿದುಬಂದಿದ್ದು ಸ್ಥಳೀಯ ಯುವಕರಾದ ಮೊಹಮ್ಮದ್ ಇರ್ಫಾನ್ ಸೇರಿದಂತೆ 6 ಜನ ಸಮಾಜ ಸೇವಕರ ತಂಡದಿಂದ ಹಿಂದೂ ಪದ್ದತಿಯ ಅನುಸಾರ ಅಂತ್ಯಸಂಸ್ಕಾರ ನಡೆಸಲಾಗಿದೆ ಎನ್ನಲಾಗಿದೆ.
ದೇಶದೆಲ್ಲೆಡೆ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶವಸಂಸ್ಕಾರ ನಡೆಸಿದರೆ ತಮಗೂ ಕೊರೊನಾ ಬರಬಹುದು ಎಂಬ ಭಯದಿಂದ ಹಲವೆಡೆ ಕುಟುಂಬದವರು ಹಾಗೂ ಒಡಹುಟ್ಟಿದವರು, ಮಕ್ಕಳು ಕೂಡ ಹಿಂದೇಟು ಹಾಕುತ್ತಿರುವ ಘಟನೆಗಳು ಮರು ಕಳಿಸುತ್ತಿವೆ. ಅಲ್ಲದೇ ಕೊರೊನಾದಿಂದ ಮೃತರಾಗುತ್ತಿರುವವರ ಸಂಖ್ಯೆಯಲ್ಲಿಯೂ ವಿಪರೀತ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದು, ಆಸ್ಪತ್ರೆಯ ಖರ್ಚು ಭರಿಸಲಾಗದ ಸಂಕಟ, ಕರ್ಪ್ಯೂ ನಿಂದಾಗಿ ಆರ್ಥಿಕ ಸಂಕಟಕ್ಕೆ ಈಡಾಗಿರುವುದು ಮುಂತಾದ ಕಾರಣಗಳಿಂದ ಜನರು ಭಯಭೀತರಾಗಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಮಾನವೀಯತೆಯ ದೃಷ್ಟಿಯಿಂದ ಈ ಯುವಕರು ಮಾಡಿರುವ ಈ ಸಮಾಜಸೇವಾ ಕಾರ್ಯ ಅಪಾರ ಜನಮನ್ನಣೆ ಗಳಿಸಿದೆ. ದೇಶದ ವಿವಿಧೆಡೆ ಇಂತಹ ಮಾನವೀಯ ಕಾರ್ಯಗಳು ನಡೆದಿದ್ದು ಇದು ಹಿಂದೂ ಮುಸಲ್ಮಾನರ ಸೌಹಾರ್ಧತೆಯನ್ನು ಹೆಚ್ಚಿಸುವ ಕೆಲಸವಾಗಿದೆ ಎಂದು ಜನಾಭಿಪ್ರಾಯ ವ್ಯಕ್ತವಾಗಿದೆ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG(ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.