ಕರಂದ್ಲಾಜೆಯವರೆ, ತಾವು ಓರ್ವ ಸಂಸದೆ ಎನ್ನುವುದನ್ನು ಮರೆಯದಿರಿ, ಮರೆತು ಈ ನಾಡಿನ ಸೌಹಾರ್ಧತೆಯನ್ನು ಕೆಡಿಸದಿರಿ: ಗೀತಾ ವಾಗ್ಳೆ
ಕರಂದ್ಲಾಜೆಯವರೆ, ತಾವು ಓರ್ವ ಸಂಸದೆ ಎನ್ನುವುದನ್ನು ಮರೆಯದಿರಿ, ಮರೆತು ಈ ನಾಡಿನ ಸೌಹಾರ್ಧತೆಯನ್ನು ಕೆಡಿಸದಿರಿ: ಗೀತಾ ವಾಗ್ಳೆ
Advertisement
ಮಾನ್ಯ ಸಂಸದೆ ಶೋಬಾ ಕರಂದ್ಲಾಜೆಯವರೆ, 'ಕೊರೋನಾ ಲಸಿಕೆ ಕುರಿತು ಚರ್ಚ್ ಗಳಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ' ಎಂಬುದಾಗಿ ತಾವು ನೀಡಿರುವ ಹೇಳಿಕೆ ನಿಜಕ್ಕೂ ಖೇದಕರವಾದ ವಿಚಾರವಾಗಿದೆ. ತಾವು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು ಮರೆ ಮಾಚಲು ಬೇರಾವುದೋ ಧರ್ಮದ ಮೇಲೆ ಗೂಬೆ ಕೂರಿಸುತ್ತಿರುವುದು ಮತ್ತು ಆ ಮೂಲಕ, ಈ ನಾಡಿನ ಸೌಹಾರ್ಧತೆಯನ್ನು ಕೆಡಿಸುವ ಪ್ರಯತ್ನ ನಡೆಸುತ್ತಿರುವುದು ಇಡೀ ರಾಜ್ಯದ ಜನರಿಗೆ ತಿಳಿದಿರುವ ಸತ್ಯ ವಿಚಾರವಾಗಿದೆ. ಚರ್ಚ್‌ಗಳ ಕುರಿತಾದ ತಮ್ಮ ಊಹಾಪೋಹದ ಆರೋಪಗಳು ಒತ್ತಟ್ಟಿಗಿರಲಿ, ಅದೇಕೆ ನೀವು ಲಸಿಕಾ ಕೇಂದ್ರದ ಬಳಿ ಲಸಿಕೆಗಾಗಿ ದಿನವೂ ಸಾಲುಗಟ್ಟಿ ನಿಲ್ಲುವ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ ಜನರಿಗೆ ಲಸಿಕೆ ನೀಡದೇ ವಾಪಾಸು ಕಳಿಸುತ್ತಿದ್ದೀರಿ? ಹಾಗೆ ಲಸಿಕೆ ಹಾಕಿಸಿಕೊಳ್ಳಲು ಸ್ವಯಂಸ್ಪೂರ್ತಿಯಿಂದ ಬರುವ ಜನರಿಗೆ ಕೊಡಲು ಲಸಿಕೆ ನಿಮ್ಮ ಸರ್ಕಾರದ ಬಳಿ ಸ್ಟಾಕ್ ಇಲ್ಲ, ಆ ಕುರಿತು ನಿಮ್ಮವರು ಪೂರ್ವಸಿದ್ಧತೆ ಮಾಡಿಕೊಂಡಿರಲಿಲ್ಲ ಎಂಬುದನ್ನು ಮರೆಮಾಚಲು ದೇಶದಲ್ಲಿ ಆರೋಗ್ಯ ತುರ್ತು ಸ್ಥಿತಿ ಇರುವ ಈ ಸಂಧರ್ಭದಲ್ಲಿ ಓರ್ವ ಜನಪ್ರತಿನಿಧಿಯಾಗಿ ತಾವು ಇಂತಹ ಬಾಲಿಷ ಆರೋಪ ಮಾಡಿರುವುದು ತಮ್ಮ ನೈಜ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆಯವರು ಹೇಳಿದ್ದಾರೆ.
ತಾವು ಎರಡೆರಡು ಬಾರಿ ಈ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಆಯ್ಕೆಯಾಗಿದ್ದು ತಾವು ಕೇವಲ ಒಂದು ಧರ್ಮಕ್ಕೆ ಮಾತ್ರವೇ ಸಂಸದೆಯಾಗಿಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಡೀ ಲೋಕಸಭಾ ಕ್ಷೇತ್ರದ ಅಷ್ಟೂ ಜನರಿಗೆ ತಾವು ಸಂಸದೆ ಎನ್ನುವುದನ್ನು ಮರೆಯಬೇಡಿ. ಒಂದು ಜವಾಬ್ದಾರೀ ಹುದ್ದೆಯಲ್ಲಿದ್ದುಕೊಂಡು ಯಾವುದೇ ಆಧಾರಗಳಿಲ್ಲದೇ ಒಂದು ಸಮುದಾಯದ ಮೇಲೆ ಆರೋಪವನ್ನು ಹೊರಿಸುವುದು ಯಾರಿಗೂ ಶೋಭೆ ತರುವಂತಹುದಲ್ಲ ಎಂದವರು ಹೇಳಿದ್ದಾರೆ.
ಆರೋಗ್ಯ ತುರ್ತುಸ್ಥಿತಿಯ ಇಂತಹ ಕಠಿಣ ಸಂದರ್ಭದಲ್ಲಿ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಒಂದು ಭಾಗವಾಗಿ ತಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಲು ಪ್ರಯತ್ನಿಸುವುದರೊಂದಿಗೆ ದೇಶಕ್ಕೆದುರಾಗಿರುವ ಕೊರೊನಾ ದಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕಿತ್ತು. ಅದು ಬಿಟ್ಟು ತಮ್ಮಸರಕಾರದ ತಪ್ಪುಗಳನ್ನು ಮರೆಮಾಚುವ ನಿಟ್ಟಿನಲ್ಲಿ ಚರ್ಚ್ ಗಳತ್ತ ಬೆಟ್ಟು ಮಾಡಿರುವುದು ಹೇಸಿಗೆ ತರಿಸುತ್ತಿದೆ.
ತಾವು ಮುಸ್ಲೀಮರ ಬಗ್ಗೆ, ಕ್ರೈಸ್ತರ ಬಗ್ಗೆ ಸದಾ ಬಾಲಿಷ ಹಾಗೂ ಧ್ವೇಷ ಬಿತ್ತುವ ಹೇಳಿಕೆಯನ್ನು ನೀಡುವ ಮೂಲಕ ಜನರಲ್ಲಿ ತಮ್ಮ ಬಗ್ಗೆ ಇದ್ದ ಅಲ್ಪಸ್ವಲ್ಪ ಗೌರವವನ್ನು ಕೂಡ ಕಳೆದುಕೊಂಡಿದ್ದೀರಿ. ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಆ ನಂತರದ ದಿನಗಳಲ್ಲಿ ಈ ನಾಡಿನಲ್ಲಿ ಲೆಕ್ಕವಿಲ್ಲದಷ್ಟು ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಹಾಗೂ ದೀನದಲಿತರಿಗಾಗಿ ಆಶ್ರಯ ಧಾಮಗಳನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾತನಾಡುವುದನ್ನು ಇನ್ನಾದರೂ ನಿಲ್ಲಿಸಿ. ದರ್ಪ, ರೋಷ, ಉಡಾಪೆಗಳನ್ನು ಬಿಟ್ಟು ತಾವು ಸಂಸದೆಯಾಗಿರುವ ಕ್ಷೇತ್ರದ ಮತದಾರರೊಂದಿಗೆ ನಯವಿನಯದಿಂದ ಮಾತನಾಡುವುದನ್ನು ರೂಢಿ ಮಾಡಿಕೊಳ್ಳಿ ಎಂದವರು ಕರೆ ನೀಡಿದ್ದಾರೆ.
__________________________________
►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 -ರೋಶನ್ ಶೆಟ್ಟಿ RG (ಜಾಹೀರಾತು ವಿಭಾಗ) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ.