ಕೊರೊನಾ ಎರಡನೇ ಅಲೆಯ ಪರಿಣಾಮವನ್ನು ತಜ್ಞರು ಮೊದಲೇ ತಿಳಿಸಿದ್ದರೂ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಯಿತು. ಸೋಂಕು ಉಲ್ಬಣಕ್ಕೆ ಚುನಾವಣಾ ರ‌್ಯಾಲಿ ಹಾಗೂ ಕುಂಭ ಮೇಳವೇ ಕಾರಣ ಎಂಬುದು ಈಗಾಗಲೇ ದೃಡಪಟ್ಟಿದೆ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರವು ತನ್ನ ವೈಫಲ್ಯವನ್ನು ಮರೆಮಾಚಲು ಟೂಲ್‍ಕಿಟ್ ಹೆಸರಲ್ಲಿ ಆರೋಪ ಹೊರಿಸಿ ಕಾಂಗ್ರೆಸನ್ನು ಹಣಿಯಲು ಪ್ರಯತ್ನಪಟ್ಟು ವಿಫಲಗೊಂಡಿದೆ. ಟ್ವಿಟರ್ ಸಂಸ್ಥೆ ಈಗಾಗಲೇ ಆ ಟೂಲ್‍ಕಿಟ್ ಅಸಲಿಯಲ್ಲ, ಅದೊಂದು ತಿರುಚಲಾದ ಸುಳ್ಳು ಸುದ್ದಿ ಎಂದು ಸ್ಪಷ್ಟ ಪಡಿಸಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್ ಹೆಡ್ ಬಳಸಿ ಟೂಲ್‍ಕಿಟ್ ಒಂದನ್ನು ಸೃಷ್ಟಿಸಿದ ಆರೋಪದ ಮೇರೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇಷ್ಟಿದ್ದೂ ಬಿಜೆಪಿಯ ಉಡುಪಿ ಜಿಲ್ಲಾ ನಾಯಕರು ಟೂಲ್‍ಕಿಟ್ ಜಪ ಮಾಡುತ್ತಿರುವುದು ನಾಚಿಕೆಗೇಡು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಭಾಸ್ಕರ್ ರಾವ್ ಕಿದಿಯೂರು ಟೂಲ್‍ಕಿಟ್ ಬಗ್ಗೆ ಜಿಲ್ಲಾ ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಯು.ಪಿ.ಎ. ಸರಕಾರದ ಅವಧಿಯಲ್ಲಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತೀ ಬ್ಯಾರಲ್‍ಗೆ 140-150 ಡಾಲರ್ ಇದ್ದಾಗ ದೇಶದಲ್ಲಿ ಪೆಟ್ರೋಲ್ ಬೆಲೆ ಕೇವಲ 83 ರೂಪಾಯಿ ಇತ್ತು. ಆದರೆ ಇದೀಗ ಕಚ್ಚಾ ತೈಲ ಬೆಲೆ ಬ್ಯಾರಲ್‍ಗೆ 59.35 ಡಾಲರ್ ಗೆ ಕುಸಿದಿದ್ದು, ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿಗೆ ಜಿಗಿದಿದೆ. 2014ರ ಮುಂಚೆ ಕೇಂದ್ರ ಸರಕಾರದ ತೆರಿಗೆ ರೂ. 9.48 ಇದ್ದರೆ 2021ರಲ್ಲಿ 31.83 ರೂಪಾಯಿಗೆ ಏರಿಕೆ ಕಂಡಿದೆ. ಇದರಿಂದ ಪೆಟ್ರೋಲ್ ಬೆಲೆ ಹೆಚ್ಚಳ ಎಂಬುದು ಸರಕಾರದ ತೆರಿಗೆ ಮೂಲಕ ಹೊರತು ಪೆಟ್ರೋಲ್ ಉತ್ಪಾದನೆ ವೆಚ್ಚದ ಏರಿಕೆಯಿಂದ ಅಲ್ಲ ಎಂಬುದು ಸ್ಪಷ್ಟಗೊಂಡಿದೆ. ಯು.ಪಿ.ಎ. ಆಡಳಿತಾವಧಿಯಲ್ಲಿ ತೈಲ ಬೆಲೆ ಕೇವಲ 10 ಪೈಸೆ ಏರಿಕೆ ಕಂಡಾಗ ಬೀದಿಯಲ್ಲಿ ನಿಂತು ರಂಪ ಮಾಡಿದವರು ಇಂದು ಅದೇಕೆ ಮೌನಕ್ಕೆ ಶರಣಾಗಿದ್ದಾರೆ? ಹಾಗಾದರೆ ಬಿಜೆಪಿ ಅಧಿಕಾರ ಪಡೆದ ಕೂಡಲೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಗುಣವನ್ನೂ ಕಳೆದುಕೊಂಡಿದೆಯೇ? ಆ ಮೂಲಕ ಈ ಹಿಂದೆ ತೈಲಬೆಲೆ ಏರಿಕೆಗೆ ಬಿಜೆಪಿ ಪ್ರತಿಭಟಿಸುತ್ತಿದ್ದುದು ಕೇವಲ ಅಧಿಕಾರ ಪಡೆಯಲು ಮತ್ತು ಆಡಳಿತ ವೈಫಲ್ಯಗಳನ್ನು ಮರೆಮಾಚಲು ಇವರು ಸದಾ ಪಾಕಿಸ್ತಾನ ಜಪ ಮಾಡುತ್ತಿರುತ್ತಾರೆ ಮತ್ತು ಇದರ ಹಿಂದೆ ಜನರ ದಿಕ್ಕು ತಪ್ಪಿಸುವ ಹುನ್ನಾರ ಅಡಗಿದೆ ಎಂಬುದು ಸ್ಪಷ್ಟಗೊಂಡಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಜನರ ಸಂಕಷ್ಠಕ್ಕೆ ಸ್ಪಂದಿಸುವ ಬದಲು ನಾಯಕತ್ವ ಬದಲಾವಣೆಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ತಾರಕಕ್ಕೆ ಏರಿರುವುದು ನಾಚಿಕೆಗೇಡುˌ ಕೇವಲ ಪಕ್ಷದೊಳಗಿನ ಬಿನ್ನಮತ ಕೊನೆ ಗೊಳಿಸಲಾಗದ ಬಿಜೆಪಿ ಕೊರೊನಾ ಕೊನೆಗೊಳಿಸುವುದೇ ಎಂದವರು ಪತ್ರಿಕಾ ಪ್ರಕಟಣೆಯ ಮೂಲಕ ಪ್ರಶ್ನಿಸಿದ್ದಾರೆ.