ರಾಜ್ಯದಾದ್ಯಂತ ಇಂದಿನಿಂದ ಐದು ದಿನಗಳ ಕಾಲ ಈ ಕುರಿತು ರಾಜ್ಯ ಕಾಂಗ್ರೆಸ್ 'ಪೆಟ್ರೋಲ್ ಡೀಸೆಲ್ ಬೆಲೆಯು ಲೀಟರ್‌ಗೆ ನೂರು ರೂಪಾಯಿ' ತಲುಪಿದ್ದನ್ನು ವಿರೋಧಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು ರಾಜ್ಯದ ಸುಮಾರು ಐದು ಸಾವಿರ ಪೆಟ್ರೋಲ್ ಬಂಕ್‌ಗಳ ಎದುರು ಪ್ರತಿಭಟನೆ ನಡೆಯಲಿದೆ ಎಂದು ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಕಟಿಸಿದ್ದರು. ಆ ಕುರಿತು ಇಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕೇಂದ್ರ ಸ್ಥಳದ ಪ್ರಮುಖ ಪೆಟ್ರೋಲ್ ಬಂಕ್ ಎದುರುಗಡೆ 'ಸಾಂಕೇತಿಕ ಪ್ರತಿಭಟನೆ' ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ಶ್ರೀ ವಿನಯ್ ಕುಮಾರ್ ಸೊರಕೆ, ಇಂಧನ ಬೆಲೆಯನ್ನು ಹೆಚ್ಚಿಸುವ ಮೂಲಕ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ.ಪೆಟ್ರೋಲ್ ಮತ್ ತುಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳವನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ.ಇಂಧನವು ಜಿ.ಎಸ್.ಟಿ.ಯ ವ್ಯಾಪ್ತಿಗೆ ಬರಬೇಕು.ಬಿಜೆಪಿ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದ ಜನರು ಕಳೆದ ಒಂದೂವರೆ ವರ್ಷದಿಂದ ಕೋವಿಡ್ -19ನ ಪ್ರಭಾವದ ವಿರುದ್ಧ ಹೋರಾಡುತ್ತಿದ್ದರು. "ಒಂದುಕಡೆ, ಅವರು ಸರಿಯಾದ ಸಮಯದಲ್ಲಿ ಔಷಧಿಗಳನ್ನು ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಲಿಲ್ಲ ಮತ್ತು ಇನ್ನೊಂದೆಡೆ, ಆರ್ಥಿಕತೆಯ ವಿಫಲತೆ ಮತ್ತು ವ್ಯಾಪಕ ನಿರುದ್ಯೋಗದಿಂದಾಗಿ ಜನರು ಬಳಲುತ್ತಿದ್ದಾರೆ" ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ರವರು 'ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ದಾಖಲೆಯ ಪ್ರಮಾಣದಲ್ಲಿ ಇಳಿಕೆ ಆಗಿದ್ದರೂ ಕೂಡ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮೂಲ ಪೆಟ್ರೋಲ್ ಬೆಲೆಗಿಂತಲೂ ಜಾಸ್ತಿ ತೆರಿಗೆ ವಿಧಿಸುವ ಮೂಲಕ ದಾಖಲೆಯ ನೂರು ರೂಪಾಯಿಯ ಸಮೀಪಕ್ಕೆ ಪೆಟ್ರೋಲ್ ಬೆಲೆ ಏರಿಕೆಯಾಗಲು ಕಾರಣರಾಗಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಿಂದಾಗಿ ಆಹಾರ ಸಾಮಗ್ರಿಗಳ ಸಾಗಾಟ ವೆಚ್ಚ ಜಾಸ್ತಿಯಾಗುವ ಕಾರಣಕ್ಕಾಗಿ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಾಣುತ್ತಿದೆ. ಅವೈಜ್ಞಾನಿಕವಾದ ನೋಟು ಬ್ಯಾನ್ ಹಾಗೂ ಅನಗತ್ಯವಾದ ಲಾಕ್‌ಡೌನ್ ನಿಂದ ಜನರು ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದು ಇದೀಗ ಬೆಲೆ ಏರಿಕೆಯಿಂದಾಗಿ ಜನಜೀವನ ತೀರಾ ದುಸ್ಥರವಾಗಿದೆ. ಪೆಟ್ರೋಲ್ ಲೀಟರ್ ಒಂದರ ಮೂಲಬೆಲೆ 35ರೂ. ಆಗಿದ್ದರೆ ಕೇಂದ್ರದ ಮೋದಿ ಸರ್ಕಾರ 34ರೂ. ತೆರಿಗೆ ಹಾಕಿದರೆ ರಾಜ್ಯದ ಯಡಿಯೂರಪ್ಪ ಸರ್ಕಾರ 26ರೂ. ತೆರಿಗೆ ಹಾಕುವ ಮೂಲಕ ಕೊರೊನಾ ಸಮಯದಲ್ಲಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ' ಎಂದವರು ಆರೋಪಿಸಿದರು. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದಿನ ಕಚ್ಚಾತೈಲ ಬೆಲೆಯ ಮೂರುಪಟ್ಟು ದರ ಇದ್ದಾಗಲೂ ಕೇವಲ 3.16 ಪೈಸೆ ಮಾತ್ರವೇ ತೆರಿಗೆಯನ್ನು ಕೇಂದ್ರ ಸರ್ಕಾರ ವಿಧಿಸುವ ಮೂಲಕ ಜನರ ಮೇಲಿನ ಹೊರೆಯನ್ನು ಕಡಿಮೆಗೊಳಿಸಿತ್ತು. ಬಹುಶಃ ನರೇಂದ್ರ ಮೋದಿಯವರಂತಹ ಜನ ವಿರೋಧಿ ಸರ್ಕಾರ ಸ್ವಾತಂತ್ರ್ಯಾ ನಂತರ ಬಂದಿರಲಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿಯ ಶ್ರೀ ರಾಜು, ಜಿಲ್ಲಾ ಮುಖಂಡರಾದ ಎಂ.ಎ.ಗಫೂರ್, ವೆರೋನಿಕಾ ಕರ್ನೆಲಿಯೊ, ಮುರಳಿ ಶೆಟ್ಟಿ, ನವೀನ್‍ಚಂದ್ರ ಜೆ. ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಅಣ್ಣಯ್ಯ ಶೇರಿಗಾರ್, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಶಲ್ ಶೆಟ್ಟಿ, ಬಿಪಿನ್ ಚಂದ್ರ ಪಾಲ್ ನಕ್ರೆ, ದೀಪಕ್ ಕೋಟ್ಯಾನ್, ಕೀರ್ತಿ ಶೆಟ್ಟಿ, ಪ್ರಶಾಂತ್ ಜತ್ತನ್ನ, ನವೀನ್‍ಚಂದ್ರ ಸುವರ್ಣ, ಸದಾಶಿವ ದೇವಾಡಿಗ, ಹರಿಪ್ರಸಾದ್ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ, ದಿನಕರ್ ಹೇರೂರು, ಶಂಕರ್‍ಕುಂದರ್, ಇಸ್ಮಾಯಿಲ್ ಆತ್ರಾಡಿ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಶಶಿಧರ ಶೆಟ್ಟಿ ಎಲ್ಲೂರು, ಹರೀಶ್ ಶೆಟ್ಟಿ ಪಾಂಗಾಳ, ಸಂಕಪ್ಪ ಎ., ವಿಶ್ವಾಸ್ ಅಮೀನ್, ಸೌರಭ್ ಬಲ್ಲಾಳ್, ರಮೇಶ್ ಕಾಂಚನ್, ಯತೀಶ್ ಕರ್ಕೆರಾ, ಜನಾರ್ಧನ್ ಭಂಡಾರ್ಕರ್, ಜ್ಯೋತಿ ಹೆಬ್ಬಾರ್, ರೋಶನಿ ಒಲಿವೆರಾ, ಗೀತಾ ವಾಗ್ಲೆ, ಡಾ. ಸುನೀತಾ ಶೆಟ್ಟಿ, ಶೇಖರ್ ಕೆ.ಕೋಟ್ಯಾನ್ ಉಪಸ್ಥಿತರಿದ್ದರು.