Advertisement

ಕೊರೊನಾ ಮೂರನೇ ಅಲೆ ಹಿನ್ನಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕ ಮುಂದೂಡಿಕೆ ಘೋಷಿಸಿದ ರಾಜ್ಯ ಕಾಂಗ್ರೆಸ್!

Advertisement

ರಾಜ್ಯದ ಕಾಂಗ್ರೇಸ್ ಪಕ್ಷದ ವತಿಯಿಂದ 'ನಮ್ಮ ನೀರು ನಮ್ಮ ಹಕ್ಕು' ಘೋಷವಾಕ್ಯದಡಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ಇದೀಗ ಕೊರೊನಾ ಮೂರನೆಯ ಅಲೆಯ ಹಿನ್ನಲೆಯಲ್ಲಿ, ನ್ಯಾಯಾಲಯದ ಸೂಚನೆ ಹಾಗೂ ಮುಖ್ಯಮಂತ್ರಿಗಳ ಮನವಿಯ ಮೇರೆಗೆ ತಾತ್ಕಾಲಿಕವಾಗಿ ಮುಂದೂಡಿರುವ ಕುರಿತು ವರದಿಯಾಗಿದೆ. 'ನಾಲ್ಕು ಅಮೂಲ್ಯ ದಿನಗಳ ಮೇಕೆದಾಟು ಪಾದಯಾತ್ರೆಯು ಕನ್ನಡಿಗರ ಬದ್ಧತೆಗೆ ಸಾಕ್ಷಿಯಾಗಿವೆ. ಪಾದಯಾತ್ರೆ ಆರಂಭಿಸುವ ಮುನ್ನ ರಾಜ್ಯದ ಆಸ್ಪತ್ರೆಗಳಲ್ಲಿ ಕೋರೊನಾ ಕುರಿತಾದ ನೈಜ ಸ್ಥಿತಿಯನ್ನು ಪಕ್ಷದ ವತಿಯಿಂದ ನಾವು ಅವಲೋಕಿಸಿದ್ದೆವು. ಆದರೆ, ಇದೀಗ ಅನಿವಾರ್ಯ ಕಾರಣಗಳಿಂದ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲು ನಾವು ನಿರ್ಧರಿಸಿದ್ದೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 'ಕೊರೊನಾ ಪರಿಸ್ಥಿತಿ ತಹಬದಿಗೆ ಬಂದ ನಂತರ ರಾಮನಗರದಿಂದಲೇ ನಮ್ಮ ಈ ಪಾದಯಾತ್ರೆಯನ್ನು ಮುಂದುವರಿಸಲು ತೀರ್ಮಾನಿಸಿದ್ದೇವೆ. ಯಾವ ಪೋಲಿಸ್ ಕೇಸ್‌ ಅಥವಾ ನೋಟಿಸ್‌ಗಳಿಗೆ ಹೆದರಿ ನಾವು ಈ ನಿರ್ಧಾರ ತೆಗೆದುಕೊಂಡಿಲ್ಲ. ಬದಲಾಗಿ ನ್ಯಾಯಾಲಯದ ಘನತೆಗೆ ಗೌರವ ಕೊಡುತ್ತಿದ್ದೇವೆ ಅಷ್ಟೇ. ನಾವು ಈ ಹೋರಾಟ ಆರಂಭಿಸಿದ್ದು ಕನ್ನಡಿಗರಿಗಾಗಿಯೇ ಹೊರತು ಸರ್ಕಾರದ ವಿರುದ್ಧ ಅಲ್ಲ. ಕೊನೆಯ ಘಳಿಗೆಯಲ್ಲಿ ನಾನು ಹಾಗೂ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಇಬ್ಬರೇ ಪಾದಯಾತ್ರೆ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದೆವು. ಆದರೆ, ನಾಡು-ನುಡಿಯ ಹೋರಾಟಕ್ಕೆ ಧ್ವನಿಗೂಡಿಸಲೇಬೇಕೆನ್ನುವ ಕನ್ನಡಿಗರು ನಮ್ಮೊಂದಿಗೆ ಬರಲೇಬೇಕೆಂದು ಹಂಬಲಿಸಿದರು' ಎಂದವರು ಹೇಳಿದ್ದಾರೆ. 'ಪಾದಯಾತ್ರೆಯ ಈ ನಾಲ್ಕು ದಿನಗಳು ಆಡಳಿತ ಸರ್ಕಾರಕ್ಕೆ ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ತಿಳುವಳಿಕೆಗಿಂತ ನಡವಳಿಕೆ ಶ್ರೇಷ್ಠ. ತಿಳುವಳಿಕೆ ಸೋತರೂ, ಉತ್ತಮ ನಡವಳಿಕೆ ಎಂದಿಗೂ ಗೆಲ್ಲುತ್ತದೆ. ರಾಜ್ಯದ ಜನರ ಹಿತದೃಷ್ಟಿಯಿಂದ ನಾವು ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ಹೋರಾಟಕ್ಕೆ ಕೈ ಜೋಡಿಸಿದವರಿಗೆ ಹೃದಯಪೂರ್ವಕ ನಮನಗಳು' ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರೊನಾ ಮೂರನೆಯ ಅಲೆಯ ಹಿನ್ನಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸುವಂತೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಾಂಗ್ರೆಸ್ ನಾಯಕರಿಗೆ ಮಾಡಿರುವ ಮನವಿ. ನ್ಯಾಯಾಲಯದ ಸೂಚನೆ ಹಾಗೂ ಮುಖ್ಯಮಂತ್ರಿಗಳ ಮನವಿಯನ್ನಾಧರಿಸಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಕುರಿತು ಡಿ.ಕೆ ಶಿವಕುಮಾರ್ ಮಾಡಿರುವ ಸರಣಿ ಟ್ವೀಟ್. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement