ಬರಹ- ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು)
ಸಂಸದ ತೇಜಸ್ವೀ ಸೂರ್ಯ ಅವರೇ,
ಕಾರ್ಪೊರೇಟ್ ಮಾಧ್ಯಮಗಳು ಹಾಗೂ ಆರೆಸ್ಸೆಸ್ ಗಳ ಸಹಕಾರದೊಂದಿಗೆ ಮೋದಿ ಸರ್ಕಾರ ಸೃಷ್ಟಿಸಿದ ಹಿಂದೂ ಹಾಗೂ ದೇಶ ಆತಂಕದಲ್ಲಿವೆ ಎಂಬ ಸುಳ್ಳುಗಳ ಅಲೆಯಲ್ಲಿ ತಾವೂ ಬೆಂಗಳೂರು ದಕ್ಷಿಣ ಕ್ಶೇತ್ರದಿಂದ ಸಂಸದರಾದಿರಿ.
ಅದೇ ಹಾವಿನಪುರದವರಾದರೂ ಯುವ ಸಂಸದರಾದ ನೀವು ಇನ್ನೂ ಬೆಳೆಯುತ್ತಿರುವುದರಿಂದ ಸ್ವಲ್ಪ ಮಟ್ಟಿನ ನಾಡಸೇವೆ ಮಾಡಬಹುದೆಂದು ಕೆಲವರು ಹುಸಿ ಅಶಾವಾದವನ್ನು ಇಟ್ಟುಕೊಂಡಿದ್ದರು. ಆದರೆ ತಾವು ಇತರ ೨೫ ಬಿಜೆಪಿ ಎಂಪಿಗಳಂತೆ ಕರ್ನಾಟಕದ ಹಿತಾಸಕ್ತಿಗಳ ಪ್ರಶ್ನೆ ಬಂದಾಗ ಅಪಾರ ಮೌನವನ್ನೂ ಆರೆಸ್ಸೆಸ್-ಮೋದಿ-ಅಂಬಾನಿ ಆಸಕ್ತಿಗಳ ವಿಷಯ ಬಂದಾಗ ತಮ್ಮೆಲ್ಲಾ ಮಾತಿನ ಜಾಣ್ಮೆಯನ್ನು ಬಳಸುತ್ತಾ ಮೋದಿ ಸರ್ಕಾರದ ಸುಳ್ಳಿನ ಮನೆಗೆ ಇಟ್ಟಿಗೆ ಜೋಡಿಸುತ್ತಾ ಬಂದಿರಿ.
ವಿಷಾದವೆಂದರೆ ಮೋದಿ ಭಜನೆ ಮಾಡುವಲ್ಲಿ ಇತರ ರಾಜ್ಯದ ಎಂಪಿಗಳಿಗಿಂತ ಕರ್ನಾಟಕದ ಯುವಂಸದರ ನಡುವೆ ಪೈಪೋಟಿಯೇ ಏರ್ಪಟ್ಟಂತೆ ಕಾಣುತ್ತದೆ. ಆದರೆ ಆ ಸ್ಪರ್ಧೆಯಲ್ಲಿ ನೀವು ಮೊನ್ನೆ ಇತರರನ್ನೂ ಮೀರಿಸಿಬಿಟ್ಟಿರಿ. ಸಂಸತ್ತಿನಲ್ಲಿ ನೀವು ಮೋದಿ ಸರ್ಕಾರದ ಕಳೆದ ಎರಡು ವರ್ಷಗಳ ದುರಾಡಳಿತವನ್ನು, ಹೆಚ್ಚುತ್ತಿರುವ ಆರ್ಥಿಕ ದುಸ್ಥಿತಿಯನ್ನು ಸಮರ್ಥಿಸಿಕೊಳ್ಳುತ್ತಾ ಸತ್ಯದ ತಲೆಯ ಮೇಲೆ ಹೊಡೆಯುವಂತೆ ಆಡಿದ ಸುಳ್ಳುಗಳು ನಿಮ್ಮನ್ನು ಮೋದಿ ಭಜನೆಯ ಪೈಪೋಟಿಯಲ್ಲಿ ಅಗ್ರಸ್ಥಾನಕ್ಕೆ ಏರಿಸಿವೆ.
ಸಂಸತ್ತಿನಲ್ಲಿ ನೀವು ಆಡಿದ ಆ ಮಹಾಸುಳ್ಳುಗಳು ತಮ್ಮ ಭಟ್ಟಂಗಿತನಕ್ಕೆ ಸ್ವಾರ್ಥಕ್ಕೆ ಮಾತ್ರವಲ್ಲ ಈ ದೇಶದ ಜನರ ಬಗ್ಗೆ ತಮಗೆ ಮತ್ತು ತಮ್ಮ ಪಕ್ಷಕ್ಕೆ ಇರುವ ಮಹಾ ತಿರಸ್ಕಾರಕ್ಕೂ ಹಾಗೂ ಜನರನ್ನು ಮುಠಾಳರೆಂದು ಭಾವಿಸುವ ದುಷ್ಟ ತನಕ್ಕೂ ಉದಾಹರಣೆಯಾಗಿದೆ.
ಕುಟುಂಬ ರಾಜಕಾರಣ- ಕಾಂಗ್ರೆಸ್ಸಿನಲ್ಲಿದೆ-ಆದರೆ ಬಿಜೆಪಿ ಎಲ್ಲಾ ಪಕ್ಷಗಳನ್ನೂ ಮೀರಿಸಿದೆ!
ಬಸವನಗುಡಿಯ ಬಿಜೆಪಿ ಶಾಸಕರಾದ ರವಿಸುಬ್ರಹ್ಮಣ್ಯರ ಸೋದರ ಸಂಬಂಧಿಯಾದ ತಾವು ಕಾಂಗ್ರೆಸ್ ಪಕ್ಷವು ಹೇಗೆ ಕುಟುಂಬ ರಾಜಕಾರಣದ ಪಕ್ಷವೆಂದು ಹಂಗಿಸಿದಿರಿ. ಅದು ನಿಜವೇ. ಆದರೆ ಅದು ಕಾಲು ಭಾಗದ ಸತ್ಯ. ಇನ್ನು ಮುಕ್ಕಾಲು ಭಾಗ ಸತ್ಯವೇನೆಂದರೆ ಇಂದು ಮುಕ್ಕಾಲು ಭಾಗ ಡೈನಾಸ್ಟ್ಗಳು ಬಿಜೆಪಿ ಪಕ್ಷದವರೇ ಆಗಿರುವುದು.
ವಾಸ್ತವವೇನೆಂದರೆ, ೨೦೧೯ರ ಲೋಕಸಭಾ ಚುನಾವಣೆಯಲ್ಲಂತೂ ಆಯ್ಕೆಯಾದ ಸಂಸದರಲ್ಲಿ ಶೇ. ೩೦ರಷ್ಟು (೫೪೨ ಸಂಸದರಲ್ಲಿ ೧೬೨ ಸಂಸದರು) ಸಂಸದರು ವಂಶಡಳಿತ ರಾಜಕರಣದವರೇ. ಅದರಲ್ಲಿ ತಮ್ಮ ಬಿಜೆಪಿ ಪಕ್ಷವೇ ಅಗ್ರಸ್ಥಾನದಲ್ಲಿದೆಯಲ್ಲವೇ?
ಲೋಕಸಭೆ ಮತ್ತು ರಾಜ್ಯಸಭೆಗಳೆರಡನ್ನೂ ಸೇರಿಸಿ ಒಟ್ಟಾರೆ ಸಂಸತ್ತಿನಲ್ಲಿ ಬಿಜೆಪಿ ಪಕ್ಷದ ೩೮೮ ಸಂಸದರಿದ್ದಾರೆ. ಅದರಲ್ಲಿ ೪೫ ಜನ, ಅಂದರೆ ಶೇ.೧೧ರಷ್ಟು ಸಂಸದರು ಕುಟುಂಬ ರಾಜಕಾರಣಿಗಳೇ..ವಂಶಾಡಳಿತವನ್ನು ಮುಂದುವರೆಸುತ್ತಿರುವವರೇ..ಸಂಸತ್ತಿನಲಿರುವ ಯಾವ ಪಕ್ಷಕ್ಕೂ ಸದ್ಯಕ್ಕೆ ತಮ್ಮ ಸನಿಹ ಬರಲೂ ಸಾಧ್ಯವಿಲ್ಲ. ತಮಗೆ ಗೊತ್ತಿಲ್ಲದಿದ್ದರೆ ಈ ವರದಿಯನ್ನು ಒಮ್ಮೆ ಒದಿಬಿಡಿ
ಅಂಕಿಅಂಶಗಳ ಹೇರಾಫ಼ೇರಿ ಮಾಡಿದರೆ ಜಿಡಿಪಿ ಏರುವುದೇ?
ಅದಲ್ಲೆಕ್ಕಿಂತ ಮುಖ್ಯವಾಗಿ ತಮ್ಮ ಎಲುಬಿಲ್ಲದ ನಾಲಗೆಯು ಮೋದಿ ಅಧಿಕಾರಕ್ಕೆ ಬರುವ ಮುಂಚೆ ಭಾರತದ ಜಿಡಿಪಿ ೧೧೦ ಲಕ್ಷ ಕೋಟಿಯಿತ್ತೆಂದೂ ಅದೀಗ ಮೋದಿಯವರು ಮಾಡಿದ ಆರ್ಥಿಕ ಪವಾಡದಿಂದಾಗಿ ೨೩೦ ಲಕ್ಷ ಕೋಟಿಗೇರಿದೆಯೆಂದು ಹೇಳಿತು..
ಮಾನ್ಯರೇ ಸ್ವಲ್ಪ ನಿಮ್ಮದೇ ಸರ್ಕಾರದ ಅಂಕಿಅಂಶಗಳನ್ನು ಗಮನಿಸಿ.
೨೦೧೪-೨೦೨೧ರ ನಡುವಿನ ಏಳು ವರ್ಷಗಳಲ್ಲಿ ಭಾರತದ ಜಿಡಿಪಿ ೧೧೦ ಲಕ್ಷ ದಿಂದ ೨೩೦ ಲಕ್ಷ ಕೋಟಿಗೇರಬೇಕೆಂದರೆ ಈ ಅವಧಿಯಲ್ಲಿ ನಮ್ಮ ಜಿಡಿಪಿ ಅಭಿವೃದ್ಧಿ ದರ ಏನಿಲ್ಲವೆಂದರೂ ವರ್ಷಾನುವರ್ಶ ಶೇ. ೧೫-೨೦ ರ ಗತಿಯಲ್ಲಿ ಅಭಿವೃದ್ಧಿಯಾಗಿರಬೇಕಿತ್ತು.
ಅಲ್ಲವೇ?
ಆದರೆ ಮೋದಿ ಸರ್ಕಾರದ ಅಂಕಿಅಂಶದ ಪ್ರಕಾರವೇ ೨೦೧೪-೨೦೨೧ರ ನಡುವಿನ ಅವಧಿಯ ಏಳು ವರ್ಷಗಳಲ್ಲಿ ೨೦೧೬ರಲ್ಲಿ ಮಾತ್ರ ಜಿಡಿಪಿ ಅಭಿವೃದ್ಧಿ ದರ ಶೇ. ೮ ರಷ್ಟಾಗಿತ್ತು. ಅದನ್ನು ಬಿಟ್ಟರೆ ೨೦೧೬ ರಿಂದ ೨೦೨೦ರ ವರೆಗೆ ಪ್ರತಿವರ್ಷ ಕುಸಿಯುತಾ ಬಂದು ಜಿಡಿಪಿ ದರ ಕೋವಿಡ್ ಗೆ ಮುಂಚೆ ಅತ್ಯಂತ ಕಡಿಮೆ ಶೇ.೪ಕ್ಕೆ ಕುಸಿದಿತ್ತು.
ಕೋವಿಡ್ ಅವಧಿಯಲ್ಲಿ ಅದು ಹೆಚ್ಚಾಗುವುದಿರಲಿ, ಮೊದಲಿಗಿಂತ ಶೇ. ೨೭ ರಷ್ಟು ಕಡಿಮೆಯಾಗಿತ್ತು. ಈಗಲೂ ನಮ್ಮ ಜಿಡಿಪಿಯಾಗಲೀ ಅಥವಾ ಅಭಿವೃದ್ಧಿ ದರವಾಗಲೇ ಕೋವಿಡ್ ಪೂರ್ವ ಹಂತವನ್ನು ಮುಟ್ಟಿಲ್ಲ.
ಹೀಗಿರುವಾಗ ಸಂಸದರೇ ನೀವು ಯಾವ ಭಾರತದ ಜಿಡಿಪಿಯ ಬಗ್ಗೆ ಮಾತನಾಡುತ್ತಿದೀರಿ?
ಭಾರತದಲ್ಲಿ ಆಯಾ ಸಾಲಿನ ಜಿಡಿಪಿಯ ಮೌಲ್ಯವನ್ನು ಲೆಕ್ಕಾಚಾರ ಮಾಡುವಾಗ ೨೦೧೧-೧೨ರ ಸಾಲಿನ ದರವನ್ನು ಸ್ಥಾಯೀ ದರದವನ್ನಾಗಿ ಪರಿಗಣಿಸುತ್ತಾರೆ. ಹಾಗೂ ಅದರ ಜೊತೆಗೆ ಅದೇ ಜಿಡಿಪಿಯ ಅಂಕಿಅಂಶವನ್ನು ಹಾಲೀ ದರದಲ್ಲಿ ಲೆಕ್ಕ ಮಾಡಿ ಮತ್ತೊಂದು ಅಂಕಿಅಂಶವನ್ನು ಕೊಡುತ್ತಾರೆ. ಹೀಗಾಗಿ ಪ್ರತಿವರ್ಷದ ಜಿಡಿಪಿಯನ್ನು ಎರಡು ರೀತಿಯಲ್ಲಿ ಒದಗಿಸಲಾಗುತ್ತೆ.
ಮೊದಲನೆಯದು ೨೦೧೧ರ ಸ್ಥಾಯೀ ದರದ ಮೊತ್ತ. ಎರಡನೆಯದು ಹಾಲಿ ದರದ ಲೆಕ್ಕಾಚಾರದಲ್ಲಿ ಮತ್ತೊಂದು ಮೊತ್ತ. ಹೀಗಾಗಿ ಜಿಡಿಪಿ ಬೆಳವಣಿಗೆಯನ್ನು ಹೋಲಿಸಿ ನೋಡಬೇಕಾದರೆ ಆಯಾ ವರ್ಷದ ಜಿಡಿಪಿಯ ೨೦೧೧ರ ಸ್ಥಾಯೀ ದರದ ಲೆಕ್ಕಾಚಾರವನ್ನು ಹಿಂದಿನ ವರ್ಷದ ಸ್ಥಾಯೀ ದರಗಳ ಮೊತ್ತಕ್ಕೂ, ಜಿಡಿಪಿಯ ಹಾಲೀ ದರದಲ್ಲಿನ ಲೆಕ್ಕಾಚಾರವನ್ನು, ಹಿಂದಿನ ವರ್ಷದ ಹಾಲೀ ದರದ ಲೆಕ್ಕಾಚಾರಗಳಿಗೂ ಹೋಲಿಸಬೇಕು. ಸ್ಥಾಯೀ ದರದ ಲೆಕ್ಕಾಚಾರಗಳನ್ನು ಹಾಲೀ ದರದೊಂದಿಗೆ ಹೋಲಿಸಬಾರದು.
ಆದರೆ ತಾವೂ ಮೋದಿ ಶಿಷ್ಯರಲ್ಲವೇ.. ಇದರಲ್ಲಿ ಒಂದು ಸಣ್ಣ ಮೋದಿ ಮ್ಯಾಜಿಕ್ ಮಾಡಿಬಿಟ್ಟಿರಿ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ೨೦೧೪ರಲ್ಲಿ ಭಾರತದ ಜಿಡಿಪಿಯು ೨೦೧೧-೧೨ರ ದರದಲ್ಲಿ ೧೦೫ ಲಕ್ಷ ಕೋಟಿಗಳು ಹಾಗೂ ಹಾಲೀ ದರದಲ್ಲಿ ೧೨೪ ಲಕ್ಷ ಕೋಟಿ ರೂ.ಗಳೂ ಆಗಿದ್ದವು.
ಕೋವಿಡ್ ಗೆ ಮುನ್ನ ೨೦೧೯-೨೦ರಲ್ಲಿ ಭಾರತದ ಜಿಡಿಪಿಯು ೨೦೧೧ರ ಸ್ಥಾಯೀ ದರದಲ್ಲಿ ೧೪೫ ಲಕ್ಷ ಕೋಟಿಗಳಿಗೆ ಏರಿತು. ಹಾಗೂ ಹಾಲಿ ದರದಲ್ಲಿ ೨೦೩ ಲಕ್ಷ ಕೋಟಿಗಳಿಗೇರಿತ್ತು.
ಇದು ಕೋವಿಡ್ ವರ್ಷವಾದ ೨೦೨೦-೨೧ ರಲ್ಲಿ ಕುಸಿದು ೨೦೧೧ರ ಸ್ಥಾಯೀ ದರದಲ್ಲಿ ೧೩೫ ಲಕ್ಷ ಕೋಟಿಗಳಿಗೆ ಹಾಗೂ ಹಾಲೀ ದರದಲ್ಲಿ ೧೯೭ ಲಕ್ಷ ಕೋಟಿ ರೂ. ಗಳಿಗೆ ಕುಸಿಯಿತು.
೨೦೨೧-೨೨ ಸಾಲಿನಲ್ಲಿ ಹಾಲೀ ದರದಲ್ಲಿ ಭಾರತದ ಜಿಡಿಪಿಯು ೨೩೨ ಲಕ್ಷ ಕೋಟಿಗೆ ಏರಿಕೆಯಾಗಲಿದೆಯೆಂದು ಊಹಿಸಲಾಗಿದೆ. ಆದರೆ ೨೦೧೧ರ ಸ್ಥಾಯೀ ದರದಲ್ಲಿ ಇದು ೧೪೮ ಲಕ್ಷ ಕೋಟಿಗಳಷ್ಟೆ.
ಹಾಲೀ ದರದ ಲೆಕ್ಕಚಾರವು ಹಣದುಬ್ಬರವನ್ನು ಸೇರಿಸಿ ಮಾಡುವ ಲೆಕ್ಕಾಚಾರವಾದ್ದರಿಂದ ಅದು ಆರ್ಥಿಕತೆಯಲ್ಲಿನ ಆ ಸಾಲಿನ ಅಸಲೀ ಏರಿಕೆಯನ್ನು ತೋರುವುದಿಲ್ಲ.
ಅದರೆ ತಾವು ಅತ್ಯಂತ ಚಾಣಾಕ್ಷತನದಿಂದ (ಅಥವಾ ಕುತಂತ್ರದಿಂದ) ಜನರಿಗೆ ಮೋಸ ಮಾಡಿರುವುದು ಹೀಗೆ:
ಮೋದಿ ಪೂರ್ವದಲ್ಲಿ ಅಂದರೆ ೨೦೧೪ರಲ್ಲಿ ಭಾರತದ ಜಿಡಿಪಿಯು ೨೦೧೧-೧೨ರ ಸ್ಥಾಯಿ ದರದಲ್ಲಿ ೧೦೫ ಲಕ್ಷ ಕೋಟಿ. ಆದರೆ ಹಾಲೀ ದರದಲ್ಲಿ ೧೨೪ ಲಕ್ಷ ಕೋಟಿ. ನೀವು ಸಂಸತ್ತಿನಲ್ಲಿ ಮಾತನಾಡುವಾಗ ಆಯ್ಕೆ ಮಾಡಿಕೊಂಡಿದ್ದು ೨೦೧೧ರ ಸ್ಥಾಯೀ ದರದ ಲೆಕ್ಕಾಚಾರವನ್ನು-೧೦೫ ಲಕ್ಷ ಕೋಟಿ.
ಆದರೆ ೨೦೨೧-೨೨ರ ಸಾಲಿನ ಭಾರತದ ಜಿಡಿಪಿಯು ೨೦೧೧ರ ಸ್ಥಾಯೀ ದರದಲ್ಲಿ ೧೪೮ ಲಕ್ಷ ಕೋಟಿಗಳು ಮಾತ್ರ. ಆದರೆ ಹಾಲೀ ದರದಲ್ಲಿ ೨೩೨ ಲಕ್ಷ ಕೋಟಿ ಎಂಬ ಅಂದಾಜು ಮಾಡಲಾಗಿದೆ. ಮೋದಿ ಭಜನೆಗಾಗಿ ಇವೆರಡರಲ್ಲಿ ನೀವು ಆಯ್ಕೆ ಮಾಡಿಕೊಂಡಿದ್ದು ೨೦೧೧ರ ಸ್ಥಾಯೀ ದರವಲ್ಲ. ಬದಲಿಗೆ ಹಾಲೀ ದರದಲ್ಲಿ ಅರ್ಥಾತ್ ಇಂದಿನ ಹಣದುಬ್ಬರ ಮತ್ತು ವಿನಿಮಯ ದರದಲ್ಲಿ ಕೂಡಿಸಿ ಲೆಕ್ಕಹಾಕಿರುವ ೨೩೨ ಲಕ್ಷ ಕೋಟಿಗಳನ್ನು.
ಅಂದರೆ ಮೋದಿ ಪೂರ್ವದ ಜಿಡಿಪಿ ಮೊತ್ತವನ್ನು ಹೇಳುವಾಗ ಸ್ಥಾಯೀ ದರದ ಲೆಕ್ಕಾಚಾರ ಬಳಸಿದ್ದೀರಿ. ಮೋದಿ ಕಾಲದ ಜಿಡಿಪಿ ದರವನ್ನು ಹೇಳುವಾಗ ಹಾಲೀ ದರದ ಲೆಕ್ಕಾಚಾರ ಬಳಸಿದ್ದೀರಿ.
ಇದು ಕೇವಲ ಗಣಿತ ದೋಷವಲ್ಲ. ರಾಜಕೀಯ ದೋಷ. ಮತ್ತು ಬಡಜನ ಬಗೆಗೆ ನಿಮಗಿರುವ ದ್ವೇಷ.
ಮೋದಿ ಪೂರ್ವದ ಸರ್ಕಾರಗಳು ದೇಶವನ್ನು ಅರೆಬೆತ್ತಲಾಗೇ ಇಟ್ಟಿದ್ದವು. ನಿಜ..
ಆದರೆ ಆ ಕಾಲದಲ್ಲಿ ಸೊಂಟದ ಕೆಳಗೆ ತುಂಡುಬಟ್ಟೆ ಇದ್ದರೂ, ಬೆತ್ತಲಾಗಿದ್ದ ಮೇಲ್ಭಾಗವನ್ನು ಮಾತ್ರ ಆಯ್ಕೆ ಮಾಡಿ ದೇಶ ಪೂರ್ತಿ ಬೆತ್ತಾಲಾಗಿತ್ತೆಂದೂ ಹೇಳಿದಿರಿ.
ಮೋದಿ ಕಾಲದಲ್ಲಿ ದೇಶವು ಸೊಂಟದ ಕೆಳಗೆ ಬೆತ್ತಲಾಗಿಬಿಟ್ಟಿದೆ. ಆದರೂ ಮೇಲ್ಭಾಗಕ್ಕೆ ಹಿಂದಿನ ಹರಕು ಹಳೆಯ ಬಟ್ಟೆ ಹೊದಿಸಿ ತೋರಿಸಿ ದೇಶಕ್ಕೆ ಬಟ್ಟೆ ತೊಡಿಸಿದವರೇ ನಾವೆಂದೂ ಕೊಚ್ಚಿಕೊಂಡಿದ್ದೀರಿ.
ಇದು ಯಥಾವತ್ ನಿಮ್ಮ ಮೋದಿ ಸರ್ಕಾರ ಎಕಾನಾಮಿಕ್ ಮಿರಾಕಲ್ ರೀತಿಯೆ.
ಜನರನ್ನು ಸುಲಿಗೆ ಮಾಡಿ, ಜೀವನ ಜೀವನೋಪಾಯಗಳನ್ನು ಕಸಿದು ಅಂಬಾನಿ-ಆದಾನಿಗಳ ಖಜಾನೆ ತುಂಬಿಸಿದಿರಿ.
ಈಗ ಕೋಟ್ಯಾಧಿಪತಿಗಳು ಹೆಚ್ಚಾದ ದೇಶದಲ್ಲಿ ಬಡತನ-ನಿರುದ್ಯೋಗ ಇರಲು ಸಾಧ್ಯವೇ ಎಂದು ಕೇಳುತ್ತಿದ್ದೀರಿ..
ಅಥವಾ ನಿಮ್ಮದೇ ಸರ್ಕಾರದ ವರದಿಯೊಂದು ಮೋದಿ ಅವಧಿಯಲ್ಲಿ ೨೫,೦೦೦ ನಿರುದ್ಯೋಗಿಗಳೂ ಮತ್ತು ಸಣ್ಣಪುಟ್ಟ ಉದ್ಯಮಿಗಳು ದಿವಾಳೆಯೆದ್ದು ಆತ್ಮಹತ್ಯೆ ಮಾಡಿಕೊಂಡರೂ ಎಂದು ವರದಿ ನೀಡಿದ್ದರೂ ದೇಶ ಸುಭಿಕ್ಷವಾಗಿದೆ ಎಂದು ವಾದಿಸಿದಿರಿ..
ಯೆಹೂದಿಗಳಿಗೆ ಕಷ್ಟದ ಸುಖ ಕಲಿಸಲು ಕಾನ್ಸನ್ಟ್ರೆಷನ್ ಕ್ಯಾಂಪ್ ಗಟ್ಟಿದ ಹಿಟ್ಲರನ ನಾಜಿಗಳಷ್ಟೆ ನಿಮ್ಮದೂ ಉದಾತ್ತ ಉಪ್ಪರಿಗೆ ಚಿಂತನೆ..
ಪ್ರತಿನಿತ್ಯ ನಡೆಯುತ್ತಿರುವ ಅಲ್ಪಸಂಖ್ಯಾತರ ಹಾಗೂ ದಲಿತರ ನರಮೇಧದ ಹಿಂದೆ ನಿಮ್ಮ ಸರ್ಕಾರ ಹಾಗೂ ನಿಮ್ಮ ಪೊಲೀಸ್-ಸೇನೆಗಳ ಕೃಪಾಪೋಷಿತ ಹಂತಕ ಪಡೆಗಳಿರುವುದು ಸೂರ್ಯನಷ್ಟೆ ಸತ್ಯವಾಗಿದ್ದರೂ, ಹಿಜಾಬಿನ ಹಿಂದೆ ಅಂತರರಾಷ್ಟ್ರೀಯ ಶಡ್ಯಂತ್ರವಿದೆಯೆಂದು ಹುಯಿಲೆಬ್ಬಿಸುತ್ತೀರಲ್ಲ ..ಹಾಗೆ..
ಎಲ್ಲವೂ ಅದೇ ವಿಷವೃಕ್ಷದ ಮುಳ್ಳುಗಳು..
ಆದರೆ ಹೆಸರಿಟ್ಟುಕೊಂಡ ಮಾತ್ರಕ್ಕೆ ಹೇಗೆ ವ್ಯಕ್ತಿತ್ವದ ಅಂಧತ್ವ ಕಳೆದು ತೇಜಸ್ಸು ಬರುವುದಿಲ್ಲವೋ, ಹಾಗೆಯೇ ಭಾಷೆಯನ್ನು ಸರಾಗವಾಗಿ ಬಳಸಿದ ಮಾತ್ರಕ್ಕೆ ಸುಳ್ಳುಗಳಿಗೆ ಸತ್ಯದ ಸತ್ವ ಬರುವುದಿಲ್ಲ ಸಂಸದರೇ ..
ಸುಳ್ಳಿನ ಅರಗಿನ ಅರಮನೆಯಲ್ಲಿ ಸುಖಿಸುವರು ಸತ್ಯದ ಬೆಂಕಿ ತಾಗಿದಾಗ ಅದರೊಂದಿಗೆ ಭಸ್ಮವಾಗಿರುವುದು ಕಲ್ಪಿತ ಪುರಾಣವಲ್ಲ.. ಕಣ್ಣಮುಂದಿನ ಇತಿಹಾಸ!
ಕೃಪೆ: ವಾರ್ತಾಭಾರತಿ