"ನಮ್ಮನ್ನು ಸುರಕ್ಷಿತವಾಗಿ ಕರೆತರುವಂತೆ ಮೋದಿ ಸರ್ಕಾರದ ಮೇಲೆ ಒತ್ತಡ ಹೇರಿ": ಯುದ್ದಭೂಮಿಯಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ
"ನಮ್ಮನ್ನು ಸುರಕ್ಷಿತವಾಗಿ ಕರೆತರುವಂತೆ ಮೋದಿ ಸರ್ಕಾರದ ಮೇಲೆ ಒತ್ತಡ ಹೇರಿ": ಯುದ್ದಭೂಮಿಯಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬ ವಿದ್ಯಾರ್ಥಿನಿಯ ವಿಡಿಯೋ
Advertisement
ಉಕ್ರೇನ್ ಮೇಲಿನ ರಶ್ಯಾ ದಾಳಿಯಿಂದಾಗಿ ಯುದ್ಧ ಭೂಮಿಯಲ್ಲಿ ಅಪಾಯದಲ್ಲಿ ಸಿಲುಕಿಕೊಂಡಿರುವ ವಿಧ್ಯಾರ್ಥಿಗಳ ಪರವಾಗಿ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬಳು, "ಭಾರತದ ಸರ್ಕಾರ ತಮ್ಮನ್ನು ವಾಪಾಸು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ 'ಏನನ್ನೂ ಮಾಡುತ್ತಿಲ್ಲ', ನಾವು ಭಾರತೀಯ ರಾಯಭಾರ ಕಛೇರಿ ಸಿಬ್ಬಂದಿಗಳಿಗೆ ಕರೆ ಮಾಡಿದರೆ ಅವರು ಸ್ವೀಕರಿಸುತ್ತಿಲ್ಲ. ರೊಮಾನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಉಕ್ರೇನ್ ಸೈನಿಕರು ಹಲ್ಲೆ ನಡೆಸುತ್ತಿರುವ ವಿಡಿಯೋಗಳನ್ನು ವಾಟ್ಸ್ಯಾಪ್ ಮೂಲಕ ಕಳಿಸಿದರೂ ಅವರುಗಳು ಯಾವುದೇ ತೆರನಾದ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿಲ್ಲ. ನಾವು ಉಕ್ರೇನ್ ಗಡಿಗಿಂತ ಸುಮಾರು 800 ಕಿಮೀ ದೂರದಲ್ಲಿದ್ದೇವೆ, ಭಾರತ ಸರ್ಕಾರದಿಂದ ರಾಜತಾಂತ್ರಿಕ ಮಟ್ಟದ ಅದೀಕೃತ ವಾದ ನೆರವು ಇಲ್ಲದಿದ್ದರೆ ನಮಗ್ಯಾರಿಗೂ ಗಡಿ ದಾಟಲು ಸಾಧ್ಯವಾಗುವುದಿಲ್ಲ, ಆದರೂ ಈ ಕುರಿತು ಭಾರತ ಸರ್ಕಾರ ಏನನ್ನೂ ಮಾಡುತ್ತಿಲ್ಲ. ನನ್ನ ವಿಡಿಯೋ ನೋಡುತ್ತಿರುವ ಭಾರತೀಯ ಪ್ರಜೆಗಳಲ್ಲಿ ಒಂದು ವಿನಂತಿ, ದಯವಿಟ್ಟು ನೀವು ಭಾರತೀಯ ಮಾಧ್ಯಮಗಳನ್ನು ನಂಬಬೇಡಿ, ನಮ್ಮನ್ನು ಮತ್ತು ಯುದ್ದಭೂಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರುವಂತೆ ಸರ್ಕಾರದ ಮೇಲೆ ಒತ್ತಾಯ ಹೇರಿ” ಎಂದು ವಿಡಿಯೋ ಮೂಲಕ ವಿನಂತಿಸಿದ್ದಾರೆ.
ಈ ಕುರಿತು ಬಿಜೆಪಿ ಸಂಸದ ವರುಣ್ ಗಾಂಧಿಯವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಯುದ್ಧಗ್ರಸ್ತ ಭೂಮಿಯಲ್ಲಿ ಅಪಾಯದಲ್ಲಿ ಸಿಲುಕಿರುವ ನಾಗರಿಕರನ್ನು ಸುರಕ್ಷಿತವಾಗಿ ಮರಳಿ ಭಾರತಕ್ಕೆ ಕರೆ ತರಲು ಸೂಕ್ತ ಕ್ರಮ ಕೈಗೊಳ್ಳದಿರುವ ಕುರಿತಂತೆ “ಬಿಕ್ಕಟ್ಟಿನ ಸಮಯದಲ್ಲಿ ಭಾರತೀಯ ನಾಗರಿಕರಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ. ಅವರೆಲ್ಲರನ್ನೂ ರಕ್ಷಿಸುವುದು ನಾವು ಅವರುಗಳಿಗೆ ಮಾಡುವ ಸಹಾಯವಲ್ಲ, ಅದು ಸರ್ಕಾರದ ಕರ್ತವ್ಯ” ಎಂದು ವರುಣ್ ಗಾಂಧಿಯವರು ಕೇಂದ್ರದ ತನ್ನದೇ ಪಕ್ಷದ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಉಕ್ರೇನ್ ನ ಕೀವ್ ಪ್ರದೇಶದಲ್ಲಿ ಅಪಾಯದಲ್ಲಿ ಸಿಲುಕಿ ಹಾಕಿಕೊಂಡಿರುವ ಲಕ್ನೋ ಮೂಲದ ಗಿಢ್ವಾಮಿಶ್ರ ಎಂಬ ವಿಧ್ಯಾರ್ಥಿನಿಯ ಮನವಿಯ ವಿಡಿಯೋ ಒಂದನ್ನು ಟ್ವಿಟರ್ ಗೆ (27 ಫೆಬ್ರವರಿ) ಪೋಸ್ಟ್ ಮಾಡಿದ್ದ ಬೆನ್ನಿಗೆ ರಣರಂಗದ ನಡುವೆ ಅಪಾಯದಲ್ಲಿ ಸಿಲುಕಿಕೊಂಡಿರುವ ಮತ್ತೊಬ್ಬಳು ವಿಧ್ಯಾರ್ಥಿನಿಯ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ (28 ಫೆಬ್ರವರಿ) ಹಂಚಿಕೊಂಡಿರುವ ವರುಣ್ ಗಾಂಧಿಯವರು, "ಭಾರತದ ಸರ್ಕಾರ ಸೂಕ್ತವಾದ ಸಮಯದಲ್ಲಿ ಸೂಕ್ತವಾದ ನಿರ್ಧಾರಗಳನ್ನು ಕೈಗೊಳ್ಳದ ಕಾರಣದಿಂದಾಗಿ 15 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರಿ ಅಪಾಯದ ನಡುವೆ ಇನ್ನೂ ರಣರಂಗದ ನಡುವೆ ಸಿಲುಕಿಹಾಕಿಕೊಂಡಿದ್ದಾರೆ. ಈ ಸಮಯದಲ್ಲಿ ವ್ಯೂಹಾತ್ಮಕವಾದ ದೃಢ ನಿಲುವು ಮತ್ತು ರಾಜತಾಂತ್ರಿಕ ಕ್ರಮಗಳಿಂದ ಅವರೆಲ್ಲರನ್ನೂ ರಕ್ಷಿಸುವುದು ನಾವು ಅವರುಗಳಿಗೆ ಮಾಡುವ ಉಪಕಾರವಲ್ಲ, ಅದು ನಮ್ಮ (ಸರ್ಕಾರ) ಜವಾಬ್ದಾರಿಯಾಗಿದೆ. ಪ್ರತಿ 'ದುರಂತ'ವನ್ನೂ ಕೂಡ ಒಂದು 'ಅವಕಾಶ' ವಾಗಿ ಬಳಸಿಕೊಳ್ಳಬಾರದು" ಎಂದು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಚಾರದ ಹುಚ್ಚನ್ನು ಅವರು ಪರೋಕ್ಷವಾಗಿ ಟೀಕಿಸಿದ್ದಾರೆ.