ಪ್ರಧಾನಿ ನರೇಂದ್ರ ಮೋದಿಯವರೇ,
ಪ್ರಧಾನಿ ಕಚೇರಿಯ ಹೆಸರನ್ನು "40% ಕಮಿಷನ್ ದೂರು ಕೇಂದ್ರ" ಎಂದು ಬದಲಾಯಿಸಿ. ಏಕೆಂದರೆ ರಾಜ್ಯದ 40% ಕಮಿಷನ್ ಸರ್ಕಾರದ ಮೇಲಿನ ದಾಖಲೆ ಸಮೇತ ಆರೋಪಗಳನ್ನು ಹೊತ್ತ ಸಾಲು ಸಾಲು ಪತ್ರಗಳು ಪ್ರಧಾನಿ ಕಚೇರಿಗೆ ತಲುಪುತ್ತಿವೆ. "40% ಕಮಿಷನ್ ದೂರು ಕೇಂದ್ರ" ಎಂದು ಪ್ರಧಾನಿ ಕಚೇರಿಯ ಹೆಸರು ಬದಲಾಯಿಸಿ ಪ್ರಧಾನಿಗಳೇ. ನಿಮ್ಮ 18 ಗಂಟೆಗಳ ಕೆಲಸದ ಬಿಡುವಿನ ವೇಳೆಯಲ್ಲಿ ಪುರಸೊತ್ತು ಮಾಡಿ ಒಮ್ಮೆ ಕಣ್ಣಾಡಿಸಿ.
ಲಂಕೆಯ ಸುಟ್ಟರೂ ಖಾಲಿಯಾಗದ ಹನುಮಂತನ ಬಾಲದಂತೆ ಕಮಿಷನ್ ಸರ್ಕಾರದ ಹಗರಣಗಳ ದಾಖಲೆಗಳು ದಿನಕ್ಕೊಂದು ಧಾರಾವಾಹಿಗಳಂತೆ ಕುತೂಹಲಕಾರಿಯಾಗಿ ಜಗಜ್ಜಾಹೀರಾಗುತ್ತಿದೆ. ಧಾರಾವಾಹಿಯ ಕ್ಲೈಮ್ಯಾಕ್ಸ್ ನಿಮ್ಮ ಬುಡದಲ್ಲಿಯೇ ಬರುವ ಎಲ್ಲಾ ಮುನ್ಸೂಚನೆ ದಟ್ಟವಾಗಿ ಗೋಚರಿಸುತ್ತಿದೆ, ಎದುರಿಸಲು ಸಿದ್ದರಾಗಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ಈಗಾಗಲೇ ಪ್ರಧಾನಿ ಕಚೇರಿಯ ಬಾಗಿಲು ಬಡಿದು, ಬಂದ ದಾರಿಗೆ ಸುಂಕವಿಲ್ಲದೆ ಅಮಾಯಕ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಚಿವರಿಗೆ 40% ಕಮಿಷನ್ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜೆಗಳ ಹಿತಾಸಕ್ತಿಯನ್ನ ಕಾಪಾಡದ ಸರ್ಕಾರ ಆತ್ಮಹತ್ಯೆಗೆ ದೂಡಿದೆ ಎಂದರೆ ಆತನ ಸಾವನ್ನು ಆತ್ಮಹತ್ಯೆ ಎನ್ನಲಾಗದು. ಅದರಲ್ಲೂ ಸಚಿವರೇ ಪ್ರಕರಣದಲ್ಲಿ A1 ಆರೋಪಿ ಎಂದರೆ ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ..! ಎಂದವರು ಆಕ್ರೋಶ ವ್ಯಕ್ತಪಡಿಸಿದರು.
ಗೋಮಾತೆ, ಗೋ ರಕ್ಷಕರು ಎಂದು ಪುಂಗಿ ಊದುವ ನಿಮ್ಮ ಸರ್ಕಾರ "ಗೋವು ತಿನ್ನುವ ಮೇವಿನಲ್ಲಿ ಕಮಿಷನ್ ಪಡೆಯುತ್ತಿದೆ" ಎಂದು ಮೇವು ಸರಬರಾಜು ಮಾಡುವ ಗುತ್ತಿದಾರರು ನಿಮ್ಮ ಕಚೇರಿಗೆ ಪತ್ರ ಬರೆದಿದ್ದಾರೆ. ಎಪ್ಪತ್ತು ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಅಬ್ಬರಿಸಿ ಬೊಬ್ಬೆ ಹಾಕುತ್ತಿದ್ದ ನಿಮ್ಮ ಟೆಲಿಪ್ರಾಂಪ್ಟರ್ ಭಾಷಣದಲ್ಲಿ ಇಂತಹ ಆರೋಪಗಳನ್ನ ತಾವೇ ಮಾಡಿರುವುದಕ್ಕೆ ಸಾಧ್ಯವಿಲ್ಲ, ಬೇಕಿದ್ರೆ ಒಮ್ಮೆ ಚೆಕ್ ಮಾಡಿಕೊಳ್ಳಿ ಎಂದವರು ಕಿಡಿ ಕಾರಿದ್ದಾರೆ.
ಸರ್ಕಾರದ ಪ್ರತಿಯೊಂದು ಇಲಾಖೆಗಳ ಕಾಮಗಾರಿಗಳಲ್ಲಿ 40% ಕಮಿಷನ್, ಗೋವುಗಳ ಮೇವಿನಲ್ಲಿ 40% ಕಮಿಷನ್, ಮಠಗಳ ಅನುದಾನದಲ್ಲೂ 30% ಕಮಿಷನ್, ಪರೀಕ್ಷೆ ನಿರ್ವಹಣೆಯಲ್ಲೂ 20% ಕಮಿಷನ್ ಕಡ್ಡಾಯಗೊಳಿಸಿದ್ದಾರೆ. ಮಠಾದೀಶರೇ ಕಮಿಷನ್ ಗೆ ಬೇಸತ್ತು ಬಹಿರಂಗ ಹೇಳಿಕೆ ನೀಡುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿಯೇ ಮೊದಲು. ಬಹುಶಃ ನಿಮ್ಮ ಪಕ್ಷದ ನೇತೃತ್ವದ ಸರ್ಕಾರ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ "ಕಾಮಗಾರಿಗಳಲ್ಲಿ ಕಮಿಷನ್ ಕಡ್ಡಾಯ ಕಾಯ್ದೆ" ತರಬಹುದೇ? ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಪ್ರಮುಖ ಇಲಾಖೆಗಳ ಕಾಮಗಾರಿ ನಡೆದು ವರ್ಷಗಳೇ ಕಳೆಯುತ್ತಿದ್ದರು ಬಿಲ್ ಬಾಕಿ ಉಳಿಯುತ್ತಿವೆ. ನೀರಾವರಿ ಇಲಾಖೆಯೊಂದರಲ್ಲಿಯೇ ಕಳೆದ ಎರಡು ವರ್ಷಗಳಲ್ಲಿ 12,845.91 ಕೋಟಿ ಬಿಲ್ ಬಾಕಿ ಇದೆ. ಬಾಕಿ ಉಳಿಸಿಕೊಂಡಿರುವ ಹಿಂದೆ 40% ಕಮಿಷನ್ ನೀಡದೆ ಇರುವುದೊಂದೇ ಕಾರಣವೇ? ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಹಲವಾರು ಮಾನದಂಡಗಳಿವೆ. ಆದರೆ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಮಾತ್ರವೇ ಮಾನದಂಡವಾಗಿದೆ ಎಂದವರು ಹೇಳಿದರು.
ನೇಮಕಾತಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರದ ಮುಖವಾಡಗಳು ಬಯಲಾಗುತ್ತಿವೆ. PSI ನೇಮಕಾತಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ಎಸಗಿದ್ದಾರೆ. ಸ್ವಪಕ್ಷದ ಸಚಿವರು, ಶಾಸಕರುಗಳೇ ಸಿಎಂ ಗೆ ಪತ್ರ ಬರೆಯುತ್ತಿದ್ದಾರೆ. ನಮ್ಮಇಲಾಖೆಯಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ ಎಂದು ವಿಧಾನ ಪರಿಷತ್ ನಲ್ಲಿ ನನ್ನ ಪ್ರಶ್ನೆಗೆ ಉತ್ತರ ಕೊಟ್ಟ ಗೃಹ ಸಚಿವರು ಈಗ ತನಿಖೆ ನಡೆಸುತ್ತಿದ್ದಾರೆ. ತನಿಖೆಯಲ್ಲಿ ಬಿಜೆಪಿಯ ಮುಖಂಡರುಗಳೇ ಬಂಧನವಾಗುತ್ತಿದ್ದಾರೆ. ಇದು ಯಾವ ನಾಲಿಗೆ ಎಂದು ಒಮ್ಮೆ ಸ್ಪಷ್ಟಪಡಿಸಲು ಗೃಹ ಸಚಿವರಿಗೆ ನಿರ್ದೇಶನ ನೀಡಿ. ಎರಡೆರಡು ನಾಲಿಗೆ ಇರುವುದು ಹಾವಿಗೆ, ಈ ಎರಡು ನಾಲಿಗೆ ಇರುವ "ಹಾವಿನ ಪುರ" ಯಾವುದು ಎಂದವರು ಪ್ರಶ್ನಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ರಾಮಯ್ಯನವರದ್ದು 10% ಕಮಿಷನ್ ಸರ್ಕಾರ ಎಂದು ತಲೆಯೂ ಇಲ್ಲದ ಬುಡವೂ ಇಲ್ಲದ ಆರೋಪವೊಂದನ್ನೂ ಗಾಳಿಯಲ್ಲಿ ತೇಲಿ ಬಿಟ್ಟಿರಿ. ಬಿಜೆಪಿ ಸರ್ಕಾರ ಬಂದರೆ ಭ್ರಷ್ಟ ಸರ್ಕಾರದ ದಾಖಲೆಗಳನ್ನ ಬಿಡುಗಡೆ ಮಾಡುತ್ತೇವೆ ಎಂದು ತೌಡು ಕುಟ್ಟಿದ್ದೀರಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಬಂದು ಎರಡು ವರ್ಷಗಳೇ ಕಳೆದಿವೆ. ಹಗರಣಗಳು ಬರುತ್ತಿರುವುದು ನಿಮ್ಮ ಮಂತ್ರಿ ಮಹಾಶಯರುಗಳದ್ದೇ ಹೊರತು ಕಾಂಗ್ರೆಸ್ ಸರ್ಕಾರದ್ದಲ್ಲ ಎಂದವರು ಹೇಳಿದರು.
ನೀವೇ ಚುನಾವಣೆಯಲ್ಲಿ ಅಬ್ಬರಿಸಿದ್ದ "ನಾ ಖಾನೇ ದೂಂಗಾ, ನಾ ಖಾವೂಂಗಾ" ಹೇಳಿಕೆಯಲ್ಲಿ ಕರ್ನಾಟಕ ಬಿಟ್ಟು ಹೇಳಿದ್ದಾ? ಇನ್ನೊಮ್ಮೆ ಸ್ಪಷ್ಟಪಡಿಸಿಬಿಡಿ. ಇಲ್ಲದಿದ್ದರೆ ಕಮಿಷನ್ ದಂಧೆಯಲ್ಲಿ ನಿಮ್ಮ ಪಾಲೆಷ್ಟಿದೆ ಖಚಿತಪಡಿಸಿ ಎಂದವರು ಪ್ರಶ್ನಿಸಿದ್ದಾರೆ.
ಹಾಗೆಯೇ ಪ್ರಧಾನಿ ಮೋದಿಯವರೆ, ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ದೇಶದ ಅಮಾಯಕ ಜನರ ಬದುಕಿನ ಮೇಲೆ ಉತ್ತರನ ಪೌರುಷ ತೋರಿಸಬೇಡಿ! ನಿಮ್ಮ 56 ಇಂಚಿನ ಎದೆಗಾರಿಕೆ ಏನಾದರೂ ಇದ್ದರೆ ಅದನ್ನು ಚೀನಾದ ವಿರುದ್ಧ ಪ್ರದರ್ಶನ ಮಾಡಿ. ಭಾರತದ ಗಡಿಗಳಲ್ಲಿ ಅಕ್ರಮವಾಗಿ ನೂರಾರು ಮನೆಗಳನ್ನ ಚೀನಾ ನಿರ್ಮಿಸಿದೆ ಎಂದು ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ. ಜನಸಾಮಾನ್ಯರ ಬದುಕಿನ ಮೇಲೆ ದಬ್ಬಾಳಿಕೆ ಫ್ಯಾಶಿಸ್ಟ್ ಪ್ರವೃತ್ತಿಯ ಭಾಗ ಎಂದು ಮತ್ತೆ ಮತ್ತೆ ಸಾಬೀತು ಮಾಡಬೇಡಿ ಎಂದವರು ವಿನಂತಿಸಿದ್ದಾರೆ.