"ರಾಜ್ಯ ಬಿಜೆಪಿ ಸರ್ಕಾರದ 40% ಕಮಿಷನ್ ವಿರುದ್ಧದ ಕಾಂಗ್ರೆಸ್ ಹೋರಾಟಕ್ಕೆ ಸಚಿವ ಈಶ್ವರಪ್ಪನವರ ರಾಜೀನಾಮೆಯಿಂದ ಮೊದಲ ಜಯ ದೊರೆತಿದೆ. ಕೇವಲ ರಾಜೀನಾಮೆಯಿಂದ ಕಾಂಗ್ರೆಸ್ ಪಕ್ಷದ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ನಮ್ಮ ಹೋರಾಟದ ಒತ್ತಾಯ, ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಕ್ರಿಮಿನಲ್ ಪ್ರಕಣದಲ್ಲಿ A1 ಆರೋಪಿಯಾಗಿರುವ ಈಶ್ವರಪ್ಪನವರನ್ನ ಈ ಕೂಡಲೇ ಸರ್ಕಾರ ಬಂಧಿಸಿ, ಭ್ರಷ್ಟಾಚಾರ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಿಸಬೇಕು" ಎಂದು ಕಾಂಗ್ರೆಸ್ ನಾಯಕ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಒತ್ತಾಯಿಸಿದ್ದಾರೆ.
"ಸಿಎಂ ಬೊಮ್ಮಾಯಿ, ಗೃಹ ಸಚಿವರು ಸೇರಿದಂತೆ ಇಡೀ ಸರ್ಕಾರ ಯಾವುದೇ ತನಿಖೆ ನಡೆಸದೇ ಈಶ್ವರಪ್ಪನವರಿಗೆ ಈಗಾಗಲೇ ಕ್ಲೀನ್ ಚಿಟ್ ನೀಡಿದೆ. ಭ್ರಷ್ಟಾಚಾರಿಗಳು, ಕ್ರಿಮಿನಲ್ಸ್ ಗಳ ಬೆನ್ನಿಗೆ ನಿಂತಿರುವ ಸರ್ಕಾರದಿಂದ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಕ್ರಿಮಿನಲ್ ನಂ1 ಆರೋಪಿಯಾಗಿರುವ ಈಶ್ವರಪ್ಪನವರು ಪ್ರಭಾವಿ ಯಾಗಿರುವುದರಿಂದ ಸಂತೋಷ್ ಪಾಟೀಲ್ ಕುಟುಂಬಸ್ಥರ ಹಾಗೂ ಸಂಬಂಧಪಟ್ಟ ಸಾಕ್ಷಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಈಶ್ವರಪ್ಪನನ್ನು ಬಂಧಿಸಿ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.
"ಇಡೀ ಸರ್ಕಾರವೇ 40% ಕಮಿಷನ್ ನಲ್ಲಿ ಷಾಮೀಲಾಗಿದೆ, ಈ ಕುರಿತು ದಾಖಲೆ ಬಿಡುಗಡೆ ಮಾಡಲು ಸಿದ್ದ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯನವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಈ ಕುರಿತಾಗಿಯೂ ತನಿಖೆ ನಡೆಸಬೇಕಿದೆ. ಭ್ರಷ್ಟಾಚಾರದ ವಿರುದ್ಧ, ಕ್ರಿಮಿನಲ್ ಸಚಿವರುಗಳ ವಿರುದ್ಧ ನಮ್ಮಹೋರಾಟ ಮುಂದುವರೆಯುತ್ತದೆ" ಎಂದವರು ಹೇಳಿದ್ದಾರೆ.