ಹೋಟೆಲ್‌ಗಳ ತಿಂಡಿ ತಿನಿಸುಗಳ ದರ ಇಂದಿನಿಂದ ಮತ್ತೆ ಏರಿಕೆಯಾಗಿದೆ. ಅಡುಗೆ ಎಣ್ಣೆ, ವಾಣಿಜ್ಯ ಸಿಲಿಂಡರ್ ಹಾಗೂ ಅಗತ್ಯ ವಸ್ತುಗಳ ಬೆಲೆ ಸತತವಾಗಿ ಏರಿಕೆಯಾದ ಪರಿಣಾಮ ಹೋಟೆಲ್ ಮಾಲೀಕರು ದರ ಏರಿಸುವುದು ಅನಿವಾರ್ಯವಾಗಿದೆ. ಗ್ರಾಹಕರು ಹೊಟ್ಟೆ ತುಂಬಿಸಿಕೊಳ್ಳಬೇಕಾದರೆ ದುಬಾರಿ ದರ ತೆರಲೇಬೇಕು. ದರ ಏರಿಕೆ ಡಬಲ್ ಇಂಜೀನ್ ಸರ್ಕಾರದ ಬಂಪರ್ ಕೊಡುಗೆ. ಅವಿವಾಹಿತರು, ಉದ್ಯೋಗಿಗಳು, ವಲಸಿಗರು, ಕಾರ್ಮಿಕರು ಹಾಗೂ ಅಸಂಖ್ಯಾತ ಬಡವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ರಿಯಾಯಿತಿ ದರದಲ್ಲಿ ಊಟ ಸಿಗುತಿತ್ತು. ಈ ಸರ್ಕಾರ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕೂಡ ನಿಲ್ಲಿಸಿದೆ. ಇತ್ತ ಬೆಲೆಯೇರಿಕೆ ನಿಯಂತ್ರಣದ ಬಗ್ಗೆಯೂ ಯಾವುದೇ ಕ್ರಮವಿಲ್ಲ. ಇಂದಿರಾ ಕ್ಯಾಂಟೀನ್‌ಗೆ ಅನುದಾನ ಕೊಡಲು ಈ ಸರ್ಕಾರಕ್ಕೆ ದಾಡಿಯೇನು? ಎಂದು ಕಾಂಗ್ರೆಸ್ ನಾಯಕ, ಕೆಪಿಸಿಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತು, ಅಡುಗೆ ಎಣ್ಣೆ, FMCG ಸೇರಿದಂತೆ ತೈಲದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನ ಒಂದೊತ್ತಿನ ಊಟ ತಿನ್ನಲೂ ಖರ್ಚಿನ ಲೆಕ್ಕ ಹಾಕಬೇಕು. BJP ನಾಯಕರು ಬೆಲೆಯೇರಿಕೆಯ ಬಗ್ಗೆ ಎಂದಾದರೂ ಮಾತನಾಡಿದ್ದಾರೆಯೇ? ಪೆಟ್ರೋಲ್ ಬೆಲೆ ಲೀಟರ್‌ಗೆ ಐನೂರಾದರೂ ನಮ್ಮ ಓಟು ಮೋದಿಗೆ ಎನ್ನುವ ಮೂರ್ಖರ ಸಂತೆಯ BJPಯವರಿಗೆ ಜನರ ಕಷ್ಟ ಗೊತ್ತಿದೆಯೆ? ಬೆಲೆಯೇರಿಕೆಯ ಬಿಸಿ ಜನರನ್ನು ಸುಡುತ್ತಿದೆ. ಕೊಳ್ಳೆ ಹೊಡೆದು ಶ್ರೀಮಂತರಾಗಿರುವ BJPಯವರಿಗೆ ಬೆಲೆಯೇರಿಕೆಯ ತಾಪ ತಟ್ಟದಿರಬಹುದು. ಆದರೆ ಬಡವರ ಪಾಡೇನು.? BJPಯವರೆ, ಬೆಲೆಯೇರಿಕೆ ಇವತ್ತಿನ ನೈಜ ಸಮಸ್ಯೆ. ಧರ್ಮದ ಆಧಾರದಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಬೆಲೆಯೇರಿಕೆಯ ಬಗ್ಗೆ ಈಗಲಾದರೂ ಬಾಯಿ ಬಿಡಿ. ನಿಮ್ಮ ಪಕ್ಷದ ಬಡವರ ಕಾಳಜಿ ಜನರಿಗೂ ತಿಳಿಯಲಿ ಎಂದವರು ಹೇಳಿದ್ದಾರೆ.