ಬಡ ಮಹಿಳೆಯೊಬ್ಬರು ಅಕ್ರಮ ಸಕ್ರಮದಡಿ ನಿರ್ಮಿಸಿದ್ದ ಮನೆಯನ್ನು ಕಾನೂನಿನ ನೆಪವೊಡ್ಡಿ ಯಾವುದೇ ಪೂರ್ವಸೂಚನೆ ನೀಡದೆ ಕೆಡವಿ ನಾಶಗೊಳಿಸಿದ್ದನ್ನು ಪ್ರಶ್ನಿಸಿದ ಮಾಜಿಸಚಿವ ವಿನಯ ಕುಮಾರ್ ಸೊರಕೆಯವರ ಮೇಲೆ ಹಲ್ಲೆಗೆ ಯತ್ನಿಸಿ ಸಾರ್ವಜನಿಕರೆದುರು ಗೂಂಡಾಗಿರಿ ಪ್ರದರ್ಶಿಸಿದ ಶಿರ್ವ ಗ್ರಾಮ ಪಂಚಾಯತ್ ಪಿಡಿಒ ನನ್ನು ಕೂಡಲೆ ಅಮಾನತುಗೊಳಿಸಿ ಶಿಸ್ತುಕ್ರಮ ತೆಗೆದು ಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.
ಮಾಜಿ ಸಚಿವರೊಬ್ಬರಿಗೆ ಸರಕಾರದ ಪ್ರೋಟೋಕಾಲ್ ನಿಯಮಾವಳಿಯಡಿಯಲ್ಲಿ ಅವರದ್ದೇ ಆದ ಗೌರವಾಧರಗಳಿವೆ. ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿವೆ. ಆದರೆ ಬಿಜೆಪಿ ತನ್ನ ಸರ್ವಾಧಿಕಾರದ ಜನವಿರೋಧಿ ನೀತಿಯ ಆಡಳಿತವನ್ನು ಪ್ರಶ್ನಿಸುವವರನ್ನು ಧಮನಿಸಲು ಅಧಿಕಾರಶಾಹೀ (ಬ್ಯೂರೋಕ್ರೇಟ್ಸ್) ವರ್ಗವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಈ ಘಟನೆ ಇದಕ್ಕೊಂದು ಜ್ವಲಂತ ಸಾಕ್ಷಿಯಾಗಿದ್ದು ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಪ್ರಜಾತಂತ್ರ ವಿರೋಧಿ ಅಧಿಕಾರಿಗಳು ಮತ್ತು ರಾಜಕೀಯದ ವಿರುದ್ಧ ಕಾಂಗ್ರೆಸ್ ಸಾಂವಿಧಾನಿಕ ರೀತಿಯ ಹೋರಾಟ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಬಿ.ಜೆ.ಪಿ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳು ಮಂಗಳವಾರ ಕಾಪು ತಾಲೂಕಿನ ಶಿರ್ವ ಗ್ರಾಮದ ತುಪ್ಪೆಪಾದೆ ಬಳಿ ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ವಾಸಿಸುತ್ತಿದ್ದ ಪದ್ಮಬಾಯಿ ಎಂಬ ಬಡಪಾಯಿ ಮಹಿಳೆಯ ಮನೆಯನ್ನು ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ಕಾಪು ತಹಸೀಲ್ದಾರ್ ಮತ್ತು ಕಂದಾಯ ಇಲಾಖಾಧಿಕಾರಿಗಳು ಶಿರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿ.ಓ) ಜೊತೆ ಸೇರಿ ನೆಲಸಮಗೊಳಿಸಿ ತಮ್ಮ ದರ್ಪವನ್ನು ಮೆರೆದು, ಮನೆಯಲ್ಲಿದ್ದವರನ್ನು ಬೀದಿಪಾಲು ಗೊಳಿಸಿರುವ ಹೃದಯ ವಿದ್ರಾವಕ ಘಟನೆಯಿಂದ ಸಾರ್ವಜನಿಕರು ಆಕ್ರೋಶಿತರಾಗಿದ್ದಾರೆ. ಮನೆಯನ್ನು ನೆಲಸಮಗೊಳಿಸದಂತೆ ಅಧಿಕಾರಿಗಳೊಂದಿಗೆ ಬಡಪಾಯಿ ಮಹಿಳೆ ಪರಿಪರಿಯಾಗಿ ಬೇಡಿಕೊಂಡರೂ ಕಿಂಚಿತ್ತೂ ಕರುಣೆ ತೋರದೆ ನೆಲಸಮಗೊಳಿಸಿರುವ ಅಮಾನವೀಯ ಕೃತ್ಯವನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ತೀವ್ರವಾಗಿ ಖಂಡಿಸಿ, ಸ್ಥಳಕ್ಕೆ ಭೇಟಿನೀಡಿ ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಿದರು.