Advertisement

ಉಜ್ವಲ ಯೋಜನೆಯಡಿ ಪಡೆದ ಒಟ್ಟು ಎಲ್‌ಪಿಜಿ ಸಂಪರ್ಕಗಳು 9ಕೋಟಿ- ಹೆಮ್ಮೆ ಅನ್ಸಲ್ವಾ? ಎಂದು ಟ್ವೀಟ್ ಮಾಡಿದ ಸಚಿವ ಪೂಜಾರಿಯವರಿಗೊಂದು ಬಹಿರಂಗ ಪತ್ರ

Advertisement
ಮಾನ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರೆ,
ನಮಗೆ ಯಾವ ಕಾರಣಕ್ಕೂ ಹೆಮ್ಮೆ ಅನ್ಸಲ್ಲ ಬದಲಿಗೆ ನೋವಾಗುತ್ತೆ. ಏಕೆ ಗೊತ್ತೆ? ಉಜ್ವಲ ಯೋಜನೆಯಡಿ ಅದ್ಯಾರ‌್ಯಾರು ಗ್ಯಾಸ್ ಕನೆಕ್ಷನ್ ಪಡೆದರೋ? ಅವರುಗಳು ಅದಕ್ಕೂ ಮೊದಲು ಅನ್ನ ಬೇಯಿಸಲು ಅದೇನು ಮಾಡುತ್ತಿದ್ದರೋ ನಮಗೆ ನಿಜಕ್ಕೂ ಗೊತ್ತಿಲ್ಲ. ಆದರೆ ಮನಮೋಹನ್ ಸಿಂಗ್ ರವರ ಸರ್ಕಾರ ಅಧಿಕಾರದಲ್ಲಿದ್ದ ಕಾಲದಲ್ಲಿ 410ರೂ. ಗಳಿಗೆ ಸಿಗುತ್ತಿದ್ದ ಅಡುಗೆ ಗ್ಯಾಸ್ ನ ಬೆಲೆ ನರೇಂದ್ರ ಮೋದಿಯವರ ಆಡಳಿತದಲ್ಲಿ 1000 ರೂ.ಗಳಿಗೆ ತಲುಪಿರುವುದು ಮತ್ತು ಉಜ್ವಲ ಯೋಜನೆ ಬರುವ ಮೊದಲು ಗ್ಯಾಸ್ ಬಳಸುತ್ತಿದ್ದ ಜನರೇ ಇದೀಗ ಕಟ್ಟಿಗೆ ಒಲೆಯ ಮೊರೆ ಹೋಗಿರುವುದು ನೋಡಿ ತುಂಬಾ ನೋವಾಗ್ತಿದೆ.
ಮನಮೋಹನ್ ಸಿಂಗ್ ಕಾಲದಲ್ಲಿ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ 147 ಡಾಲರ್ ಇದ್ದಾಗ ಕೇವಲ 79ರೂ. ಗೆ ಪೆಟ್ರೋಲ್ ಸಿಗುತ್ತಿತ್ತಲ್ಲ, ಆದರೀಗ ಅದೇ ಕಚ್ಚಾತೈಲ ಬೆಲೆ ಕೇವಲ 49ಡಾಲರ್ ಗೆ ಕುಸಿದಾಗಲೂ ಪೆಟ್ರೋಲ್ ಲೀಟರ್‌ಗೆ 110 ರೂಪಾಯಿ ದೋಚುತ್ತಿದ್ದಾರಲ್ಲ ಎಂದು ನೋವಾಗ್ತಿದೆ.
ಮನಮೋಹನ್ ಸಿಂಗ್ ಕಾಲದಲ್ಲಿ ವಿಶ್ವದ 3ನೇಯ ಆರ್ಥಿಕ ಶಕ್ತಿಯಾಗಿ ಬೆಳೆದಿದ್ದ ಭಾರತ ಮೋದಿಯವರು ಪ್ರಧಾನಿಯಾದ ನಂತರ ಜಾರಿಗೊಳಿಸಿದ ಅವೈಜ್ಞಾನಿಕ ನೋಟುಬ್ಯಾನ್ ನಿಂದಾಗಿ ಇದೀಗ ನಿರುದ್ಯೋಗ ಪ್ರಮಾಣ ಕಳೆದ 47ವರ್ಷಗಳಷ್ಟು ಹಿಂದಕ್ಕೆ ಕುಸಿಯಿತಲ್ಲ. ಆ ಕಾರಣಕ್ಕಾಗಿ ನೋವಾಗ್ತಿದೆ.

ವಿಶ್ವವಿಖ್ಯಾತ ಆರ್ಥಿಕತಜ್ಞ ಮನಮೋಹನ್ ಸಿಂಗ್ ಕಾಲದಲ್ಲಿ ಅಂದರೆ ಸುಮಾರು 2008-09 ರ ಹೊತ್ತಿಗೆ ಇಡೀ ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಒಳಗಾದಾಗಲೂ ಭಾರತದಲ್ಲಿ 10.8% ಇದ್ದ ಜಿಡಿಪಿ ಮೋದಿ ಆಡಳಿತದ ಅನರ್ಥಕಾರಿ ಆರ್ಥಿಕ ನೀತಿಯಿಂದಾಗಿ ಮೈನಸ್ 23.9% ಗೆ ಕುಸಿಯುವಂತಾಯ್ತಲ್ಲ ಎಂದು ನೋವಾಗ್ತಿದೆ.

ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ ಕಾಂಗ್ರೆಸ್, ಆ ನಂತರದ ತನ್ನ ಅಧಿಕಾರಾವಧಿಯಲ್ಲಿ ಬಹು ಮಹತ್ವಾಕಾಂಕ್ಷೆಯಿಂದ ನಿರ್ಮಿಸಿದ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಸಾರ್ವಜನಿಕ (ಪ್ರಜೆಗಳದ್ದು) ಆಸ್ತಿಗಳನ್ನು ಮೋದಿಯವರು ಆಡಳಿತಕ್ಕೆ ಬಂದ ನಂತರ ಅವರ ಉದ್ಯಮಿ ಸ್ನೇಹಿತರುಗಳಿಗೆ ಮೂರು ಕಾಸಿಗೆ ಮಾರುತ್ತಿದ್ದಾರಲ್ಲ ಆ ಕಾರಣಕ್ಕಾಗಿ ನೋವಾಗ್ತಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು 3ತಿಂಗಳಿಗೆ ಮೊದಲೆ ಕೊರೊನಾ ಮಹಾಮಾರಿ ಅಪ್ಪಳಿಸಲಿದೆ ಮುಂಜಾಗ್ರತೆಯ ಕ್ರಮ ಕೈಗೊಳ್ಳಿ ಎಂದು ಕೇಂದ್ರದ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರೂ ಕೂಡಾ, 'ನಿಮ್ಮಜ್ಜಿಯ ಇಟಲಿಯಲ್ಲಿ ಕೊರೊನಾದಿಂದ ಸತ್ತವರ ಹೆಣ ಹೂಳಲು ಸ್ಥಳವಿಲ್ಲ. ನೀವೂ ಅಲ್ಲಿಗೆ ಹೋಗಿ' ಎಂದು ರಾಹುಲ್‌ರನ್ನು ಲೇವಡಿ ಮಾಡಿದ ಮೋದಿ ಸರ್ಕಾರ ಕೊರೊನಾ ತಡೆವ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳದೆ, ಬೇಕಾಬಿಟ್ಟಿಯಾಗಿ ನಮಸ್ತೆ ಟ್ರಂಪ್ ಮುಂತಾದ ಸಭೆ ಸಮಾರಂಭಗಳನ್ನು ನಡೆಸಿ, ಆ ನಂತರ ವಿಶ್ವ ಆರೋಗ್ಯ ಸಂಸ್ಥೆ ಕಡಕ್ಕಾಗಿ ಎಚ್ಚರಿಸಿದ ನಂತರ ರಾತ್ರೋರಾತ್ರಿ ದೇಶವಾಸಿಗಳಿಗೆ ಯಾವುದೇ ಪೂರ್ವಸೂಚನೆ ನೀಡದೇ ಲಾಕ್‌ಡೌನ್ ಘೋಷಿಸಿ ಲಕ್ಷಾಂತರ ಜನ ವಲಸೆ ಕಾರ್ಮಿಕರು ಊರಿಗೆ ಹೋಗಲು ವಾಹನ ಇಲ್ಲದೇ, ಅನ್ನ ನೀರಿಲ್ಲದೇ ಸಾಯುವಂತಾಯ್ತಲ್ಲ ಅದಕ್ಕಾಗಿ ನೋವಾಗ್ತಿದೆ.
ಸ್ವಾತಂತ್ರ್ಯಾ ನಂತರದ ಕಾಲದಲ್ಲಿ ಸೌಹಾರ್ಧತೆಯಿಂದಿದ್ದ ದೇಶ ಇಂದು ನಿಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಯಾರದ್ದೋ ಮನೆಯ ಹೆಣ್ಣುಮಕ್ಕಳು ತಲೆಗೆ ಕಟ್ಟುವ ಹಿಜಾಬ್ ವಿಚಾರದಲ್ಲಿ, ಮತ್ಯಾರೋ ಹಲಾಲ್ ಪದ್ದತಿಯ ಮೂಲಕ ಕೋಳಿ ಕತ್ತರಿಸಿ ತಿನ್ನುತ್ತಾರೆ ಎಂಬ ಕಾರಣಕ್ಕಾಗಿ ಹಿಂದೂ ಮುಸಲ್ಮಾನರ ನಡುವಿನ ಸೌಹಾರ್ಧತೆ ಕೆಡಿಸುತ್ತಿದ್ದಾರಲ್ಲ ಆ ಮೂಲಕ ದೇಶ ಶಿಲಾಯುಗದತ್ತ ಮರಳುತ್ತಿದೆಯಲ್ಲ ಆ ಕಾರಣಕ್ಕಾಗಿ ನೋವಾಗ್ತಿದೆ.
ಸಂತೋಷ್ ಪಾಟೀಲ್ ಎಂಬ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಮಾನ್ಯತೆ ಪಡೆದ ಗುತ್ತಿಗೆದಾರನೊಬ್ಬ, ಸಚಿವ ಈಶ್ವರಪ್ಪನವರ ಮೇಲೆ 40%ಕಮಿಷನ್ ಆರೋಪ ಮಾಡಿದಾಗಲೂ ಪಕ್ಷದ ನಾಯಕರು ಆತನಿಗೆ ಕರೆದು ಕೂರಿಸಿ, ಸಮಸ್ಯೆ ಆಲಿಸಿ, ಆತ ಅಪಾದಿಸಿದ ತಡೆಹಿಡಿಯಲಾದ ಬಿಲ್ಲನ್ನು ಕೊಡಿಸಿ, ನ್ಯಾಯ ಕೊಡಿಸದೆ ಬದಲಾಗಿ ಆತನ ಮೇಲೆ ಪುನಃ ಮಾನನಷ್ಟ ಮೊಕದ್ದಮೆ ಹಾಕಿ, ಆತನಿಗೆ ವಿಪರೀತವಾದ ಟೆನ್ಶನ್ ಕೊಟ್ಟು, ಆತ ಖಿನ್ನತೆಗೊಳಗಾಗುವಂತೆ ಮಾಡಿ ಆತನ ಆತ್ಮಹತ್ಯೆಗೆ ಕಾರಣರಾದರಲ್ಲ. ಆತನ ಪತ್ನಿ, ಎಳೆಮಗು ಅನಾಥರಾದರಲ್ಲ ಎಂಬ ಕಾರಣಕ್ಕಾಗಿ ಅತೀವವಾದ ನೋವಾಗ್ತಿದೆ.
ಮಾನ್ಯರೆ, ಆತ್ಮಪೂರ್ವಕವಾಗಿ ಹೇಳಿ ನಿಮಗಿದೆಲ್ಲ ಓದುವಾಗ ನೋವಾಗೊಲ್ವಾ, ಹೆಮ್ಮೆ ಅನ್ನಿಸುತ್ತಾ?

ಬರಹ: ಕೆ‌.ಚಂದ್ರಶೇಖರ ಶೆಟ್ಟಿ.

ಚಿತ್ರ: ಗೂಗಲ್/ ಸಾಂಕೇತಿಕವಾಗಿ ಬಳಸಲಾಗಿದೆ.

Advertisement
Advertisement
Recent Posts
Advertisement