Advertisement

ಸದೃಢ ಮತ್ತು ಸುಸಂಸ್ಕೃತ ರಾಷ್ಟ್ರವನ್ನು ಕಟ್ಟುವುದಕ್ಕೆ  ಇತಿಹಾಸದ ಗ್ರಹಿಕೆ ಹಾಗೂ ಭವಿಷ್ಯದ ಕುರಿತು ಕನಸುಗಳೂ ಬೇಕು| ಶ್ರೀಲಂಕಾದ ಇಂದಿನ ಸ್ಥಿತಿಗೆ ಕಾರಣಗಳೇನು?

Advertisement

ಬರಹ: ಪುರುಷೋತ್ತಮ ಬಿಳಿಮಲೆ (ಲೇಖಕರು ಹಿರಿಯ ಜನಪರ ಚಿಂತಕರು ಹಾಗೂ ಜೆಎನ್‌ಯುನ ನಿವೃತ್ತ ಉಪನ್ಯಾಸಕರು)

ರಾಷ್ಟ್ರವೊಂದರ ಕುಸಿತ: ನೆರೆಯ ರಾಷ್ಟ್ರ ಮಾತ್ರವಲ್ಲ, ರಾಮಾಯಣ ಕಾಲದಿಂದಲೂ ಭಾರತದೊಂದಿಗೆ ಸಂಬಂಧವಿರುವ ಶ್ರೀಲಂಕಾದಲ್ಲಿ ನಿಜವಾಗಲೂ ಏನಾಗುತ್ತಿದೆ ಎಂದು ಹೇಳುವಲ್ಲಿ ಬಹುತೇಕ ಭಾರತೀಯ ಮಾಧ್ಯಮಗಳು ವಿಫಲವಾಗಿವೆ. ಅವುಗಳಿಗೆ ಹತ್ತಿರದ ಶ್ರೀಲಂಕಾಕ್ಕಿಂತ ದೂರದ ರಶಿಯಾ ಉಕ್ರೇನ್ ಗಳೇ ಆಕರ್ಷಕ ಸಾಮಗ್ರಿಗಳಾಗಿವೆ.
ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಷರ ಮೇಲೆ ಜನ ಮುಗಿಬಿದ್ದಿದ್ದಾರೆ. ಅಲ್ಲಿರುವ ಸುಮಾರು ಎರಡು ಕೋಟಿಗೂ ಹೆಚ್ಚು ಜನರು ಮತ್ತೊಮ್ಮೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದಾರೆ. ಬಡತನ ಮತ್ತು ಹಸಿವಿನಿಂದ ಆ ದೇಶ ಇದೀಗ ಕಂಗೆಟ್ಟಿದೆ. ಅರ್ಥಶಾಸ್ತಜ್ಷರ ಪ್ರಕಾರ ಶ್ರೀಲಂಕಾದ ರಾಷ್ಟ್ರೀಯ ಉತ್ಪಾದನೆಯು ಅದರ ಖರ್ಚಿಗಿಂತ ಎಷ್ಟೋ ಕಡಿಮೆಯಿರುವುದರಿಂದ ಸಮಸ್ಯೆ ಬಹಳ ಗಂಭೀರವಾಗಿದೆ. ಅಂತಾರಾಷ್ಟ್ರೀಯ ಸಾಲದ ಮಟ್ಟವೂ ಹಿಡಿತ ಮೀರಿ ಬೆಳೆದಿದೆ.
ಇದಕ್ಕೆ ಮುಖ್ಯ ಕಾರಣ ಕೋವಿಡ್ ಉಂಟು ಮಾಡಿದ ಬಿಕ್ಕಟ್ಟುಗಳು. ಕೋವಿಡ್ ಅವಧಿಯಲ್ಲಿ ಅಲ್ಲಿಯ ಆರ್ಥಿಕತೆಯ ಬೆನ್ನೆಲುಬಾಗಿರುವ ಪ್ರವಾಸೋಧ್ಯಮವು ಸಂಪೂರ್ಣವಾಗಿ ನೆಲಕಚ್ಚಿತು. ತೀವ್ರ ರಾಷ್ಟ್ರೀಯವಾದಿಯಾಗಿರುವ ರಾಜಪಕ್ಷ ೨೦೨೧ರಲ್ಲಿ ರಾಸಾಯನಿಕ ಗೊಬ್ಬರಗಳನ್ನು ನಿಷೇಧಿಸಿದ್ದರಿಂದ ಅಲ್ಲಿನ ಕೃಷಿ ಕೈಗಾರಿಕೆಯೂ ಕುಸಿಯಿತು. ಸಣ್ಣ ಸಣ್ಣ ಕೈಗಾರಿಕೆಗಳು ಮುಚ್ಚಿಹೋಗಿ ಜನರು ಬೀದಿಗೆ ಬಿದ್ದರು. ಉಕ್ರೇನ್- ರಶಿಯಾ ಯುದ್ಧದಿಂದಾಗಿ ಶ್ರೀಲಂಕಾಕ್ಕೆ ಈಗ ತೈಲ ಕೊಡುವವರೂ ಇಲ್ಲ. ಐಎಂಎಫ್ ಸಾಮಾನ್ಯವಾಗಿ ಅಸ್ಥಿರ ಆರ್ಥಿಕತೆ ಇರುವಲ್ಲಿಗೆ ವಿಶೇಷ ಒತ್ತು ಕೊಡುವುದಿಲ್ಲ.

ಶ್ರೀಲಂಕಾದ ಸಮಸ್ಯೆಗಳಿಗೆ ಸುದೀರ್ಘ ಹಿನ್ನೆಲೆಯಿದೆ. ೨೦೦೯ರಷ್ಟು ಹಿಂದೆ ತಮಿಳರ ಸಮಸ್ಯೆಯನ್ನು ಪರಿಹರಿಸಿಕೊಂಡಮೇಲೆ ಅದು ಉಗ್ರ ರಾಷ್ಟ್ರೀಯತೆಯ ಕಡೆ ವೇಗವಾಗಿ ಹೊರಳಿಕೊಂಡಿತು. ಇವತ್ತು ಈ ಉಗ್ರ ರಾಷ್ಟ್ರವಾದವು ಬೌದ್ದ ಸಿಂಹಳೀಯರನ್ನು ಕೇಂದ್ರದಲ್ಲಿರಿಸಿಕೊಂಡು ಬೆಳೆದಿದೆ. ಈ ಬೆಳವಣಿಗೆಗಳು ಅಲ್ಲಿನ ಅಲ್ಪ ಸಂಖ್ಯಾಕರಾದ ಹಿಂದು, ಮುಸ್ಲಿಂ , ಕ್ರಿಶ್ಚಿಯನ್ನರನ್ನು ಮೂಲೆಗೆ ತಳ್ಳಿ ಅವರನ್ನು ಅನುತ್ಪಾದಕ ಗೊಳಿಸಿತು. ಅಲ್ಪ ಸಂಖ್ಯಾಕರ ಹಲವು ಪ್ರಾರ್ಥನಾ ಸ್ಥಳಗಳನ್ನು ಕಾನೂನು ಪ್ರಕಾರವೇ ಒಡೆದು ಹಾಕಲಾಯಿತು. ಆ ಸ್ಥಳಗಳಲ್ಲಿ ಬೌದ್ದ ವಿಹಾರಗಳನ್ನು ಕಟ್ಟಲಾಯಿತು. ಇದಕ್ಕೆ ಸರಕಾರ ಕೊಟ್ಟ ಕಾರಣ-ʼ ಪ್ರಾಚ್ಯವಸ್ತು ವಿಭಾಗದ ಪ್ರಕಾರ ಇವು ಬೌದ್ದರಿಗೆ ಸೇರಿದ ಜಾಗಗಳುʼ. ೨೦೧೯ರ ಈಸ್ಟರ್ ಬಾಂಬ್ ಪ್ರಕರಣವು ಕ್ರಿಶ್ಚಿಯನ್ ಮತ್ತು ಮುಸ್ಲಿಮರನ್ನು ನಿರ್ಣಾಯಕವಾಗಿ ಒಡೆಯಿತು. ಸಿಂಹಳೀಯ ಸಂಸ್ಕೃತಿಯ ಸಾರ್ವಭೌಮತ್ವಕ್ಕೆ ಕ್ರಿಶ್ಚಿಯನ್ ಮತ್ತು ಮುಸ್ಲಿಮರು ಅಪಾಯವೆಂದು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಯಿತು. ಈ ಕೆಲಸವನ್ನು Bodu Bala Sena (BBS) ಎಂಬ ತೀವ್ರಗಾಮೀ ಬೌದ್ದ ಸಂಘಟನೆಯು ಮಾಡುತ್ತಿದ್ದರೂ ಸರಕಾರವು ಅದರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಸಂಘಟನೆಯು ದ್ವೇಷ ಭಾಷಣವನ್ನು ಜನರ ನಡುವೆ ಸಾಮಾನ್ಯ ಪ್ರಕ್ರಿಯೆ ಎಂಬಂತೆ ಮಾಡಿತು. ಇದರ ಆಧಾರದ ಮೇಲೆಯೇ ಈಗಿನ ಸರಕಾರದ ಗೊಟಬಯ ರಾಜಪಕ್ಷ ಮತ್ತು ಮಹಿಂದಾ ರಾಜಪಕ್ಷ ಸಹೋದರರು ಅಧಿಕಾರಕ್ಕೆ ಬಂದದ್ದನ್ನು ನಾವೇ ಕಂಡಿದ್ದೇವೆ.
ಈ ನಡುವೆ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರ ಹಾಜರಾತಿಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಯಿತು ಎಂದು Commission on the Status of Women (CSW) ವರದಿ ಮಾಡಿತು. ರಾಷ್ಟ್ರೀಯ ಭದ್ರತೆಯ ಕಾರಣ ನೀಡಿ ಬುರ್ಖಾವನ್ನು ಮತ್ತು ಮುಸ್ಲಿಂ ಶಾಲೆಗಳನ್ನು ನಿಷೇಧಿಸುವ ತೀರ್ಮಾನವನ್ನು ಸರಕಾರ ತೆಗೆದುಕೊಂಡರೂ ಅಂತಾರಾಷ್ಟ್ರೀಯ ಒತ್ತಡಗಳನ್ನು ಗಮನಿಸಿ ʼ ಇದಕ್ಕೆ ಸ್ವಲ್ಪ ಸಮಯಬೇಕು ʼ ಎಂದು ಹೇಳಿ ತೀರ್ಮಾನವನ್ನು ಮುಂದೂಡಿತು. ೨೦೨೦ರ ಕೋವಿಡ್ ಸಮಯದಲ್ಲಿ ಮುಸ್ಲಿಮರ ಧರ್ಮಾನುಸಾರ ಅಂತ್ಯ ಸಂಸ್ಕಾರ ನಡೆಸಲು ಶ್ರೀಲಂಕಾ ಸರಕಾರ ಅನುಮತಿ ನೀಡಿಲ್ಲ. ೨೦೦೯ರ ಆನಂತರದ ಶ್ರೀಲಂಕಾ ಚುನಾವಣೆಗಳು ಅಲ್ಪ ಸಂಖ್ಯಾಕರ ಮೇಲಿನ ಆರೋಪಗಳ ಮೂಲಕವೇ ನಡೆದುವೇ ವಿನಾ ಅಭಿವೃದ್ಧಿಯ ಮಾತುಗಳಿಂದ ಅಲ್ಲ. ಈ ನಡುವೆ ಸಂವಿಧಾನದ ೨೦ನೇ ಪರಿಚ್ಚೇದಕ್ಕೆ ತಿದ್ದುಪಡಿ ತಂದು ರಾಜಪಕ್ಷ ತನ್ನ ಅಧಿಕಾರವನ್ನು ಇನ್ನಷ್ಟು ಬಲಪಡಿಸಿಕೊಂಡರು. ಅವರ ಅಧಿಕಾರವನ್ನು ಇದೀಗೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರಶ್ನಿಸುವಂತಿಲ್ಲ.
ಶ್ರೀಲಂಕಾದ ಬೆಳವಣಿಗೆಗಳ ಕುರಿತು ಈಚೆಗೆ The United States Commission on International Religious Freedom (USCIRF) ಹೇಳಿದ ಒಂದು ಮಾತೆಂದರೆ-ʼ ಒಡೆದ ಸಮುದಾಯಗಳನ್ನು ಮತ್ತೆ ಬೆಸೆಯಲು ಬಹಳ ಕಾಲಾವಕಾಶ ಬೇಕುʼ.
ಒಂದು ಸದೃಢ ಮತ್ತು ಸುಸಂಕೃತ ರಾಷ್ಟ್ರವನ್ನು ಕಟ್ಟುವುದಕ್ಕೆ ಇತಿಹಾಸದ ಸರಿಯಾದ ಗ್ರಹಿಕೆ ಬೇಕು, ಭವಿಷ್ಯದ ಕುರಿತು ಕನಸುಗಳೂ ಬೇಕು. ಎಲ್ಲಕ್ಕಿಂತ ಮಿಗಿಲಾಗಿ ʼನಾವೇನು ಮಾಡುತ್ತಿದ್ದೇವೆʼ ಎಂಬ ಕುರಿತು ಒಂದು ತಿಳಿವಳಿಕೆಯೂ ಬೇಕು. ಇವಿಲ್ಲವಾದರೆ ರಾಷ್ಟ್ರವೊಂದರ ಕುಸಿತವನ್ನು ಯಾರಿಗೂ ತಪ್ಪಿಸಲಾಗದು. ಇದಕ್ಕೆ ಶ್ರೀಲಂಕಾದ ಇಂದಿನ ಅವಸ್ಥೆಯೇ ಸಾಕ್ಷಿ.

Advertisement
Advertisement
Recent Posts
Advertisement