Advertisement

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುವ ಮೊದಲೇ ಅದೇಕೆ ಪೋಲಿಸರು ಸಂತೋಷ್ ರನ್ನು ಹುಡುಕುತ್ತಿದ್ದರು?

Advertisement

ರಾಜ್ಯದ ಬೊಮ್ಮಾಯಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಕಾರಣವಾಗಿರುವ "40% ಕಮಿಷನ್ ಆರೋಪ ಮಾಡಿರುವ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ" ಇದೀಗ ಹೊಸ ತಿರುವೊಂದನ್ನು ಪಡೆದುಕೊಂಡಿದ್ದು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುವ ಮೊದಲೇ ಅವರನ್ನು ಹುಡುಕಿಕೊಂಡು ಅವರು ಉಳಿದುಕೊಂಡಿದ್ದ ಲಾಡ್ಜ್ ಗೆ ಪೋಲಿಸರು ಬಂದಿದ್ದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ.

ಮೌಖಿಕ ಆದೇಶದ ಮೇರೆಗೆ ಸ್ನೇಹಿತರಿಂದ ಸಾಲ ಪಡೆದು ಪೂರೈಸಲಾದ ಕಾಮಗಾರಿಯ 4ಕೋಟಿ ಬಿಲ್ಲನ್ನು ಪಾವತಿಸಿಲ್ಲ ಎಂದು ಖಿನ್ನತೆಗೊಳಗಾಗಿ ಬೆಳಗಾವಿಯಿಂದ ಉಡುಪಿಗೆ ತೆರಳಿದ್ದ ಸಂತೋಷ್ ಪಾಟೀಲರನ್ನು ಪೋಲಿಸರು ಅದೇಕೆ ಬೆನ್ನು ಹತ್ತಿದ್ದರು? ಪೋಲಿಸರು ಬೆನ್ನು ಹತ್ತುವಂತಹ ಅಪರಾಧವೇನು ಸಂತೋಷ್ ರಿಂದ ನಡೆದಿತ್ತು? ಅಥವಾ ಅವರ ಬೆನ್ನು ಹತ್ತುವಂತೆ ಪೋಲಿಸರಿಗೆ ನಿರ್ದೇಶಿಸಿದವರು ಯಾರು? ಎಂಬುವುದು ಈ ಅಚ್ಚರಿಗೆ ಕಾರಣವಾಗಿದೆ. ಆ ಕಾರಣಕ್ಕಾಗಿ ಇದು ಕೇವಲ ಆತ್ಮಹತ್ಯೆ ಪ್ರಕರಣ ಮಾತ್ರವೇ ಆಗಿಲ್ಲದೇ ಇದರಲ್ಲಿ ಕೆಲವು ಪ್ರಭಾವಿಗಳ ಪಿತೂರಿ ಕೂಡಾ ಅಡಗಿದೆಯೇ ಎಂಬ ಅನುಮಾನ ಕೂಡ ಹುಟ್ಟಿಕೊಂಡಿದೆ‌.

ಈ ಕುರಿತು ಉಡುಪಿಯ ಶಾಂಭವಿ ಲಾಡ್ಜ್ ಮ್ಯಾನೇಜರ್ ರವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು ಅವರ ಮಾತಿನ ಸಾರಾಂಶ ಇಂತಿದೆ:

ಎಪ್ರಿಲ್ 11 ರ ಸಂಜೆ 5 ಗಂಟೆಗೆ ಶಾಂಭವಿ ಲಾಡ್ಜ್ ಗೆ ತನ್ನಿಬ್ಬರು ಸ್ನೇಹಿತರ ಜೊತೆ ಆಗಮಿಸಿ ಹಿಂಡಲಗಾದ ವಿಳಾಸ ನೀಡಿ ಎರಡು ರೂಮುಗಳನ್ನು ಪಡೆದಿದ್ದ ಬೆಳಗಾವಿಯ ಸಂತೋಷ್ ಪಾಟೀಲ್ ತಾನು 207 ನಂಬರ್ ನ ರೂಮಿನಲ್ಲಿ ಉಳಿದುಕೊಂಡಿದ್ದರೆ, 209 ನಂಬರ್ ನ ರೂಮಿನಲ್ಲಿ ಅವರ ಜೊತೆಗಿದ್ದ ಸ್ನೇಹಿತರು ಉಳಿದುಕೊಂಡಿದ್ದರು‌. ಆ ನಂತರ ರಾತ್ರಿ ಊಟಕ್ಕೆ ಸ್ನೇಹಿತರೊಡಗೂಡಿ ಹೊರಹೋಗಿದ್ದ ಅವರು ರಾತ್ರಿ 9ರ ಸುಮಾರಿಗೆ ವಾಪಾಸಾಗಿದ್ದರು. ಮರುದಿನ (ಎಪ್ರಿಲ್ 12) ಬೆಳೆಗ್ಗೆ 10.50 ರ ಸುಮಾರಿಗೆ ಸಂತೋಷ್ ಸ್ನೇಹಿತರು "ಸಂತೋಷ್ ಬೆಳಿಗ್ಗೆಯಿಂದ ಫೋನ್ ಎತ್ತುತ್ತಿಲ್ಲ ಹಾಗೂ ರೂಮಿನ ಬಾಗಿಲು ತಗೆಯುತ್ತಿಲ್ಲ" ಎಂದು ಹೋಟೆಲ್ ರಿಸೆಪ್ಶನ್ ನಲ್ಲಿ ಹೇಳಿಕೊಂಡಿದ್ದರು. ಆ ನಂತರ ಡುಪ್ಲೀಕೇಟ್ ಕೀ ಬಳಸಿ ಬಾಗಿಲು ತರೆದಾಗ ಸಂತೋಷ್ ಮಲಗಿದ್ದ ಸ್ಥಿತಿಯಲ್ಲಿ ಮೃತರಾಗಿರುವುದು ಕಂಡುಬಂತು. ಸಂತೋಷ್ ಆತ್ಮಹತ್ಯೆ ಬೆಳಕಿಗೆ ಬರುವ ಮೊದಲು, ಅದೇ ದಿನ ಬೆಳಿಗ್ಗೆ ಪೋಲಿಸರು ಇದೇ ಸಂತೋಷ್ ರನ್ನು ಹುಡುಕಿಕೊಂಡು ಬಂದು, ಫೋಟೋ ತೋರಿಸಿ "ಬೆಳಗಾವಿಯ ಈ ವ್ಯಕ್ತಿ ಇಲ್ಲಿ ತಂಗಿದ್ದಾರೆಯೇ?" ಎಂದು ಪ್ರಶ್ನಿಸಿದ್ದರು. ಆದರೆ ಸಂತೋಷ್ ಹಿಂಡಲಗಾದ ವಿಳಾಸ ನೀಡಿರುವುದರಿಂದ ಮತ್ತು ಫೋಟೋ ಗುರುತಿಸುವಲ್ಲಿ ವಿಫಲರಾದ ಪರಿಣಾಮ ಹೋಟೆಲ್ ಸಿಬ್ಬಂದಿ ಬೆಳಗಾವಿಯವರು ಯಾರೂ ತಂಗಿಲ್ಲ ಎಂದು ಪೋಲಿಸರನ್ನು ವಾಪಾಸು ಕಳುಹಿಸಿದ್ದರು. ಆದರೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೋಲಿಸರು ಹುಡುಕುತ್ತಿದ್ದ ವ್ಯಕ್ತಿ ಇವರೇ ಎಂಬುವುದು ಹೋಟೆಲ್ ಸಿಬ್ಬಂದಿಗೆ ಮನವರಿಕೆಯಾಗಿತ್ತು.

ವಿವಿಧ ಮೂಲಗಳ ಪ್ರಕಾರ, ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮಪಂಚಾಯತ್ ಅಧ್ಯಕ್ಷರು ಮತ್ತಿತರ ಗ್ರಾಮದ ಮುಖ್ಯಸ್ಥರ ನೇತೃತ್ವದಲ್ಲಿ ನಿಯೋಗವೊಂದು ಸಚಿವ ಈಶ್ವರಪ್ಪನವರ ಬಳಿ ತೆರಳಿ ಜಾತ್ರೆ ನಡೆಯುವ ಕಾರಣದಿಂದಾಗಿ ಶಿಥಿಲಗೊಂಡಿರುವ ರಸ್ತೆಗಳ ದುರಸ್ಥಿ ನಡೆಸುವಂತೆ ಕೋರಿ ಮನವಿ ಸಲ್ಲಿಸುತ್ತಾರೆ. ಆ ಸಮಯದಲ್ಲಿ ಸಚಿವರು ಆ ಎಲ್ಲಾ ಕಾಮಗಾರಿಗಳನ್ನು ಮಾಡುವಂತೆ ಸಂತೋಷ್ ಪಾಟೀಲ್ ಗೆ ಮೌಖಿಕವಾಗಿ ಆದೇಶಿಸುತ್ತಾರೆ.‌ ಸಚಿವರ ಮಾತು ನಂಬಿದ ಸಂತೋಷ್ ಸಿಕ್ಕಸಿಕ್ಕವರಲ್ಲಿ ಸಾಲ ಮಾಡಿ, ಕ್ಲಪ್ತ ಸಮಯದಲ್ಲಿ ಕಾಮಗಾರಿ ಪೂರೈಸುತ್ತಾರೆ ಮತ್ತು ಬಿಲ್ಲು ಪಾವತಿಸುವಂತೆ ಅಲೆಯತೊಡಗುತ್ತಾರೆ‌. ಆಗ ಈಶ್ವರಪ್ಪನವರು ಮತ್ತವರ ಕಡೆಯವರು 40% ಕಮಿಷನ್ ಕೊಡುವಂತೆ ಕೇಳುತ್ತಾರೆ. ಹಣ ಕೊಡಲಾಗದೆ ಅಲೆದು ಅಲೆದು ಸುಸ್ತಾದ ಸಂತೋಷ್ ಪ್ರಧಾನಿ ಮೋದಿಯವರಿಗೆ ಮತ್ತಿತರ ಬಿಜೆಪಿಯ ಕೇಂದ್ರ ಸಚಿವರಿಗೆ ಈ ಕುರಿತು ಈಶ್ವರಪ್ಪ ವಿರುದ್ಧ ಲಿಖಿತ ದೂರು ನೀಡಿ ಮಾಧ್ಯಮಗಳಿಗೆ ಬಹಿರಂಗ ಹೇಳಿಕೆ ನೀಡುತ್ತಾರೆ. ಅದು ತಿಳಿಯುತ್ತಿದ್ದಂತೆಯೇ ನನಗೆ ಸಂತೋಷ್ ಯಾರೆಂದೇ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ ಈಶ್ವರಪ್ಪ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇದರಿಂದ ಖಿನ್ನತೆಗೊಳಗಾದ ಸಂತೋಷ್ ಉಡುಪಿಗೆ ತೆರಳಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ವಿಷಯ ಹೀಗಿರುವಾಗ ಆತ್ಮಹತ್ಯೆಗೆ ಮೊದಲೇ ಪೋಲಿಸರು ಸಂತೋಷ್ ಪಾಟೀಲರನ್ನು ಹುಡುಕಾಡುತ್ತಿದ್ದ ಹಿಂದಿನ‌ ಕಾರಣ ಈ ನಾಡಿನ ಜನತೆಗೆ ತಿಳಿಯ ಬೇಡವೇ? ಆ ಕಾರಣಕ್ಕಾಗಿ ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕಾದ ಅವಶ್ಯಕತೆ ಕಂಡುಬರುತ್ತದೆ ಎಂಬುದು ಜನಸಾಮಾನ್ಯರ ಅನಿಸಿಕೆಯಾಗಿದೆ.

(ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮೊದಲು ಕೆಲವು ಸ್ನೇಹಿತರಿಗೆ ಮತ್ತು ಮಾದ್ಯಮಗಳಿಗೆ ಮಾಡಿದ್ದಾರೆನ್ನಲಾದ ವಾಟ್ಸ್ಯಾಪ್ ಸಂದೇಶದ ಸ್ಕ್ರೀನ್‌ಶಾಟ್)

Advertisement
Advertisement
Recent Posts
Advertisement