ಒಂದು ಸರಳ ವಿಡಿಯೋ ಕಾಲ್ ಮಾಡುವುದನ್ನು ಐಷಾರಾಮಿ ಸೌಲಭ್ಯ ಎಂದು ಪರಿಗಣಿಸುವುದಾದರೆ ಅದು ನನಗೆ ಮಾತ್ರ ಲಭ್ಯವಿತ್ತು. ಉಳಿದ ಆಪ್ತ ಸಂಬಂಧಿಗಳು ಕೇವಲ ಪತ್ರದ ಮೂಲಕ ಸಂಪರ್ಕಿಸಬಹುದಿತ್ತು. ಆದರೆ ನಾವು ಕಳಿಸಿದ ಪತ್ರಗಳು ಆನಂದನ್ನು ತಲುಪುವುದು ತುಂಬಾ ತಡವಾಗುತ್ತಿತ್ತು. ಏಕೆಂದರೆ ಜೈಲಿನ ಅಧಿಕಾರಿಗಳು ಆನಂದ್ ಅವರ ಎಲ್ಲಾ ಖಾಸಗಿ ಪತ್ರಗಳನ್ನು ಕಡ್ಡಾಯವಾಗಿ ಸೆನ್ಸಾರ್ ಮಾಡದ ಹೊರತು ಕೊಡುತ್ತಿರಲಿಲ್ಲ. ಆದರೆ ವ್ಯವಸ್ಥೆ ಒದಗಿಸಿರುವ ಈ ಸಣ್ಣ ಕರುಣೆಯೂ ಬಗ್ಗೆಯೂ ಇದ್ದಿದ್ದರಲ್ಲಿ ತೃಪ್ತಿಪಟ್ಟುಕೊಳ್ಳುವಂಥಾ ಪರಿಸ್ಥಿತಿಯಲ್ಲಿ ನಾವಿದ್ದೆವು.
ತಮ್ಮ ಕೆಲಸದ ಕಾರಣಗಳಿಂದಾಗಿ ಆನಂದ್ ಹೆಚ್ಚು ಪ್ರವಾಸದಲ್ಲಿರುತ್ತಿದ್ದರು. ಆದರೆ ಅವರು ಎಲ್ಲಿಗೇ ಹೋದರೂ ದಿನಕ್ಕೊಮ್ಮೆಯಾದರೂ ಕರೆ ಮಾಡಿ ನಮ್ಮೆಲ್ಲರನ್ನೂ ವಿಚಾರಿಸಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಅದರಲ್ಲೂ, ಮಕ್ಕಳ ಪರೀಕ್ಷಾ ಸಮಯದಲ್ಲಂತೂ ಎಲ್ಲಿದ್ದರೂ ಕರೆ ಮಾಡಿ ಶುಭಕೋರುವುದನ್ನು ತಪ್ಪಿಸುತ್ತಿರಲಿಲ್ಲ. ಅದು ಆನಂದ್ ಗೆ ಮಕ್ಕಳ ಜೊತೆಗಿದ್ದ ಸಂಬಂಧ. ಇಂಥಾ ಆನಂದ್ ಕಳೆದ ಎರಡು ವರ್ಷಗಳಿಂದ ಒಮ್ಮೆಯೂ ಮಕ್ಕಳ ಜೊತೆ ಮಾತನಾಡಿಲ್ಲ.
ಆನಂದ್ ಈಗ ಕರಾಳವಾದ ಯುಎಪಿಎ ಕಾಯಿದೆಯಡಿ ಸುಳ್ಳು ಆರೋಪಗಳಡಿ ಬಂಧಿಸಲ್ಪಟ್ಟಿರುವ ಒಬ್ಬ ವಿಚಾರಣಾಧೀನ ಖೈದಿ. ಅವರಿಗೆ ಈಗ 72 ವರ್ಷ. ಈ ವಯಸ್ಸಿನವರು ಸಾಮಾನ್ಯವಾಗಿ ತಮ್ಮ ಮಕ್ಕಳ ಆರೈಕೆಯಲ್ಲಿರುತ್ತಾರೆ. ಮತ್ತು ತಮ್ಮ ಸುತ್ತಮುತ್ತ ಕುಟುಂಬ ವರ್ಗದವರು ಇರಬೇಕೆಂದು ಬಯಸುತ್ತಾರೆ. ಆದರೆ ಈ ವಯಸ್ಸಿನಲ್ಲಿ ನಾನು ಮತ್ತು ಆನಂದ್ ನಡೆಸುತ್ತಿರುವ ಹೋರಾಟಗಳೇ ಬೇರೆ! ಈ ದುಸ್ಥಿತಿ ಒದಗಿ ಬಂದದ್ದು ಎನ್‌ಐಎ ಕೋರ್ಟಿನೆದುರು ಪೊಲೀಸರು ಮುಂದಿಟ್ಟಿರುವ ಕೇವಲ ಒಂದು ಸುಳ್ಳು ಕಥೆಯ ಕಾರಣದಿಂದಾಗಿ.. ಅದರ ಸತ್ಯಾಸತ್ಯತೆಗಳ ವಿಚಾರಣೆಯೇ ಇನ್ನು ಪ್ರಾರಂಭವಾಗಿಲ್ಲ.
ವಾರದ ಮುಲಾಖಾತ್
ಕೋವಿಡ್ ಸಾಂಕ್ರಾಮಿಕವು ಸ್ವಲ್ಪ ಕಡಿಮೆಯಾದ ನಂತರ ವಾರದ ಮುಲಾಖಾತ್ (ಭೇಟಿಗಳು)ಮತ್ತೆ ಪ್ರಾರಂಭವಾದವು. ಇದು ವಾರಕ್ಕೊಮ್ಮೆ ನಡೆಯುತ್ತವೆ ಮತ್ತು ಹತ್ತು ನಿಮಿಷಗಳ ಅವಕಾಶವಿರುತ್ತದೆ. ನಾನು ಪ್ರತಿವಾರ ನನ್ನ ಮನೆಯಿಂದ ಒಂದು ಗಂಟೆಯ ಕಾಲ ಪ್ರಯಾಣ ಮಾಡಿ ಬಂದು ಸಾಲಿನಲ್ಲ್ಲಿ ನಿಂತು ರಿಜಿಸ್ಟರಿನಲ್ಲಿ ಮುಲಾಖಾತ್ ದಾಖಲಿಸಿ ನನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತೇನೆ. ಈ ಕಾಯುವಿಕೆ ಕೆಲವೊಮ್ಮೆ ಒಂದೆರಡು ಗಂಟೆಗಳಷ್ಟು ದೀರ್ಘವೂ ಆಗಬಹುದು. ಇವೆಲ್ಲದರ ನಂತರ ದೊರೆಯುವ ಮುಲಖಾತ್ ನಲ್ಲಿ ಧೂಳು ತುಂಬಿದ ಗಾಜಿನ ಪರದೆಯ ಅ ಬದಿಯಲ್ಲಿರುವ ಆನಂದ್ ರನ್ನು ನೋಡಿ ಕಣ್ಣುತುಂಬಿಕೊಳ್ಳುತ್ತೇನೆ. ಇಂಟರ್‌ಕಾಮ್ ಮೂಲಕ ಕೇಳಿಬರುವ ಅವರ ಮಾತಿನಿಂದ ಕಿವಿತುಂಬಿಕೊಳ್ಳುತ್ತೇನೆ. ಸುತ್ತಮುತ್ತಲೂ ಇತರ ಜೈಲುವಾಸಿಗಳು ತಮ್ಮ ಸಂಬಂಧಿಕರ ಜೊತೆಗೋ, ಜೈಲು ಸಿಬ್ಬಂದಿಗಳ ಜೊತೆಗೋ ಜೋರು ಧ್ವನಿಯಲ್ಲಿ ನಡೆಸುತ್ತಿರುವ ಸಂಭಾಷಣೆಗಳ ಗದ್ದಲದಲ್ಲಿ ನಾವಿಬ್ಬರೂ ನಮ್ಮ ಈ ಇಳಿವಯಸ್ಸಿನಲ್ಲಿ ಇಳಿ ಧ್ವನಿಯಲ್ಲಿ ಎಷ್ಟರ ಮಟ್ಟಿಗೆ ಸಾಧ್ಯವೋ ಅಷ್ಟರ ಮಟ್ಟಿಗೆ ಮಾತಾಡಲು ಯತ್ನಿಸುತ್ತೇವೆ. ಆನಂದ್ ಕೂಡಾ ವಾರದ ಈ ಮುಲಾಖಾತಿನ ದಿನಕ್ಕಾಗಿ, ಬಲವಂತವಾಗಿ ತನ್ನಿಂದ ದೂರಗೊಳಿಸಿರುವ ಹೊರ ಜಗತ್ತಿನ ಸುದ್ದಿಗಳನ್ನು ಹೊತ್ತು ತರುವ ಆಪ್ತ ಮುಖವೊಂದರ ಬರುವಿಗಾಗಿ ಕಾತರದಿಂದ ಕಾಯುತ್ತಾರೆ.
ಎಲ್ಲರಂತೆ ನಾನೂ ಕೂಡ ಸಿನಿಮಾಗಳನ್ನು ನೋಡಿಯೇ ಜೈಲು ಮುಲಾಖಾತ್ ಬಗ್ಗೆ ಒಂದು ಚಿತ್ರಣವನ್ನು ಕಲ್ಪಿಸಿಕೊಂಡಿದ್ದೆ. ಆದರೆ ಸಿನಿಮಾದಲ್ಲಿ ತೋರುವ ಮುಲಾಖಾತುಗಳು ಗಾಜಿನ ಗೋಡೆಯ ಎರಡೂ ಬದಿಯಲ್ಲಿರುವರು ಅನುಭವಿಸುವ ಯಾತನೆ ಮತ್ತು ಅಪಮಾನಗಳನ್ನು ತೋರಿಸುವುದಿಲ್ಲ.
ಆ ಮುಲಾಖಾತುಗಳಲ್ಲಿ ನಾವು ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ಮಾತನಾಡುವಂತಿಲ್ಲ. ಅಥವಾ ಒಬ್ಬರನ್ನೊಬ್ಬರು ತಬ್ಬಿಕೊಂಡು ಸಮಾಧಾನಿಸುವಂತಿಲ್ಲ. ಆದರೆ ಈಗ ನಮ್ಮ ಭೇಟಿಯ ಆ ಅಮೂಲ್ಯ ಹತ್ತು ನಿಮಿಷಗಳ ಅವಧಿಯಲ್ಲಿ ಯಾವ ದುಃಖವನ್ನು ತೋರಿಸಿಕೊಳ್ಳದಂತೆ ನಿಭಾಯಿಸುವಲ್ಲಿ ಇಬ್ಬರೂ ಪರಿಣಿತಿಯನ್ನು ಪಡೆದುಕೊಂಡಿದ್ದೇವೆ.
ಆನಂದ್ ಮತ್ತು ನಾನು 2020ರ ಮಾರ್ಚ್‌ವರೆಗೂ ಗೌರವಯುತವಾದ ಹಾಗೂ ಸುಖಕರವಾದ ಜೀವನವನ್ನೇ ನಡೆಸಿದ್ದೆವು. ಆದರೆ ಮುಂದೊಮ್ಮೆ ಹೀಗೆ ಪರಸ್ಪರ ಭೇಟಿಯಾಗುವ ದಿನಗಳು ಬರುತ್ತವೆಂದು ಕನಸಿನಲ್ಲಿಯೂ ಊಹಿಸಿರಲಿಲ್ಲ.
ನನ್ನ ಮಕ್ಕಳ ಬಗ್ಗೆ ಹೇಳುವುದಾದರೆ ಅವರಿಬ್ಬರೂ ಪ್ರತಿವಾರವೂ ಪತ್ರಗಳನ್ನು ಬರೆಯುತ್ತಾರೆ. ಮತ್ತು ಆನಂದ್ ಪ್ರತಿವಾರವೂ ತಪ್ಪದಂತೆ ಅವರಿಗೆ ಉತ್ತರವನ್ನು ಬರೆಯುತ್ತಾರೆ. 2020ರ ಏಪ್ರಿಲ್ 14 ರಂದು ಮಾಡಿದ ಕೊನೆಯ ಕರೆಯಲ್ಲಿ ಯಾವ ರೀತಿಯಲ್ಲಿ ಅವರಿಗೆ ಶಕ್ತಿ ಮತ್ತು ಸಾಮಾಧಾನಗಳನ್ನು ತುಂಬಿದರೋ ಅದೇ ರೀತಿಯಲ್ಲೇ ಪ್ರತಿಪತ್ರದಲ್ಲೂ ಸಮಾಧಾನ ಮಾಡುತ್ತಾರೆ.
ಆನಂದ್ ಮತ್ತು ನನಗೆ ನಮ್ಮಿಬ್ಬರ ಜೀವನವನ್ನು ಇದ್ದಕ್ಕಿದ್ದ ಹಾಗೆ ಅಮಾನತ್ತುಗೊಳಿಸಲಾಗಿದೆಯೆಂದು ಅನಿಸುತ್ತಿರುತ್ತದೆ. ಕೆಲವೊಮ್ಮೆ ಇವೆಲ್ಲಾ ಕೇವಲ ಕನಸಿರಬೇಕೆಂದೂ, ಎಂದಿನಂತೆ ಬೆಳಗಾಗೆದ್ದು ಅನಂದ್ ಬಾಲ್ಕನಿಯಲ್ಲಿ ನನ್ನ ಜೊತೆ ಟೀ ಕುಡಿಯುತ್ತಾ, ಪತ್ರಿಕೆ ಓದುತ್ತಾ, ಎಂದಿನ ಲಘು ಹರಟೆ ಮತ್ತು ಹುಸಿ ಲೇವಡಿಗಳಿಗೆ ಜೊತೆಯಾಗುತ್ತಾರೆಂದೂ ಎದುರುನೋಡುತ್ತೇನೆ.
ಆದರೆ ಹಾಗಾಗುತ್ತಿಲ್ಲ.
ದಿನಗಳು ಉರುಳುತ್ತಿವೆ. ಕೋರ್ಟಿನಲ್ಲಿ ಪ್ರತಿ ಹಿಯರಿಂಗುಗಳು ಮತ್ತೊಂದು ಹಿಯರಿಂಗುಗಳಿಗೆ ಮುಂದೂಡಲ್ಪಡುತ್ತಿವೆ. ನಮ್ಮ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಅನ್ಯಾಯಗಳನ್ನು ಯಾರೂ ಅರ್ಥಮಾಡಿಕೊಳ್ಳುವುದೇ ಇಲ್ಲವೇನೋ ಎಂದೆನಿಸುತ್ತದೆ. ಪ್ರಾಯಶಃ ಇಂಥದ್ದು ಯಾರಿಗೆ ಬೇಕಾದರೂ ಆಗಬಹುದು ಎಂದು ಅವರು ಅರ್ಥಮಾಡಿಕೊಳ್ಳುತ್ತಿಲ್ಲವೇನೋ?