ನಮ್ಮ ಸರ್ಕಾರದ ಕಾಲದಲ್ಲಿ ಯಾರೋ ಪೊಲೀಸ್ ಅಧಿಕಾರಿಯೊಬ್ಬರು ಆರೋಪ ಹೊರಿಸಿದಾಗ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿಲ್ಲವೇ? ಆಗ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕೆಂದು ಇದೇ ಬಿಜೆಪಿ ನಾಯಕರು ಆಕಾಶ-ಭೂಮಿ ಒಂದು ಮಾಡಿಲ್ಲವೇ? ಆತ್ಮಹತ್ಯೆಗೆ ಮೊದಲು ಮೃತ ಸಂತೋಷ್ ಪಾಟೀಲ್ ಬರೆದಿಟ್ಟ ಪತ್ರದಲ್ಲಿ ತನ್ನ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹಣ ಬಿಡುಗಡೆ ಮಾಡದೆ ಇದ್ದರೆ ಆತ್ಮಹತ್ಯೆಯೊಂದೇ ಆಯ್ಕೆಯಾಗುತ್ತದೆ ಎಂದೂ ಹೇಳಿದ್ದರು. ಸಚಿವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಲು ಇನ್ನು ಯಾವ ಸಾಕ್ಷಿ ಬೇಕು ಎಂದವರು ಪ್ರಶ್ನಿಸಿದ್ದಾರೆ.
ಮೊದಲ ಬಾರಿ ಬಿ.ಎಸ್.ಯಡಿಯೂರಪ್ಪ ನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಪ್ರಕರಣಗಳಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿತ್ತು. ಈಗ ಬೊಮ್ಮಾಯಿ ಅವರು ಕರ್ನಾಟಕವನ್ನು ಜಗತ್ತಿನಲ್ಲಿಯೆ ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದ ಸಚಿವರು ಕೇಳುತ್ತಿರುವ 40% ಕಮಿಷನ್ ರಗಳೆಯಿಂದ ಗುತ್ತಿಗೆದಾರರು ರೋಸಿಹೋಗಿದ್ದಾರೆ. ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೆ ನೀಡಿ ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡಿದ್ದಲ್ಲದೆ, ಬಿಜೆಪಿ ವರಿಷ್ಠರಿಗೆ ಪತ್ರ ಬರೆದಿದ್ದಾರೆ. ಈಶ್ವರಪ್ಪನವರನ್ನು ಬಂಧಿಸಲು ಇನ್ನು ಯಾವ ಸಾಕ್ಷಿ-ಪುರಾವೆಗಳು ಬೇಕು? ರಾಜ್ಯ ಸರ್ಕಾರದ ಲಂಚಾವತಾರಗಳಿಂದ ಜನರ ಗಮನ ಬೇರೆ ಕಡೆ ಸೆಳೆಯಲಿಕ್ಕಾಗಿಯೇ ರಾಜ್ಯ ಬಿಜೆಪಿ ಹಿಜಾಬು, ಹಲಾಲ್, ಮುಸ್ಲಿಮ್ ವ್ಯಾಪಾರಿಗಳ ಮೇಲೆ ಹಲ್ಲೆಯಂತಹ ಕೋಮುವಾದಿ ಪ್ರಕರಣಗಳನ್ನು ಎತ್ತಿಕೊಂಡು ವಿವಾದ ಸೃಷ್ಟಿಸುತ್ತಿದೆ ಎಂದವರು ಕಿಡಿ ಕಾರಿದ್ದಾರೆ.