Advertisement

ಭಗತ್ ಸಿಂಗ್, ಲಂಕೇಶ್ ಮತ್ತಿತರ ಪ್ರಗತಿಪರರ ಪಠ್ಯಗಳನ್ನು ಕೈಬಿಟ್ಟು ಹಲವು ಬಾರಿ ನಿಷೇಧಕ್ಕೊಳಗಾದ ಆರೆಸ್ಸೆಸ್‌ನ ಸಂಸ್ಥಾಪಕ ಹೆಡ್ಗೆವಾರ್ ಪಠ್ಯ ಸೇರಿಸಿದ ರಾಜ್ಯ ಸರ್ಕಾರ!

Advertisement
ರಾಜ್ಯದಲ್ಲಿ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರಿರುವಾಗ ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ: ಸಿದ್ದರಾಮಯ್ಯ

ಭಗತ್ ಸಿಂಗ್ ಅವರನ್ನು ಬಿಜೆಪಿಯು ಇಷ್ಟೊಂದು ದ್ವೇಷಿಸುವುದಕ್ಕೆ ಕಾರಣವೇನು? ಪಠ್ಯಪುಸ್ತಕದಿಂದ ಅವರ ಪಠ್ಯವನ್ನು ತೆಗೆಯುವ ನಿರ್ಧಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನವಾಗಿದೆ. ದೇಶವು ಇದನ್ನು ಸಹಿಸುವುದಿಲ್ಲ: ಅರವಿಂದ ಕೇಜ್ರಿವಾಲ್

ರಾಜ್ಯ ಸರ್ಕಾರ ಹತ್ತನೆಯ ತರಗತಿಯ ಪಠ್ಯಪುಸ್ತಕದಲ್ಲಿ ಇದೀಗ ಸ್ವತಂತ್ರ ಭಾರತದ ಇತಿಹಾಸದಲ್ಲಿ ಗಾಂಧಿ ಹತ್ಯೆ ಮತ್ತಿತ್ತರ ಹಲವು ಕಾರಣಕ್ಕಾಗಿ ಹಲವು ಬಾರಿ ನಿಷೇಧಕ್ಕೊಳಗಾದ ಸಂಸ್ಥೆ ಆರೆಸ್ಸೆಸ್ ನ ಸಂಸ್ಥಾಪಕ ಹೆಡ್ಗೆವಾರ್ (ಕೇಶವ ಬಲರಾಂ ಹೆಡಗೇವಾರ್) ಅವರ ಭಾಷಣವನ್ನು ಸೇರ್ಪಡೆ ಗೊಳಿಸಿರುವುದು ಮತ್ತು ಅಪ್ರತಿಮ ದೇಶಭಕ್ತ ಭಗತ್ ಸಿಂಗ್ ಕುರಿತಾದ ಮಾಹಿತಿ ಹಾಗೂ ಲಂಕೇಶ್ ಮತ್ತಿತರ ಪ್ರಗತಿಪರರ ಪಠ್ಯಗಳನ್ನು ಕೈಬಿಟ್ಟಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಲಪಂಥಿಯವಾದಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಹಾಗೂ ಆ ಶಿಫಾರಸ್ಸಿನಂತೆ ಶಿಕ್ಷಣ ಇಲಾಖೆ 2022-23ರ ಶೈಕ್ಷಣಿಕ ವರ್ಷದಿಂದ ಹತ್ತನೆಯ ತರಗತಿಯ ಕನ್ನಡ ವಿಷಯ (ಪ್ರಥಮ ಭಾಷೆ)ದ ಐದನೆ ಪಾಠವಾಗಿ ಹೆಡ್ಗೆವಾರ್ ಅವರ ಭಾಷಣ (ನಿಜವಾದ ಆದರ್ಶ ಪುರುಷ ಯಾರಾಗಬೇಕು?) ವನ್ನು ಸೇರ್ಪಡೆಗೊಳಿಸಿದೆ. ಜೊತೆಗೆ ಜನಾಂಗೀಯ ಧ್ವೇಷವನ್ನು ಖಂಡಿಸುವ ಪಿ.ಲಂಕೇಶ್ ರವರ ''ಮೃಗ ಮತ್ತು ಸುಂದರಿ'', ಸಾರಾ ಅಬುಬಕ್ಕರ್ ಅವರ ''ಯುದ್ಧ'', ಎ.ಎನ್ ಮೂರ್ತಿರಾಯರ "ವ್ಯಾಘ್ರಗೀತೆ'' ಮುಂತಾದ ವಿದ್ಯಾರ್ಥಿಗಳಲ್ಲಿ ಆದರ್ಶವನ್ನು ಹಾಗೂ ನೈತಿಕತೆಯನ್ನು ತುಂಬಿಸುವ ಹಲವು ಪಠ್ಯಗಳನ್ನು ಕೈ ಬಿಡಲಾಗಿದೆ ಅಲ್ಲದೆ ಭಗತ್ ಸಿಂಗ್ ಕುರಿತಾದ ಪಠ್ಯವನ್ನು ಕೂಡ ಕೈಬಿಡಲಾಗಿದೆ ಎಂಬ ಆತಂಕಕಾರಿ ವಿಚಾರ ಕೂಡ ವರದಿಯಾಗಿದೆ. ಈ ಕುರಿತು ಶೈಕ್ಷಣಿಕ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

ಹಾಗೆಯೇ, ನಾಡಗೀತೆಯನ್ನು ತಿರುಚಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದ ಹಾಗೂ ಸದಾ ಸಂವಿಧಾನದ ಆಶಯಕ್ಕೆ ವಿರುದ್ಧವಾದ ಅಂಶಗಳನ್ನೊಳಗೊಂಡ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದ ರೋಹಿತ್ ಚಕ್ರತೀರ್ಥ ಎಂಬ ಬಲಪಂಥಿಯ ವ್ಯಕ್ತಿಯ ನೇತೃತ್ವದ ಪಠ್ಯಪುಸ್ತಕ ಸಮಿತಿಯು ನಮ್ಮ ವಿಧ್ಯಾರ್ಥಿಗಳಿಗೆ ಅದೆಂತಹ ನೈತಿಕತೆಯನ್ನು ಬೋದಿಸಬಲ್ಲುದು? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಅಸಹ್ಯದ ಹೇರಿಕೆಯನ್ನು ಸಹಿಸಿಕೊಳ್ಳುವುದು ಭವಿಷ್ಯದ ಜನಾಂಗಕ್ಕೆ ನಾವು ಮಾಡುವ ಘೋರ ಅನ್ಯಾಯ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

ಈ ಕುರಿತು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿ
"ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಕೇಳಿ ಬರುತ್ತಿರುವ ಆಕ್ಷೇಪಗಳ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯದ ಮುದ್ರಣವನ್ನು ತಕ್ಷಣ ತಡೆಹಿಡಿದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಮತ್ತು ಚಿಂತಕರ ಜೊತೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕು" ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

"ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳೇ ನಿಜವೆಂದಾದರೆ ಇದು ಅಕ್ಷಮ್ಯ ಅಪರಾಧ. ಈ ಹಿನ್ನೆಲೆಯಲ್ಲಿ ಅನಗತ್ಯ ಊಹಾಪೋಹ ಮತ್ತು ಸಂಘರ್ಷಕ್ಕೆ ಅವಕಾಶ ನೀಡದೆ ಮುಖ್ಯಮಂತ್ರಿಗಳೇ ಖುದ್ದಾಗಿ ಸ್ಪಷ್ಟೀಕರಣ ನೀಡಬೇಕು" ಎಂದವರು ಒತ್ತಾಯಿಸಿದ್ದಾರೆ.

"ರಾಜ್ಯದಲ್ಲಿ ರಾಷ್ಟ್ರ-ಅಂತರರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿರುವ ಸಾಹಿತಿಗಳು, ಚಿಂತಕರು ಮತ್ತು ಶಿಕ್ಷಣ ತಜ್ಞರಿರುವಾಗ ಸಂಘ ಪರಿವಾರಕ್ಕೆ ಸೇರಿದ ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ ಮಾಡಿಸಿರುವುದು ರಾಜ್ಯದ ಜನತೆಗೆ ಮಾಡಿರುವ ಅವಮಾನ. ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದಿಂದಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಲೆ ತಗ್ಗಿಸುವಂತಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಯಂತಹ ಗಂಭೀರ ಕಾರ್ಯವನ್ನು ನಾಡಿನ ಹಿರಿಯ ಲೇಖಕರು, ಸಮಾಜ ಸುಧಾರಕರನ್ನು ಅವಹೇಳನ ಮಾಡುತ್ತಾ ಬಂದಿರುವ ಅನರ್ಹ, ಪೂರ್ವಗ್ರಹ ಪೀಡಿತ ವ್ಯಕ್ತಿಯಿಂದ ಮಾಡಿಸಿರುವುದೇ ನಾಡು-ನುಡಿಗೆ ಬಗೆದಿರುವ ದ್ರೋಹ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನೀಡಿರುವ ಕರಡನ್ನು ತಕ್ಷಣ ವಾಪಸು ಪಡೆದು ಸಮಿತಿಯನ್ನು ಬರ್ಖಾಸ್ತುಗೊಳಿಸಬೇಕು ಮತ್ತು ನಾಡಿನ ಚಿಂತಕರು ಮತ್ತು ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.
ಧರ್ಮವನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿ ಅದಕ್ಕೆ ಇರುವ ಪಾವಿತ್ರ್ಯವನ್ನು ಹಾಳುಗೆಡಹಿದ ಬಿಜೆಪಿ ಈಗ ಎಳೆಯ ಮಕ್ಕಳ ಬುದ್ದಿಕೆಡಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನು ರಾಜಕೀಯದ ಅಖಾಡ ಮಾಡಲು ಹೊರಟಿರುವುದು ಖಂಡನೀಯ. ನಾಡಿನ ಪ್ರಜ್ಞಾವಂತರೆಲ್ಲರೂ ಇದರ ವಿರುದ್ಧ ದನಿ ಎತ್ತಬೇಕಾಗಿದೆ" ಎಂದವರು ಕರೆನೀಡಿದ್ದಾರೆ.

"ರಾಜಕೀಯ ಪಕ್ಷಗಳಿಗೆ ತಮಗೆ ಸರಿಕಂಡ ವ್ಯಕ್ತಿಗಳನ್ನು ಆರಾಧಿಸುವ, ಅವರ ಚಿಂತನೆಗಳನ್ನು ಪ್ರಚಾರಮಾಡುವ ಅಧಿಕಾರವಿದೆ, ಆದರೆ ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥ ರಾಜಕೀಯದ ರಾಡಿಯಿಂದ ಮಲಿನಗೊಳಿಸ ಬಾರದು. ಬುದ್ದ, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರುಗಳು ಜಾತಿ,ಧರ್ಮ, ಪಕ್ಷ, ಪಂಥಗಳನ್ನು ಮೀರಿದ ಚೇತನಗಳು. ಇವರನ್ನು ಸ್ವಾರ್ಥ ರಾಜಕೀಯಕ್ಕೆ ದುರ್ಬಳಕೆ ಮಾಡಬಾರದು. ರಾಜಕೀಯ ದುರುದ್ದೇಶದಿಂದ ಮಾಡುವ ಈ ರೀತಿಯ ಅವಮಾನವನ್ನು ಸಹಿಸಲಾಗದು" ಎಂದವರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

"ಹೆಡಗೆವಾರ್, ಗೋಲ್ವಾಲ್ಕರ್, ಗೋಡ್ಸೆ ಮೊದಲಾದವರನ್ನು ತಮ್ಮ ಪಕ್ಷದ ವೇದಿಕೆಯಲ್ಲಿ ಮೆರೆದಾಡಿಸಲಿ, ಇವರ ಚಿತ್ರಗಳನ್ನೇ ಪ್ರದರ್ಶಿಸಿ ಚುನಾವಣೆಗಳಲ್ಲಿ ಮತಕೇಳಲಿ, ಪ್ರಜ್ಞಾವಂತ ಜನರು ತಪ್ಪು-ಸರಿಗಳನ್ನು ನಿರ್ಧರಿಸುತ್ತಾರೆ. ಆದರೆ ನಿಶ್ಕಲ್ಮಶವಾದ ಶಿಕ್ಷಣ ಕ್ಷೇತ್ರವನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಲಿಕೊಡಬೇಡಿ" ಎಂದವರು ಕಿಡಿ ಕಾರಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್ ಕುರಿತ ಪಾಠಗಳನ್ನು ಕರ್ನಾಟಕದ ಶಾಲಾ ಪಠ್ಯಗಳಿಂದ ತೆಗೆದು ಹಾಕಲಾಗಿದೆ ಎಂಬ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರದ ನಿರ್ಧಾರ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಭಗತ್ ಸಿಂಗ್ ಅವರನ್ನು ಬಿಜೆಪಿಯು ಇಷ್ಟೊಂದು ದ್ವೇಷಿಸುವುದಕ್ಕೆ ಕಾರಣವೇನು? ಪಠ್ಯಪುಸ್ತಕದಿಂದ ಅವರ ಪಠ್ಯವನ್ನು ತೆಗೆಯುವ ನಿರ್ಧಾರವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನವಾಗಿದೆ. ದೇಶವು ಇದನ್ನು ಸಹಿಸುವುದಿಲ್ಲ. ಬಿಜೆಪಿ ಸರಕಾರವು ತನ್ನ ನಿರ್ಧಾರವನ್ನು ಹಿಂಪಡೆಯಲೇಬೇಕು" ಎಂದು ಆಗ್ರಹಿಸಿದ್ದಾರೆ.

Advertisement
Advertisement
Recent Posts
Advertisement