ಕಾಮಗಾರಿಗಳಲ್ಲಿ 40 ಪರ್ಸೆಂಟ್ ಕಮಿಷನ್, ಪಿಎಸ್ಐ ನೇಮಕಾತಿಯಲ್ಲಿ ಕೋಟ್ಯಾಂತರ ರೂ. ಲಂಚವೇ ಮೊದಲಾದ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದು ಆಳುವ ಸರಕಾರ ಇಕ್ಕಟ್ಟಿಗೆ ಸಿಲುಕಿರುವ ಈ ಹೊತ್ತಲ್ಲಿ ಇದೀಗ ಮತ್ತೆ 1252 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿಯೂ ಪ್ರಶ್ನಾಪತ್ರಿಕೆ ಸೋರಿಕೆ, ಉತ್ತರ ಪತ್ರಿಕೆ ತಿದ್ದುಪಡಿಯ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಕೋಟಿ ಕೋಟಿ ರೂ. ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಸಂಬಂದ ಪಟ್ಟ ಇಲಾಖೆಯ ರಿಜಿಸ್ಟ್ರಾರ್ ಹಾಗೂ ಅತಿಥಿ ಉಪಾನ್ಯಾಸಕಿ ಒಬ್ಬಳನ್ನು ಬಂಧಿಸುವ ನಾಟಕ ಮಾಡಿ ಕೈ ತೊಳೆದುಕೊಳ್ಳಲು ನೋಡುತ್ತಿದೆ. ರಾಜ್ಯದಲ್ಲಿ 430 ಕ್ಕೂ ಹೆಚ್ಚು ಪ್ರಾಂಶುಪಾಲ ಹುದ್ದೆಗಳು ಖಾಲಿ ಇದ್ದು 310 ಮಂದಿ ಪ್ರಾಂಶುಪಾಲರ ರೆಗ್ಯುಲರ್ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ ಎನ್ನಲಾಗಿದೆ. ಈ ಎಲ್ಲ ಹಗರಣಗಳು ಉನ್ನತ ಶಿಕ್ಷಣ ಇಲಾಖೆಯ ಮೂಗಿನ ನೇರಕ್ಕೆ ನಡೆಯುತ್ತಿವೆ. ಈ ಬಗ್ಗೆ ಕಾಲೇಜು ಶಿಕ್ಷಣ ಆಯುಕ್ತರೂ ಸೇರಿ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ ಇಲಾಖೆಯ ವಿರುದ್ದ ಉನ್ನತ ಮಟ್ಟದ ತನಿಕೆ ನಡೆಯ ಬೇಕು. ಆದರೆ ಸರಕಾರ ಈ ಬಗ್ಗೆ ಹಿಂದೇಟು ಹಾಕುತ್ತಿರುವುದರ ಔಚಿತ್ಯವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮುಖ್ಯಮಂತ್ರಿ ಗಾಧಿಯ ಬೆಲೆಯನ್ನು 2500 ಕೋಟಿ ರೂ. ಗೆ ನಿಗದಿ ಪಡಿಸಿ ಲೇವಡಿ ಮಾಡುವ ನಾಯಕರನ್ನು ಹೊಂದಿರುವ ಈ ಪಕ್ಷ ರಾಜಕೀಯದ ಋಜುಮಾರ್ಗವನ್ನು ಮರೆತಿದೆ. ಆ ನೆಲೆಯಲ್ಲಿ ಈ ಪಕ್ಷ ಆಡಳಿತ ಯೋಗ್ಯವಲ್ಲ. ದೇಶದ ಸಾಂವಿಧಾನಿಕ ಮೌಲ್ಯ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ ರಾಜಿನಾಮೆ ಕೊಟ್ಟು ಹೊಸ ಸರಕಾರ ರಚನೆಗೆ ಅವಕಾಶ ಮಾಡಿ ಕೊಡಬೇಕು ಎಂದು ಜಿಲ್ಲಾ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಹೇಳಿದ್ದಾರೆ.