ಅವರು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಅಧಿಕಾರಿಗಳು ಸಮನ್ಸ್ ಜಾರಿಮಾಡಿರುವ ಕುರಿತು ಸೋಮವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
"ಬ್ರಿಟಿಷರ ಗುಂಡೇಟು, ಲಾಠಿ ಏಟಿಗೆ ಬೆದರದೆ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಪಕ್ಷ ನಮ್ಮದು. ಕಾಂಗ್ರೆಸ್ ಎಂದರೆ ಅದೊಂದು ಚಳವಳಿ.
ಹಿಂದೆ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿತ್ತು, ಇಂದು ನ್ಯಾಯಕ್ಕಾಗಿ ಹೋರಾಡಲಿದೆ.
ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಷನಲ್ ಹೆರಾಲ್ಡ್ ಎಂಬ ಪತ್ರಿಕೆಯ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ತನಿಖೆಯ ನೆಪದಲ್ಲಿ ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಬೆದರಿಸಲು ವ್ಯರ್ಥ ಪ್ರಯತ್ನ ನಡೆಸಲಾಗುತ್ತಿದೆ.
ಬಿಜೆಪಿಯವರು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಧ್ವನಿಯನ್ನು ಅಡಗಿಸಲು ಹೊರಟರೆ, ನಮ್ಮೊಂದಿಗೆ ಈ ದೇಶದ ಜನತೆ, ಸಂವಿಧಾನ, ನ್ಯಾಯಾಂಗ ವ್ಯವಸ್ಥೆ ಇದೆ.
ಬಿಜೆಪಿಯ ದಬ್ಬಾಳಿಕೆಗೆ ಮಣಿದು, ಹೋರಾಟಕ್ಕೆ ಬೆನ್ನು ತೋರುವವರು ನಾವಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದಿಗೂ ಪಾಲ್ಗೊಳ್ಳದ, ತ್ಯಾಗ, ಬಲಿದಾನದ ಅರ್ಥವೇ ಗೊತ್ತಿರದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ದೇಶಪ್ರೇಮವನ್ನು ಪ್ರಶ್ನಿಸುವ ಯಾವ ನೈತಿಕತೆ ಇದೆ?
1942 ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್.ಎಸ್.ಎಸ್ ನ ಗೋಲ್ವಾಲ್ಕರ್ ಅವರು ಬ್ರಿಟೀಷರ ಜೊತೆ ಸೇರಿ ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನ ಮರೆತಿಲ್ಲ" ಎಂದವರು ಹೇಳಿದರು.
"ನರೇಂದ್ರ ಮೋದಿ ಅವರು ಹೇಳುವ ನ ಖಾವೂಂಗ, ನಾ ಖಾನೇದೂಂಗ ನಿಜವೇ ಆಗಿದ್ದರೆ 40% ಕಮಿಷನ್ ಲೂಟಿ ಮಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಸಾಲು ಸಾಲು ಹಗರಣಗಳ ಕುರಿತು ಇ.ಡಿ, ಐ.ಟಿ ತನಿಖೆ ನಡೆಸಲಿ. ನಮ್ಮ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ನ ಅಸಂಖ್ಯ ಕಾರ್ಯಕರ್ತರು, ಕೋಟ್ಯಂತರ ಭಾರತೀಯರು ಇದ್ದಾರೆ.
ನಮ್ಮೆಲ್ಲರ ಧ್ವನಿಯನ್ನು ಹತ್ತಿಕ್ಕಲು ನಿಮ್ಮಿಂದ ಸಾಧ್ಯವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ಸದಾಕಾಲ ಬಿಜೆಪಿಯ ರಾಜಕೀಯ ವಿರೋಧಿಗಳನ್ನೇ ಗುರಿಯಾಗಿರಿಸಿಕೊಂಡು ದಾಳಿ ಮಾಡುವ ಇ.ಡಿ ಹಾಗೂ ಐ.ಟಿ ಇಲಾಖೆಗಳನ್ನು ಬಿಜೆಪಿ ಪಕ್ಷದ ಜೊತೆಗೆ ವಿಲೀನ ಮಾಡಿಬಿಡಿ. ನೀವು ಅಧಿಕಾರಕ್ಕೆ ಬಂದಮೇಲೆ ಇವು ಸ್ವಾಯತ್ತ ಸಂಸ್ಥೆಗಳಂತೆ ಒಮ್ಮೆಯಾದರೂ ಕೆಲಸ ಮಾಡಿವೆಯೇ ಮಿಸ್ಟರ್ ನರೇಂದ್ರ ಮೋದಿ?" ಎಂದವರು ಕೇಳಿದ್ದಾರೆ.