ಇದು ಎಂಥಾ ಸೋಗಲಾಡಿತನವೆಂದರೆ ಈ ಹೇಳಿಕೆಯಂತೆ ಯಾವುದೇ ಧರ್ಮವನ್ನು ಅಥವಾ ಪಂಥವನ್ನು ಹೀಯಾಳಿಸುವ ಅಥವಾ ಅಪಮಾನಿಸುವ ಯಾವುದೇ ಸಿದ್ಧಾಂತವನ್ನು ಕಟುವಾಗಿ ಖಂಡಿಸುತ್ತದೆ. ಬಿಜೆಪಿ ಪಕ್ಷವು ಅಂಥಾ ಸಿದ್ಧಾಂತಗಳನ್ನಾಗಲೀ ಅಥವ ವ್ಯಕ್ತಿಗಳನ್ನಾಗಲೀ ಪ್ರೋತ್ಸಾಹಿಸುವುದಿಲ್ಲ ಎಂಬುದನ್ನು ಜಾರಿ ಮಾಡಿದರೆ ಪ್ರಧಾನಿ ಮೋದಿ, ಶಾ, ಅಧ್ಯಕ್ಷ ನಡ್ಡಾ ಒಳಗೊಂಡು ಇಡಿ ಬಿಜೆಪಿ ಪಕ್ಷವನ್ನೇ ಬರ್ಖಾಸ್ತು ಮಾಡಬೇಕಾಗುತ್ತದೆ ಮತ್ತು ಆರೆಸ್ಸಸ್ಸನ್ನು ದೇಶಬಿಟ್ಟು ಓಡಿಸಬೇಕಾಗುತ್ತದೆ.
ಹೆಡಗೇವಾರ್ ಮತ್ತು ಸಾವರ್ಕರ್ ಗಳನ್ನು ಬಿಜೆಪಿಯೇ ಹೊರಗಟ್ಟಬೇಕಾಗುತ್ತದೆ.!
ಏಕೆಂದರೆ ಈ ದೇಶದ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರವಾದಿ ಎಂಬ ಸುಳ್ಳು ಇತಿಹಾಸ ಸೃಷ್ಟಿಸುತ್ತಾ ಬಿಜೆಪಿ ಸ್ಥಾಪಿಸ ಬಯಸಿರುವ ಅವರ ನಾಯಕ ಸಾವರ್ಕರ್ ಹಿಂದುಯೇತರ ಧರ್ಮಗಳ ಬಗ್ಗೆ ಹೇಳಿರುವುದೇನು?
೧೯೨೫ರಲ್ಲಿ ಸಾವರ್ಕರ್ ಅವರು ಬರೆದ ಹಿಂದೂತ್ವ ಎಂದರೇನು ಎನ್ನುವುದು ಮೋದಿಯ ಬಿಜೆಪಿಗೆ ಮತ್ತು ಆರೆಸ್ಸೆಸ್ಸಿಗೆ ಬೈಬಲ್ ಸ್ವರೂಪದ್ದು. ಅದರಲ್ಲಿ ಅವರು:
" ಈ ಭರತವರ್ಷವನ್ನು ಪಿತೃಭೂಮಿ ಮತ್ತು ಪುಣ್ಯಭೂಮಿ ಎಂದು ಭಾವಿಸುವವರು ಮಾತ್ರ ಈ ದೇಶದ ನಿಜವಾದ ವಾರಸುದಾರರು. ಮುಸ್ಲಿಮರು ಮತ್ತು ಕ್ರಿಷ್ಚಿಯನ್ನರು ಈ ದೇಶದಲ್ಲಿ ಹುಟ್ಟಿದರೂ ಅವರ ಪುಣ್ಯಭೂಮಿ ಈ ದೇಶದ ಹೊರಗಡೆ ಇದೆ. ಆದ್ದರಿಂದ ಅವರು ಈ ದೇಶದ ನಿಜವಾದ ನಾಗರಿಕರು ಸಾಧ್ಯವಿಲ್ಲ. ಆದ್ದರಿಂದ ಹಿಂದೂಗಳು ಮಾತ್ರ ಈ ರಾಷ್ಟ್ರದ ಅಡಿಗಲ್ಲಾಗಲು ಸಾಧ್ಯ" ಎಂದು ಘೋಷಿಸಿದ್ದವರು.
ಈ ದೇಶದಲ್ಲಿ ಮುಸ್ಲಿಮರು ಎರಡನೇ ದರ್ಜೆ ಪ್ರಜೆಗಳಾಗಿ ಮಾತ್ರ ಬದುಕಬೇಕು ಅಥವಾ ಹಿಂದೂಗಳಾಗಿ ಬದಲಾಗಬೇಕು ಎಂದು ಕರೆಕೊಟ್ಟಿದ್ದರು.
ಅಷ್ಟು ಮಾತ್ರವಲ್ಲ . ತಮ್ಮ Six Glorious Epochs Of Indian History ಎಂಬ ಪುಸ್ತಕದಲ್ಲಿ ಬೌದ್ಧ ಧರ್ಮವು ದೇಶದ್ರೋಹೀ ಧರ್ಮ ವೆಂದು ಹತ್ತಾರು ಸಾರಿ ಉಲ್ಲೇಖಿಸುತ್ತಾರೆ. ಆದ್ದರಿಂದ ಸಾವರ್ಕರ್ ಅವರು ಹಿಂದುಯೇತರ ಧರ್ಮಗಳನ್ನು ಅಪಮಾನಿಸುವ ನಾಯಕರಾಗಿರುವುದರಿಂದ ಅವರು ಬಿಜೆಪಿಯ ಧ್ಯೇಯಗಳಿಗೆ ವಿರುದ್ಧವಾದವರು ಎಂದು ಅವರನ್ನು ಖಂಡಿಸಬೇಕಲ್ಲವೇ? ಅದರ ಬದಲಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ಸಾವರ್ಕರ್ ಅವರನ್ನು ಇಡೀ ಭಾರತವು ಆರಾಧಿಸಬೇಕೆಂದು ಕರೆಕೊಟ್ಟಿರುವುದೇಕೆ?
ಹಾಗೆಯೇ ಬಿಜೆಪಿಯ ಗುರುಮಠವಾದ ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಅವರು ೧೯೨೦ರಲ್ಲಿ ಅಸಹಕಾರ ಚಳವಳಿಯ ನಂತರ ಸ್ವಾತಂತ್ರ್ಯ ಚಳವಳಿಯಿಂದ ಮತ್ತು ಕಾಂಗ್ರೆಸ್ಸಿನಿಂದ ಹಿಂದೆ ಸರಿದದ್ದಕ್ಕೇ ಕಾರಣವೇ ಗಾಂಧಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಂ ಐಕ್ಯತೆಗೆ ಶ್ರಮಿಸುತ್ತಿದ್ದದ್ದು ಎಂದು ಅವರ ಜೀವನ ಚರಿತ್ರೆಕಾರರಾದ ಆರೆಸ್ಸಿಸ್ಸಿನ ಹಿರಿಯ ನಾಯಕ ಹೂ.ವೆ. ಶೇಶಾದ್ರಿ ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ:
" ಅಸಹಕಾರ ಚಳವಳಿಯು ಉಡಿಸಿದ ಹಾಲನ್ನು ಕುಡಿದು ಕೊಬ್ಬಿದ ಯವನ ಸರ್ಪಗಳು ಅರ್ಥಾತ್ ಮುಸ್ಲಿಮರು ಹೆಡೆಯೆತ್ತಿ ಭುಸುಗುಡುತ್ತಿದ್ದಾರೆ"
ಎಂಬುದು ಆಗ ಮುಸ್ಲಿಮರ ಬಗ್ಗೆ ಹೆಡಗೇವಾರ ಅಭಿಪ್ರಾಯವಾಗಿತ್ತು. ಈ ದೇಶದ ಸ್ವಾತಂತ್ರ್ಯವೆಂದರೆ ಬ್ರಿಟಿಷರನ್ನು ಭಾರತ ಬಿಟ್ಟು ಓಡಿಸುವುದಲ್ಲ ಬದಲಿಗೆ ಇದನ್ನು ಹಿಂದೂ ರಾಷ್ಟ್ರ, ಹಿಂದೂಗಳ ರಾಷ್ಟ್ರವನಾಗಿ ಮಾತ್ರ ಮಾಡುವುದು ಆರೆಸ್ಸೆಸ್ ನ ಗುರಿ ಎಂದು ಅವರು ೧೯೨೫ರಲ್ಲೇ ಸ್ಪಷ್ಟವಾಗಿ ಘೋಷಿಸಿದ್ದರು. ಅದನ್ನು ಸಾಧಿಸಲೆಂದೇ ಆರೆಸ್ಸೆಸ್ ಮೊದಲು ೧೯೫೦ರಲ್ಲಿ ಭಾರತೀಯ ಜನಸಂಘ (ಬಿಜೆಎಸ್) ಮತ್ತು ಆ ನಂತರ ೧೯೮೦ರಲ್ಲಿ (ಬಿಜೆಪಿ) ಯನ್ನು ಸ್ಥಾಪಿಸಿತು.
ಬಿಜೆಪಿ ಕಾರ್ಯದರ್ಶಿಯ ಪ್ರಕಾರ ಎಲ್ಲಾ ಧರ್ಮಗಳನ್ನು ಸಮಾನವಾಗಿ ನೋಡುವುದಾದರೆ ಬಿಜೆಪಿಯು ಮೊದಲು ಆರೆಸ್ಸಸ್ಸನ್ನು ವಿಸರ್ಜಿಸಬೇಕಲ್ಲವೇ?
ಆರೆಸ್ಸೆಸ್ ನ ಎರಡನೇ ಸರಸಂಘಚಾಲಕ ಗೋಳ್ವಾಲ್ಕರ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ " ವಿ ಆರ್ ಅವರ್ ನೇಶನ್ ಹುಡ್ ದಿಫ಼ೈನ್ಡ್" ಪುಸ್ತಕದಲ್ಲಿ;
" ಈ ದೇಶದಲ್ಲಿ, ಹಿಂದೂಸ್ಥಾನದಲ್ಲಿ, ಹಿಂದೂ ಜನಾಂಗವು ಮಾತ್ರ ತನ್ನ ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಹಿಂದೂ ಭಾಷೆ ಗಳ ಮೂಲಕ ರಾಷ್ಟ್ರ ಎಂಬ ಪರಿಕಲ್ಪನೆಯನ್ನು ಪರಿಪೂರ್ಣಗೊಳಿಸುತ್ತದೆ. ಅದರ ಅರ್ಥ ಇಷ್ಟೆ. ಹಿಂದೂಸ್ಥಾನವು ಹಿಂದೂ ರಾಷ್ಟ್ರವಾಗಿ ಮತ್ತು ಹಿಂದೂರಾಷ್ಯ್ರವಾಗಿ ಮಾತ್ರ ಅಸ್ಥಿತ್ವದಲ್ಲಿ ಇರಬೇಕು. ಇತರರು ಹಿಂದೂ ರಾಷ್ಟ್ರಜೀವನದಿಂದ ಸಹಜವಾಗಿಯೇ ಹೊರಗುಳಿಯುತ್ತಾರೆ."
ಬಿಜೆಪಿ ಕಾರ್ಯದರ್ಶಿಯ ಹೇಳಿಕೆ ಪ್ರಾಮಾಣಿಕವೇ ಆಗಿದ್ದರೆ ಬಿಜೆಪಿ ಗೋಳ್ವಾಲ್ಕರ್ ಅವರ ಚಿಂತನೆಯನ್ನು ಕಟುವಾಗಿ ಖಂಡಿಸಬೇಕೇ ವಿನಹ ಅದನ್ನು ಚಾಚೂ ತಪ್ಪದಂತೆ ಪಾಲಿಸಬಾರದಲ್ಲವೇ?
ಆರೆಸ್ಸೆಸ್ ಕೇಂದ್ರದ ಅಂಚು-ಸಂಚುಗಳು
ಈ ಸಾವರ್ಕರ್, ಹೆಡಗೇವಾರ್, ಗೋಳ್ವಾಲ್ಕರ್ ಎಂಬ ಬ್ರಾಹ್ಮಣಶಾಹಿ ತಾಯಿಬೇರಿನ ರೆಂಬೆಕೊಂಬೆಗಳೇ ಆದ ಮೋದಿ, ಶಾ, ಆದಿತ್ಯನಾಥ್, ಸೂರ್ಯ ತೇಜಸ್ವಿ, ಅನಂತ ಕುಮಾರ್ ಹೆಗಡೆ, ಇದೀಗ ಬೊಮ್ಮಾಯಿಯಂಥವರು ಈ ದೇಶ ಹಿಂದೂ ರಾಷ್ಟ್ರ ಎಂದು ಪ್ರತಿಪಾದಿಸಲು ಮತ್ತು ಅದನ್ನು ಜಾರಿಗೆ ತರಲು ಹಲವಾರು ಕಾಯಿದೆ- ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.
ಉದಾಹರಣೆಗೆ, ಬಿಜೆಪಿ ಪಕ್ಷದಿಂದ ಆರು ಬಾರಿ ಸಂಸದನಾಗಿ ಆಯ್ಕೆಯಾಗಿರುವ ಹಾಗೂ ಮೋದಿಯವರ ಕಳೆದ ಮಂತ್ರಿ ಮಂಡಲದಲ್ಲಿ ಮಂತ್ರಿಯೂ ಆಗಿದ್ದ ಅರ್ಥಾತ್ ಬಿಜೆಪಿಯ ಅಂಚಿನ ನಾಯಕನಲ್ಲ, ಪ್ರಧಾನ ನಾಯಕನೇ ಆಗಿರುವ ಅನಂತ ಕುಮಾರ್ ಹೆಗಡೆ ೨೦೧೭ರಲ್ಲಿ ಸ್ಪಷ್ಟವಾಗಿ ಹೀಗೆ ಘೋಷಿಸಿದ್ದರು:
" ನಿಮಗೆ ಮಾಧ್ಯಮದವರಿಗೆ ಅವಕಾಶವಿದ್ದರೆ ಈಗ ನಾನು ಹೇಳುತ್ತಿರುವುದನ್ನು ಹೀಗೆಯೇ ಸ್ಪಷ್ಟವಾಗಿ ಬರೆಯಿರಿ ಮತ್ತು ತೋರಿಸಿರಿ. ಇಸ್ಲಾಮ್ ಎಂಬುದು ವಿಶ್ವಶಾಂತಿಯನ್ನು ಧ್ವಂಸಗೊಳಿಸುವ ಬಾಂಬ್ ಇದ್ದಂತೆ. ಜಗತ್ತಿನಲ್ಲಿ ಇಸ್ಲಾಮ್ ಇರುವವರೆಗೆ ಶಾಂತಿ ನೆಲೆಸಲು ಸಾಧ್ಯವಿಲ್ಲ"
ಬಿಜೆಪಿ ಪಕ್ಷದ ಅಂಚಿನವರು ಎಂದು ಹೇಳಲಾಗುವ ನೂಪುರ್ ಶರ್ಮಾ ಹಾಗೂ ಜಿಂದಾಲ್ ಗಳ ಹೇಳಿಕೆಗಿಂತ ಈ ಬಿಜೆಪಿಯ ಸಂಸದ ಹಾಗೂ ಮಾಜಿ ಮಂತ್ರಿಯ ಹೇಳಿಕೆ ನೂರು ಪಟ್ಟು ಪರಧರ್ಮದ್ವೇಷದಿಂದ ಕೋಡಿದೆಯಲ್ಲವೇ? ಇಂಥಾ ಅಸಹಿಷ್ಣು ವ್ಯಕ್ತಿಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂಬ ಬಿಜೆಪಿ ಕಾರ್ಯದರ್ಶಿಗಳ ಹೇಳಿಕೆ ನಿಜಾಯತಿಯಿಂದ ಕೂಡಿದ್ದರೇ…
ಅನಂತ್ ಕುಮಾರ್ ಹೆಗಡೆಯನ್ನು ಬಿಜೆಪಿಯಿಂದ ಉಚ್ಚಾಟಿಸುವರೇ ?
ಹಾಗೆಯೇ ಬಿಜೆಪಿಯ ಮತ್ತೊಬ್ಬ ಪ್ರಧಾನ ಯುವ ನಾಯಕ ಹಾಗೂ ಈಗ ಬಿಜೆಪಿಯ ಯುವಮೋರ್ಚಾದ ಅಧಿಕೃತ ರಾಷ್ಟ್ರೀಯ ನಾಯಕನೂ ಆಗಿರುವ ಸಂಸದ ಸೂರ್ಯ ತೇಜಸ್ವಿ ಕೆಲವು ತಿಂಗಳ ಕೆಳಗೆ ಉಡುಪಿಯ ಕೃಷ್ಣ ಮಠದಲ್ಲಿ :
" ಕ್ರಿಶ್ಚಿಯನ್ ಮತ್ತು ಇಸ್ಲಾಂ ಗಳು ಕೇವಲ ಮತ್ತೊಂದು ಮತ ಧರ್ಮಗಳಲ್ಲ. ಅವು ರಾಜಕೀಯ ಸಾಮ್ರಾಜ್ಯಶಾಹಿ ಸಿದ್ಧಾಂತಗಳು. ಮತ್ತು ಹಿಂದೂಗಳು ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು"
ಎಂದು ಭಾಷಣ ಕಕ್ಕಿದ್ದರು. ಕಳೆದ ಐದಾರು ವರ್ಷಗಳಲ್ಲಿ ಅವರು ನಾಯಕರಾಗಿ ಬೆಳೆದದ್ದೇ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ದ್ವೇಷವನ್ನು ಕಕ್ಕುತ್ತಾ..
ಇನ್ನು ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಆದಿತ್ಯನಾಥ್ ಮತ್ತು ಅವರ ಪಟಾಲಂ ಎಂಥಾ ಮುಸ್ಲಿಮ್ ದ್ವೇಷ ಹಾಗೂ ಇಸ್ಲಾಮನ್ನು ಹೀಯಾಳಿಸುವ ಭಾಷಣವನ್ನು ಮಾಡಿದ್ದರು ಎಂಬುದನ್ನು ಹಲವಾರು ಪತ್ರಿಕೆಗಳು ಸಾಧಾರವಾಗಿ ದಾಖಲಿಸಿವೆ. ಬಿಜೆಪಿಯ ಅರುಣ ಕುಮಾರ್ ಅವರ ಹೇಳಿಕೆ ಪ್ರಾಮಾಣಿಕವೇ ಆಗಿದ್ದಲ್ಲಿ ಇಡಿ ಉತ್ತರ ಪ್ರದೇಶ ಸರ್ಕಾರವನ್ನು ಬಿಜೆಪಿ ಬರ್ಖಾಸ್ತು ಮಾಡಬೇಕು.
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಗಳು ಚುನಾವಣೆಯ ಸಂದರ್ಭದಲ್ಲಿ ಮಾಡಿದ ಮುಸ್ಲಿಂ ದ್ವೇಷ ಭಾಷಣಗಳು ಮತ್ತು ಅಧಿಕಾರದಲ್ಲಿ ಬಂದ ಮೇಲೆ ತೆಗೆದುಕೊಂಡಿರುವ ಕಾಶ್ಮೀರ, ನಾಗರಿಕತ್ವ, ಲಿಂಚಿಂಗ್, ಮತಾಂತರ ನಿಶೇಧ, ಗೋಹತ್ಯಾ ನಿಶೇಧ, ಹಿಜಾಬ್ ನಿಶೇಧ, ಮಸೀದ್ ನಾಶ, ಆರ್ಥಿಕ ದಿಗ್ಭಂಧನ ಇನ್ನಿತ್ಯಾದಿ ನೀತಿಗಳು ಮತ್ತು ಯೋಜನೆಗಳು, ಮುಸ್ಲಿಮರ ನರಮೇಧ ಮಾಡ ಬೇಕೆಂಬ ಸಾವರ್ಕರ್ ಕರೆಯನ್ನು ನೆನಪಿಸುವ ನರಸಿಂಗಾನಂದನ ನರಮೇಧ ಕರೆಗೆ ಹಾಜರಿದ್ದು ಪರೋಕ್ಷ ಬೆಂಬಲ - ಕಾನೂನು ರಕ್ಷೆ ನೀಡುವ ಬಿಜೆಪಿ ಸರ್ಕಾರಗಳು.. ಇವೆಲ್ಲವೂ ಸಾವರ್ಕರ್ -ಹೆಡಗೇವಾರ್ ಕಂಡ ಪರಧರ್ಮ ದ್ವೇಷೀ ಬ್ರಾಹ್ಮಣಶಾಹಿ ಹಿಂದೂ ರಾಷ್ಟ್ರ ನಿರ್ಮಾಣದ ಹೆಜ್ಜೆಗಳೇ ಆಗಿವೆ.
ಬಿಜೆಪಿ ಕೇಂದ್ರದಲ್ಲಿ ಸರ್ಕಾರದಲ್ಲಿದೆ. ಹಾಗೂ ೧೭ ರಾಜ್ಯಗಳಲ್ಲಿ ಮಿತ್ರಪಕ್ಷಗಳ ಜೊತೆಗೆ ಅಥವಾ ಏಕಾಂಗಿಯಾಗಿ ಬಹುಮತವನ್ನು ಪಡೆದು ಸರ್ಕಾರ ನಡೆಸುತ್ತಿದೆ. ಆದರೆ ಎಲ್ಲಾ ಧರ್ಮಗಳ ಬಗ್ಗೆ ಸಮಭಾವ ಎನ್ನುವ ಧ್ಯೇಯ ನಮ್ಮದು ಎಂದು ಬರೆದುಕೊಳ್ಳುವ ಈ ಬಿಜೆಪಿ ಪಕ್ಷವನ್ನು ಪ್ರತಿನಿಧಿಸುವ ಒಬ್ಬ ಮುಸ್ಲಿಮ್ ಸಂಸದನಾಗಲೀ ಅಥವಾ ಶಾಸಕನಾಗಲೀ ಜೂನ್ ನಂತರ ಇರುವುದಿಲ್ಲ.
ಮುಸ್ಲಿಂ ಮುಕ್ತ ಬಿಜೆಪಿ ಅದರ ಮುಂದಿನ ನಡೆಯನ್ನು ಸೂಚಿಸುತ್ತಿಲ್ಲವೇ?
ಬಿಜೆಪಿಯ ಈ ನಾಯಕರು ಮಾಡುತ್ತಿರುವುದನ್ನೇ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಎತ್ತಿ ಹಿಡಿದು ಹೇಳಿಕೆ ನೀಡಿದ್ದರು. ಅಷ್ಟೆ.
ಹೀಗಾಗಿ ಬಿಜೆಪಿ ಪಕ್ಷವು ನಿಜಕ್ಕೂ ಪರಧರ್ಮ ದ್ವೇಷವನ್ನು ಬಿತ್ತುವ ಸಿದ್ಧಾಂತ ಮತ್ತು ವ್ಯಕ್ತಿಗಳನ್ನು ಪ್ರೋತ್ಸಾಹಿಸಬಾರದೆಂದರೆ…..
ಸ್ವತಃ ಬಿಜೆಪಿ ಪಕ್ಷವನ್ನು ಬರ್ಖಾಸ್ತುಗೊಳಿಸಬೇಕು ಮತ್ತು ರಾಷ್ಟ್ರ ಜೀವನದಿಂದ ಆರೆಸ್ಸೆಸ್ ಅನ್ನು ಉಚ್ಚಾಟಿಸಬೇಕು..