Advertisement

ತಮ್ಮ ಮಕ್ಕಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ- ಹಿಂದುಳಿದ ವರ್ಗದ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರೆಸ್ಸೆಸ್ ಬಗ್ಗೆ ಭಯಪಡದೆ ಪ್ರೀತಿ ತೋರಲು ಸಾಧ್ಯವೇ: ಸಿದ್ದರಾಮಯ್ಯ

Advertisement
"ಆರೆಸ್ಸೆಸ್ ಕಂಡರೆ ನನಗೆ ಭಯ ಎಂದು‌ ಮಾಜಿ‌ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರ್ ಎಸ್ ಕಂಡರೆ ಭಯ ಇದೆ" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಅವರು ತನ್ನ ಫೇಸ್‌ಬುಕ್‌ ಮತ್ತು ಟ್ವಿಟರ್ ಖಾತೆಯಲ್ಲಿ #AryanRSS ಎಂಬ ಹ್ಯಾಶ್‌‌ಟ್ಯಾಗ್ ಬಳಸಿ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.

"ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿ.ವಿ.ಸದಾನಂದಗೌಡರು ಯಾಕೆ ತನ್ನ‌ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು.
ಆರ್.ಎಸ್.ಎಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರ್.ಎಸ್.ಎಸ್ ಮೇಲೆ ದೇಶದ ಮೊದಲ ಗೃಹಸಚಿವ‌ ವಲ್ಲಭಭಾಯಿ‌ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ" ಎಂದವರು ಹೇಳಿದ್ದಾರೆ‌.

"ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ‌ ಸಮುದಾಯಗಳಂತೆ ನನಗೂ ಆರ್.ಎಸ್.ಎಸ್ ಬಗ್ಗೆ ಭಯ ಇದೆ.
ಮೀಸಲಾತಿ, ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರ್.ಎಸ್.ಎಸ್ ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ?" ಎಂದವರು ಪ್ರಶ್ನಿಸಿದ್ದಾರೆ.

"ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರ್.ಎಸ್.ಎಸ್ ಬಗ್ಗೆ ಭಯ ಸಹಜ ಅಲ್ಲವೇ ಸದಾನಂದ ಗೌಡರೇ?
ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ. ಈ ಬಗ್ಗೆ‌ ಆತ್ಮಾವಲೋಕನ‌ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೆ ಹೊರತು ಭಯ ಪಡುವವರಲ್ಲ" ಎಂದವರು ವಿವರಿಸಿದ್ದಾರೆ.

"ಆರ್.ಎಸ್.ಎಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಯವರಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ?‌ಎನ್ನುವ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ?" ಎಂದವರು ಪ್ರಶ್ನಿಸಿದ್ದಾರೆ.

(ಚಿತ್ರಗಳನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.)

ಚಿತ್ರ ಕೃಪೆ: ಗೂಗಲ್
Advertisement
Advertisement
Recent Posts
Advertisement