Advertisement

ನಾಡಗೀತೆಯನ್ನು ತಿರುಚಿದ ಅಜ್ಞಾತ ಲೇಖಕ(?)ನ ವಿರುದ್ದ ಕ್ರಮ! ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಕ್ಕೆ ಸಾಕ್ಷಿ ಇದ್ದರೂ ಚಕ್ರತೀರ್ಥ ಮೇಲೆ ಯಾವುದೇ ಕ್ರಮ ಇಲ್ಲ: ವಾಹ್ ಮುಖ್ಯಮಂತ್ರಿ ಗಳೇ ವಾಹ್!

Advertisement
"ರಾಷ್ಟ್ರಕವಿ ಕುವೆಂಪುರವರು ರಚಿಸಿದ ನಾಡಗೀತೆಯನ್ನು ತಿರುಚಿದ ಮೂಲ (ಅಜ್ಞಾತ) ಲೇಖಕನ ವಿರುದ್ದ ಕ್ರಮ ಜರುಗಿಸಲಾಗುವುದು" ಎಂದು ಹೇಳುವ ಮೂಲಕ ಅದನ್ನು ತನ್ನದೇ ಫೇಸ್‌ಬುಕ್‌ ಮತ್ತಿತರ ಪುಟಗಳಲ್ಲಿ ಶೇರ್ ಮಾಡಿದ್ದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ಮೇಲೆ ಯಾವುದೇ ಕ್ರಮ ಇಲ್ಲ ಎಂಬಂತೆ, ಚಕ್ರತೀರ್ಥ ಸಮಿತಿಯ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಕುರಿತು ಮತ್ತು ಪರಿಷ್ಕರಣೆ ಯ ದೋಷಗಳ ಕುರಿತು ಎಲ್ಲಿಯೂ ಹೇಳದೆ ಅರ್ಥಾತ್ ಎಲ್ಲವೂ ಸರಿಯಿದೆ ಎಂಬಂತೆ ಸಮರ್ಥಿಸಿಕೊಂಡು ರಾಜ್ಯ ಸರ್ಕಾರದ ಖಾಜಿ ನ್ಯಾಯದ ಪತ್ರಿಕಾ ಪ್ರಕಟಣೆಯೊಂದು Chief minister of Karnataka ಫೇಸ್‌ಬುಕ್‌ ಪುಟದಲ್ಲಿ ರಾತ್ರಿ ಸುಮಾರು 12.30ರ ನಂತರ ಪ್ರಕಟಗೊಂಡಿದೆ. ಅದರ ವಿವರಗಳು ಮತ್ತು ಆ ಕುರಿತು ವ್ಯಕ್ತವಾದ ಕೆಲವು ವಿರೋಧಗಳು ಇಂತಿವೆ:

"ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕ ಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಮತ್ತು ಕನ್ನಡ ಬಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯಪುಸ್ತಕ ಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ. ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಗಳು ಮತ್ತು ಇತರೆ ಸ್ವಾಮೀಜಿಗಳು ಪ್ರಸ್ತುತ ಪಠ್ಯಪುಸ್ತಕಗಳಲ್ಲಿನ ಬಸವಣ್ಣನವರ ವಿಷಯಾಂಶಕ್ಕೆ ಕೆಲವು ಆಕ್ಷೇಪಣೆಗಳನ್ನು ಮಾಡಿರುತ್ತಾರೆ. ಬಸವಣ್ಣನವರ ಇದೇ ವಿಷಯಾಂಶಕ್ಕೆ ಸಂಬಂಧಿಸಿದಂತೆ ಈ ಹಿಂದೆ ಜಾರಿಯಲ್ಲಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯಿಂದ ರಚಿತವಾದ ಪಠ್ಯಪುಸ್ತಕ ಮತ್ತು ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಸಾಮಾನ್ಯವಾದ ಅಂಶಗಳಿವೆ. ಪ್ರಸ್ತುತ ಪಠ್ಯಪುಸ್ತಕ ದಲ್ಲಿರುವ ಬಸವಣ್ಣನವರ ವಿಷಯಾಂಶಗಳನ್ನು ಯಾರ ಭಾವನೆಗೂ ದಕ್ಕೆ ಬಾರದಂತೆ ಪರಿಷ್ಕರಿಸಲಾಗುವುದು‌. ಆದಿಚುಂಚನಗಿರಿಯ ಶ್ರೀ ಶ್ರೀ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಗಳು ಮತ್ತು ಇತರರ ಆಶಯದಂತೆ ಕುವೆಂಪುರವರ ವಿರಚಿತ ನಾಡಗೀತೆಯನ್ನು ವಿರೂಪಗೊಳಿಸುವ ರೀತಿಯಲ್ಲಿ ನಾಡಗೀತೆಯ ದಾಟಿಯಲ್ಲಿ ಮೂಲಕವನವನ್ನು ಬರೆದ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತಗೆದುಕೊಳ್ಳಲು ಸೈಬರ್ ಕ್ರೈಮ್ ಬೆಂಗಳೂರು ಇವರಿಗೆ ತನಿಖೆ ನಡೆಸಲು ಸೂಚಿಸಲಾಗಿದೆ. ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಂದಿರುವ ಆರೋಪ, ಆಕ್ಷೇಪಣೆಗಳಿಗೆ ಸ್ಪಷ್ಟೀಕರಣಗಳನ್ನೊಳಗೊಂಡ ಟಿಪ್ಪಣಿ ಲಗತ್ತಿಸಿದೆ. ಹಲವಾರು ಅಂಶಗಳಿಗೆ ವಾಸ್ತವ ಅಂಶಗಳಿಂದ ಸ್ಪಷ್ಟೀಕರಣವನ್ನು ಕೊಡಲಾಗಿದೆ. ಪ್ರಸ್ತುತ ಆಕ್ಷೇಪ ಮಾಡಿರುವಂತೆ ಮಹಾನ್ ವ್ಯಕ್ತಿಗಳ ಯಾವುದೇ ಪಾಠಗಳನ್ನು ಕೈಬಿಡಲಾಗಿಲ್ಲ.

೧) ಪ್ರಸ್ತುತ ಪಠ್ಯಪುಸ್ತಕ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದೆ.

೨) ಪ್ರಸ್ತುತ ಪರಿಸ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರ ಹೊಂದಿದೆ. ಈ ಹಿನ್ನಲೆಯಲ್ಲಿ ಮೇಲೆ ತಿಳಿಸಿದಂತೆ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ.

೩) ರಾಷ್ಟ್ರಕವಿ ಕುವೆಂಪುರವರ ನಾಡಗೀತೆಯನ್ನು ಆಕ್ಷೇಪಾರ್ಹವಾಗಿ ವಿಕೃತಗೊಳಿಸಿದ ಅಂಶವು ಪಠ್ಯಪುಸ್ತಕ ದಲ್ಲಿ ಉಲ್ಲೇಖಗೊಳ್ಳದಿದ್ದರೂ ಇದರ ಮೂಲಕವನ‌ ಬರೆದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಯ ಕ್ರಮವನ್ನು ಸರಕಾರವು ತಗೆದುಕೊಂಡಿದೆ.

೪) ಫ್ರೊ. ಬರಗೂರು ರಾಮಚಂದ್ರಪ್ಪ ನವರ ಅಧ್ಯಕ್ಷತೆಯ ಸಮಿತಿಯು ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕ ಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುರಿತಾದ ಏಳು ಗದ್ಯ/ ಪದ್ಯಗಳಿಗೆ ಸೀಮೀತವಾಗಿದ್ದನ್ನು ಪ್ರಸ್ತುತ ಪರಿಷ್ಕರಣಾ ಸಮಿತಿ ರಚಿಸಿರುವ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಹತ್ತಕ್ಕೇರಿಸಿದೆ.

೫) ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕ ದಲ್ಲಿ ನಾಡಗೌಡ ಕೆಂಪೇಗೌಡರ ಕುರಿತಾದ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಿದೆ.

೬) ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜೊತೆ ಹಿಂದೂ ಧರ್ಮದ ವಿಷಯವನ್ನುಸೇರ್ಪಡೆ ಮಾಡಿ ಪರಿಚಯಿಸಲಾಗಿದೆ.

ಮುಖ್ಯಮಂತ್ರಿ ಗಳ ಈ ಮೇಲಿನ ಪ್ರಕಟಣೆಯ ಕುರಿತು ತೀವ್ರ ವಿರೋಧ ವ್ಯಕ್ತವಾಗಿದೆ:
"ಯಾವ ಮಠಾಧೀಶರು,ಸ್ವಾಮಿಗಳು, ಸಾಹಿತಿಗಳು ಹೇಳಿದರೂ ರೋಹಿತ ಚಕ್ರತೀರ್ಥ ಪರಿಷ್ಕರಿಸಿದ ಪಠ್ಯ ಪುಸ್ತಕ ರದ್ದು ಮಾಡುವ ಸಾಧ್ಯತೆ ಇಲ್ಲ‌.ಪ್ರಹ್ಲಾದ ಜೋಶಿಯಾದಿ ಎಲ್ಲ ಬಿಜೆಪಿ ನಾಯಕರು ಈಗ ಸಮರ್ಥನೆಗೆ ಇಳಿದಿದ್ದಾರೆ.ಸರಕಾರ ನಡೆಯುವದು ಯಾರ ಆದೇಶದಂತೆ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ.ಮುಂದೇನು?ದಾರಿ ಹುಡುಕಬೇಕಾಗಿದೆ‌‌. ಆದರೆ ಚಕ್ರತೀರ್ಥನನ್ನು ತೆಗೆದು ಹಾಕಿದರೆ ಸಾಲದು, ಆತನ ನೇತೃತ್ವದಲ್ಲಿ ಪರಿಷ್ಕ್ರತಗೊಂಡ ಪಠ್ಯಪುಸ್ತಕ ಗಳನ್ನು ರದ್ದುಗೊಳಿಸಿ ಬರಗೂರು ಸಮೀತಿಯ ಮೊದಲಿನ ಪಠ್ಯಪುಸ್ತಕ ಗಳನ್ನೇ ತುರ್ತಾಗಿ ವಿದ್ಯಾರ್ಥಿಗಳಿಗೆ ಒದಗಿಸಬೇಕು." ಎಂದು ಖ್ಯಾತ ಅಂಕಣಕಾರ, ಜನಪರ ಚಿಂತಕ ಸನತ್ ಕುಮಾರ್ ಬೆಳಗಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

" ಮುಖ್ಯಮಂತ್ರಿಗಳೇ, ಚಕ್ರತೀರ್ಥನಂತಹ ವಿಕೃತ ವ್ಯಕ್ತಿಯ ಪರವಾಗಿ ನೀವು ನಿಂತಿದ್ದಿರಿ.
ಎರಡು ಅಂಶಗಳ ಕುರಿತಾಗಿ ಮಾತ್ರ ಸ್ಪಷ್ಟೀಕರಣ ನೀಡಿದ್ದೀರಿ. 1) ಮತ್ತೆ ಪರಿಷ್ಕರಣೆ ಮಾಡುವ ಕುರಿತು ಮುಕ್ತ ಮನಸ್ಸು ಎಂದು ಹೇಳುತ್ತಲೇ ಪಠ್ಯ ಹಿಂತೆಗೆದುಕೊಳ್ಳುವ ಮಾತಿಲ್ಲ. 2)ನೀವು ಕೇಶವಕೃಪದ ಅಡಿಯಾಳು ಮಾತ್ರವಲ್ಲ, ವಿಕೃತ ಟ್ರೋಲರ್ ಒಬ್ಬನ ಬೆಂಬಲಿಗನಂತೆ ಹೇಳಿಕೆ ಬಿಡುಗಡೆ ಮಾಡಿದ್ದಿರಿ… ಅರ್ಹತೆಯೇ ಇಲ್ಲದ ವ್ಯಕ್ತಿಯಷ್ಟೇ ಅಲ್ಲ; ಅತ್ಯಾಚಾರ ಸಮರ್ಥಿಸುವ, ಬಾಬಾಸಾಹೇಬರನ್ನು ಹೀಗಳೆಯುವ, ನಾಡಧ್ವಜವನ್ನು ಕಾಚಾಗೆ ಹೋಲಿಸಿದ, ನಾಡಗೀತೆಯನ್ನು ವಿಕೃತಗೊಳಿಸಿದ ವ್ಯಕ್ತಿಯು ರೂಪಿಸಿದ ಪಠ್ಯವನ್ನು ಮಕ್ಕಳು ಓದಿದರೆ ಏನಾಗಬಹುದು ಎಂಬ ಕನಿಷ್ಠ ಅರಿವಿಲ್ಲದ ವರಂತೆ ನಡೆದುಕೊಂಡಿದ್ದಿರಿ. ಎಲ್ಲಾ ಸಾರ್ವಜನಿಕ ಲಜ್ಜೆಯನ್ನು ನಿಮ್ಮ ಸರ್ಕಾರ ಗಾಳಿಗೆ ತೂರಿದೆ ; ವಿಕೃತ ವ್ಯಕ್ತಿಯಿಂದ ಶಾಲಾ ಪಠ್ಯ ರೂಪಿಸಿದ್ದು ತಪ್ಪಾಗಿದೆ ಎಂಬುದನ್ನು ಈಗಲೂ ನೀವು ಗುರುತಿಸಿಕೊಳ್ಳಲು ಸಿದ್ಧರಿಲ್ಲ. ಮೇಲಿನ ಎಲ್ಲ ಕಾರಣಗಳಿಂದ ತಡರಾತ್ರಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಜನ ವಿರೋಧಿ ತೀರ್ಮಾನ ಆಗಿರುವುದರಿಂದ ನಮ್ಮಂತಹ ಸಾಮಾನ್ಯರು ನಿಮಗೆ ಧಿಕ್ಕಾರ ಕೂಗುತ್ತೇವೆ" ಎಂದು ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಎಚ್ಚರಿಕೆ ನೀಡಿದ್ದಾರೆ.

"ಇದು ಅತ್ಯಂತ ಚಾಣಾಕ್ಷ ಮತ್ತು ಅಷ್ಟೇ ಅಪಾಯಕಾರಿ ನಡೆ . ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ , ಅದನ್ನು ಹಾಗೆಯೆ ಉಳಿಸಿಕೊಂಡು ಸಮಿತಿಯನ್ನು ವಿಸರ್ಜಿಸಿರುವುದು, ಕೇವಲ ಕಣ್ಣೊರೆಸುವ ತಂತ್ರ. ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿರುವ ತಿರುಚಿರುವ ಪಾಠಗಳನ್ನು ಕೈಬಿಡುವ ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ . ಯಾವುದೇ ಪ್ರಜಾಸತ್ತಾತ್ಮಕ ವಿಧಾನವಾಗಲಿ ಅಥವಾ ಪಠ್ಯ ಪುಸ್ತಕ ರಚನೆಗೆ/ ಪರಿಷ್ಕರಣೆಗೆ ಅಗತ್ಯವಾದ ಒಂದು ಶಿಕ್ಷಣ ಶಾಸ್ತ್ರೀಯ ಕ್ರಮವನ್ನಾಗಲಿ ಅನುಸರಿಸಿದ ಪ್ರಕ್ರಿಯೆ ಮೂಲಕ ಪರಿಷ್ಕರಿಸಿದ ಪುಸ್ತಕಗಳನ್ನು ಆಧರಿಸಿ ಮಕ್ಕಳಿಗೆ ಕಲಿಸುವುದು ಪ್ರಜಾಪ್ರಭುತ್ವಕ್ಕೆ ಹಾಗು ಸಂವಿಧಾನಕ್ಕೆ ಅಪಚಾರ . ಈ ಕಾರಣದಿಂದ ಸಂವಿಧಾನ ಪರವಾದ ಈ ಹೋರಾಟ ಮುಂದುವರಿಯಬೇಕು .ನಮ್ಮ ಹಕ್ಕೊತ್ತಾಯ ಈ ಕೆಳಗಿನಂತಿರಬೇಕು : ೧)ಪರಿಷ್ಕರಣೆ ನಿಯಮ ಬಾಹಿರ ಹಾಗು ಸಂವಿಧಾನ ವಿರೋಧಿಯಾದ ಕಾರಣ, ಪರಿಷ್ಕರಣೆಯ ಹೆಸರಲ್ಲಿ ಸೇರಿಸಿರುವ ಎಲ್ಲ ಕೋಮುವಾದಿ ಪಾಠಗಳು ಹಾಗು ದುರುದ್ದೇಶದಿಂದ ಬದಲಿಸಿರುವ ಶೀರ್ಷಿಕೆ , ಪದಪುಂಜ , ವಾಕ್ಯ , ಪ್ಯಾರಾ, ಇತ್ಯಾದಿಗಳು, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರುವುದರಿಂದ , ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ೨) ಪರಿಷ್ಕೃತ ಪುಸ್ತಕಗಳ ವಿತರಣೆ ಸ್ಥಗಿತಗೊಳಿಸಿ ಎಲ್ಲವನ್ನು ಹಿಂಪಡೆಯಬೇಕು ೩) ಈ ಹಿಂದೆ ಇದ್ದ ಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕು.
೪) ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನ ಈ ಪ್ರಹಸನದಲ್ಲಿ ಆಗಿರುವ ಲೋಪಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸ್ವತಂತ್ರ ಶಿಕ್ಷಣ ಹಾಗು ವಿಷಯ ತಜ್ಞರ ಸಮಿತಿ ರಚಿಸಬೇಕು" ಎಂದು ಖ್ಯಾತ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.

"ಪಿಯುಸಿಗೆ ಪಾಠ ಮಾಡಬೇಕಾದರೆ ಕನಿಷ್ಠ ಎಂಎ/ಎಂಕಾಂ/ಎಂಎಸ್ಸಿ ಆಗಿರಬೇಕು. ಬಿಎಸ್ಸಿ ಮಾತ್ರದವನು ಪಿಯುಸಿ ಪಠ್ಯ ಪರಿಷ್ಕರಿಸುವುದು ಹೇಗೆ?.. ಬಿಎಸ್ಸಿ ಪದವಿ ಮಾತ್ರ ಇರುವ ವ್ಯಕ್ತಿಗೆ ಶಾಲೆಗಳಲ್ಲಿ ಕಲಿಸುವ ಅರ್ಹತೆಯಿಲ್ಲ, ಕಾಲೇಜುಗಳಲ್ಲಿ ಕಲಿಸುವ ಅರ್ಹತೆಯೂ ಇಲ್ಲ. ಹೀಗೆ ಶಾಲೆಗಳಲ್ಲಾಗಲೀ, ಕಾಲೇಜುಗಳಲ್ಲಾಗಲೀ ಪಾಠ ಮಾಡುವ ಅರ್ಹತೆಯೇ ಇಲ್ಲದವನೊಬ್ಬ ಶಾಲೆ-ಪದವಿ ಪೂರ್ವ ಕಾಲೇಜುಗಳ ಪಠ್ಯವನ್ನು ತಿದ್ದುವ ಅರ್ಹತೆಯನ್ನು ಹೇಗೆ ಪಡೆಯುತ್ತಾನೆ? ಅಂಥವನನ್ನು ಶಾಲೆ-ಕಾಲೇಜುಗಳ ಪಠ್ಯ ಪರಿಷ್ಕರಣಾ ಸಮಿತಿಯ ಮುಖ್ಯಸ್ಥನಾಗಿ ಮಾಡಿರುವುದು ಈ ರಾಜ್ಯದ ಎಲ್ಲಾ ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಮಾಡಿರುವ ಅವಮಾನವಲ್ಲವೇ? ಅರ್ಹತೆಯೇ ಇಲ್ಲದವನು ತಿದ್ದಿರುವ ಪಾಠಗಳನ್ನು ಅರ್ಹ ಶಿಕ್ಷಕರು ಕಲಿಸಬೇಕೇ, ಮಕ್ಕಳು ಕಲಿಯಬೇಕೇ? ಈ ಪ್ರಶ್ನೆಯನ್ನು ರಾಜ್ಯದ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕೇಳಿಕೊಳ್ಳಬೇಕು. ಇಂಥ ಕೆಲಸವನ್ನು ಮಾಡಿರುವ ಬಗ್ಗೆ ಸರಕಾರವೂ ವಿಮರ್ಶಿಸಿಕೊಳ್ಳಬೇಕು, ರಾಜ್ಯದ ಶಿಕ್ಷಕರಿಗೂ, ವಿದ್ಯಾರ್ಥಿಗಳಿಗೂ ಉತ್ತರ ನೀಡಬೇಕು'' ಎಂದು ಖ್ಯಾತ ವೈದ್ಯ, ಸಾಮಾಜಿಕ ಚಿಂತಕ ಡಾ. ಶ್ರೀನಿವಾಸ್ ಕಕ್ಕಿಲಾಯ ಕಿಡಿ ಕಾರಿದ್ದಾರೆ.

"ಪೋಲಿ ಸ್ಟೇಟಸ್ ಗಳನ್ನು ಪೋಸ್ಟ್ ಮಾಡುವುದು, ತಿರುಚಿದ ಪದ್ಯಗಳನ್ನು ಶೇರ್ ಮಾಡುವುದು ಇವೆಲ್ಲಾ ಜ್ಞಾನ ಹಾಗೂ ಮೇಧಾವಿತನ ಎನ್ನುವುದು ಈಗಷ್ಟೇ ಗೊತ್ತಾಗುತ್ತಿದೆ. ಇದೇ ನಿಜವಾದ ಸಾಹಿತ್ಯ ಹಾಗೂ ಸಿದ್ಧಾಂತ ಇರಬಹುದೇನೋ…!! ಇದೇ ರಾಷ್ಟ್ರಬದ್ಧತೆಯ ಪುರಾವೆ ಎನ್ನುವುದು ಬಹುಶಃ ಯಾರಿಗೂ ಗೊತ್ತಿರಲಿಲ್ಲ. ರೋಹಿತ್ ಬೆಂಬಲಿಗರು ಆತನ ಫೇಸ್ ಬುಕ್ ವಾಲ್ ಪಠ್ಯ ಪುಸ್ತಕವಾಗಿ ಓದಿಸಲು, ಓದಿಕೊಳ್ಳಲು ಒಂದು ಹೋರಾಟ ಶುರುಮಾಡಿಕೊಳ್ಳಲು ಇದು ಸಕಾಲ" ಎಂದು ಜನಪರ ಚಿಂತಕ ಗಜಾನನ ಮಹಾಲೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

"ಸನ್ಮಾನ್ಯ ಮುಖ್ಯ ಮಂತ್ರಿಗಳೇ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೀರಿ.ಆದರೆ ಅದು ಉಂಟು ಮಾಡಿದ ಅವಾಂತರಗಳು ,ವಿವಾದಗಳು ಇನ್ನೂ ಜೀವಂತವಾಗಿವೆ.ಶಾಲಾ ಮಕ್ಕಳಿಗೆ ಶಾಲೆಗಳು ಆರಂಭವಾದರೂ ಪಠ್ಯ ಪುಸ್ತಕಗಳು ಈ ವರಗೆ ಸಿಕ್ಕಿಲ್ಲ. ಕೊರೊನಾ ಕಾರಣದಿಂದ ಹಿಂದಿನ ಎರಡು ವರ್ಷ ಶಾಲೆಗಳು ಮುಚ್ಚಿದ್ದವು.ಕಾರಣ ಈಗ ತಾನೆ ಶಾಲೆಗೆ ಹೊರಟಿರುವ ಮಕ್ಕಳಿಗೆ ಕಾರಣ ತುರ್ತಾಗಿ ಬರಗೂರು ಸಮೀತಿ ರೂಪಿಸಿದ ,ಈಗಾಗಲೇ ಲಭ್ಯವಿರುವ ಪಠ್ಯಪುಸ್ತಕಗಳನ್ನೇ ಶಾಲಾ ಮಕ್ಕಳಿಗೆ ಒದಗಿಸಬೇಕಾಗಿ ವಿನಂತಿ.ದಯವಿಟ್ಟು ಇದನ್ನು ಪ್ರತಿಷ್ಠೆಯ ಪ್ರಶ್ನೆ ಯನ್ನಾಗಿ ಮಾಡಿಕೊಳ್ಳಬೇಡಿ.ಈಗ ವಿವಾದಕ್ಕೆ ಒಳಗಾಗಿರುವ ಪರಿಷ್ಕ್ರತ ಪುಸ್ತಕಗಳನ್ನು ಗುದಾಮಿಗೆ ಕಳಿಸಿ ನಂತರ ಅವುಗಳ ಪರಿಶೀಲನೆ ಗೆ ಬೇಕಾದರೆ ಸಮಿತಿ ಮಾಡಿ. ಮೊದಲು ಮಕ್ಕಳಿಗೆ ಮೊದಲಿನ ಪಠ್ಯಪುಸ್ತಕ ತುರ್ತಾಗಿ ಒದಗಿಸಿ‌." ಎಂದು ಹಿರಿಯ ಅಂಕಣಗಾರ, ಸಾಮಾಜಿಕ ಚಿಂತಕ ಸನತ್ ಕುಮಾರ ಬೆಳಗಲಿ ಒತ್ತಾಯಿಸಿದ್ದಾರೆ.

"ಮಾನ್ಯ ಮುಖ್ಯ ಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರೆ, ಪಠ್ಯ ಪರಿಷ್ಕರಣೆಯ ಎಲ್ಲಾ ಕೆಲಸ ಮುಗಿದಮೇಲೆ ತಾವು ವಿಸರ್ಜಿಸುವುದೇನು ಬಂತು ? ಅದು ತನ್ನಿಂದ ತಾನೆ ವಿಸರ್ಜನೆಗೊಳ್ಳುತ್ತದೆ. ಬಸವಣ್ಣನವರ ಕುರಿತು ತಪ್ಪು ತಪ್ಪು ಮಾಹಿತಿ ಪ್ರಕಟವಾಗುವಂತೆ ನೋಡಿಕೊಂಡ ಚಕ್ರ ತೀರ್ಥ ರಿಗೆ ಯಾವ ಶಿಕ್ಷೆ ? ಕುವೆಂಪು ಅವರ ನಾಡ ಗೀತೆ ಚಕ್ರತೀರ್ಥ ಬರೆದಿಲ್ಲವೆಂದೇ ಇಟ್ಟುಕೊಳ್ಳೋಣ, ಅದನ್ನು ತಮ್ಮ ವಾಲ್ ನಲ್ಲಿ ಹಂಚಿಕೊಂಡಿದ್ದಾರೆಂದರೆ ಆ ವಿಚಾರಗಳನ್ನು ತಾವು ಒಪ್ಪಿದ್ದೇವೆಂದು ತಾನೆ ಅರ್ಥ. ಅಂಗೈ ಹುಣ್ಣಿಗೆ ಕನ್ನಡಿಬೇಕೆ ? ಇದಕ್ಕೆ ಸರಕಾರ ತನಿಖೆಯ ನಾಟಕ ಎಷ್ಟು ಸರಿ ? ಸಮಾಜದ ಬೆಳವಣಿಗೆಗೆ ಮಕ್ಕಳ ಚಿಕಿತ್ಸಕ ಮನೋಭಾವನೆಗೆ ಪೆರಿಯಾರ, ಪುಲೆ, ಡಾ .ಅಂಬೇಡ್ಕರ್ ಮುಂತಾದವರ ಪಠ್ಯ ಅಗತ್ಯವಿಲ್ಲವೆ. ತಮ್ಮ ತಂದೆ ಪೂಜ್ಯ ಶ್ರೀ ಎಸ್. ಆರ್. ಬೊಮ್ಮಾಯಿಯಾಗಲಿ ತಾವಾಗಲಿ ಈ ಮಹನೀಯರ ಬದುಕು ಬರಹಗಳನ್ನು ಓದಿ ಅಲ್ಲವೆ ಮಹೋನ್ನತ ಹುದ್ದೆಯಲ್ಲಿ ಈಗ ಇರುವುದು. ಈ ಭಾಗ್ಯ ಮಕ್ಕಳಿಗೆ ಬೇಡವೆ ? ಚಕ್ರತೀರ್ಥ ಎಂಬ ವ್ಯಕ್ತಿಯ ಹಿನ್ನೆಲೆಯನ್ನು ಆತನ ಫೇಸ್ ಬುಕ್ ಪುಟ ತೆರೆದು ನೋಡಿದರೆ ಸಾಕು ಆತನ ವಿಕೃತ ಮನಸ್ಸು ಪ್ರತಿ ಪದ, ವಾಕ್ಯದಲ್ಲೂ ವ್ಯಕ್ತಗೊಳ್ಳುತ್ತದೆ. ಕರ್ನಾಟಕದಲ್ಲಿ ಪಠ್ಯ ಪುಸ್ತಕ ತಿದ್ದು ಪಡಿಗೆ ಯಾವ ಮಹಾನ್ ಬರಹಗಾರರು ಸಿಕ್ಕಲಿಲ್ಲವೆ ? ಏನಯ್ಯಾ ವಿಪ್ರರು ನುಡಿದಂತೆ ನಡೆಯರು ಎಂದು ಬಸವಣ್ಣನವರು ತಮ್ಮ ಒಂದು ವಚನದಲ್ಲಿಹೇಳಿದ್ದಾರೆ. ಅದರಂತೆ ತಮ್ಮ ಮಂತ್ರಿ ಮಂಡಲ, ಬಸವಣ್ಣನವರ ವಿಚಾರಕ್ಕೆ ಸಂಬಂಧಿಸಿದಂತೆ ತಿದ್ದು ಮಾಡಿದ ಪಠ್ಯವನ್ನೆ ಮಕ್ಕಳಿಗೆ ಕೊಟ್ಟರೆ ಬಸವ ಸಮುದಾಯದಿಂದ ಬಹುದೊಡ್ಡ ಸಾತ್ವಿಕ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ವಿನಯ ಹಾಗೂ ಗೌರವ ಪೂರ್ವಕವಾಗಿ ತಿಳಿಸಬಯಸುವೆ. ಹಳೆಯ ಪಠ್ಯದಲ್ಲಿರುವ ತಪ್ಪುಗಳನ್ನು ತಿಳಿಸಿ ಹೇಳಿದ್ದರೆ ಜನ ಹುಷಾರಿಯಾಗುತ್ತಿದ್ದರು !" ಎಂದು ವಿಶ್ವಾರಾಧ್ಯ ಸತ್ಯಂಪೇಟೆ ಯವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

"ಈ ರೀತಿ ಜನರನ್ನು ಹಾದಿ ತಪ್ಪಿಸುವುದು ಬಿಜೆಪಿ ಕೆಲಸ. ಅಂದು ಬ್ರಿಟಿಷರು Divide And Rule ಇಂದು BJP Divert and Rule. ಮುಖ್ಯಮಂತ್ರಿಗಳೇ ನೀವು ,ನಿಮ್ಮ ಸರ್ಕಾರ ಆಧುನಿಕ ಬ್ರಿಟಿಷರು. Shame on you. ಈತ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸಬೇಕು .ಹಳೆ ಪಠ್ಯಪುಸ್ತಕ ಮುಂದುವರಿಯಬೇಕು .ಈಗ ಪರಿಶೀಲನಾ ಸಮಿತಿ ಹೆಸರಿನಲ್ಲಿ ಸರ್ಕಾರ ಈತನಿಗೆ ಕೊಟ್ಟಿರುವ ಗೌರವಧನವನ್ನು ಹಿಂದಕ್ಕೆ ಪಡೆಯಬೇಕು( ಅದು ನಮ್ಮ ನಿಮ್ಮೆಲ್ಲರ ತೆರಿಗೆ ಹಣ) ಕುವೆಂಪು , ಬಸವಣ್ಣ , ಅಂಬೇಡ್ಕರ್ ಅವಮಾನಿಸಿದ ಇವನ ಮೇಲೆ ಕ್ರಮ ಕೈಗೊಂಡು ಬಂಧಿಸಬೇಕು .
ಇಷ್ಟು ನಮ್ಮ ಬೇಡಿಕೆ ಇದನ್ನು ಮುಂದಿಟ್ಟು ಹೋರಾಟ ಮುಂದುವರೆಸೋಣ" ಎಂದು ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಒಂದುವೇಳೆ ಈ ಭಂಡ ಸರಕಾರ ವಕ್ರತೀರ್ಥನ ಪಠ್ಯಗಳು ಮುಂದುವರೆಸಿದರೆ ಆತನ ಎಲ್ಲ ಹಳೆಯ ಹಲ್ಕಟ್ ಪೋಸ್ಟಗಳ ಪ್ರತಿಗಳನ್ನು ಪ್ರಿಂಟ್ ಹಾಕಿಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಂಚುವ ಕಾರ್ಯ ಆರಂಭಿಸಬೇಕಿದೆ. ಬಿಜೆಪಿ ಆಡಳಿತದಲ್ಲಿ ಶಾಲಾ ಪಠ್ಯ ಪರಿಷ್ಕರಣೆ ಮಾಡಿದ ವ್ಯಕ್ತಿ ಎಷ್ಟೊಂದು ಹಲ್ಕಟ್ ಇದಾನೆ ಎನ್ನುವ ಸಂಗತಿ ವಿದ್ಯಾರ್ಥಿಗಳಿಗೆ ತಿಳಿಯಲಿ!" ಎಂದು ಜನಪರ ಚಿಂತಕ ಡಾ. ಜೆ ಎಸ್ ಪಾಟೀಲ್ ವ್ಯಂಗ್ಯವಾಡಿದ್ದಾರೆ.

"ಇದೊಳ್ಳೆ "Let's break up, but I love you" ಅನ್ನೋ ತರದ ನಿರ್ಧಾರ." ಎಂದು ಯುವ ಬರಹಗಾರ ಗಣೇಶ್ ಕೊಡ್ಲಾಡಿ ಹೇಳಿದ್ದಾರೆ.

"ಚಕ್ರತೀರ್ಥನ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಮ್ಮ ಮಾತೇನಾಯ್ತು ಮುಖ್ಯ ಮಂತ್ರಿಗಳೆ?! ಸನ್ಮಾನ ಮಾಡಿ ಕಳಿಸಿದಂತಿದೆ ಈ ವರಸೆ!" ಎಂದು ಚರಿತಾ ಮೈಸೂರು ಹೇಳಿದ್ದಾರೆ.

"ಹಳೇ ಪಾಠ್ಯಪುಸ್ತಕವನ್ನೆ ಮುಂದುವರೆಸಿ." ಎಂದು ಉಷಾಕಿರಣ್ ಕೇಶವಮೂರ್ತಿ ಹೇಳಿದ್ದಾರೆ.

"ಗೌರವಾನ್ವಿತ ಮುಖ್ಯಮಂತ್ರಿಗಳೇ .. ಚಕ್ರತೀರ್ಥ ರವರ ಸಮಿತಿಯು ಸೇರಿಸಿರುವ ಪಾಠಗಳ ಬಗ್ಗೆ ಸ್ವಲ್ಪ ಸರಿಯಿರಬಹುದು ಇಲ್ಲ ತಪ್ಪಿರಬಹುದು. . ಅವರು ಸೇರಿಸಿರುವ ಅಧ್ಯಾಯಗಳಲ್ಲಿ ಮಕ್ಕಳಿಗೆ ವಿಷಬೀಜ ಬಿತ್ತು ಒಂದಿದ್ದರೆ ಅದನ್ನ ಕೂಡಲೇ ತೆಗೆಯಿರಿ. ಹಾಗೂ ಬೇರೆ ಯಾರೋ ನಮ್ಮ ನಾಡಗೀತೆ ಬಗ್ಗೆ ಬರೆದ ಕೆಟ್ಟ ಸಂದೇಶವನ್ನ ಚಕ್ರತೀರ್ಥ ಅವರು ಏನಕ್ಕೆ ಅವರ ಖಾತೆಯಲ್ಲಿ ಶೇರ್ ಮಾಡಿದ್ದಾರೆ ಹಾಗೂ ಅವರು ಮಾಡಿರುವಂತಹ ಇಂಥ ನೀಚ ಕೆಲಸಕ್ಕೆ ಅವರಿಗೆ ಸಿಗುವಂತಹ ಪಟ್ಟ ನಾಡದ್ರೋಹಿ.. ನಮ್ಮ ನಾಡು ಕಂಡ ಶ್ರೇಷ್ಠ ಕವಿಗೆ ಅವಮಾನ ಮಾಡಿರುವುದು ಮೇಲ್ನೋಟದಲ್ಲಿ ಎದ್ದು ಕಾಣಿಸುತ್ತಿದೆ..ನಮ್ಮ ಮೈಸೂರು ಸಂಸ್ಥಾನ ಹಾಗೂ ನಮ್ಮ ರಾಜರ ಕಾಲದಲ್ಲಿ ಇಂಥ ನಾಡದ್ರೋಹಿಗಳಿಗೆ ಗಡಿಪಾರು ಮಾಡುತ್ತಿದ್ದರು ಇಲ್ಲ ಸೆರೆಮನೆ ವಾಸ ಮಾಡುತ್ತಿದ್ದರು ಇಂಥ ಅವಿವೇಕಿಗಳಿಗೆ ಶಿಕ್ಷೆಯೇನು.. ಇಂಥ ನಾಡದ್ರೋಹಿ ಗೆ ಕಠಿಣ ಸಜೆಯನ್ನು ನೀಡದೆ ಇರುವಷ್ಟು ನಮ್ಮ ನ್ಯಾಯಾಂಗ ಕೆಳಹಂತಕ್ಕೆ ಬಂದಿದೆಯ. ನಮ್ಮ ನಾಡಗೀತೆಯ ಬಗ್ಗೆ ಮೊದಲು ಯಾರು ಸೃಷ್ಟೀಕರಣ ಮಾಡಿದ್ದರು ಹಾಗೂ ಅದನ್ನು ಶೇರ್ ಮಾಡಿದ ಚಕ್ರತೀರ್ಥ ನನ್ನು ಗಡಿಪಾರು ಮಾಡಿ . . ಇದ್ದ ನಾಡದ್ರೋಹಿ ಗೆ ಶಿಕ್ಷೆಯನ್ನ ನೀಡದಿದ್ದರೆ ಇಂಥ ಅವಿವೇಕಿಗಳು ಮುಂದೊಂದು ದಿನ ನಮ್ಮ ದೇಶವನ್ನ ಹಾಳು ಮಾಡುವುದರಲ್ಲಿ ಯಶಸ್ವಿಯಾಗುತ್ತಾರೆ ಎಚ್ಚರಿಕೆ ಇರಲಿ ಇಂಥ ದ್ರೋಹಿ ಗಳಿಂದ.. ಅವನು ಅವಮಾನ ಮಾಡಿದ್ದು ನಮ್ಮ ನಾಡಗೀತೆಗೆ ಅಷ್ಟೇ ಅಲ್ಲ ಅವನ ಹೆತ್ತ ತಾಯಿಗೂ ಕೂಡ." ಎಂದು ಹುಣ್ಸೂರಿನ ದಿನೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

"ನಮ್ಮ ನಾಡು-ನುಡಿ, ಅಸ್ತಿತ್ವವನ್ನ ದಿನೇ ದಿನೇ ನಾಶಗೊಳಿಸುತ್ತಿವೆ ಈ ರಾಷ್ಟ್ರೀಯ ಪಕ್ಷಗಳು…ಎಚ್ಚರಗೊಳ್ಳಿ.!
ಇವರ ಕುತಂತ್ರ ಅರ್ಥ ಮಾಡಿಕೊಳ್ಳಿ..! ಕನ್ನಡಿಗರೇ ಬದಲಾಗಿ..
ಎಲ್ಲ ರಾಜ್ಯದಲ್ಲಿ - ದ್ವಿಭಾಷಾ ನೀತಿ ಇದ್ದರೆ (ತಮಿಳು/ಹಿಂದಿ/ತೆಲುಗು ಮೊದಲ ಭಾಷೆ, ಎರಡನೇ ಭಾಷೆ ಇಂಗ್ಲಿಷ್) - ಆದರೆ ನಮ್ಮ ರಾಜ್ಯದಲ್ಲಿ ಮೊದಲ ಭಾಷೆ ಕನ್ನಡ ತಗೆದು - 2/3ನೇ ಭಾಷೆ ಆಗಿ ಪಾಠ ಮಾಡಲು ಅಧಿಕೃತವಾಗಿ ರೂಲ್ಸ್ ಮಾಡಿದ್ದಾರೆ…!" ಎಂದು ನವೀನ್ ಕುಮಾರ್ ಜಿ ಆರೋಪಿಸಿದ್ದಾರೆ.

"ಶಿಕ್ಷಣವನ್ನು ಕೇಸರಿಕರಣ ಮಾಡುತ್ತಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿರುವಾಗ ಪೋಲಿಸರಿಂದ ವಿಧ್ಯಾರ್ಥಿಗಳ ಮೇಲೆ ಹಲ್ಯೆ ಮಾಡಿ ಬಂಧಿಸಿದ್ದಾರೆ, ಸರ್ಕಾರದ ಈ ವಿಧ್ಯಾರ್ಥಿ ವಿರೋಧಿ ನೀತಿಯು ಖಂಡನೀಯ." ಎಂದು ವಿಜಯ್ ಮಾಲಶೆಟ್ಟಿ ಹೇಳಿದ್ದಾರೆ.

"ನಾಡಗೀತೆಯನ್ನ ಅವಮಾನಿಸಿ ಬರೆದವನಿಗೆ ಮಾತ್ರ ಶಿಕ್ಷೆನಾ ? ಅದನ್ನ ಹಂಚಿ ವಿಕೃತ್ತಿ ಮೆರೆದು, ಬರೆದವನಿಗೆ ಬುರ್ಜ್ ಖಲೀಫಾ ಬಹುಮಾನ ಘೋಷಿಸಿದವನಿಗೆ ಶಿಕ್ಷೆ ಇಲ್ವ ?" ಎಂದು ಚೇತನ್ ತಾರೇಗೌಡ ಪ್ರಶ್ನಿಸಿದ್ದಾರೆ.

"ಪಠ್ಯಪುಸ್ತಕಗಳಿಂದ ಹೊರಗೆ ಹಾಕಲ್ಪಟ್ಟ ಲೇಖಕರ ಪಟ್ಟಿ ಇಲ್ಲಿದೆ ನೋಡಿ. ನಾಲ್ಕೈದು ಮಂದಿ ಬಿಟ್ಟರೆ (ಅದೂ ಕೂಡ ಸೈದ್ಧಾಂತಿಕ ಕಾರಣಕ್ಕೆ) ಹೊರಗೆ ಹಾಕಲ್ಪಟ್ಟ ಎಲ್ಲರೂ ಬ್ರಾಹ್ಮಣೇತರರು. ಇಷ್ಟು ಜಾತಿ ಅಸಹ್ಯವನ್ನು ಎಲ್ಲ ಜಾತಿ-ಧರ್ಮದವರೂ ಓದುವ ಪಠ್ಯದಲ್ಲಿ ತರಬೇಕಿತ್ತಾ? ಇದನ್ನು #BrahminTextBooks ಎಂದು ಕರೆಯದೆ ಇನ್ನೇನೆಂದು ಕರೆಯಬೇಕು ಹೇಳಿ? ಬೇರೆಯವರು ಇರಲಿ, ಸ್ವತಃ ಬ್ರಾಹ್ಮಣ ಸಮುದಾಯದ ಮಾನವಂತರೇ ಇದನ್ನು ಅಸಹ್ಯದ ಪರಮಾವಧಿ ಎನ್ನುತ್ತಿದ್ದಾರೆ. ಇದನ್ನು ವಿರೋಧಿಸಬಾರದೇ? ನೀವೇ ಹೇಳಿ? ನಾನೇನಾದರೂ ಬ್ರಾಹ್ಮಣನಾಗಿ ಹುಟ್ಟಿದ್ದರೆ ಈಗ ಮಾತನಾಡುತ್ತಿರುವುದಕ್ಕಿಂತ ಕಟುವಾಗಿ ಮಾತನಾಡುತ್ತಿದ್ದೆ." ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿ ಈ ಕೆಳಗಿನ ಪಟ್ಟಿಯನ್ನು ಪ್ರಕಟಿಸಿದ್ದಾರೆ ಕನ್ನಡ ಪರ ಹೋರಾಟಗಾರ, ಚಿಂತಕ ದಿನೇಶ್ ಕುಮಾರ್ ದಿನೂ ರವರು.

Advertisement
Advertisement
Recent Posts
Advertisement