ಸಿದ್ಧರಾಮಯ್ಯನವರು ಸುಟ್ಟು ಹಾಕಲು ಹೇಳಿರುವುದು ಅರ್ ಎಸ್ ಎಸ್ ಚಡ್ಡಿಯ ಕಿಸೆಯ ಒಳಗೆ ಅಡಗಿರುವ ಮನುವಾದಿ ಕಾರ್ಯಸೂಚಿ ಚಿಂತನೆಯ ಚಡ್ಡಿಯನ್ನೇ ಹೊರತು ಬಿಜೆಪಿಯ ಅಂಧ ಭಕ್ತರು ತೊಡುವ ಕೊಳಕು ಚಡ್ಡಿಯನ್ನಲ್ಲ. ಬಹುಶಃ ಸಿದ್ದರಾಮಯ್ಯ ನವರ ಈ ತಾತ್ವಿಕ ನೆಲೆಯ ಸಾಮಾಜಿಕ ಚಿಂತನೆಯ ಮಾತು, ವರ್ಣಾಶ್ರಮ ಧರ್ಮ ಪ್ರತಿಪಾದನೆಯ ವಿಷ ವರ್ತುಲದೊಳಗೆ ಸಿಕ್ಕಿ ಹಾಕಿಕೊಂಡು ಅಧಿಕಾರ ನಡೆಸುತ್ತಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿಗೆ ಅರ್ಥ ಆಗಲು ಸಾಧ್ಯವಿಲ್ಲ. ಇಂತಹ ನಿಷ್ಪ್ರಯೋಜಕ ಹಳೇ ಚಡ್ಡಿಗಳನ್ನು ತುಂಬಿದ ಗೋಣಿ ಹೊರಲು ಬಿಜೆಪಿಯಲ್ಲಿ ಸಾಕಷ್ಟು ಯೋಗ್ಯ ಯಾ ಸ್ವಯಂ ಘೋಷಿತ ಮೇಲ್ಜಾತಿಯ ನಾಯಕರು ಲಭ್ಯವಿರುವ ಹೊರತಾಗಿಯೂ ಬಿಜೆಪಿ ಈ ಕೆಲಸಕ್ಕೆ ಛಲವಾದೀ ನಾರಾಯಣ ಸ್ವಾಮಿಯಂತಹ ಒಬ್ಬ ಸಮರ್ಥ ದಲಿತ ನಾಯಕನನ್ನೇ ಏಕೆ ಆಯ್ಕೇ ಮಾಡಿದೆ ಎಂಬ ಬಗ್ಗೆ ಕೋಟಾ ಶೀನಿವಾಸ ಪೂಜಾರಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಕರೆ ನೀಡಿದೆ.
ಮರ ಕಡಿವ ಕೊಡಲಿಗೆ ಮರದ್ದೇ ಹಿಡಿ ಎಂಬಂತೆ, ಬಿಜೆಪಿ ದಲಿತ ಶೋಷಿತರ ಧಮನಕ್ಕೆ ಆ ವರ್ಗವನ್ನೇ ಅಸ್ತ್ರವಾಗಿ ಬಳಸುತ್ತಿರುವುದು ಇದು ಹೊಸತೇನಲ್ಲ. ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ಬಾಬಾ ಸಾಹೇಬ್ ಅಂಬೆಡ್ಕರ್ ರವರ ಹೆಸರ ಮುಂದಿರುವ 'ಸಂವಿಧಾನ ಶಿಲ್ಪಿ" ಎಂಬ ಗೌರವಾರ್ಥದ ಪದವನ್ನೇ ಕಿತ್ತುಹಾಕಿ ವಿಕೃತಿ ಮೆರೆದ ಬಿಜೆಪಿಯವರಿಂದ ಈ ನಾಡಿನ ಧಮನಿತ ವರ್ಗ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.