ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಮಸೂದ್ ಹಾಗೂ ಬಿಜೆಪಿ ಯುವ ಮೋರ್ಚಾದ ಮುಖಂಡ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್ ನಲ್ಲಿ ಹತ್ಯೆಗೀಡಾದ ಮಂಗಳಪೇಟೆ ನಿವಾಸಿಯಾಗಿದ್ದ ಫಾಝಿಲ್ ರವರುಗಳ ನಿವಾಸಕ್ಕೆ ಆದಿತ್ಯವಾರ (31/07/2022) ಕಾಂಗ್ರೆಸ್ ಪಕ್ಷದ ರಾಜ್ಯ ನಿಯೋಗವು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿತು.
ಆ ಬಳಿಕ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಜಿಲ್ಲೆಯಲ್ಲಿ ಕಳೆದ 10 ದಿನಗಳ ಅವಧಿಯೊಳಗೆ ನಡೆದ ಈ ಮೂರು ಪ್ರಕರಣಗಳು ಸಹ ಖಂಡನೀಯ ಹಾಗೂ ಈ ಪ್ರಕರಣಗಳಲ್ಲಿನ ನಿಜವಾದ ಅಪರಾಧಿಗಳನ್ನು ಅತ್ಯಂತ ಶೀಘ್ರವಾಗಿ ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಈ ಸಂಧರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಕೆ.ಹರೀಶ್ ಕುಮಾರ್, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ, ಅಭಯ ಚಂದ್ರ ಜೈನ್, ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.