"ಹೈದರಾಬಾದ್ ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ಕಿರುಹೊತ್ತಿಗೆಯಲ್ಲಿನ ವಿಷಯಗಳಿಗೆ ಬಿಜೆಪಿಯವರು ಉತ್ತರ ನೀಡಬೇಕು. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಅವರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ನೋಡೋಣ" ಎಂದವರು ಹೇಳಿದರು.
"ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ ಜನರ ಸಮಸ್ಯೆಗಳನ್ನು ಪರಿಹಾರ ಮಾಡುವ ಪ್ರಯತ್ನ ಮಾಡಿಲ್ಲ. ಇಂದು ಬೆಲೆಯೇರಿಕೆ ಗಗನ ಮುಟ್ಟಿದೆ. ಅಚ್ಚೇ ದಿನ್ ಆಯೇಗಾ ಎಂದು ಹೇಳುತ್ತಿದ್ದರು, ಹಿಂದೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 125 ಡಾಲರ್ ಇದ್ದರೂ ಡೀಸೆಲ್ ಬೆಲೆ 46, ಪೆಟ್ರೋಲ್ 76 ರೂಪಾಯಿ, ಗ್ಯಾಸ್ ಬೆಲೆ 414 ರೂಪಾಯಿ ಇತ್ತು. ಇವುಗಳಿಗೆ ಸಬ್ಸಿಡಿ ಕೊಟ್ಟು ಜನರಿಗೆ ಬೆಲೆ ಹೊರೆಯಾಗದಂತೆ ಮನಮೋಹನ್ ಸಿಂಗ್ ಅವರು ನೋಡಿಕೊಂಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 40 ಡಾಲರ್ ಆಸುಪಾಸು ಬಂದಿತ್ತು. ಹೀಗೆ ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಅದರ ಲಾಭವನ್ನು ಜನರಿಗೆ ವರ್ಗಾವಣೆ ಮಾಡಿಲ್ಲ. ಇಂದು ಗ್ಯಾಸ್ ಬೆಲೆ 1,050 ರೂಪಾಯಿ, ಡೀಸೆಲ್ ಬೆಲೆ 95 ರೂಪಾಯಿ, ಪೆಟ್ರೋಲ್ ಬೆಲೆ 113 ರೂಪಾಯಿ ಆಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ನಿರಂತರ ಏರಿಕೆ ಮಾಡಿದ್ದು. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಪ್ರತೀ ಲೀಟರ್ ಡೀಸೆಲ್ ಮೇಲೆ 3 ರೂಪಾಯಿ45 ಪೈಸೆ ಇದ್ದ ಅಬಕಾರಿ ಸುಂಕ ಮೋದಿ ಸರ್ಕಾರದಲ್ಲಿ 31 ರೂಪಾಯಿ 80 ಪೈಸೆ ಆಯಿತು. ಆಮೇಲೆ 10 ರೂಪಾಯಿ ಕಡಿಮೆ ಮಾಡಿದ್ದೇವೆ ಎಂದು ಹೇಳಿದರು. ಪೆಟ್ರೋಲ್ ಮೇಲೆ ಪ್ರತೀ ಲೀಟರ್ ಗೆ 9 ರೂಪಾಯಿ 20 ಪೈಸೆ ಇದ್ದ ಅಬಕಾರಿ ಸುಂಕ 32 ರೂಪಾಯಿ 98 ಪೈಸೆ ಆಯಿತು, ನಂತರ 5 ರೂಪಾಯಿ ಕಡಿಮೆ ಮಾಡಿದ್ರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕಡಿಮೆ ಯಾದರೂ ಬೆಲೆ ಇಳಿಕೆ ಮಾಡಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಿಂದಲೇ 26 ಲಕ್ಷ ಕೋಟಿ ಆದಾಯ ಬಂದಿದೆ. ಹಿಂದಿನ ಸರ್ಕಾರ ಸಾಲ ಮಾಡಿತ್ತು, ಅದನ್ನು ತೀರಿಸಲು ಹೆಚ್ಚು ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ರು" ಎಂದವರು ಆಕ್ರೋಶ ವ್ಯಕ್ತಪಡಿಸಿದರು.
"2020 ರಿಂದ ಗ್ಯಾಸ್ ಸಬ್ಸಿಡಿಯನ್ನು ನಿಲ್ಲಿಸಿದ್ರು. ಯಾವಾಗ ಡೀಸೆಲ್ ಬೆಲೆ ಏರಿಕೆ ಆಗುತ್ತೆ ಆಗ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತದೆ. ಸಾರಿಗೆ ವೆಚ್ಚ ಏರಿಕೆಯಾದಂತೆ ಆಹಾರ ಪದಾರ್ಥಗಳು, ಸಿಮೆಂಟ್, ಕಬ್ಬಿಣ ಇವುಗಳ ಬೆಲೆ ಹೆಚ್ಚಾಯಿತು. ಇದು ನರೇಂದ್ರ ಮೋದಿ ಅವರ 8 ವರ್ಷಗಳ ಕೊಡುಗೆ" ಎಂದವರು ವಿಶ್ಲೇಷಿಸಿದರು.
"ನಾವು 8 ವರ್ಷಗಳಲ್ಲಿ ಕರ್ನಾಟಕಕ್ಕೆ ವಿವಿಧ ಯೋಜನೆಗಳ ಅಡಿ 1,29,766 ಕೋಟಿ ಕೊಟ್ಟಿದ್ದೇವೆ ಎಂದು ಜಾಹಿರಾತು ನೀಡಿ, ತಮ್ಮ ಬೆನ್ನು ತಾವು ತಟ್ಟಿಕೊಂಡಿದ್ದಾರೆ. ಕಳೆದ 8 ವರ್ಷಗಳಲ್ಲಿ ಕರ್ನಾಟಕದಿಂದ ಸಂಗ್ರಹವಾಗಿರುವ ತೆರಿಗೆ 19 ಲಕ್ಷ ಕೋಟಿ. ಆದರೆ ಅವರು ನೀಡಿರುವುದು 1.29 ಲಕ್ಷ ಕೋಟಿ. ಇದರಲ್ಲಿ ನಮ್ಮ ತೆರಿಗೆ ಪಾಲು ಮತ್ತು ಕೇಂದ್ರ ಪ್ರಾಯೋಜಕತ್ವದ ಯೋಜನೆಗಳಿಗೆ 2.14 ಲಕ್ಷ ಕೋಟಿ. ಎರಡೂ ಒಟ್ಟು ಸೇರಿ ಸಿಕ್ಕಿರುವುದು 3.43 ಲಕ್ಷ ಕೋಟಿ ಚಿಲ್ಲರೆ ಹಣ. ಕಳೆದ ವರ್ಷ 2021-22 ರಲ್ಲಿ ಕರ್ನಾಟಕದಿಂದ ಸಂಗ್ರಹವಾದ ತೆರಿಗೆ 3 ಲಕ್ಷ ಕೋಟಿ. ನಮಗೆ 42% ಬರಬೇಕಾದ ಪಾಲಿನ ಪ್ರಕಾರ 19 ಲಕ್ಷ ಕೋಟಿಯಲ್ಲಿ 8 ಲಕ್ಷ ಕೋಟಿ ಬರಬೇಕು. ಬಹಳ ದೊಡ್ಡದಾಗಿ ಭೀಕ್ಷೆ ಕೊಟ್ಟವರಂತೆ ಜಾಹಿರಾತು ನೀಡಿದ್ದಾರೆ, ಈ ಹಣ ನಮ್ಮದೇ. ಕರ್ನಾಟಕದಿಂದಲೇ ತೆರಿಗೆ ಮೂಲಕ ಸಂಗ್ರಹವಾದ ಹಣ" ಎಂದವರು ಅಂಕಿಸಂಖ್ಯೆಗಳ ಸಮೇತ ವಿವರಿಸಿದರು.
"ನಮಗೆ 14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗದ ನಡುವೆ 1.07% ನಮ್ಮ ಪಾಲು ಕಡಿಮೆಯಾಯಿತು. ಇದರಿಂದ ನಮಗೆ ಬರುವ ಅನುದಾನ ಕಡಿಮೆಯಾಗಿದೆ. ನಮ್ಮ ರಾಜ್ಯಕ್ಕೆ ಮಾತ್ರ ಇಷ್ಟು ದೊಡ್ಡ ಅನ್ಯಾಯವಾಗಿದ್ದು. ಇದಕ್ಕಾಗಿ ಹಣಕಾಸು ಆಯೋಗದವರು ರಾಜ್ಯಕ್ಕೆ 5,495 ಕೋಟಿ ವಿಶೇಷ ಅನುದಾನ ಶಿಫಾರಸು ಮಾಡಿದ್ದರು, ಆದರೆ ಇಲ್ಲಿಂದ ರಾಜ್ಯಸಭೆಗೆ ಆಯ್ಕೆಯಾಗಿ, ಕೇಂದ್ರದ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಅವರು ಈ ಶಿಫಾರಸನ್ನು ಅಂತಿಮ ವರದಿಯಲ್ಲಿ ತೆಗೆದುಹಾಕಿಸಿದ್ರು. ಇದು ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಮಾಡಿರುವ ಅನ್ಯಾಯ. ಬಿಜೆಪಿಯ 25 ಜನ ಸಂಸದರು ಇದ್ದು, ಒಮ್ಮೆಯೂ ಈ ಬಗ್ಗೆ ಸಂಸತ್ತಿನಲ್ಲಿ ಮಾತನಾಡಿಲ್ಲ, ಪ್ರಧಾನಿ, ವಿತ್ತ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿಲ್ಲ" ಎಂದವರು ಖೇದ ವ್ಯಕ್ತಪಡಿಸಿದ್ದಾರೆ.
"ಮೋದಿ ಅವರು ನೋಟ್ ಬ್ಯಾನ್ ಮಾಡಿ ಇನ್ನುಮುಂದೆ ದೇಶದಲ್ಲಿ ಕಪ್ಪು ಹಣ ಇರಲ್ಲ, ಭ್ರಷ್ಟಾಚಾರ ಇರಲ್ಲ, ಭಯೋತ್ಪಾದನೆ ಇರಲ್ಲ ಎಂದು ಮಧ್ಯರಾತ್ರಿ ಭಾಷಣ ಮಾಡಿದ್ದೇ ಮಾಡಿದ್ದು. ಈಗ ಕಪ್ಪು ಹಣ, ಭ್ರಷ್ಟಾಚಾರ ಇಲ್ಲವೇ? ಭಯೋತ್ಪಾದನೆ ನಿಂತಿದೆಯೇ? ಇದರ ಬಗ್ಗೆ ಮೋದಿ ಅವರು ಮಾತೇ ಆಡಲ್ಲ. ಈಗ ಕಪ್ಪು ಹಣ ಎಷ್ಟಿದೆ ಎಂದು ಅವರೇ ಹೇಳಬೇಕು" ಎಂದು ಸಿದ್ದರಾಮಯ್ಯ ಹೇಳಿದರು.
"ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ನೋಟು ರದ್ದತಿ, ಜಿಎಸ್‌ಟಿ ಜಾರಿ, ಕೊರೊನಾ ಬರುವ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗಗಳು ಇದ್ದವು. ಈಗ ಅವುಗಳಲ್ಲಿ 2.5 ಕೋಟಿ ಉದ್ಯೋಗ ಉಳಿದಿವೆ. ವಿದ್ಯಾವಂತ ಯುವಜನತೆ ಕೆಲಸ ಕೇಳಿದರೆ ಪಕೋಡ ಮಾರಿ ಎಂದರು, ವಿದ್ಯಾವಂತರು ಪಕೋಡ ಮಾರೋಕೆ ಹೋದರೆ ಮೊದಲು ಪಕೋಡ ಮಾರುತ್ತಿದ್ದವರು ಎಲ್ಲಿ ಹೋಗಬೇಕು? ಇಂದು ದೇಶದ ನಿರುದ್ಯೋಗ ಮಿತಿಮೀರಿದೆ. ಸರ್ಕಾರದ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ" ಎಂದವರು ಕಿಡಿ ಕಾರಿದ್ದಾರೆ.
"ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ವಿಮಾನ ನಿಲ್ದಾಣಗಳು, ಬಂದರುಗಳು, ರಸ್ತೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಅಥವಾ ಲೀಜ್ ಮೇಲೆ ಕೊಡಲು ಆರಂಭ ಮಾಡಿದ್ದಾರೆ. ಈ ಖಾಸಗೀಕರಣದಿಂದ ಸರ್ಕಾರಿ ಉದ್ಯೋಗದಲ್ಲಿ ದೊರೆಯುತ್ತಿದ್ದ ಮೀಸಲಾತಿಯೂ ಇಲ್ಲವಾಗಿದೆ. ಒಂದು ಕಡೆ ನಿರುದ್ಯೋಗ ಸೃಷ್ಟಿ ಮತ್ತು ಇನ್ನೊಂದು ಕಡೆ ಮೀಸಲಾತಿ ಸಿಗದಂತೆ ಮಾಡಿ ಶೋಷಿತರಿಗೆ, ಕೆಳ ವರ್ಗದ ಜನರಿಗೆ, ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ" ಎಂದವರು ಆರೋಪಿಸಿದ್ದಾರೆ.
"ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಆದರೆ ಈಗ ರೈತರ ಸಾಲ ದುಪ್ಪಟ್ಟಾಗಿದೆ. ಕೊರೊನಾ ಬಂದಾಗ ರೈತರಿಗೆ ಮಾರಕವಾಗಿರುವ 3 ಕಾನೂನುಗಳನ್ನು ಜಾರಿ ಮಾಡಿದ್ರು, ರೈತರ ಪ್ರತಿಭಟನೆ ನಂತರ ಇದನ್ನು ಪಾಪಾಸು ಪಡೆದರು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಕೊಡಲಿಲ್ಲ, ಗೊಬ್ಬರದ ಬೆಲೆ, ಬಿತ್ತನೆ ಬೀಜದ ಬೆಲೆ ಹೆಚ್ಚಾಗಿದೆ, ಎಲ್ಲಾ ಬೆಳೆಗಳಿಗೆ ಎಂ.ಎಸ್.ಪಿ ನೀಡಲಿಲ್ಲ. ಹೀಗಾದರೆ ರೈತರ ಆದಾಯ ದುಪ್ಪಟ್ಟಾಗೋದು ಹೇಗೆ?
ನ್ಯಾಷನಲ್ ಸ್ಯಾಂಪಲ್ ಸರ್ವೇ ಪ್ರಕಾರ 2015-16 ರಲ್ಲಿ ರೈತ ಕುಟುಂಬದ ವಾರ್ಷಿಕ ಆದಾಯ 96,703 ರೂಪಾಯಿ ಇತ್ತು. ಅಂದರೆ ತಿಂಗಳಿಗೆ ಒಬ್ಬ ರೈತನ ಆದಾಯ 8 ಸಾವಿರ. ಇದು 2022 ರಲ್ಲಿ 1,72,694 ರೂಪಾಯಿ ಆಗಬೇಕಿತ್ತು, ಅಂದರೆ ಪ್ರತೀ ತಿಂಗಳು 20 ಸಾವಿರ ಬರಬೇಕಿತ್ತು. ಈಗಿದು ಬಂದಿದೆಯಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ಹಾಳು ಮಾಡಿದ್ದಾರೆ. ಸಾಲ ಸುನಾಮಿ ರೀತಿ ಬೆಳೆದಿದೆ. ದೇಶಕ್ಕೆ ಸ್ವಾತಂತ್ರ ಬಂದ ನಂತರದಿಂದ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ವರೆಗೆ ಇದ್ದ ಸಾಲ 53 ಲಕ್ಷದ 11 ಸಾವಿರ ಕೋಟಿ, ಈ ವರ್ಷದ ಮಾರ್ಚ್ ಕೊನೆಗೆ ಇರುವ ಸಾಲ 155 ಲಕ್ಷ ಕೋಟಿ. ಕೇವಲ ಎಂಟು ವರ್ಷಗಳಲ್ಲಿ ದೇಶದ ಸಾಲ 102 ಲಕ್ಷ ಕೋಟಿ ಹೆಚ್ಚಾಗಿದೆ. ದೇಶದ ಪ್ರತಿಯೊಬ್ಬರ ತಲೆ ಮೇಲೆ 1 ಲಕ್ಷದ 70 ಸಾವಿರ ರೂಪಾಯಿ ಇದೆ.
ಸ್ವಾತಂತ್ರ್ಯ ಬಂದ ನಂತರದಿಂದ 2018 ರ ಮಾರ್ಚ್ ಗೆ ಇದ್ದ ನಮ್ಮ ರಾಜ್ಯದ ಸಾಲ 2 ಲಕ್ಷದ 42 ಸಾವಿರ ಕೋಟಿ. ಈ ವರ್ಷದ ಮಾರ್ಚ್ ಗೆ 5 ಲಕ್ಷದ 40 ಸಾವಿರ ಕೋಟಿ ಆಗಿದೆ. ಬೊಮ್ಮಾಯಿ ಅವರು ಒಮ್ಮೆ ಮಾತನಾಡುವಾಗ ಬಜೆಟ್ ನಲ್ಲಿ 71 ಸಾವಿರ ಕೋಟಿ ಸಾಲ ಮಾಡುತ್ತೇವೆ ಎಂದು ಹೇಳಿದ್ದೆವು, ಅದನ್ನು 63 ಸಾವಿರ ಕೋಟಿಗೆ ಇಳಿಕೆ ಮಾಡುತ್ತೇವೆ ಎಂದು ಹೇಳಿದ್ದರು, ಆದರೆ ನೈಜವಾಗಿ ಸಾಲ ಮಾಡಿದ್ದು 80 ಸಾವಿರ ಕೋಟಿ. ಬಿಜೆಪಿ ಸರ್ಕಾರ ಕಳೆದ 4 ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದೆ. ಇಡೀ ದೇಶ ಸಾಲದ ಸುಳಿಯಲ್ಲಿ ಸಿಕ್ಕಿಕೊಂಡಿದೆ, ಇದಕ್ಕೆ ಮೋದಿ ಸರ್ಕಾರದ ಕೆಟ್ಟ ಆರ್ಥಿಕ ನೀತಿಗಳು ಕಾರಣ. ಕೇಂದ್ರ ಮತ್ತು ದೇಶದ ಎಲ್ಲಾ ರಾಜ್ಯಗಳ ಒಟ್ಟು ಸಾಲ ಇರುವುದು 235 ಲಕ್ಷ ಕೋಟಿ" ಎಂದವರು ವಿವರಿಸಿದ್ದಾರೆ.
"ಕೇಂದ್ರ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದೆ. ಕೊರೊನಾ ಪೂರ್ವದಲ್ಲಿ ದೇಶದ ಸುಮಾರು 150 ಕಾರ್ಪೋರೇಟ್ ಬಾಡಿಗಳ ಆದಾಯ 23 ಲಕ್ಷ ಕೋಟಿ ರೂಪಾಯಿ ಇತ್ತು, ಕೊರೊನಾ ಬಂದ ನಂತರದ ಎರಡು ವರ್ಷಗಳಲ್ಲಿ ಇದು 53 ಲಕ್ಷ ಕೋಟಿ ಆಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಕೆಟ್ಟ ಆರ್ಥಿಕ ನೀತಿ ಮತ್ತು ಕಾರ್ಪೋರೇಟ್ ತೆರಿಗೆ ಪದ್ಧತಿ. ಕಾರ್ಪೋರೇಟ್ ಬಾಡಿಗಳ ಮೇಲಿನ ತೆರಿಗೆ 30% ಇಂದ 22% ಗೆ ಇಳಿಸಿದ್ದಾರೆ. ಜನ ಸಾಮಾನ್ಯರ ಮೇಲಿನ ಪರೋಕ್ಷ ತೆರಿಗೆ ಅಧಿಕವಾಗಿದೆ" ಎಂದು ಹೇಳಿದರು.
"ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ಪದಾರ್ಥಗಳ ಮೇಲೆ ಸೆಸ್ ಮೂಲಕ ತೆರಿಗೆ ಸಂಗ್ರಹಿಸಲಾಗುತ್ತಿದೆ. ಇದರಲ್ಲಿ ನಮಗೆ ಮುಂದೆ ಪಾಲು ಕೊಡಲ್ಲ. ಈ ವರೆಗೆ ನಮಗೆ ಸಿಗುತ್ತಿದ್ದ ಜಿಎಸ್‌ಟಿ ಪರಿಹಾರವನ್ನು ಈ ಸೆಸ್ ಹಣದಲ್ಲಿ ನೀಡುತ್ತಿದ್ದರು. ರಾಜ್ಯದ ತೆರಿಗೆ ಬೆಳವಣಿಗೆ ದರ 2016ರಲ್ಲಿ ಜಿಎಸ್‌ಟಿ ಬರುವ ಮುಂಚೆ 14 -15% ಇತ್ತು. ಈಗದು 6% ಗೆ ಬಂದಿದೆ. ಈ ವರ್ಷದ ಜೂನ್ ಕೊನೆಗೆ ಜಿಎಸ್‌ಟಿ ಪರಿಹಾರ ಸಿಗುವುದು ನಿಂತಿದೆ. ನಾನು ಸೇರಿದಂತೆ ಬಿಜೆಪಿಯೇತರ ಸರ್ಕಾರದ ಮುಖ್ಯಮಂತ್ರಿಗಳು ಜಿಎಸ್‌ಟಿ ಪರಿಹಾರವನ್ನು ಇನ್ನೂ 5 ವರ್ಷ ಮುಂದುವರೆಸಬೇಕು ಎಂದು ಒತ್ತಾಯ ಮಾಡಿದ್ದೆವು. ಈಗ ಬೊಮ್ಮಾಯಿ ಅವರು ಆಗಸ್ಟ್ ನಿಂದ ಕೊಡ್ತೀವಿ ಎಂದು ಮಾತು ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. ಈಗಲೇ ಯಾಕೆ ತೆಗೆದುಕೊಂಡಿಲ್ಲ? ಜುಲೈ ಇಂದಲೇ ನೀಡಬೇಕಿತ್ತಲ್ವ? ಈಗಲೂ ನಾನು ಜಿಎಸ್‌ಟಿ ಪರಿಹಾರವನ್ನು ಇನ್ನೂ 5 ವರ್ಷ ಮುಂದುವರೆಸಬೇಕು ಎಂದು ಒತ್ತಾಯ ಮಾಡುತ್ತೇನೆ. ಇದನ್ನು ನಮ್ಮ ರಾಜ್ಯದಿಂದಲೇ ಸಂಗ್ರಹವಾದ ಸೆಸ್ ಹಣದಲ್ಲಿ ನೀಡುವುದು" ಎಂದವರು ಆಗ್ರಹಿಸಿದರು.
"ಮೋದಿ ಸರ್ಕಾರದ 8 ವರ್ಷಗಳ 8 ಅನಾಹುತಗಳು:
ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.
ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರ ಗತಿಗೆ ಮುಟ್ಟಿದೆ.
ನಿರುದ್ಯೋಗ ತಾರಕಕ್ಕೇರಿದೆ.
ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ.
ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಬೀತವಾಗಿದೆ.
ಜಿಎಸ್‌ಟಿ, ನೋಟು ಅಮಾನ್ಯೀಕರಣ, ಕೊರೊನಾ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ.
ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ.
ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹ ಕಾರ್ಪೋರೇಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ" ಎಂದವರು ಆಕ್ರೋಶ ವ್ಯಕ್ತಪಡಿಸಿದರು.
"ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಬ್ಸಿಡಿ ಹಣವನ್ನು ಕಡಿಮೆ ಮಾಡಲಾಗುತ್ತಿದೆ. ಆಹಾರಕ್ಕೆ, ರೈತರ ಗೊಬ್ಬರಕ್ಕೆ ಸಬ್ಸಿಡಿ ಕೊಡದಿದ್ದರೆ ಹೇಗೆ?
ಮೋದಿ ಅವರ ಸರ್ಕಾರದಿಂದ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ರಾಜ್ಯ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುತ್ತಿದೆ.
ಉದಾಹರಣೆಗೆ: ಎಪಿಎಂಸಿ ಕಾಯ್ದೆಯನ್ನು ಕೇಂದ್ರ ಸರ್ಕಾರವೇ ಡ್ರಾಫ್ಟ್ ಮಾಡಿ ಕಳಿಸಿ, ಅನುಮೋದನೆ ಮಾಡಿ, ಜಾರಿಗೊಳಿಸಿ ಎಂದು ರಾಜ್ಯಗಳಿಗೆ ಕಳುಹಿಸಿದ್ರು. ಇದು ರಾಜ್ಯಗಳ ಪಟ್ಟಿಯಲ್ಲಿ ಬರುವ ವಿಷಯ. ಈ ಕಾನೂನು ಮಾಡಿದ ಮೇಲೆ ಸುಮಾರು 600 ಕೋಟಿ ಲಾಭ ಗಳಿಸುತ್ತಿದ್ದ ಎಪಿಎಂಸಿ ಗಳಲ್ಲಿ ಕಳೆದ ವರ್ಷ 200 ಕೋಟಿ ರೂಪಾಯಿ ಬಂದಿದೆ. ಎಪಿಎಂಸಿ ಗಳು ಸತ್ತುಹೋಗುತ್ತಿವೆ. ಅಮಿತ್ ಶಾ ಇದಕ್ಕಾಗಿ ಒಂದು ಇಲಾಖೆ ಸೃಷ್ಟಿ ಮಾಡಿ, ತಮ್ಮ ಬಳಿ ಖಾತೆ ಇಟ್ಟುಕೊಂಡು ಕೂತಿದ್ದಾರೆ. ಇಂಥಾ ಸಾಕಷ್ಟು ಅವಂತಾರಗಳು ಇವೆ" ಎಂದವರು ಹೇಳಿದ್ದಾರೆ.
"ಜಿಎಸ್‌ಟಿ ಪರಿಹಾರ ಬರುವುದು ನಿಂತುಹೋದರೆ ರಾಜ್ಯಕ್ಕೆ ಪ್ರತೀ ವರ್ಷ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದರಿಂದ ಸಾಲ ಹೆಚ್ಚಾಗುತ್ತೆ. ಬದ್ಧತಾ ಖರ್ಚುಗಳು ಇರುತ್ತದೆ, ರಾಜಸ್ವ ಸ್ವೀಕೃತಿಗಳಿಗಿಂತ ರಾಜಸ್ವ ಖರ್ಚು ಹೆಚ್ಚಾದಾಗ ರಾಜಸ್ವ ಕೊರತೆ ಉಂಟಾಗುತ್ತದೆ. ಈ ವರ್ಷದ ಬಜೆಟ್ ನಲ್ಲಿ ಹೇಳಿರುವ ಪ್ರಕಾರ ಸುಮಾರು 20,000 ಕೋಟಿ ರಾಜಸ್ವ ಕೊರತೆ ಇದೆ. ನಮ್ಮ ಸರ್ಕಾರದ 5 ವರ್ಷಗಳಲ್ಲಿ ಒಂದು ಬಾರಿಯೂ ರಾಜಸ್ವ ಕೊರತೆ ಆಗಿರಲಿಲ್ಲ, ರಾಜಸ್ವ ಉಳಿಕೆ ಬಜೆಟ್ ಇರುತ್ತಿತ್ತು, ಅದನ್ನು ಆಸ್ತಿ ಸೃಜನೆಗೆ ಬಳಕೆ ಮಾಡುತ್ತಿದ್ದೆವು. ಈಗ ಸಾಲ ಮಾಡಿ ಸಂಬಳ, ಪಿಂಚಣೆ ಕೊಡಬೇಕಾಗಿದೆ" ಎಂದು ಸಿದ್ದರಾಮಯ್ಯ ವಿವರಿಸಿದರು.
"ಈ ವರ್ಷ 29,000 ಕೋಟಿ ಬಡ್ಡಿ, 14,000 ಕೋಟಿ ಸಾಲದ ಅಸಲು ಒಟ್ಟು ಸೇರಿ ಸರ್ಕಾರ 43,000 ಕೋಟಿ ಕಟ್ಟಬೇಕು. ಈ ಹಣ ಯಾವ ಅಭಿವೃದ್ಧಿ ಕಾರ್ಯಗಳಿಗೂ ಬಳಕೆಯಾಗಲ್ಲ. ಇಂಥಾ ಹಲವು ಜನವಿರೋಧಿ ಕೆಲಸಗಳನ್ನು ಜನರ ಮುಂದಿಡುತ್ತೇವೆ. ಜನರೇ ತೀರ್ಮಾನ ಮಾಡುತ್ತಾರೆ" ಎಂದವರು ಹೇಳಿದರು.