Advertisement

ಆಳುವವರ ದ್ರೌಪದಿ ಮತ್ತು ಆದಿವಾಸಿಗಳ ದೋಪ್ದಿ| ಪ್ರೆಸಿಡೆಂಟ್ ಮುರ್ಮು ಮತ್ತು ಸಂಘದ ಮರ್ಮ

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು, ಸಾಮಾಜಿಕ ಹೋರಾಟಗಾರರು)

ಭಾರತದ ೧೫ನೇ ’ಪ್ರೆಸಿಡೆಂಟ್’ ಆಗಿ ಸಂತಲ್ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಮೊನ್ನೆ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಈ ಸ್ಥಾನಕ್ಕೇರಿದ ಪ್ರಪ್ರಥಮ ಆದಿವಾಸಿ. ಎರಡನೇ ಮಹಿಳೆ. ಅತ್ಯಂತ ಚಿಕ್ಕ ಪ್ರಾಯದ ಪ್ರೆಸಿಡೆಂಟ್. ಸ್ವಾತಂತ್ರ್ಯ ಬಂದ ನಂತರದ ಪೀಳಿಗೆಯ ಮೊಟ್ಟಮೊದಲ ಪ್ರೆಸಿಡೆಂಟ್..ಇತ್ಯಾದಿ ಹೆಗ್ಗಳಿಕೆಗಳು ದ್ರೌಪದಿ ಮುರ್ಮು ಅವರ ಜೊತೆಗೆ ಈಗ ಥಳುಕು ಹಾಕಿಕೊಂಡಿವೆ.

ಒರಿಸ್ಸದ ಆದಿವಾಸಿ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಅತ್ಯಂತ ಹಿಂದುಳಿದ ಸಂತಾಲ್ ಆದಿವಾಸಿಯಾದ ಮುರ್ಮು ಅವರು ಈ ದೇಶದ ಪ್ರೆಸಿಡೆಂಟ್ ಆಗಿರುವುದಕ್ಕೆ ಅದರದೇ ಆದ ಸಾಂಕೇತಿಕ ಮಹತ್ವವಿದೆ.

ಆದರೆ ಈ ಸಂಕೇತಗಳಿಗೆ ಮಹತ್ವ ಬರುವುದು ಸಂಕೇತಗಳು ಸಾರಭೂತ ಬದಲಾವಣೆಯನ್ನು ಪ್ರತಿನಿಧಿಸುವಾಗ ಮಾತ್ರ. ದಲಿತ-ಆದಿವಾಸಿ ಸಮುದಾಯಗಳ ಸಬಲೀಕರಣದ ಭಾಗವಾಗಿ ದಲಿತರೋ, ಆದಿವಾಸಿಗಳೋ ಪ್ರೆಸಿಡೆಂಟುಗಳಾದರೆ ಆ ಸಂಕೇತಕ್ಕೆ ಸತ್ವವಿರುತ್ತದೆ. ಆದರೆ ದಲಿತ-ಆದಿವಾಸಿ ಸಮುದಾಯಗಳ ಜಲ್-ಜಂಗಲ್-ಜಮೀನ್ ಗಳನ್ನು ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಆದಿವಾಸಿ ಅಸ್ಮಿತೆಗಳನ್ನು ಹಿಂದೂತ್ವ ರಾಜಕಾರಣ ಕಬಳಿಸುತ್ತಿರುವ ಸಂದರ್ಭದಲ್ಲಿ ಆದಿವಾಸಿ ಮಹಿಳೆಯೊಬ್ಬರು ದೇಶದ ಪ್ರೆಸಿಡೆಂಟ್ ಆಗುವುದು ಕಾರ್ಪೊರೇಟ್-ಹಿಂದೂತ್ವವಾದಿ ಕುತಂತ್ರಗಳಿಗೆ ಮಾತ್ರ ಸಂಕೇತವಾಗುತ್ತದೆ.

ಪುತಿ ಎಂಬ ಹೆಸರಿನ ಆದಿವಾಸಿ ಹುಡುಗಿಯೊಬ್ಬಳ ಹೆಸರನ್ನು ಶಾಲ ಅಧ್ಯಾಪಕಿಯೊಬ್ಬರು ದ್ರೌಪದಿ ಎಂದು ಬದಲಿಸಿ ಭಾರತದ ನಾಗರಿಕ ಸಮಾಜಕ್ಕೆ ಸಹ್ಯಗೊಳಿಸುವಂತೆ ಮಾಡಿದ್ದು ದ್ರೌಪದಿ ಮುರ್ಮು ಅವರ ಇಡಿ ರಾಜಕೀಯ ಜೀವನದ ರೂಪಕದಂತಿದೆ.

ದ್ರೌಪದಿ ಮುರ್ಮು ಅವರು ತಮ್ಮ ಭಾಷಣದಲ್ಲಿ ಹೇಳಿಕೊಂಡಂತೆ ಭಾರತಕ್ಕೆ ಸ್ವಾತಂತ್ರ್ಯ್ ಬಂದು ೫೦ ವರ್ಷಗಳಾದಾಗ ಅವರ ರಾಜಕೀಯ ಜೀವನ ಹಿಂದೂತ್ವವಾದಿ ಪಕ್ಷವಾದ ಬಿಜೆಪಿಯೊಂದಿಗೆ ಪ್ರಾರಂಭವಾಯಿತು. ಇದೀಗ ಭಾರತದ ಸ್ವಾತಂತ್ರ್ಯಕ್ಕೆ ೭೫ ತುಂಬುತ್ತಿರುವಾಗ ಅವರು ಪ್ರೆಸಿಡೆಂಟ್ ಆಗಿದಾರೆ. ಮುಂದಿನ ೨೫ ವರ್ಷಗಳ ಆರೆಸ್ಸೆಸ್-ಬಿಜೆಪಿ ಕನಸಿನ ನವಭಾರತದ ಅಮೃತಕಾಲದ ಮುನ್ನುಡಿ ಬರೆಯುತ್ತಿದ್ದಾರೆ.

ಒಬ್ಬ ಆದಿವಾಸಿ ಮಹಿಳೆ ಪುತಿಯಿಂದ ದ್ರೌಪದಿಯಾಗಿ ಪ್ರೆಸಿಡೆಂಟ್ ಆದ ರೂಪಾಂತರ ಮತ್ತು ಪಯಣದಲ್ಲಿ ಹಲವಾರು ಆತಂಕಕಾರಿ ಸಂಕೇತಗಳು ಮತ್ತು ಸಂದೇಶಗಳಿವೆ.

ದ್ರೌಪದಿಗಳಾಗದ ದೋಪ್ದಿಗಳ ಭಾರತದಲ್ಲಿ..

ಏಕೆಂದರೆ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರು ಹುಟ್ಟಿನಿದ ಆದಿವಾಸಿಯಾಗಿದ್ದರೂ, ವಾಸ್ತವದಲ್ಲಿ ಈ ದೇಶದ ಕೋಟ್ಯಾಂತರ ಆದಿವಾಸಿ ದೋಪ್ದಿ ಗಳನ್ನು ಸಂಕೇತಿಸುವುದಿಲ್ಲ. ಪ್ರತಿನಿಧಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಬರಲಿರುವ ದಿನಗಳಲ್ಲಿ ಪ್ರೆಸಿಡೆಂಟ್ ದ್ರೌಪದಿ ಮುರ್ಮು ಅವರ ಹೆಸರಿನಲ್ಲಿ ಸೇನೆ ಮತ್ತು ಪೊಲೀಸರು ದೋಪ್ದಿಯರನ್ನು ಬೇಟೆಯಾಡಲಿದ್ದಾರೆ. (ದೋಪ್ದಿ - ಪ್ರಖ್ಯಾತ ಜನಪರ ಲೇಖಕಿ ಮಹಾಶ್ವೇತಾದೇವಿಯವರ ಒಂದು ಕಥೆಯ ಆದಿವಾಸಿ ನಾಯಕಿಯ ಹೆಸರು. ೧೯೭೧ರ ಆಸುಪಾಸಿನಲ್ಲಿ ಸರ್ಕಾರವು ಆದಿವಾಸಿಗಳ ನೆಲ ಮತ್ತು ನೆಲೆಯನ್ನು ಕಸಿದುಕೊಳ್ಳಲು ಪ್ರಾರಂಭಿಸಿದ್ದಾಗ ಭೂಮಾಲಿಕರು, ವ್ಯಾಪಾರಿಗಳು ಮತ್ತು ಸರ್ಕಾರದ ವಿರುದ್ಧ ಸಶಸ್ತ್ರ ಬಂಡಾಯ ಹೂಡಿದ್ದ ಮಹಾನಾಯಕಿ. ಆಕೆ ಸೆರೆಸಿಕ್ಕಾಗ ಪೊಲಿಸರು ಆದಿವಾಸಿ ಹೋರಾಟವನ್ನು ದಮನ ಮಾಡಬೇಕೆಂಬ ರಾಜಕೀಯ ಉದ್ದೆಶದ ಭಾಗವಾಗಿ ದೋಪ್ದಿಯನ್ನು ಸಾಮೂಹಿಕ ಅತ್ಯಾಚಾರ ಮಾಡುತ್ತಾರೆ. ಪುರಾಣದಲ್ಲಿ ದ್ರೌಪದಿಯ ವಸ್ತ್ರಾಪಹರಣವಾದಾಗ ಕೃಷ್ಣ ಆಕೆಯನ್ನು ರಕ್ಷಿಸಿದ ಎಂಬ ಕಥನಗಳಿದ್ದರೂ ವಾಸ್ತವದಲ್ಲಿ ಅದಿವಾಸಿ ದೋಪ್ದಿಯನ್ನು ರಕ್ಷಿಸಬೇಕಾದವರೇ ಅತ್ಯಾಚಾರ ಮಾಡುತ್ತಾರೆ. ಆದರೆ ದೋಪ್ದಿ ಬಲಾತ್ಕಾರಕ್ಕೊಳಗಾದ ತನ್ನ ದೇಹವನ್ನೇ ಬಂಡಾಯದ ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಾಳೆ.)

ದೋಪ್ದಿ ಕಥೆಯಲ್ಲಿ ಬಣ್ಣಿಸಿದ್ದಕ್ಕಿಂತಲೂ ಅತ್ಯಂತ ಕ್ರೂರವಾದ ಪೊಲೀಸರ ಕ್ರೌರ್ಯಕ್ಕೆ, ಕಾರ್ಪೊರೇಟ್ ಬಂಡವಾಳಶಾಹಿ-ಬ್ರಾಹ್ಮಣಶಾಹಿ ಪಕ್ಷಗಳ ದಾಳಿಗೆ ಇಂದು ಆದಿವಾಸಿಗಳು ಬಲಿಯಾಗುತ್ತಿದ್ದಾರೆ. ಆದರೂ ದ್ರೌಪದಿ ಮುರ್ಮು ಅಂಥವರು ಮಾತ್ರ ಕನಸು ಕಾಣಲು ಮತ್ತು ಅದನ್ನು ನನಸಾಗಿಸಿಕೊಳಲು ಮಾತ್ರ ಹೇಗೆ ಸಾಧ್ಯವಾಗುತ್ತಿದೆ ಎಂಬುದರ ಹಿಂದೆ ಈ ದೇಶದ ಅತ್ಯಂತ ಕ್ರೂರ ಸಾಂಸ್ಕೃತಿಕ ರಾಜಕಾರಣವಿದೆ.

ಮೊನ್ನೆ ಪ್ರಮಾಣವಚನ ಸ್ವೀಕರಿಸುತ್ತಾ ಪ್ರೆಸಿಡೆಂಟ್ ಮುರ್ಮು ಅವರು ಬ್ರಿಟಿಷರ ವಿರುದ್ಧ ಆದಿವಾಸಿ ಭಾರತವು ನಡೆಸಿದ ಸಂತಾಲ್, ಪೈಕ, ಕೋಲ್ ಮತ್ತು ಭಿಲ್‌ಎಂಬ ನಾಲ್ಕು ಮಹತ್ವದ ಬಂಡಾಯಗಳನ್ನು ನೆನಸಿಕೊಂಡರು. ಈ ನಾಲ್ಕು ಬಂಡಾಯಗಳು ಕೂಡ ಆದಿವಾಸಿಗಳ ಭೂಮಿಯನ್ನು ಕಸಿದು ಅವರನ್ನು ಎತ್ತಗಂಡಿ ಮಾಡಲು ಪ್ರಯತ್ನಿಸಿದ ಭೋಮಾಲಿಕರು-ಬಡ್ದಿವ್ಯಾಪಾರಿಗಳು ಮತ್ತು ಈಸ್ಟ್ ಇಂಡಿಯಾ ಕಂಪನಿಗಳ ಜಂಟಿ ದಮನದ ವಿರುದ್ಧ ನಡೆದ ಮಹಾನ್ ಸ್ವಾತಂತ್ರ್ಯ ಸಮರಗಳು.

ಆದಿವಾಸಿಗಳನ್ನು ದೇಶದ್ರೋಹಿಗಳೆನ್ನುವ ಸಂಸದೀಯ ಭಾರತದಲ್ಲಿ ...

ಸ್ವಾತಂತ್ರ್ಯಾ ನಂತರವೂ ಆದಿವಾಸಿಗಳ ಪರಿಸ್ಥಿತಿಯಲ್ಲಿ ಹೆಚ್ಚು ವ್ಯತ್ಯಾಸಗಳು ಬಂದಿಲ್ಲ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಆದಿವಾಸಿಗಳಿಗೆ ಜಮೀನು ಒಡೆತನ ಖಾತರಿ ಮಾಡುವ ಅರಣ್ಯ ಹಕ್ಕು ಕಾಯಿದೆ-೨೦೦೬ ಜಾರಿಗೆ ಮಾಡಿದರೂ, ಆದಿವಾಸಿಗಳ ಜಮೀನು ವಶಪಡಿಸಿಕೊಳ್ಳಲು ಆದಿವಾಸಿಗಳ ಗ್ರಾಮಸಭೆಯ ಪರವಾನಗಿ ಬೇಕೆಂಬ ನಿಯಮವನ್ನು ರೂಪಿಸಿದರೂ, ಇವೆಲ್ಲವನ್ನು ಆಯಾ ರಾಜ್ಯಗಳ ರಾಜ್ಯಪಾಲರುಗಳ ನೇರೆ ನಿಗಾವಣೆಯಲ್ಲಿ ನಡೆಯಬೇಕೆಂಬ ಕಾನೂನನ್ನು ಕೂಡಾ ರೂಪಿಸಿದರೂ, ಇದೇ ಅವಧಿಯಲ್ಲಿ ಅತಿ ಹೆಚ್ಚು ಅರಣ್ಯಭೂಮಿಯು ಕಾರ್ಪೊರೇಟ್ ಪಾಲಾಯಿತು. ಅದರ ವಿರುದ್ಧ ಹೋರಾಡುತ್ತಿದ್ದ ಆದಿವಾಸಿಗಳನ್ನು ಕಾಂಗ್ರೆಸ್ ಪಕ್ಷವೇ ಆಪರೇಷನ್ ಗ್ರೀನ್ ಹಂಟ್ ಮತ್ತು ಸಲ್ವಾ ಜುಡುಂ ಹೆಸರಿನಲ್ಲಿ ಭೀಕರವಾಗಿ ದಮನ ಮಾಡಿತು.

ಆದರೆ ಮೋದಿ ಸರ್ಕಾರ ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಈ ನೆಪಮಾತ್ರದ ಹಕ್ಕುಗಳು ಆದಿವಾಸಿಗಳಿಗೆ ಇಲ್ಲವಾಯಿತು. ಕಾರ್ಪೊರೇಟ್ ಬಂಡವಾಳಿಗರ ಪರವಾಗಿ ಯಾವುದನ್ನು ಕಾಂಗ್ರೆಸ್ ಸುತ್ತುಬಳಸಿ ಮಾಡುತ್ತಿತ್ತೋ ಅದನ್ನು ಮೋದಿ ಸರ್ಕಾರ ನೇರವಾಗಿ, ಕ್ರೂರವಾಗಿ ಮಾಡುತ್ತಾ ಅದಕ್ಕೆ ದೇಶಭಕ್ತಿಯ ಲೇಪನ ಮಾಡಿತು. ಮತ್ತು ಅದನ್ನು ವಿರೋಧಿಸುವ ದೋಪ್ದಿಯರನ್ನು ದೇಶದ್ರೋಹಿಗಳೆಂದು ಬಣ್ಣಿಸಲು, ಬಂಧಿಸಲು, ಎನ್‌ಕೌಂಟರ್‌ನಲ್ಲಿ ಕಗ್ಗೊಲೆ ಮಾಡಲು ಪ್ರಾರಂಭಿಸಿತು.

ಅದರಲ್ಲೂ ಆದಾನಿಯ ವಿದ್ಯುತ್ ಸ್ಥಾವರಗಳಿಗೆ ಅಗ್ಗದ ಕಲ್ಲಿದ್ದನು ಒದಗಿಸಲು, ಲಕ್ಷಾಂತರ ಕೋಟಿ ಮೌಲ್ಯದ ಅಪರೂಪದ ಖನಿಜಗಳನ್ನು ಬಗೆದು ರಫ಼್ತು ಮಾಡಿಕೊಳ್ಳಲು ಇನ್ನಿತರ ದೊಡ್ಡ ಕಾರ್ಪೊರೇಟ್ ಬಂಡವಳಿಗರಿಗೆ ಅವಕಾಶ ಮಾಡಿಕೊಡಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಅರಣ್ಯ ಹಕ್ಕು ಕಾಯಿದೆಗಳನ್ನು ಅರ್ಥವಿಲ್ಲದಂತೆ ಮಾಡಲು ಹೊರಟಿದೆ.

ಆದಿವಾಸಿ ದ್ರೌಪದಿ ಮುರ್ಮು ಅವರನ್ನು ಪ್ರೆಸಿಡೆಂಟ್ ಗಿರಿಗೆ ನೇಮಿಸಿದ ಕೇವಲ ಐದುದಿನಗಳ ನಂತರದಲ್ಲಿ ಆದಿವಾಸಿ ಜಮೀನನನ್ನು ವಶಪಡಿಸಿಕೊಳ್ಳಲು ಗ್ರಾಮಸಭೆಯ ಅನುಮತಿಯ ಅಗತ್ಯವೇ ಇಲ್ಲವೆಂಬ ಕಾನೂನಿಗೆ ತಿದ್ದುಪಡಿ ತಂದಿದೆ. ಚತ್ತಿಸ್‌ಘಡ್ ನಲ್ಲಿ ಮತ್ತು ಜಾರ್ಖಂಡ್ ನಲ್ಲಿ ತಾನು ಅಧಿಕಾರದಲ್ಲಿದ್ದಾಗ ಜಲ್, ಜಂಗಲ್ ಜಮೀನ್ ಮೇಲಿನ ಹಕ್ಕಿಗಾಗಿ ಹೋರಾಡುತ್ತಿದ್ದ ಪಾತಾಲ್‌ಘಡಿ ಚಳವಳಿಯ ಹಲವಾರು ಆದಿವಾಸಿಗಳನ್ನು ಎನ್‌ಕೌಂಟರ್ ಮಾಡಿದ್ದಲ್ಲದೆ, ಅದರ ಬಗ್ಗೆ ಧ್ವನಿ ಎತ್ತಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯಂಥ ಮಾನವಹಕ್ಕು ಕಾರ್ಯಕರ್ತರ ಮೇಲೆ ದೇಶದ್ರೋಹಿ ಕೇಸುಗಳನ್ನು ಹೊರಿಸಿ, ಜಾಮೀನನ್ನು ಕೊಡದೆ ಜೈಲಿನಲ್ಲಿ ಸಾಯುವಂತೆ ಮಾಡಿದೆ. ಅದರಲ್ಲೂ ಯುಎಪಿಎ ಕಾಯಿದೆಯನ್ನು ಬೇಕಾಬಿಟ್ಟಿ ಬಳಸಿ ೨೦೧೬-೨೦ರ ಅವಧಿಯಲ್ಲಿ ಸಾವಿರಾರು ಆದಿವಾಸಿಗಳನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ.

೨೦೧೭ರಲ್ಲಿ ಯಾವುದೇ ಪುರಾವೆ ಇಲ್ಲದಿದ್ದರೂ ದಂತೆವಾಡಾದ ಬುರ್ಕಾಪಾಲಿನಲ್ಲಿ ಪೊಲಿಸ್ ಕ್ಯಾಂಪಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಬಂದಿಸಲಾಗಿದ್ದ ೧೨೧ ಆದಿವಾಸಿಗಳನ್ನು ಐದುವರ್ಷಗಳ ನಂತರ ಕೋರ್ಟು ಪುರಾವೆ ಇಲ್ಲವೆಂಬ ಕಾರಣಕ್ಕೆ ಬಿಡುಗಡೆ ಮಾಡಿದೆ. ೨೦೦೯ರಲಿ ಚತ್ತಿಸ್‌ಘದ್ ನಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸರು ೧೭ ಆದಿವಾಸಿಗಳನ್ನು ಕೊಂದುಹಾಕಿದ ಪ್ರಕರಣದಲ್ಲಿ ಕಾನೂನುಬದ್ಧವಾಗಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಗಾಂಧಿವದಿ ಹಿಮಾಂಶುಕುಮಾರ್ ಅವರನ್ನು ದೇಶದ್ರೋಹಿ ಎಂದು ಚಿತ್ರಿಸಿದೆ. ದುರದೃಷ್ಟವಶತ್ ಕೋರ್ಟು ಕೂಡಾ ಅದನ್ನು ಒಪ್ಪಿಕೊಂಡು ಪೊಲೀಸರ ಮೇಲೆ ಕೇಸು ದಾಖಲಿಸಿದ್ದಕ್ಕಾಗಿ ಹಿಮಾಂಶುಕುಮಾರ್ ಅವರಿಗೇ ದಂಡ ವಿಧಿಸಿದೆ.

ಒಟ್ಟಿನಲ್ಲಿ ಮೋದಿ ಸರ್ಕಾರ ಅದಿಕಾರಕ್ಕೆ ಬಂದಮೇಲಂತೂ ಆದಿವಾಸಿಗಳು ಕನಸುಕಾಣುವ ಸ್ವಾತಂತ್ರ್ಯವಿರಲಿ ಮಾತೆತ್ತುವ ಸ್ವಾತಂತ್ರ್ಯವನ್ನೂ ಕಳೆದುಕೊಂಡು ಅರಣ್ಯದಲ್ಲಿ ಭೀಕರ ಮೌನ ನೆಲಸಿದೆ.

ಆದಿವಾಸಿ ಸರ್ನ ಧರ್ಮವನ್ನು ಹಿಂದೂ ದ್ರೋಹಿಯೆನ್ನುವ ಭಾರತದಲ್ಲಿ..

ಇದೆಲ್ಲದರ ಜೊತೆಗೆ ಆದಿವಾಸಿಗಳು ತಾವು ಹಿಂದುಗಳಲ್ಲವೆಂದೂ ತಮ್ಮ ಮೂಲ ಧರ್ಮವಾದ ಸರ್ನಾ ಧಾರ್ಮಿಕ ಸಂಹಿತೆಯನ್ನು ಅನುಸರಿಸಲು ಸಾಂವಿಧಾನಿಕ ಅವಕಾಶ ಕೊಡಬೇಕೆಂದು ಸರ್ನ ಧಾರ್ಮಿಕ ಸಂಹಿತೆಗಾಗಿ ಹಲವಾರು ವರ್ಷಗಳಿಂದ ಹೋರಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರವು ತಮ್ಮ ಹಿಂದೂತ್ವ ಅಜೆಂಡಾದ ಭಾಗವಾಗಿ ಆದಿವಾಸಿಗಳ ಸರ್ನಾ ಧಾರ್ಮಿಕ ಅಸ್ಮಿತೆಯನ್ನು ಧ್ವಂಸ ಮಾಡುವ ರಾಜಕೀಯ ಮತ್ತು ಸಂಸ್ಕೃತಿಕ ಹುನ್ನಾರಗಳನ್ನು ಮಾಡುತ್ತಿದೆ. ವಾಸ್ತವದಲ್ಲಿ ೧೮೭೧ ರಿಂದ ಹಿಡಿದು ೧೯೫೧ರವರೆಗೂ ಎಲ್ಲಾ ಸೆನ್ಸಸ್‌ಗಳಲ್ಲೂ ಆದಿವಾಸಿಗಳನ್ನು ಎಲ್ಲಿಯೂ ಹಿಂದುಗಳೆಂದು ಪರಿಗಣಿಸಿರಲಿಲ್ಲ. ಮೇಲಾಗಿ ಸರ್ಣ ಧರ್ಮ ಸಂಹಿತೆ ಆದಿವಾಸಿಗಳ ಅತಿ ಪುರಾತನ ಕೂಗು. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ಅತ್ಯಂತ ಯೋಜನಾಬದ್ಧವಾಗಿ ಸರ್ಣ ಧರ್ಮ ಸಂಹಿತೆ ಚಳವಳಿಯು ಈ ದೇಶವನ್ನು ಅಸ್ಥಿರಗೊಳಿಸುವ ಉದ್ದೆಶದಿಂದ ಕ್ರಿಶ್ಚಿಯನ್ ಮಿಷನರಿಗಳು ಹುಟ್ಟುಹಾಕಿರುವ ದೇಶದ್ರೋಹಿ ಚಳವಳಿಯೆಂಬ ಅಪಪ್ರಚಾರ ಮತ್ತು ದಾಳಿಗಿಳಿದಿದೆ.

ಹೀಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಸಂಘಪರಿವಾರ ಆದಿವಾಸಿಗಳ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಸ್ವಾಯತ್ತತೆಯ ಮೇಲೆ ನಿರಂತರವಾಗಿ ದಾಳಿ ಮಾಡುತ್ತಾ ಕಾರ್ಪೊರೇಟ್ ಬಂಡವಾಳಿಗರ ಮತ್ತು ಬ್ರಾಹ್ಮಣೀಯ ಹಿಂದೂತ್ವದ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲಿ ಆದಿವಾಸಿ ಮಹಿಳೆಯಾದ ದ್ರೌಪದಿ ಮುರ್ಮು ಅವರು ಪ್ರೆಸಿಡೆಂಟ್ ಆಗಿದ್ದಾರೆ.

ಇದು ಆದಿವಾಸಿಗಳ ಕನಸು ನನಸಾದ ಸಂಕೇತವೋ ಅಥವಾ ಆದಿವಾಸಿಯಿಂದಲೇ ಆದಿವಾಸಿಗಳ ದಮನವನ್ನು ಮಾಡಿಸುವ ಕುತಂತ್ರದ ಸಂಕೇತವೋ?

ಆದಿವಾಸಿ ಭಾರತದ ಮೇಲೆ ಕಳೆದ ೭೫ ವರ್ಷಗಳಲ್ಲಿ ಹಾಗೂ ವಿಶೆಷವಾಗಿ ಕಳೆದ ೧೦ ವರ್ಷಗಳಲ್ಲಿ ನಡೆಯುತ್ತಿರುವ ಈ ದಾಳಿಗಳಬಗ್ಗೆ ದ್ರೌಪದಿ ಮುರ್ಮು ಅವರ ಪ್ರತಿಕ್ರಿಯೆ ಏನಿತ್ತು ಎಂಬುದರಲ್ಲಿ ಇದಕ್ಕೆ ಒಂದಷ್ಟು ಉತ್ತರಗಳು ದೊರೆತೀತು.

ದ್ರೌಪದಿ ಮುರ್ಮು ಮತ್ತು ಸಂಘದ ಮರ್ಮ

ದ್ರೌಪದಿ ಮುರ್ಮು ಅವರ ರಾಜಕೀಯ ಜೀವನ ಪ್ರಾರಂಭವಾದದ್ದೇ ಬಿಜೆಪಿ ಪಕ್ಷದಿಂದ. ಅವರು ಬಿಜೆಪಿಯಿಂದ ಒರಿಸ್ಸಾದಲ್ಲಿ ಶಾಸಕರೂ ಮತ್ತು ಮಂತ್ರಿಗಳೂ ಆಗಿದ್ದರು. ಆ ನಂತರ ಅವರನ್ನು ಬಿಜೆಪಿ ಆದಿವಾಸಿ ರಾಜ್ಯವಾಗಿರುವ ಜಾರ್ಖಂಡ್ ನ ರಾಜ್ಯಪಾಲರನ್ನಾಗಿಸಿತು. ಈ ಅವಧಿಯಲ್ಲಿ ಅವರು ಆದಿವಾಸಿಗಳ ಭೂಮಿಯನ್ನು ಸುಲಭವಾಗಿ ಕಸಿದುಕೊಳ್ಳುವ ಮಸೂದೆಯನ್ನು ಆಗಿನ ಆಡಳಿತರೂಢ ಬಿಜೆಪಿ ಸರ್ಕಾರ ತಂದಾಗ ಅದನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ವಾಪಸ್ ಕಳಿಸಿದ್ದು ಬಿಟ್ಟರೆ ಮಿಕ್ಕಂತೆ ದೇಶಾದ್ಯಂತ ಹಾಗೂ ಝಾರ್ಖಂಡ್ ನಲ್ಲಿ ಕೂಡ ಪಾತಾಳ್ ಘ್ಹಡಿ ಚಳವಳಿಯ ಮೇಲೆ ಪೊಲೀಸರು ನಡೆಸುತ್ತಿದ್ದ ಎಲ್ಲಾ ದೌರ್ಜನ್ಯಗಳಿಗೂ ಮೂಕಬೆಂಬಲ ನೀಡಿದ್ದರು. ಅಷ್ಟು ಮಾತ್ರವಲ್ಲ, ಆರ್ಟಿಕಲ್ ೩೭೦ ರದ್ಧತಿ, ಸಿಎಎ, ಕೋಮು ಗಲಭೆಗಳು, ಲಿಂಚಿಂಗ್, ರೈತ ವಿರೋಧಿ ಕಾಯಿದೆಗಳು, ಹಿಂದಿ ರಾಶ್ಟ್ರ ಭಾಷೆಯಾಗಿ ಹೇರಿಕೆ, ಕೋವಿಡ್- ಲಾಕ್ ಡೌನ್ ಅನ್ಯಾಯಗಳು ..ಇನ್ನಿತ್ಯಾದಿ ಎಲ್ಲಾ ವಿಷಯಗಳಲ್ಲೂ ರಾಜ್ಯಪಾಲರಾಗಿಯೂ ಬಿಜೆಪಿಯ ಅಧಿಕೃತ ನಿಲುವಗಳನ್ನು ಬಹಿರಂಗವಾಗಿ ಅನುಮೋದಿಸಿದ್ದರು.

ಆದಿವಾಸಿಯಾಗಿದ್ದರೂ ಪ್ರಕೃತಿ ಆರಾಧನೆಯನ್ನು ತನ್ನ ಧರ್ಮವೆನ್ನುವ ಸರ್‍ನ ಧರ್ಮ ಸಂಹಿತೆಗಿಂತ ತನ್ನನ್ನು ತಾನು ಹಿಂದೂಶಿವನ ಭಕ್ತೆಯೆಂದು ಘೋಷಿಸಿಕೊಳ್ಳುತ್ತಿದ್ದರು. ಮುರ್ಮು ಅವರು ಹಿಂದೂ ಮೇಲ್ಜಾತಿಗಳ ಆಧ್ತಾತ್ಮಿಕ ಗೀಳಾಗಿರುವ ಬ್ರಹ್ಮಕುಮಾರಿ ಪಂಥದ ಅನುಯಾಯಿಯೂ ಆಗಿದ್ದಾರೆ. ಅದನ್ನು ಸಾಂವಿಧಾನಿಕ ಹುದ್ದೆಯಲ್ಲಿರುವಾಗಲೂ ಬಹಿರಂಗವಾಗಿ ಪಾಲಿಸಿದ್ದರು. ಅಷ್ಟು ಮಾತ್ರವಲ್ಲ. ತನ್ನನ್ನು ಪ್ರೆಸಿಡೆಂಟ್ ಪದವಿಗೆ ಸೂಚಿಸಿದ ಮರುದಿನವೇ ತಾನು ಹಿಂದೂ ದೇವಾಲಯವನ್ನು ಸ್ವಚ್ಚಗೊಳಿಸುತ್ತಿರುವ ಫೋಟೋ ರಾಷ್ಟ್ರೀಯ ಮುಖ್ಯವಾಹಿನಿಯಲ್ಲಿ ಪ್ರಸಾರವಾಗುವಂತೆ ನೋಡಿಕೊಂಡು ತನ್ನ ಹಿಂದೂ ನಿಷ್ಟೆಯನ್ನು ಜಾಹೀರುಗೊಳಿಸಿದ್ದರು. ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದಾಗ ಬ್ರಾಹ್ಮಣ ಅರ್ಚಕರು ಸ್ಂಸ್ಕೃತದಲ್ಲಿ ಆಶೀರ್ವಚನ ಬೋಧಿಸಿದ್ದನ್ನು ಹೆಗ್ಗಳಿಕೆಯಿಂದ ಆರೆಸ್ಸೆಸ್ಸಿಗರು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಮುರ್ಮು ಅವರು ಕೂಡ ಬ್ರಾಹ್ಮಣರ ಆಶೀರ್ವಚನದಿಂದ ಸಂತೃಪ್ತರಾದ ಭಾವವನ್ನು ತೋರಿದ್ದಾರೆ.

ಈ ಹಿಂದೆ ಈ ದೇಶದ ಮೊದಲ ರಾಷ್ಟ್ರಪತಿಯಾದ ಬಾಬು ರಾಜೇಂದ್ರ ಪ್ರಸಾದ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ ೧೦೧ ಬ್ರಾಹ್ಮಣರ ಪಾದಪೂಜೆ ಮಾಡಿದ್ದರು. ಅದರ ವಿರುದ್ಧ ಇಡೀ ದೇಶ ತನ್ನ ರಾಜಕೀಯ ಹಾಗೊ ವೈಚಾರಿಕ ಭಿನ್ನಮತವನ್ನು ವ್ಯಕ್ತಪಡಿಸಿತ್ತು. ಆದರೆ ಈಗ ಅಂತದ್ದನ್ನು ವಿಮರ್ಶಿಸುವುದೂ ಸಹ ದೆಶದ್ರೋಹವಾಗಿಬಿಡುವ ಸನ್ನಿವೇಶವಿದೆ.

ಹೀಗೆ ದ್ರೌಪದಿ ಮುರ್ಮು ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವ್ಯಕ್ತಿತ್ವದಲ್ಲಿ ಯಾವುದೇ ಅದಿವಾಸಿ ಆತ್ಮಾಭಿಮಾನ ಹಾಗೂ ಸ್ವಾಯತ್ತ ಆದಿವಾಸಿ ವ್ಯಕ್ತಿತ್ವವಿಲ್ಲ. ಆಳುವ ಪಕ್ಷದ ಸಮಗ್ರ ಸೈದ್ಧಾಂತಿಕ ಧೋರಣೆಗಳ ಯೋಧೆಯೆಂದೂ ಸಾಬೀತು ಮಾಡಿದ ನಂತರವೇ ಬಿಜೆಪಿ-ಆರೆಸ್ಸೆಸ್ ಅವರನ್ನು ಪ್ರೆಸಿಡೆಂಟ್ ಹುದ್ದೆಗೆ ಆಯ್ಕೆ ಮಾಡಿತು.

ಹಿಂದಿನ ರಾಷ್ಟ್ರಪತಿಯಾಗಿದ್ದ ಕೋವಿಂದ್ ಅವರ ಆಯ್ಕೆಗೂ ಇದ್ದ ಮಾನದಂಡ ಇದೊಂದೇ ಆಗಿತ್ತು. ಕೋವಿಂದ್ ಅವರು ದಲಿತರು. ಆದರೆ ಅವರು ರಾಷ್ಟ್ರಪತಿಯಾಗಿದ್ದ ಇಡೀ ಅವಧಿಯಲ್ಲಿ ಅವರು ಮೋದಿ ಸರ್ಕಾರದ ಎಲ್ಲಾ ದಲಿತ ವಿರೋಧಿ, ಆದಿವಾಸಿ ವಿರೋಧಿ, ಮುಸ್ಲಿಂ ವಿರೋಧಿ, ಸಂವಿಧಾನ ವಿರೋಧಿ, ಯೋಜನೆಗಳಿಗೆ ಮೂಕ ಬೆಂಬಲ, ಸಂವಿಧಾನಿಕ ಅನುಮತಿ ಕೊಡುವುದನ್ನು ಬಿಟ್ಟು ಬೇರೇನನ್ನೂ ಮಾಡಲಿಲ್ಲ.

ಭಾರತದ ಸಂಸದೀಯ ಪ್ರಜಾತಂತ್ರದಲ್ಲಿ ರಾಷ್ಟ್ರಪತಿ ಹುದ್ದೆ ಕೇವಲ ಸಾಂಕೇತಿಕವಾದರೂ, ಕೇಂದ್ರ ಸರ್ಕಾರದ ಕ್ಯಾಬಿನೆಟ್ಟಿನ ಸಲಹೆ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ನಡೆಯಬೇಕಿದ್ದರೂ, ದೇಶದ ಸಂವಿಧಾನಕ್ಕೆ ಗಂಡಾಂತರ ಒದಗಿದಾಗ ರಾಷ್ಟ್ರಪತಿಗಳು ತಮ್ಮ ಚಿನ್ನದ ಪಂಜರದಿಂದ ಹೊರಬಂದು ಮಾತಾಡಿದ್ದಿದೆ. ಈ ದೇಶದ ಮೊದಲ ದಲಿತ ರಾಷ್ಟ್ರಪತಿಯಾಗಿದ್ದ ಕೆ. ಆರ್ . ನಾರಾಯಣನ್ ಅದಕ್ಕೊಂದು ಉದಾಹರಣೆ.

ಆದರೆ ಸರ್ವಾಧಿಕಾರಿಗಳು ಪ್ರಧಾನಿಗಳಾಗಿದ್ದಾಗ ರಾಷ್ಟ್ರಪತಿಗಳಾಗುವವರು ಚಿನ್ನದಪಂಜರದಲ್ಲಿರುವ ಸಾಕುಗಿಳಿಗಳು ಮಾತ್ರವಾಗಿರುತ್ತಾರೆ. ಅದು ಇಂದಿರಾಗಾಂಧಿಯ ಕಾಲದಲ್ಲೂ ಸಾಬೀತಾಗಿತ್ತು. ಈಗ ಈ ವಿದ್ಯಮಾನ ಮೋದಿಯವರ ಕಾಲದಲ್ಲಿ ಅದಕ್ಕಿಂತಲೂ ಅಪಾಯಕಾರಿಯಾದ ಸ್ವರೂಪವನ್ನು ತೆಗೆದುಕೊಂಡಿದೆ.

ಈ ದೇಶದಲ್ಲಿ ಆದಿವಾಸಿಗಳು ಜಲ್-ಜಂಗಲ್-ಜಮೀನ್ಮೇಲೆ ತಮ್ಮ ಸ್ವಾಯತ್ತ ಅಧಿಕಾರವನ್ನು ಉಳಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪನಿಯೆಂಬ ವಿದೇಶಿ ಬಂಡವಾಳಶಾಹಿ, ಭೂಮಾಲಿಕರ ವಿರುದ್ಧ ಸ್ವಾತಂತ್ರ್ಯ ಸಮರವನ್ನು ಪಾರ್ರಂಭಿಸಿದ್ದರು. ಇಂದು ಕೂಡ ಆದಿವಾಸಿಗಳು ಅದೇ ಹೋರಾಟವನ್ನು ನಡೆಸುತ್ತಲೇ ಇದ್ದಾರೆ.
ಆಗ ಹೋರಾಟ ಮಾಡಿದವರನ್ನು ದೇಶಭಕ್ತರೆಂದು, ಆ ಹೋರಾಟಗಳನ್ನು ಸ್ವಾತಂತ್ರ್ಯ ಸಮರವೆಂದು ಪ್ರೆಸಿಡೆಂಟ್ ಮುರ್ಮು ತಮ್ಮ ಮೊದಲ ಭಾಷಣದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಈ ಕಾಲದಲ್ಲಿ ಅದೇ ಹೋರಾಟ ಮುಂದುವರೆಸುತ್ತಿರುವವರನ್ನು ದೇಶದ್ರೋಹಿಗಳೆನ್ನುವವರೇ ಅವರನ್ನು ರಾಷ್ಟ್ರಪತಿಯನ್ನಾಗಿಸಿದ್ದಾರೆ.

ಹೀಗಾಗಿ ಅವರು ಸಂಕೇತಿಸುವುದು ಆದಿವಾಸಿಗಳ ಕನಸಲ್ಲ. ಆದಿವಾಸಿಗಳ ಕನಸುಗಳನ್ನು ಕೊಂದವರ ಉದ್ದೇಶಗಳನ್ನು!

ದಲಿತ ಹಾಗೂ ಆದಿವಾಸಿ ಸಮುದಾಯಗಳ ಮೇಲೆ ನಡೆಸುತ್ತಿರುವ ನಿರಂತರ ಆರ್ಥಿಕ-ಸಾಂಸ್ಕೃತಿಕ ದಾಳಿಗಳನ್ನು ಮರೆಮಾಚಲು ಮಾಜಿ ರಾಷ್ಟ್ರಪತಿ ಕೋವಿಂದ್ ಅವರ ದಲಿತ ಹಿನ್ನೆಲೆಯನ್ನು, ಈಗ ಮುರ್ಮು ಅವರ ಆದಿವಾಸಿ ಹಿನ್ನೆಲೆಯನ್ನು ಬಿಜೆಪಿ-ಅರೆಸ್ಸೆಸ್ ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಕೊಲ್ಲುತ್ತಿರುವವರೇ ಕಾಯುತ್ತಿರುವವರು ಎಂಬ ವೇಷ ಧರಿಸಿದ್ದಾರೆ. ದಮನಿತ ಸಮುದಾಯಗಳ ಮೇಲೆ ಹೆಗಲ ಮೇಲೆ ಸ್ನೇಹದ ಕೈಹಾಕಿ ಒಡಲನ್ನು ಸೂರೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಈ ಮೋಸಕ್ಕೆ ಪರದೆಗಳಿರಲಿಲ್ಲ. ಆರೆಸ್ಸೆಸ್ ಕಾಲದಲ್ಲಿ ಈ ಹಗಲು ದರೋಡೆಗೆ ದೇಶ-ಧರ್ಮದ ಮುಸುಕು ಹೊದಿಸಿ ಕಾಣದಂತೆ ಮಾಡಲಾಗಿದೆ.

ಈ ದೇಶದಲ್ಲಿ ದಮನಿತ ಸಮುದಾಯಗಳಲ್ಲಿ ದ್ರೌಪದಿಯಗಿ ರೂಪಾಂತರವಾದವರಿಗೆ ಮಾತ್ರ ಕನಸು ಕಾಣುವ ಮತ್ತು ಕನಸನ್ನು ನನಸಾಗಿಸಿಕೊಳ್ಳುವ ಅವಕಾಶವನ್ನು ಈ ಕಾರ್ಪೊರೇಟ್-ಬ್ರಾಹ್ಮಣಶಾಹಿ ವ್ಯವಸ್ಥೆ ಕೊಡುತ್ತದೆಯೇ ವಿನಾ ಸ್ವಾಭಿಮಾನ ಮತ್ತು ಸ್ವಂತಿಕೆಯಿಂದ ಸ್ವಾಯತ್ತವಾಗಿ ಬಾಳಬೇಕೆಂದುಕೊಂಡ ದೋಪ್ದಿಗಳ ಕನಸುಗಳು ನನಸಾಗುವುದಿರಲಿ ಬದುಕುಗಳೇ ಛಿದ್ರಗೊಳಿಸಲಾಗುತ್ತಿದೆ.

ಹೀಗಾಗಿ ಆದಿವಾಸಿಮಹಿಳೆಯೊಬ್ಬರು ಪ್ರೆಸಿಡೆಂಟ್ ಆದರೆಂದು ಈ ದೇಶದ ಪ್ರಜಾತಂತ್ರದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಮುನ್ನ ದೋಪ್ದಿಯರಿಗೂ ದ್ರೌಪದಿಯರಿಗೂ ಇರುವ ವ್ಯತ್ಯಾಸವನ್ನು ಅರಿಯಬೇಕು. ಅಲ್ಲವೇ?

ಕೃಪೆ: ವಾರ್ತಾಭಾರತಿ

Advertisement
Advertisement
Recent Posts
Advertisement