ಬಿಜೆಪಿಯಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ನಾಯಕ ಇದ್ದರೆ "40% ಕಮಿಷನ್ ಆರೋಪವನ್ನು ನ್ಯಾಯಾಂಗ ತನಿಖೆ"ಗೆ ಒಪ್ಪಿಸುವ ಗುತ್ತಿಗೆದಾರರ ಸಂಘದ ಸವಾಲು ಸ್ವೀಕರಿಸಲಿ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
#40PercentCommissionGovt ಎಂಬ ಹ್ಯಾಶ್‌ಟ್ಯಾಗ್ ನಡಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ವಿವರಗಳು ಇಂತಿವೆ:
ಬಿಜೆಪಿಯವರು ತಾವು ಭ್ರಷ್ಟಾಚಾರವನ್ನೇ ಮಾಡಿಲ್ಲ, ತಮ್ಮಂತಹ ಪ್ರಾಮಾಣಿಕರು, ಸತ್ಯವಂತರು ಯಾರಿಲ್ಲ ಎನ್ನುತ್ತಿದ್ದಾರೆ. ನ್ಯಾಯಾಂಗ ತನಿಖೆ ನಡೆಸಿದರೆ ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತೇವೆ, ಒಂದು ವೇಳೆ ನಮ್ಮಿಂದ ಸಾಬೀತು ಮಾಡಲು ಆಗಿಲ್ಲ ಎಂದರೆ ನಮ್ಮ ಮೇಲೆ ಬೇಕಾದ ಕಾನೂನು ಕ್ರಮ ಜರುಗಿಸಿ, ನಾವದನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯೇನು? ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕ ವ್ಯಕ್ತಿ ಇದ್ದರೂ ಈ ಸವಾಲನ್ನು ಸ್ವೀಕರಿಸಲಿ.
ನಾನು ವಿರೋಧ ಪಕ್ಷದ ನಾಯಕನಾದ ನಂತರ ಮೊದಲ ಬಾರಿಗೆ ಇಂದು ಕೆಂಪಣ್ಣನವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅವರು ಪ್ರಧಾನಿಗಳಿಗೆ ಬರೆದ ಪತ್ರವನ್ನು ನೋಡಿದ್ದೆ, ಒಮ್ಮೆ ರಾಜ್ಯ ಗುತ್ತಿಗೆದಾರರ ಸಂಘದ 20-25 ಜನ ಪದಾಧಿಕಾರಿಗಳು ಬಂದು ನನ್ನನ್ನು ಭೇಟಿಯಾಗಿ ಮನವಿ ಪತ್ರ ನೀಡಿದ್ದರು. ಅದಾದ ನಂತರ ಅರಣ್ಯ ಗುತ್ತಿಗೆದಾರರ ಸಂಘದವರು ಬಂದು ಮನವಿ ಪತ್ರ ನೀಡಿದ್ದರು. ಸರ್ಕಾರ ಕಳೆದ ಏಪ್ರಿಲ್ ತಿಂಗಳಿನಲ್ಲಿ ನಮ್ಮನ್ನು ಮಾತುಕತೆಗೆ ಕರೆದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ಬಿಟ್ಟರೆ ಯಾವ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯ ಮಾಡಬೇಕು ಎಂದು ನನಗೆ ಮನವಿ ಮಾಡಿದ್ದರು.
ಟೆಂಡರ್ ಅನುಮೋದನೆಗೆ ಮೊದಲೇ 30 ರಿಂದ 40% ಲಂಚ ಕೊಡಬೇಕಾಗಿದೆ. ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷ ಆದರೂ ಅವರೂ ಯಾವ ಕ್ರಮ ಕೈಗೊಂಡಿಲ್ಲ. ನಾವು ನ್ಯಾಯಾಂಗ ತನಿಖೆ ನಡೆಸುವುದಾದರೆ ದಾಖಲಾತಿ ಕೊಡಲು ತಯಾರಾಗಿದ್ದೇವೆ, ಒಂದು ವೇಳೆ ನಮ್ಮಿಂದ ಇದನ್ನು ಸಾಬೀತು ಮಾಡಲು ಆಗದೆ ಹೋದರೆ ಯಾವುದೇ ರೀತಿಯ ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ನಾನು ಕೂಡ ಹೈಕೋರ್ಟ್ ನ ಹಾಲಿ ನ್ಯಾಯಾಧೀಶ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೆ.
ಭ್ರಷ್ಟಾಚಾರ ಎಲ್ಲಾ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು, ಈಗ ಶರವೇಗದಲ್ಲಿ ಸಾಗುತ್ತಿದೆ ಎಂದು ಗುತ್ತಿಗೆದಾರರು ಈ ಸರ್ಕಾರದ ಭ್ರಷ್ಟಾಚಾರವನ್ನು ತೆರೆದಿಟ್ಟಿದ್ದಾರೆ. ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿ ಇಂದ ಸುಮಾರು 22,000 ಕೋಟಿಗೂ ಅಧಿಕ ಬಿಲ್ ಹಣ ಬಿಡುಗಡೆಯಾಗಬೇಕಿದೆಯಂತೆ. ಈ ಬೃಹತ್ ಬಾಕಿ ಮೊತ್ತವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇದರ ಜೊತೆಗೆ ಅನುದಾನ ಮೀಸಲಿಡದೆ ಟೆಂಡರ್ ಕರೆಯುತ್ತಾರೆ, ಇದರಿಂದ ಕಾಮಗಾರಿ ಹಣ ಬಿಡುಗಡೆ ಆಗುವುದು ಹೇಗೆ? ಎಂಬುದು ಅವರ ಪ್ರಶ್ನೆಯಾಗಿದೆ.
ಒಟ್ಟಾರೆ ಗುತ್ತಿಗೆದಾರರು ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಬೇಸರಗೊಂಡಿದ್ದಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಇರಲಿಲ್ಲ ಎಂಬುದು ಅವರ ಅಳಲು. ನ್ಯಾಯಾಂಗ ತನಿಖೆಗೆ ನಡೆಸಿದರೆ ತನಿಖೆ ವೇಳೆ ಸೂಕ್ತ ದಾಖಲೆ ನೀಡುವುದಾಗಿ ಹೇಳಿದ್ದಾರೆ. ಪ್ರಧಾನಿಗೆ ಮತ್ತೊಮ್ಮೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆ ಏನಿರಬಹುದು ಎಂದು ಕಾದು ನೋಡಬೇಕು.
ನಾವು ಸರ್ಕಾರದ ಮೇಲೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹಕ್ಕೆ ಬೆಲೆ ಕೊಡದೆ ಹೋದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ.
ನರೇಂದ್ರ ಮೋದಿ ಅವರು ಚುನಾವಣಾ ಭಾಷಣದಲ್ಲಿ ತಮ್ಮ ಸ್ಥಾನಕ್ಕಿರುವ ಘನತೆ, ಗೌರವ ಮರೆತು 'ಸಿದ್ದರಾಮಯ್ಯ ಅವರ ಸರ್ಕಾರ 10% ಕಮಿಷನ್ ಸರ್ಕಾರ' ಎಂದು ಆಧಾರ ರಹಿತ ಆರೋಪ ಮಾಡಿದಾಗ ಎಲ್ಲರೂ ಅದಕ್ಕೆ ಪ್ರಚಾರ ನೀಡಿದರು, ಯಾರು ಅವರ ಬಳಿ ದಾಖಲೆ ಕೇಳಿಲ್ಲ. ಈಗ ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡಲು ಸಿದ್ಧರಿದ್ದಾರೆ. ಹೀಗಿದ್ದಾಗ ನ್ಯಾಯಯುತ ತನಿಖೆ ಆಗಬೇಕೋ ಬೇಡವೋ?
- ಸಿದ್ದರಾಮಯ್ಯ (ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಪಕ್ಷ ನಾಯಕರು)