ಬರಹ: ನವೀನ್ ಸೂರಿಂಜೆ (ಲೇಖಕರು ಖ್ಯಾತ ಪತ್ರಕರ್ತರು ಹಾಗೂ ಸಾಮಾಜಿಕ ಚಿಂತಕರು)
ಆಫ್ರಿಕಾದಿಂದ ಭಾರತಕ್ಕೆ ಚೀತಾವನ್ನು ತಂದಿರೋದನ್ನು ವೈಭವಿಕರೀಸಲಾಗುತ್ತಿದೆ. ವಾಸ್ತವವಾಗಿ ಇದು ಪ್ರಕೃತಿ ವಿರೋಧಿ ಮತ್ತು ಮಾನವ ವಿರೋಧಿ ಕೃತ್ಯ.
ಆಫ್ರಿಕಾದಿಂದ ತಂದ ಚೀತಾವನ್ನು ಅದರದ್ದಲ್ಲದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಜಗತ್ತಿನ ಅತ್ಯಂತ ವೇಗದ ಮತ್ತು ಕ್ರೂರ ಪ್ರಾಣಿಯಾದ ಚೀತಾ ತನ್ನದಲ್ಲದ ಅಪರಿಚಿತ ಕಾಡಲ್ಲಿ ಬೇಟೆಯನ್ನು ಹುಡುಕಬೇಕು. ಅದು ಕಾಡಿನ ಸುತ್ತ ಇರುವ ಆದಿವಾಸಿಗಳ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಆಹಾರದ ಕೊರತೆಯಾದಾಗ, ಹೊಸ ಕಾಡಲ್ಲಿ ಬೇಟೆ ಸಿಗದೇ ಇದ್ದಾಗ ಕುನೋ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಆದಿವಾಸಿಗಳು, ಶಾಲಾ ಮಕ್ಕಳು ಮತ್ತು ಅವರ ಹಟ್ಟಿಯಲ್ಲಿರುವ ದನಗಳತ್ತಾ ಚೀತಾದ ಗಮನ ಸೆಳೆಯಬಹುದು.
ಜೊತೆಗೆ ಕಾಡಿನ ಹೊಸ ಚೀತಾಗಳ ಆಗಮನದಿಂದ ಚಿರತೆಗಳು ಮತ್ತು ಹುಲಿಗಳು ಕಾಡಿನ ಹೊರ ಭಾಗದಲ್ಲಿ ಸುಲಭವಾಗಿ ಸಿಗುವ ಮನುಷ್ಯರು ಮತ್ತು ಮನುಷ್ಯರು ಸಾಕಿದ ಪ್ರಾಣಿಗಳನ್ನು ಆಹಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು.
ಇದು ಮೋದಿಯಿಂದಾದ ಸಮಸ್ಯೆ ಮಾತ್ರವಲ್ಲ. ನಮ್ಮದೇ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲೂ ಈ ಸಮಸ್ಯೆ ಇದೆ. ಯಾವುದಾದರೂ ಊರಲ್ಲಿ ಚಿರತೆ ಸಿಕ್ಕಿದರೆ ಅದನ್ನು ಹಿಡಿದು ಪಶ್ಚಿಮ ಘಟ್ಟದಲ್ಲಿ ಬಿಡುತ್ತಾರೆ. ಎಲ್ಲೇ ಕಾಳಿಂಗ ಸರ್ಪ, ಹುಲಿಯ ಪ್ರಭೇದಗಳು ಸಿಕ್ಕರೂ ಪಶ್ಚಿಮ ಘಟ್ಟದ ಕುದುರೇಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡಲಾಗುತ್ತದೆ. ಈ ರೀತಿ ಸಿಕ್ಕ ಪ್ರಾಣಿಗಳ ನಿಜವಾದ ವಾಸಸ್ಥಳ ಎಲ್ಲಿ ? ಅವು ಯಾವ ಕಾಡಿನಿಂದ ತಪ್ಪಿಸಿಕೊಂಡು ಬಂದವು ಎಂಬ ಬಗ್ಗೆ ಅಧ್ಯಯನ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ. ಯಾವುದೋ ಒಂದು ಕಾಡಾದರೆ ಆಯ್ತು. ಹೀಗೆ ಮಾಡಿದ್ದರಿಂದ ಕುತ್ಲೂರು ಸೇರಿದಂತೆ ಹಲವಾರು ಕಾಡಂಚಿನ ಗ್ರಾಮದ ಆದಿವಾಸಿಗಳು ತೊಂದರೆ ಅನುಭವಿಸಿದ್ದಿದೆ. ಈ ರೀತಿ ಎಲ್ಲೆಲ್ಲಿಂದಲೋ ಪ್ರಾಣಿಗಳ ತಂದು ನಮ್ಮ ಕಾಡಲ್ಲಿ ತಂದು ಬಿಡುವುದನ್ನು ಮಲೆಕುಡಿಯ ಸಮುದಾಯ ಪ್ರತಿಭಟನೆ ಕೂಡಾ ನಡೆಸಿದ್ದರು. ಅದೇ ಕಾಡಿನ ಪ್ರಾಣಿಗಳು ಅದೇ ಕಾಡಲ್ಲಿರುವ ಮನುಷ್ಯರಿಗಾಗಲಿ, ಅವರ ಸಾಕು ಪ್ರಾಣಿಗಳಿಗಾಗಲೀ ತೊಂದರೆ ಮಾಡಲ್ಲ. ಬೇರೆಡೆಯಿಂದ ತಂದು ಹಾಕಲಾದ ಪ್ರಾಣಿಗಳು ಬೇಟೆ ಲಭ್ಯತೆಯ ಅಂದಾಜು ಸಿಗದೆ ಸುಲಭವಾಗಿ ಸಿಗುವ ಮನುಷ್ಯರು ಮತ್ತು ಸಾಕಿದ ದನ ಕರು ನಾಯಿಗಳ ಮೇಲೆ ದಾಳಿ ಮಾಡುತ್ತದೆ.
ಆದ್ದರಿಂದ ಆಫ್ರಿಕಾದಿಂದ ಬಂದ ಚೀತಾವನ್ನು ಕುನೋ ಕಾಡಿಗೆ ಬಿಡುವುದನ್ನು ಅಲ್ಲಿನ ಸಹರಿಯಾ ಎಂಬ ಆದಿವಾಸಿ ಸಮುದಾಯ ವಿರೋಧಿಸುತ್ತಿದೆಯಂತೆ. ಈ ವಿರೋಧ ಮೋದಿ ವೈಭವೀಕರಣದ ಮಧ್ಯೆ ಅರಣ್ಯ ರೋಧನವಾಗಿದೆ.