ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕನ್ಯಾಕುಮಾರಿ ಯಿಂದ ಕಾಶ್ಮೀರದ ತನಕ ಬರೋಬ್ಬರಿ 145ದಿನಗಳ ಕಾಲ ನಡೆಯಲಿರುವ "ಭಾರತ್ ಜೋಡೋ ಪಾದಯಾತ್ರೆ"ಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ "ದೇಶದ ಜನರ ಧ್ವನಿಯಾಗಲು ರಾಹುಲ್ ಗಾಂಧಿ ಅವರು ಕಟಿಬದ್ಧರಾಗಿದ್ದು ಬೆಲೆಏರಿಕೆ, ನಿರುದ್ಯೋಗ, ರೈತರ, ಕಾರ್ಮಿಕರ ಹಾಗೂ ಮಹಿಳೆಯರ ಸಂಕಷ್ಟ ಮೊದಲಾದ ಸಮಸ್ಯೆಗಳ ವಿರುದ್ಧ ಅವರು ಈ ಐತಿಹಾಸಿಕ ಯಾತ್ರೆಯ ಮೂಲಕ ಧ್ವನಿ ಎತ್ತುತ್ತಿದ್ದಾರೆ" ಎಂದು ಹೇಳಿದರು.
"ಈ ಪಾದಯಾತ್ರೆಯು ಮೈಸೂರಿನ ಮಾರ್ಗವಾಗಿ ಬರುತ್ತಿದೆ. ರಾಹುಲ್ ಗಾಂಧಿಯವರು ತಮಗೆ ಇದೇ ಮಾರ್ಗ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕುರಿತು ಈ ಯಾತ್ರೆಯಲ್ಲಿ ಭಾಹವಹಿಸುವಂತೆ ಕಾಂಗ್ರೆಸ್ ನಾಯಕರು ಪ್ರತೀ ಮನೆ ಮನೆಗೆ ಹೋಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ವಿಶೇಷವಾಗಿ ನಿರುದ್ಯೋಗಿ ಯುವಕರು, ಮಹಿಳೆಯರನ್ನು ರಾಹುಲ್ ಗಾಂಧಿ ಅವರು ಯಾತ್ರೆ ವೇಳೆ ಭೇಟಿ ಮಾಡಲು ಉದ್ದೇಶಿಸಿದ್ದಾರೆ.
ರಾಹುಲ್‌ರನ್ನು ಭೇಟಿಯಾಗಲು ಈಗಾಗಲೇ 40,000 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ರಾಜ್ಯದಾದ್ಯಂತ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲೂ ಸಭೆ ನಡೆಸಬೇಕು. ಕರ್ನಾಟಕದ ಮೂಲಕ ಹಾದು ಹೋಗಲಿರುವ ಈ ಯಾತ್ರೆ ದೇಶಕ್ಕೆ ಮಾದರಿಯನ್ನಾಗಿಸಬೇಕು . ಮೇಕೆದಾಟು ಯಾತ್ರೆ, ಸ್ವಾತಂತ್ರ್ಯ ನಡಿಗೆಯಂತೆ ಈ ಯಾತ್ರೆಯನ್ನೂ ಯಶಸ್ವಿಗೊಳಿಸಿ ಎಂದವರು ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾತನಾಡಿ "ಭಾರತದ ಸಮಗ್ರತೆ ಮತ್ತು ಸೌಹಾರ್ದತೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ದೇಶದ ಪ್ರತಿ ಪ್ರಜೆಯ ಕರ್ತವ್ಯ. ಬಹುತ್ವದ ಭಾರತವನ್ನು ಸ್ನೇಹ, ಪ್ರೀತಿಯ ತಳಹದಿಯ ಮೇಲೆ ಒಂದುಗೂಡಿಸುವ ಈ ಭಾರತ ಐಕ್ಯತಾ ಯಾತ್ರೆ ಯಲ್ಲಿ ನಾವೆಲ್ಲ ಜೊತೆಯಾಗೋಣ.
ದೇಶಕ್ಕಾಗಿ ಹೆಜ್ಜೆ ಹಾಕೋಣ" ಎಂದು ಕರೆ ನೀಡಿದರು.
(ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡ ಈ ಪಾದಯಾತ್ರೆಯು12 ರಾಜ್ಯಗಳನ್ನು ಹಾದುಹೋಗುವ ಮೂಲಕ, ದೇಶದಾದ್ಯಂತ ಕನಿಷ್ಠ 3,570 ಕೀ.ಮೀಟರ್, 145 ದಿನಗಳಿಗೂ ಹೆಚ್ಚು ಕಾಲ ನಡೆಯಲಿದೆ. ಹಾಗೆಯೇ ಈ ಪಾದಯಾತ್ರೆಯು ಕರ್ನಾಟಕದಲ್ಲಿ ಸೆ.30 ರಂದು ಗುಂಡ್ಲುಪೇಟೆ ಮೂಲಕ ಆರಂಭಗೊಳ್ಳಲಿದೆ. ಕೇರಳದ ವೈನಾಡು (ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ) ಮೂಲಕ ಕರ್ನಾಟಕದ ಗಡಿ ಭಾಗ ಗುಂಡ್ಲುಪೇಟೆ ತಲುಪುವ ಭಾರತ್ ಜೋಡೋ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21 ದಿನಗಳ ಕಾಲ, 510 ಕಿಮೀ ನಡೆಯಲಿದೆ)
ಈ ಸಂಧರ್ಭದಲ್ಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ನವರು, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವ ನಾರಾಯಣ್ ಮುಂತಾದ ರಾಜ್ಯ ನಾಯಕರು ಹಾಗೂ ಸ್ಥಳೀಯ ನಾಯಕರು, ಮಾಜಿ ಶಾಸಕರು, ಸಂಸದರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು ಮುಂತಾದವರು ಉಪಸ್ಥಿತರಿದ್ದರು.