"PFI ಸಂಘಟನೆಯನ್ನು ದೇಶಾದ್ಯಂತ 5 ವರ್ಷಗಳ ಕಾಲ ಬ್ಯಾನ್ ಮಾಡುವ ತೀರ್ಪನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಈಗಾಗಲೇ ದೇಶವು ಅಭಿವೃದ್ಧಿ ಮತ್ತು ಜನರಿಗೆ ಅನುಕೂಲವಾಗುವಂತಹ ವಿಷಯಗಳ ಚರ್ಚೆಯಿಂದ ದೂರವೇ ಸಾಗುತ್ತಿದ್ದು ಆ ದೂರವು ಇದೀಗ ಮತ್ತಷ್ಟು ಹೆಚ್ಚಾಗುವ ಪರಿಸ್ಥಿತಿ ಉಂಟಾಗಿದೆ. ಇನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನೋಡುವುದಾದರೆ ಧರ್ಮಾಧಾರಿತವಾಗಿ ಸಾಮಾಜಿಕ ಸಾಮರಸ್ಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ PFI ನಂತಹ ಧಾರ್ಮಿಕ ಅತಿರೇಕದ ಸಂಘಟನೆಗಳನ್ನು 5 ವರ್ಷದವರೆಗೆ ಬ್ಯಾನ್ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆ ಆಗಿದೆ" ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.
"ಇದರ ಜೊತೆಗೆ ಕೇಂದ್ರ ಸರ್ಕಾರವು... ಯಾವ ಮಾನದಂಡಗಳನ್ನು ಅನುಸರಿಸಿ PFI ಸಂಘಟನೆಯನ್ನು ಬ್ಯಾನ್ ಮಾಡಿದೆಯೋ, ಆ ಮಾನದಂಡಗಳು RSS, SDPI, ಭಜರಂಗ ದಳ, ಹಿಂದೂ ಪರಿಷತ್ ಹಾಗೂ ಶ್ರೀರಾಮ ಸೇನೆಯಂತಹ ಧಾರ್ಮಿಕ ತೀವ್ರವಾದಿ ಸಂಘಟನೆಗಳಿಗೂ ಅನ್ವಯಿಸುವುದರಿಂದ ಅಂತಹ ಅಸಂವಿಧಾನಿಕ ಮಾರ್ಗದ ಸಂಘಟನೆಗಳನ್ನೂ ಬ್ಯಾನ್ ಮಾಡುವುದು ಸಮಾಜದ ಏಳಿಗೆ, ಆರೋಗ್ಯ ಮತ್ತು ಸಾಮರಸ್ಯದ ದೃಷ್ಟಿಯಿಂದ ಉತ್ತಮವಾದ ಮತ್ತು ಅಷ್ಟೇ ಜವಾಬ್ದಾರಿಯುತವಾದ ಕೆಲಸ ಎನಿಸಿಕೊಳ್ಳುತ್ತದೆ" ಎಂದು ಹೇಳಿದ್ದಾರೆ.
"ಏಕೆಂದರೆ ನಾನು ಗಮನಿಸಿದಂತೆ... ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ ಎಂಬುದಕ್ಕೆ ಇತ್ತೀಚೆಗಿನ ಕೋಲಾರದ ಬಾಲಕನ ಮೇಲೆ ನಡೆಸಲ್ಪಟ್ಟ ಸಂವಿಧಾನ ಬಾಹಿರವಾದ ಹಲ್ಲೆ ಮತ್ತು ಬಹಿಷ್ಕಾರವು ಒಂದು ಜೀವಂತ ಸಾಕ್ಷಿಯಾದರೆ, ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರಿಗೆ ರಕ್ಷಣೆ ಸಿಗುವುದಿಲ್ಲ ಎಂಬುದೂ ಕೂಡಾ ವಾಸ್ತವವಾಗಿದೆ" ಎಂದು ಮಹಾದೇವಪ್ಪ ವಿವರಿಸಿದ್ದಾರೆ.
''ಇನ್ನು, ಈ ಎರಡೂ ಕೋಮಿನ ಈ ಸಂಘಟನೆಗಳು ಜನ ಸಾಮಾನ್ಯರಿಗೆ ಕಂಟಕವಾಗಿರುವ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಡುಗೆ ಅನಿಲದ ಬೆಲೆ ಏರಿಕೆ, ಅಕ್ಕಿ ಬೇಳೆ, ಎಣ್ಣೆ ಹಾಗೂ ಇತ್ಯಾದಿ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ಆದಿಯಾಗಿ ಜನ ಸಾಮಾನ್ಯರ ಬದುಕಿಗೆ ಕಂಟಕವಾಗಿರುವ ಯಾವ ಸಮಸ್ಯೆಗಳ ಬಗ್ಗೆಯೂ ಇವರು ಮಾತನಾಡಿದ ಉದಾಹರಣೆಯನ್ನು ನಾನಂತೂ ಕಾಣಲಿಲ್ಲ. ಬರೀ ಧರ್ಮದ ಆಧಾರದಲ್ಲಿ ಜನರಲ್ಲಿ ಭಯ ಹುಟ್ಟಿಸುವ ಇವರಿಂದ ಶ್ರಮಿಕ ಹಿಂದೂಗಳಿಗಾಗಲೀ ಶ್ರಮಿಕ ಮುಸಲ್ಮಾನರಿಗಾಗಲೀ ಯಾವುದೇ ಪ್ರಯೋಜನ ಇಲ್ಲ ಎಂದಾದ ಮೇಲೆ ಬರೀ ಜಗಳಕ್ಕೆ ಕಾರಣವಾಗುವ ಇಂತಹ ಬೇಜವಾಬ್ದಾರಿ ಸಂಘಟನೆಗಳು ಸಮಾಜಕ್ಕೆ ನಿಜಕ್ಕೂ ಬೇಕಿಲ್ಲ" ಎಂದವರು ಹೇಳಿದರು.
"ಕೊನೆಯದಾಗಿ ಹೇಳುವುದಾದರೆ... ಸ್ವಯಂಘೋಷಿತ ಹಿಂದೂಪರ ಸಂಘಟನೆಗಳಿಂದ ಹಿಂದೂಗಳ ರಕ್ಷಣೆ ಆಗುವುದಿಲ್ಲ. ಹಾಗೆಯೇ, ಸ್ವಯಂಘೋಷಿತ ಮುಸ್ಲಿಂ ಪರ ಸಂಘಟನೆಗಳಿಂದ ಮುಸ್ಲಿಮರ ರಕ್ಷಣೆ ಆಗುವುದಿಲ್ಲ. ಎಲ್ಲರ ರಕ್ಷಣೆ ಆಗುವುದು ಈ ದೇಶದ ಅಂಬೇಡ್ಕರ್ ಸಂವಿಧಾನದಿಂದ ಮಾತ್ರ. ಹೀಗಾಗಿ ಹಿಂದೂ ಮುಸ್ಲಿಂ ಎನ್ನದೇ ಸಮಾಜದ ಸಾಮರಸ್ಯ ಹಾಳು ಮಾಡುವ ಎಲ್ಲಾ ಧರ್ಮಾಧಾರಿತ ಸಂಘಟನೆಗಳನ್ನು ನಿಷೇಧಿಸಿ ಸಂವಿಧಾನದ ಆಶಯದ ರಕ್ಷಣೆ ಮಾಡುವ ಜವಾಬ್ದಾರಿ ಪ್ರಜ್ಞೆಯನ್ನು ಬೆಳೆಸಬೇಕೆಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇನೆ ಮತ್ತು ನ್ಯಾಯಾಂಗವನ್ನು ವಿನಂತಿಸಿಕೊಳ್ಳುತ್ತೇನೆ!" ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.