Advertisement

"ದ್ವಿತೀಯ ಸ್ವಾತಂತ್ರ್ಯ ಸಮರ"ವಾಗಿ ಪರಿವರ್ತನೆಗೊಳ್ಳುತ್ತಿರುವ "ಭಾರತ್ ಜೋಡೋ ಯಾತ್ರೆ"

Advertisement

ಹೋದಲ್ಲೆಲ್ಲಾ ಅಪಾರ ಜನಸಂದಣಿ ರೂಪುಗೊಳ್ಳುವ ಆ ಮೂಲಕ ಮನುವಾದಿ ಆರೆಸ್ಸೆಸ್- ಬಿಜೆಪಿಗರಲ್ಲಿ ಚಳಿ-ಜ್ವರ ಎರಡೂ ಹುಟ್ಟಿಸಿರುವ, ಇದೇ ಸೆಪ್ಟೆಂಬರ್ 07ರಂದು ತಮಿಳುನಾಡಿನಿಂದ ಆರಂಭಗೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ "ಭಾರತ್ ಜೋಡೋ ಯಾತ್ರೆ"ಯು ಕೇರಳ ರಾಜ್ಯವನ್ನು ಹಾದು ಇದೀಗ ಸೆಪ್ಟೆಂಬರ್30 ರಂದು ಕರ್ನಾಟಕದ ಗಡಿಭಾಗವಾದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ರಾಜ್ಯ ಪ್ರವೇಶಿಸಿ, ಆ ನಂತರ ಅಕ್ಟೋಬರ್ 19ರಂದು ರಾಯಚೂರು ಮೂಲಕ ತೆಲಂಗಾಣವನ್ನು ಪ್ರವೇಶಿಸಲಿದೆ.

ಸೆಪ್ಟೆಂಬರ್ 30ರಂದು ಬೆಳಗ್ಗೆ 9 ಗಂಟೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ರಾಹುಲ್‌ ಗಾಂಧಿಯವರ ಜೊತೆಗೆ ಮಾಜಿ ಮುಖ್ಯಮಂತ್ರಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳು ಹೆಜ್ಜೆ ಹಾಕಲಿದ್ದಾರೆ. ಯಾತ್ರೆ ರಾಜ್ಯ ಪ್ರವೇಶಿಸುತ್ತಿದ್ದಂತೆ ರಾಹುಲ್‌ ಗಾಂಧಿ ಅವರನ್ನು ಅದ್ಧೂರಿ ಸ್ವಾಗತದೊಂದಿಗೆ ಎದುರುಗೊಳ್ಳಲು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರ ರಾಹುಲ್ ಅಭಿಮಾನಿಗಳು ಅದ್ದೂರಿಯ ಸಿದ್ದತೆ ನಡೆಸಿದ್ದಾರೆ. ಈ ಯಾತ್ರೆಯಲ್ಲಿ ರಾಜ್ಯದ ಇತರ ಕಡೆಗಳಿಂದ ಆಗಮಿಸುವವರನ್ನು ಹೊರತು ಪಡಿಸಿ ಕೇವಲ ಚಾಮರಾಜನಗರ ಜಿಲ್ಲೆಯಿಂದಲೇ ಕನಿಷ್ಟ ಸುಮಾರು 30 ರಿಂದ 40 ಸಾವಿರಕ್ಕೂ ಅಧಿಕ ಮಂದಿ ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ರಾಹುಲ್ ಗಾಂಧಿ ಪ್ರತಿನಿಧಿಸುವ ಸಂಸತ್ ಕ್ಷೇತ್ರ ಕೇರಳದ ವಯನಾಡು ಮೂಲಕ ಕರ್ನಾಟಕ ಪ್ರವೇಶಿಸುವ ಈ ಯಾತ್ರೆ ರಾಜ್ಯದ 8 ಜಿಲ್ಲೆಗಳಲ್ಲಿ 21ದಿನಗಳ ಕಾಲ, 510 ಕಿಮೀ ಕ್ರಮಿಸಲಿದೆ. ದೇಶದಾದ್ಯಂತ ಸತತ 05ತಿಂಗಳ ಕಾಲ ನಡೆಯಲಿರುವ ಈ ಪಾದಯಾತ್ರೆಯು ಒಟ್ಟು 3500 ಕಿ.ಮೀ ಕ್ರಮಿಸಲಿದೆ. ಇದು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದುಹೋಗಲಿವೆ. ಕನ್ಯಾಕುಮಾರಿಯಿಂದ ಆರಂಭಗೊಂಡ ಈ ಯಾತ್ರೆಯು ಅಂತಿಮವಾಗಿ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ.

ಈ ಯಾತ್ರೆಯ ಕೇಂದ್ರಬಿಂದು ರಾಹುಲ್ ಗಾಂಧಿಯವರು, ಲಂಡನ್‌ನಲ್ಲಿ ಎಂಫಿಲ್ ಓದಿರುವ ಓರ್ವ ವಿದ್ಯಾವಂತ ಹಾಗೂ "ನ್ಯಾಯ್" ನಂತಹ ಅಪೂರ್ವವಾದ ಜನಪರ ಚಿಂತನೆಯಾಧಾರಿತ ಯೋಜನೆ ಹೆಣೆದ ಸಾಮಾಜಿಕ ಕಳಕಳಿಯ ನಾಯಕ!... ಹಾಗೆಯೇ ಅವರು ಈ ದೇಶದ ಸ್ವಾತಂತ್ರ್ಯ ಸಮರಕ್ಕಾಗಿ ತನ್ನ ಕುಟುಂಬದ ಪಿತ್ರಾರ್ಜಿತವಾಗಿ ಬಂದಿದ್ದ ಅಪಾರ ಆಸ್ತಿಯನ್ನು ವ್ಯಯಿಸಿದ ಮೋತಿಲಾಲ್ ನೆಹರೂರವರ ಮರಿಮೊಮ್ಮಗನ ಮಗ ಅಂದರೆ ತನ್ನ ಜೀವನದ ಬರೋಬ್ಬರಿ 9 ವರ್ಷಗಳಷ್ಟು ಕಾಲ ಸ್ವಾತಂತ್ರ್ಯ ಸಮರಕ್ಕಾಗಿ ಜೈಲಿನಲ್ಲಿ ಕಳೆದ ಚಾಚಾ ನೆಹರೂರವರ ಮೊಮ್ಮಗನ ಮಗ ಅಂದರೆ ಈ ದೇಶದ ಐಕ್ಯತೆಗಾಗಿ ಖಲಿಸ್ಥಾನ್ ಭಯೋತ್ಪಾದಕರ ಗುಂಡಿಗೆ ಬಲಿಯಾದ ಇಂದಿರಾ ಗಾಂಧಿಯವರರ ಮೊಮ್ಮಗ, ಎಲ್ಟಿಟಿಈ ಭಯೋತ್ಪಾದಕರ ಗುಂಡಿಗೆ ಬಲಿಯಾದ ರಾಜೀವ್ ಗಾಂದಿಯವರ ಮಗ ಅಂದರೆ ತನ್ನ ಮನೆಯ ಬಾಗಿಲಿಗೆ ಬಂದಿದ್ದ ಪ್ರಧಾನಿ ಪದವಿಯನ್ನು ಸತತ ಎರಡು ಬಾರಿ ನಿರಾಕರಿಸಿ ವಿಶ್ವವಿಖ್ಯಾತ ಆರ್ಥಿಕತಜ್ಞ ಮನಮೋಹನ್ ಸಿಂಗ್ ರಂತಹ ಮೇದಾವಿಯನ್ನು ಪ್ರಧಾನಿ ಮಾಡಿ ದೇಶವನ್ನು ಅಭ್ಯುದಯದ ಪಥದತ್ತ ಕೊಂಡೊಯ್ದ ಸೋನಿಯಾ ಗಾಂದಿಯವರ ಮಗ. ಇದೆಲ್ಲವನ್ನೂ ಇಲ್ಲಿ ಅದೇಕೆ ವಿವರಿಸಲಾಯಿತು ಎಂದು ಈ ಲೇಖನದ ಮುಂದುವರಿದ ಭಾಗದಲ್ಲಿ ವಿಶ್ಲೇಷಿಸಲಾಗಿದೆ.

ಈ ಲೇಖನದ ಶೀರ್ಷಿಕೆ "ದ್ವಿತೀಯ ಸ್ವಾತಂತ್ರ್ಯ ಸಮರ"ವಾಗಿ ಪರಿವರ್ತನೆಗೊಳ್ಳಲಿರುವ "ಭಾರತ್ ಜೋಡೋ ಯಾತ್ರೆ"ಯನ್ನು ಓದಿದಾಗ "ದ್ವಿತೀಯ ಸ್ವಾತಂತ್ರ್ಯ ಹೋರಾಟವೇ? ಹೋರಾಟ ಯಾರ ವಿರುದ್ಧ?" ಎಂದು ನೀವು ಪ್ರಶ್ನಿಸಬಹುದು. ಅದು ಸಹಜ ಕೂಡ...

ಏಕೆಂದರೆ, ಇದು ಪ್ರಜಾಪ್ರಭುತ್ವ ದೇಶ. ಈ ದೇಶದಲ್ಲಿ ಕಾಲಕಾಲಕ್ಕೆ ಚುನಾವಣೆಗಳೂ ನಡೆಯುತ್ತಿವೆ. ಇಲ್ಲಿ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಸಿದ್ದಾಂತದ ಅಂಬೇಡ್ಕರ್ ಸಂವಿಧಾನ ಜಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಹಿಂದೆ ಕಾಂಗ್ರೆಸ್ ಮತ್ತಿತರ ಹಲವು ಪಕ್ಷಗಳು ಈ ದೇಶವನ್ನು ಬಹು ದೀರ್ಘ ಕಾಲ ಆಳಿದ್ದವು. ಅದರಂತೆ ಇದೀಗ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ 8 ವರ್ಷಗಳಿಂದ ಆಳ್ವಿಕೆ ನಡೆಸುತ್ತಿದೆ. ಸ್ವಲ್ಪ ಮುಂದಕ್ಕೆ ಹೋಗಿ ಯೋಚಿಸುವುದಾದರೆ, ಚುನಾವಣಾ ಅಕ್ರಮಗಳು, ಇವಿಎಂ ಹ್ಯಾಕ್, ದುಬಾರಿ ಉಡುಗೊರೆ, ಹಣ ಹಂಚುವಿಕೆ ಮುಂತಾದವುಗಳ ಮೂಲಕ ಲೂಟಿಕೋರ, ಜನವಿರೋಧಿ ಸರ್ಕಾರ ಅಧಿಕಾರಕ್ಕೆ ಬರುವುದು ವಿಶ್ವದಾದ್ಯಂತ ಸಹಜ ವಿಚಾರವೇ ಆಗಿದೆ. ಅಂತಹುದನ್ನು ಪ್ರಜಾಪ್ರಭುತ್ವ ಮಾದರಿಯಲ್ಲೆ ಎದುರಿಸಬೇಕೇ ಹೊರತೂ ಇಷ್ಟಕ್ಕೆ ದ್ವಿತೀಯ ಸ್ವಾತಂತ್ರ್ಯ ಸಮರ ಎನ್ನುವುದು ಅದೆಷ್ಟು ಸರಿ? ಎಂಬ ಪ್ರಶ್ನೆ ಮೂಡುವುದು ಸಹಜ.. ಅದೂ ನಿಜವೇ ಅನ್ನಿ!

ಆದರೆ, 1947ರ ನಂತರದ "ಸ್ವಾತಂತ್ರ್ಯ" ಹಾಗೂ "ಪ್ರಜಾಪ್ರಭುತ್ವ" ದ ಅಮಲಿನಲ್ಲಿ ತೇಲಾಡುತ್ತಿರುವ ನಾವುಗಳು "ಈ ಪ್ರಜಾಪ್ರಭುತ್ವ ವ್ಯವಸ್ಥೆ ಹೀಗೆಯೇ ಮುಂದುವರಿಯುತ್ತದೆ" ಎಂಬ ಭ್ರಮೆಯನ್ನು ಹೊಂದಿದ್ದೇವೆ ಮತ್ತು ಸ್ವಾತಂತ್ರ್ಯ ಪೂರ್ವದ ಈ ದೇಶದ 3500 ವರ್ಷಗಳ ಶೋಷಣೆಯ ಇತಿಹಾಸವನ್ನು ಮರೆತಿದ್ದೇವೆ. ಈಗಲೂ ಈ ದೇಶದೊಳಗೆ ನಮ್ಮ ನಡುವೆಯೇ ಇರುವ ಆ ಶೋಷಕರು ಅರ್ಥಾತ್ ನಮ್ಮ ಆ ಅನುವಂಶಿಕ ಶತ್ರುಗಳಾರು? ಅವರ ಹಿಡೆನ್ ಅಜೆಂಡಾಗಳೇನು? ಅವರುಗಳು ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ ಬ್ರಿಟೀಷರ, ಮೊಘಲರ ಮತ್ತು ಅದಕ್ಕೂ ಹಿಂದೆ, ಹಿಂದೂ ರಾಜ ಮಹಾರಾಜರುಗಳ ಆಳ್ವಿಕೆಯ ಅವಧಿಯಲ್ಲಿ ನಮ್ಮ ಪೂರ್ವಜರಿಗೆ ವಂಶಪಾರಂಪರ್ಯವಾಗಿ ಮಾಡಿರುವ ಹಾನಿಗಳೇನು? ಈ ನೆಲದ ಮೂಲ ನಿವಾಸಿಗಳಾದ ನಮ್ಮ ಪೂರ್ವಜರಿಗೆ ಅವರುಗಳು ಮಾಡಿದ ಲೈಂಗಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಶೋಷಣೆಗಳೇನು? ಅದೆಲ್ಲದರ ಪರಿಣಾಮವಾಗಿ ನಮಗಾದ ಅನುವಂಶಿಕ ನಷ್ಟವೇನು? ಸ್ವಾತಂತ್ರ್ಯಾ ನಂತರ, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇದೀಗ ಕೂಡ ಅವರುಗಳು ರಾಜಾರೋಷವಾಗಿ ನಮ್ಮ ನಡುವೆಯೇ ಇದ್ದು ನಮ್ಮವರ ಮೂಲಕವೇ ನಮಗೆ ಮಾಡಿಸುತ್ತಿರುವ ಹಾನಿಗಳೇನು? ಮುಂದೆ ಅವರೇನು ಮಾಡುವ ಹುನ್ನಾರವನ್ನು ಹೊಂದಿದ್ದಾರೆ ಎಂಬ ಕುರಿತು ನಾವು ಕಿಂಚಿತ್ ಕೂಡ ಚಿಂತಿಸುತ್ತಿಲ್ಲ. ಅದು ಭವಿಷ್ಯದ ದೃಷ್ಟಿಯಿಂದ ನಾವು ನಮ್ಮ ಮುಂದಿನ ಜನಾಂಗಕ್ಕೆ ಮಾಡುವ ಮಹಾನ್ ದ್ರೋಹವಾಗಿದೆ.

ಈ ಹಿಂದೆ ನಮ್ಮ ಪೂರ್ವಜರು ಕೂಡ ಹಾಗೆ ಚಿಂತಿಸಿ ಕಾಲಕಾಲಕ್ಕೆ ಜಾಗೃತರಾಗಿ, ಜನಜಾಗೃತಿ ಮೂಡಿಸದ, ಹೋರಾಟ ನಡೆಸದ ಕಾರಣಕ್ಕಾಗಿ ಈ ದೇಶವನ್ನು ಹಲವು ವಿದೇಶಿ ಆಕ್ರಮಣಕಾರರು ಆಕ್ರಮಿಸಿಕೊಂಡು ಈ ದೇಶದ ಸಂಪನ್ಮೂಲವನ್ನು ದೋಚಿ ವಿದೇಶಕ್ಕೆ ರವಾನಿಸಲು ಕಾರಣವಾಯಿತು ಎಂಬುದು ಇತಿಹಾಸ ಓದುವುದರಿಂದ ಮನವರಿಕೆಯಾಗುತ್ತದೆ.

ಈ ದೇಶದ್ರೋಹಿಗಳ ಇತಿಹಾಸವೇ ಅಂತಹುದು. ಹಿಂದೂ ರಾಜರ ಆಳ್ವಿಕೆಯಲ್ಲಿ, ಅವರುಗಳ ಆಸ್ಥಾನದಲ್ಲಿ ಪ್ರಮುಖ ಸಲಹೆಗಾರರಾಗಿ, ಮಂತ್ರಿಗಳಾಗಿ, ಖಜಾಂಚಿಗಳಾಗಿ, ಒಂದು ಹನಿಯೂ ಬೆವರು ಸುರಿಸದೆ ಸಕಲ ಸುಖ ಸೌಲಭ್ಯಗಳನ್ನು ಪಡೆದು ಮುಂದೆ ಅವರ ಮನುಷ್ಯ ವಿರೋಧಿ "ಮನುವಾದಿ ಹಿಡೆನ್ ಅಜೆಂಡಾ" ಮುಂದುವರಿಕೆ ಮಾಡಲು ಸಾಧ್ಯವಾಗದು ಎಂಬ ಸಂಧರ್ಭದಲ್ಲಿ ಮುಗ್ಧರಾದ ಆ ಹಿಂದೂ ರಾಜರುಗಳಿಗೆ ಹಾನಿಕಾರಕ ಸಲಹೆ ನೀಡಿ, ಅವರುಗಳಿಂದ ತಪ್ಪು ನಡೆ ಇರಿಸಿ, ಅವರ ಆಡಳಿತದ ಗುಟ್ಟು, ದೌರ್ಬಲ್ಯಗಳನ್ನು ಮೊಘಲ ರಾಜರುಗಳಿಗೆ ನೀಡಿ ಹಿಂದೂ ರಾಜರುಗಳ ವಿರುದ್ದವೇ ಪಿತೂರಿ ಮಾಡಿ, ಮೊಘಲರಿಗೆ ಬೆಂಬಲ ಕೊಟ್ಟು ಮುಂದೆ ಅದೇ ಮೊಘಲ ರಾಜರ ಆಸ್ಥಾನದಲ್ಲೂ ಪ್ರಮುಖ ಸಲಹೆಗಾರರಾಗಿ, ಮಂತ್ರಿಗಳಾಗಿ, ಖಜಾಂಚಿಗಳಾಗಿ, ಅರಬ್ ದೇಶದ ಅತ್ತರು ಹಚ್ಚಿಕೊಂಡು ನಿರಂತರವಾಗಿ ಐಷಾರಾಮಿ ಬದುಕು ಬದುಕಿದ್ದರು ಮತ್ತು ಮೊಘಲರ ಆಸ್ಥಾನದಲ್ಲಿ ಇತರರ ಪ್ರಾಬಲ್ಯ ಜಾಸ್ತಿಯಾಗುತ್ತಿದೆ, ತಮಗೆ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ತಮ್ಮ "ಮನುವಾದಿ ಅಜೆಂಡಾ" ಅರ್ಥ ಕಳೆದುಕೊಳ್ಳುತ್ತಿದೆ ಎಂಬ ಸಂಧರ್ಭದಲ್ಲಿ ಮೊಘಲ ರಾಜರುಗಳಿಗೆ ಹಾನಿಕಾರಕ ಸಲಹೆಗಳನ್ನು ನೀಡಿ, ಅವರುಗಳ ಆಡಳಿತ ಯಂತ್ರ ಕುಸಿಯುವಂತೆ ಮಾಡಿ, ಸರ್ಕಾರ ದುರ್ಬಲಗೊಳ್ಳುವಂತೆ ಮಾಡಿ ಆಂಗ್ಲರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟು. ಆ ನಂತರ ಆಂಗ್ಲರ ಆಡಳಿತ ಕಾಲದಲ್ಲೂ ಅವರುಗಳ ಪ್ರಧಾನ ಸಲಹೆಗಾರರಾಗಿ, ಆಯಕಟ್ಟಿನ ಜಾಗದಲ್ಲಿದ್ದು ನಿರಂತರ ಅಧಿಕಾರವನ್ನು ಅನುಭವಿಸಿ ಆ ನಂತರದ "ಸ್ವಾತಂತ್ರ್ಯ ಚಳವಳಿ" ಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಪಿತೂರಿ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗಲ್ಲು ಶಿಕ್ಷೆಯಂತಹ ಉಗ್ರ ಶಿಕ್ಷೆ ಕೊಡಿಸಿ, ಇಡೀ ದೇಶದ ಜನರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಸಂಧರ್ಭದಲ್ಲಿ ಬ್ರಿಟಿಷ್ ಸೇನೆಗೆ ಭಾರತೀಯ ಯುವಕರನ್ನು ಸೇರ್ಪಡೆಗೊಳಿಸುವ ಕಾಯಕದಲ್ಲಿ ತೊಡಗಿದ್ದವರೇ ಮುಂದೆ ಸ್ವಾತಂತ್ರ್ಯಾ ನಂತರ ಅಧಿಕಾರ ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲರಾಗಿದ್ದರು. ಈ ನಡುವೆ ಇವರುಗಳು 1925ರಲ್ಲೇ ಆರ್ ಎಸ್ ಎಸ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರಾದರೂ ಆ ಸಂಘಟನೆ ಯಾವುದೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದೆ ತಟಸ್ಥವಾಗಿ ಇದ್ದುದು ನಾವೆಲ್ಲರೂ ಪ್ರಶ್ನಿಸಲೇಬೇಕಾದ ಬಹುಮುಖ್ಯವಾದ ಅಂಶವಾಗಿದೆ.

ಆದರೆ ಸ್ವಾತಂತ್ರ್ಯ ನಂತರ ಆ ಮನುವಾದಿಗಳ ಕೈಗೆ ಅಧಿಕಾರ ಸಿಗದೇ ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದು ಮತ್ತು ಹಾಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಸಿದ್ಧಾಂತದ ಮನುವಾದಿ ವಿರೋಧಿ ಸಂವಿಧಾನವನ್ನು ಜಾರಿಗೊಳಿಸುವ ಮೂಲಕ ಈ ದೇಶದಲ್ಲಿ ಶತಶತಮಾನಗಳಿಂದ ಹಿಡಿತ ಸಾಧಿಸಿದ್ದ ಮನುವಾದಿ ಗಳ ಪ್ರಾಮುಖ್ಯತೆ ಕುಸಿಯುವಂತೆ ಮಾಡಿದ್ದು ಅವರುಗಳು ಕಾಂಗ್ರೆಸ್ ವಿರುದ್ದ ಅಪಪ್ರಚಾರದಲ್ಲಿ ತೊಡಗಲು ಮಾಡಲು ಕಾರಣ ಎಂಬುದು ನಮಗೆಲ್ಲರಿಗೂ ತಿಳಿದಿರುವ ಸತ್ಯವಾಗಿದೆ.

ಈ ಮೇಲೆ ವಿವಿಧ ರೀತಿಯಲ್ಲಿ ವಿವರಿಸಿದ "ನಿಧಾನವಿಷ"ವಾಗಿರುವ ಈ ಮನುವಾದಿಗಳು ಯಾರು? ಅವರುಗಳ ಮೂಲ ಯವುದು? ಅವರ ಉದ್ದೇಶಗಳೇನು? ಅವರುಗಳು ಈ ಹಿಂದೆ ಈ ದೇಶದ ಮೂಲನಿವಾಸಿಗಳಾದ ನಮ್ಮ ಪೂರ್ವಜರಿಗೆ ಮಾಡಿರುವ ಹಾನಿಗಳೇನು? ಮತ್ತು ನಮ್ಮ ಮುಂದಿನ ಜನಾಂಗಕ್ಕೆ ಅವರಿಂದಾಗುವ ಹಾನಿಗಳೇನು? ಇಂತಹ ವಿಚಾರಗಳಲ್ಲಿ ಪ್ರಜ್ಞಾವಂತರಾಗಿರುವ ನಮ್ಮ ಹೊಣೆಗಳೇನು? ಎಂಬ ಕುರಿತು ನಾವು ತರ್ಕಿಸಬೇಕಾಗಿದೆ ಮತ್ತು ಹೋರಾಟ ನಡೆಸಬೇಕಾಗಿದೆ.

ಬಹುಶಃ ಅದನ್ನು ನಾವು ದ್ವೀತಿಯ ಸ್ವಾತಂತ್ರ್ಯ ಸಮರ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ.

ಏಕೆಂದರೆ... ಕಾಂಗ್ರೆಸ್ ಪಕ್ಷದೊಳಗೆ ಸೇರಿಕೊಂಡು ತಮ್ಮ ಹಿಡೆನ್ ಅಜೆಂಡಾ ದ ಜಾರಿಗೆ ಪ್ರಯತ್ನಿಸಿ ಪಕ್ಷದ ಹೆಸರಿಗೆ ಮಸಿ ಬಳಿದ ಮನುವಾದಿಗಳ ಬೆರಳೆಣಿಕೆಯ ಕುಕೃತ್ಯದ ಹೊರತಾಗಿಯೂ ಕಾಂಗ್ರೆಸ್ ಕೇವಲ ಒಂದು ರಾಜಕೀಯ ಪಕ್ಷವಾಗಿ ಉಳಿದಿಲ್ಲ. ಕಾಂಗ್ರೆಸ್ ಎಂದರೆ, ಅದೊಂದು ಚಿಂತನೆ. ಅದೊಂದು ಚಳವಳಿ. ಅದೊಂದು ಸಿದ್ದಾಂತ. ಅದೊಂದು ದೇಶಭಕ್ತಿಯ ಸಂಕೇತ ಎಂಬುದು ಅದು 1885ರಿಂದ ಈ ತನಕ ದೇಶದ ಸ್ವಾತಂತ್ರ್ಯ ಸಮರವೂ ಸೇರಿ ಇಲ್ಲಿನ ಅಭ್ಯುದಯಕ್ಕೆ ಕೊಟ್ಟ ಸಾವಿರಾರು ಯೋಜನೆಗಳು, ಕ್ರಾಂತಿಕಾರಿ ಕಾಯ್ದೆಗಳಿಂದ ವೇದ್ಯವಾಗುತ್ತದೆ.

ಆದರಿಂದು ದೇಶದಾದ್ಯಂತ ಮನುವಾದಿಗಳ ಕೈ ಮೇಲಾಗಿದೆ. ಆರೆಸ್ಸೆಸ್ ಮೂಲಕ ಅದು ಈ ದೇಶದ ತಳಮಟ್ಟದಲ್ಲಿ ಬೇರೂರಿದೆ. ಅದು ತನ್ನ ಮನುವಾದಿ ಹಿಡೆನ್ ಅಜೆಂಡಾವನ್ನು ಜಾರಿಗೊಳಿಸುವ ತನ್ನ ಗರಡಿಯಲ್ಲಿ ಪಳಗಿದ ಲಕ್ಷಾಂತರ "ಗುಲಾಮರು"ಗಳನ್ನು ಆಡಳಿತ, ಶಿಕ್ಷಣ, ಆರೋಗ್ಯ, ಪೋಲಿಸ್, ಮಿಲಿಟರಿ ಮುಂತಾದ ಆಯಕಟ್ಟಿನ ಜಾಗಗಳಲ್ಲಿ ತೂರಿಸಿ "ಪ್ರಜಾಪ್ರಭುತ್ವ"ವನ್ನು ಅತಂತ್ರಗೊಳಿಸುವ ತನ್ನ ಕುಕೃತ್ಯವನ್ನು ಆರಂಭಿಸಿದೆ. ಅದರ ಪರಿಣಾಮವಾಗಿ ದೇಶದಾದ್ಯಂತ ಇಂದು ಕೋಮುಗಲಭೆ, ಅಲ್ಪಸಂಖ್ಯಾತ, ದಲಿತ ಮಹಿಳೆಯರ ಅತ್ಯಾಚಾರ, ಜೆಸಿಬಿ ಮೂಲಕ ಧ್ವಂಸ ಮುಂತಾದ ಕಾನೂನು ವಿರೋಧಿ ಕೃತ್ಯಗಳು ಸರ್ಕಾರದ ಮೂಗಿನಡಿಯಲ್ಲೆ ನಡೆಯುತ್ತಿವೆ. ಅಂತಹ ಹೀನಕೃತ್ಯಗಳಲ್ಲಿ ಪಾಲ್ಗೊಂಡ ಆಯ್ದ ಅಪರಾಧಿಗಳನ್ನು ಯಾವುದೇ ನಾಚಿಕೆಯಿಲ್ಲದೇ ರಕ್ಷಿಸಲಾಗುತ್ತಿದೆ. ನೀಚ ಕೃತ್ಯದ ಅಪರಾಧಿಗಳು ಜೈಲಿನಿಂದ ಬಿಡುಗಡೆಗೊಂಡೊಡನೆ ಹೂಹಾರ ಹಾಕಿ ಸ್ವಾಗತಿಸುವ ಸಂಸ್ಕೃತಿ ಹೆಚ್ಚಾಗುತ್ತಿವೆ. ಅತ್ಯಾಚಾರ ಆರೋಪಿಗಳ ಪರ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಕೂಡಾ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗ ಎಂಬಂತೆ ವಿದ್ಯಾರ್ಥಿಗಳ ಪಠ್ಯದಲ್ಲಿ ತಿರುಚಿದ ಇತಿಹಾಸವನ್ನು ತುರುಕಲಾಗುತ್ತಿದೆ. ರೈತ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ ಕೃಷಿಭೂಮಿಯನ್ನು ಕಬಳಿಸಿ, ರೈತರನ್ನು ಗುಲಾಮರನ್ನಾಗಿಸುವ ಸಂಚು ರೂಪಿಸಲಾಗುತ್ತಿದೆ. ದೇಶದ ಜನರ ಪೌರತ್ವ ಪ್ರಶ್ನಿಸುವ ಕಾನೂನುಗಳನ್ನು ಜಾರಿಗೆ ತಂದು ಜನರ ಹಕ್ಕುಗಳನ್ನು ಕಸಿದುಕೊಂಡು ಈ ನೆಲದ ಮೂಲನಿವಾಸಿಗಳನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿಸುವ ಅಪಾಯ ಎದುರಾಗಿದೆ. ನೋಟುಬ್ಯಾನ್ ಮೂಲಕ ದೇಶದ ಆರ್ಥಿಕತೆಯನ್ನು ಬುಡಮೇಲುಗೊಳಿಸಲಾಗಿದೆ. ಆ ಮೂಲಕ ನಿರುದ್ಯೋಗವನ್ನು ಹಾಗೂ ದೇಶದ ಜನರು ಅನ್ನಕ್ಕೂ ಪರದಾಡುವ ಸ್ಥಿತಿಯನ್ನು ನಿರ್ಮಿಸಲಾಗಿದೆ. ದೇಶದ ಅಮೂಲ್ಯವಾದ ಲಕ್ಷಾಂತರ ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಆಸ್ತಿಗಳನ್ನು ಇವರ ಚುನಾವಣಾ ಖರ್ಚಿಗೆ, ಅಪರೇಷನ್ ಕಮಲಕ್ಕೆ ಹಣ ಸುರಿವ ಉಧ್ಯಮಿ ಸ್ನೇಹಿತರಿಗೆ ಮೂರುಕಾಸಿಗೆ ಮಾರಾಟ ಮಾಡಲಾಗುತ್ತಿದೆ.

ಆ ಎಲ್ಲಾ ಕಾರಣಗಳಿಗಾಗಿ ಇದು ಪ್ರಶ್ನಿಸಲೇ, ಹೋರಾಟ ಮಾಡಲೇ ಬೇಕಾದ ಕಾಲವಾಗಿದೆ. ಬಹುಶಃ ಈ ಕುರಿತು ಜನಾಭಿಪ್ರಾಯ ರೂಪಿಸುವ ಕೆಲಸ ಇಂತಹ ಯಾತ್ರೆಯಿಂದ ಮಾತ್ರವೇ ಸಾಧ್ಯವಿದೆ. ಅದು ಕೇವಲ ಪಾದಯಾತ್ರೆ ಯಾಗಿ ಉಳಿಯದೆ ಅದು ಈ ಹಿಡೆನ್ ಅಜೆಂಡಾ ಹೊಂದಿರುವ ನೀಚ ಮನುವಾದಿಗಳ ವಿರುದ್ಧದ ದ್ವಿತೀಯ ಸ್ವಾತಂತ್ರ್ಯ ಸಮರವಾಗಿ ಬದಲಾಗಬೇಕಿದೆ. ರಾಹುಲ್ ಜೊತೆಗೆ ನಾವು ನೀವೆಲ್ಲರೂ ಒಂದಾಗಿ ಹೆಜ್ಜೆಯಿಡಬೇಕಾಗಿದೆ.

Advertisement
Advertisement
Recent Posts
Advertisement