ಮಂಗಳವಾರ ರಾತ್ರಿ ಮುಖ್ಯಮಂತ್ರಿಗಳ ನಿವಾಸದ ಹತ್ತಿರ ಮತ್ತು ಅವರು ಹೆಚ್ಚಾಗಿ ತಿರುಗಾಟ ನಡೆಸುವ ರಸ್ತೆಗಳಲ್ಲಿ ಪೇ ಸಿಎಂ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಆ ಪೋಸ್ಟರ್ ನಲ್ಲಿ ಕ್ಯೂ ಆರ್ ಕೋಡ್ ಇದ್ದು ಸ್ಕ್ಯಾನ್ ಮಾಡುವಂತೆ ಸೂಚಿಸಲಾಗಿತ್ತು. ಸ್ಕ್ಯಾನ್ ಮಾಡಿದೊಡನೆ ಅದು 40% ಸರ್ಕಾರ ಡಾಟ್ ಕಾಮ್ ಎಂಬ ವೆಬ್‌ಸೈಟ್ ತೆರೆಯಲ್ಪಟ್ಟು ರಾಜ್ಯದ ಬಿಜೆಪಿ ಸರ್ಕಾರದ ಹಗರಣಗಳ ಕುರಿತು ಅದರಲ್ಲಿ ಪ್ರಕಟಿಸಲಾಗಿದೆ ಮತ್ತು ರಾಜ್ಯ ಸರ್ಕಾರದ ಕುರಿತು ಸಾರ್ವಜನಿಕರು ದೂರು ದಾಖಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಅದನ್ನು 1ಲಕ್ಷದ 22ಸಾವಿರದ 957 ಜನ ಸ್ಕ್ಯಾನ್ ಮಾಡಿದ್ದು, ಹಲವರು ವಿವಿಧ ಇಲಾಖೆಗಳ ಭ್ರಷ್ಟಾಚಾರದ ವಿರುದ್ದ ದೂರನ್ನು ಕೂಡ ದಾಖಲಿಸಿದ್ದಾರೆ.
ಬಹು ವಿವಾದಕ್ಕೆ ಈಡಾದ ಈ payCM ಪೋಸ್ಟರ್ ಅಭಿಯಾನ ಇದೀಗ ಜಿದ್ದಾಜಿದ್ದಿನ ಅಭಿಯಾನವಾಗಿ ಪರಿವರ್ತನೆಗೊಂಡಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರೇ ಸ್ವತಃ ಹೇಳಿಕೆ ನೀಡಿದ್ದು ಇದು ತನ್ನ ಹಾಗೂ ಕರ್ನಾಟಕದ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದೆ ಎಂದು ನಿನ್ನೆಯೇ ಹೇಳಿಕೆ ನೀಡಿದ್ದರು ಮತ್ತು ಈ ಕುರಿತು ಪೋಸ್ಟರ್ ತಗೆಸುವಂತೆ ಪೋಲಿಸರಿಗೆ ಸೂಚಿಸಿದ್ದರು ಎನ್ನಲಾಗಿದೆ.
ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ payCM ಪೋಸ್ಟರ್ ಅಭಿಯಾನ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ನಿನ್ನೆ ರಾತ್ರಿ ಎರಡೂವರೆ ಸುಮಾರಿಗೆ ಕೆಪಿಸಿಸಿ ಸಾಮಾಜಿಕ ಜಾಲತಾಣದ ಮಾಜಿ ಅಧ್ಯಕ್ಷ ಬಿ.ಆರ್ ನಾಯ್ಡು, ಗಗನ್ ಯಾದವ್ ಸೇರಿ ಐವರು ಸದಸ್ಯರನ್ನು ಬಂಧಿಸಿದ್ದು ಹೈಗ್ರೌಂಡ್ ಹಾಗೂ ಸದಾಶಿವನಗರ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ತಮ್ಮ ಪಕ್ಷದ ಪದಾದಿಕಾರಿಗಳ ಬಂಧನ ಕುರಿತಂತೆ ಅಸಮಾಧಾನ ಹೊರ ಹಾಕಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು ನಾಳೆ ನಾವೇ ಸ್ವತಃ "ಪೇ ಸಿಎಂ ಪೋಸ್ಟರ್" ಅನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದಾಗಿ ಹಾಗೂ ತಾಕತ್ತಿದ್ದರೆ ಬಂದಿಸಿ ಎಂದು ಸರ್ಕಾರಕ್ಕೆ ಸವಾಲೆಸೆದಿದ್ದಾರೆ.
ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ
ವ್ಯಂಗ್ಯಚಿತ್ರ: ಪಿ.ಮಹಮ್ಮದ್ ಕಾರ್ಟೂನಿಷ್ಟ್
ಈ ಕುರಿತು ಸಿದ್ದರಾಮಯ್ಯ ನವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ವಿವರಗಳು ಇಂತಿವೆ:
"ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ. ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಬಂಡೆದಿದ್ದಾರೆ ಎಚ್ಚರ...!!" ಎಂದವರು ಹೇಳಿದ್ದಾರೆ.
"ರಾಜ್ಯ ಸರ್ಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ ಮುಖ್ಯಮಂತ್ರಿಗಳು ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ?" ಎಂದವರು ಹೇಳಿದರು.
"ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಬಿಜೆಪಿಯಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ" ಎಂದವರು ಆರೋಪಿಸಿದ್ದಾರೆ.
"ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ದದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಅಂತಹವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ" ಎಂದು ಸಿದ್ದರಾಮಯ್ಯ ಹೇಳಿದರು.
"ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ಸಲ್ಲುತ್ತದೆ.
ಏನು ಮುಖ್ಯಮಂತ್ರಿಗಳೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಈಗ ಯಾರೋ ನಿಮಗೆ ಚುಚ್ಚಿದಕ್ಕೆ ನೋವಾಯ್ತಾ?" ಎಂದವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪ್ರಶ್ನಿಸಿದ್ದಾರೆ.
ಅದೇ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿ ಕಾಂಗ್ರೆಸ್ ಪದಾದಿಕಾರಿಗಳ ಬಂಧನದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಹೇಳಿಕೆ ಇಂತಿದೆ:
"ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯ ವಿರುದ್ಧ ಡಿಜಿಟಲ್ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರನ್ನು ಪೊಲೀಸರು ಬಂಧಿಸಿರುವುದು ಖಂಡನೀಯ. ನಾವೆಲ್ಲಾ ಪ್ರಜಾಪ್ರಭುತ್ವದ ನೆರಳಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಎಲ್ಲರೂ ತಮ್ಮ ಅಭಿಮತವನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ" ಎಂದವರು ಹೇಳಿದರು.
"ಬಿಜೆಪಿ 40% ಕಮಿಷನ್ ಪಡೆಯುತ್ತಿರುವುದು ಜಗಜ್ಜಾಹೀರಾಗಿದೆ. ಈ ಬಗ್ಗೆ ಮಾಧ್ಯಮಗಳೂ ಕೂಡ ವರದಿ ಮಾಡಿವೆ. ವಿರೋಧ ಪಕ್ಷದಲ್ಲಿದ್ದುಕೊಂಡು ಆಡಳಿತಪಕ್ಷವನ್ನು ಸರಿ ದಾರಿಗೆ ತರುವುದು ನಮ್ಮ ಕರ್ತವ್ಯ. ಅದಕ್ಕಾಗಿ 40% ಕಮಿಷನ್ ಕುರಿತು ಅಭಿಯಾನಗಳನ್ನು ಕೈಗೆತ್ತಿಕೊಂಡಿದ್ದೇವೆ. ಇದು ರಾಜಕೀಯದ ಒಂದು ಆಯಾಮ. ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಇದನ್ನು ಅರಗಿಸಿಕೊಳ್ಳುವ ಶಕ್ತಿ ಇಲ್ಲ ಎಂದರೆ ನಾವೇನು ಮಾಡಲು ಸಾಧ್ಯ?" ಎಂದವರು ವ್ಯಂಗ್ಯವಾಡಿದ್ದಾರೆ.
"ಬಿಬಿಎಂಪಿ ಅವರು ನೀಡಿದ ದೂರಿನ ಮೇಲೆ ಬಂಧನ ಮಾಡಿರುವುದಾಗಿ ಪೋಲಿಸರು ಹೇಳುತ್ತಿದ್ದಾರೆ. ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಸಂದರ್ಭದಲ್ಲಿ ಬೀದಿ ಬೀದಿಯಲ್ಲಿ ಬಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಅದು ಬಿಬಿಎಂಪಿಗೆ ಕಾಣಲಿಲ್ಲವೇ?" ಎಂದವರು ಪ್ರಶ್ನಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಯುವ ನಾಯಕ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದು. ವಿವರಗಳು ಇಂತಿವೆ:
"ಕರ್ನಾಟಕ ರಾಜ್ಯದ 40% ಕಮಿಷನ್ ಬಿಜೆಪಿ ಸರ್ಕಾರ ಹಿಟ್ಲರ್ ಸರ್ಕಾರದಂತೆ ನಡೆದುಕೊಳ್ಳುತ್ತಿದೆ. ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಿದ ವಿರೋಧ ಪಕ್ಷದ ಸಾಮಾಜಿಕ ಮಾಧ್ಯಮದ ಯುವ ನಾಯಕರನ್ನು ಬಂಧಿಸಿದ್ದಾರೆ ಇದು ಪ್ರಜಾಪ್ರಭುತ್ವಕ್ಕೆ ಮಾರಕ" ಎಂದವರು ಹೇಳಿದ್ದಾರೆ.
ಈ ಕುರಿತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಹೇಳಿಕೆ ಪ್ರಕಟಿಸಲಾಗಿದ್ದು "40% ಕಮಿಷನ್‌ಗೆ ಕಿರುಕುಳ ನೀಡಿ ಒಂದು ಜೀವ ಬಲಿ ಪಡೆದ ಆರೋಪಿಯಾಗಿದ್ದ ಕೆ.ಎಸ್ ಈಶ್ವರಪ್ಪ ಅವರನ್ನು ಒಂದು ದಿನವೂ ಬಂಧಿಸಿ ವಿಚಾರಣೆ ನಡೆಸಲಿಲ್ಲ. ಆದರೆ #PayCM ಪೋಸ್ಟರ್ ಅಂಟಿಸಿದವರ ವಿರುದ್ಧ 7, 8 ಕೇಸ್‌ಗಳನ್ನು ದಾಖಲಿಸಿ, ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆ.
ಬಸವರಾಜ ಬೊಮ್ಮಾಯಿಯವರೇ, ಇದು ಹೇಡಿತನದ, ಲಜ್ಜೆಗೇಡಿತನದ ಪರಮಾವಧಿಯಲ್ಲವೇ?'' ಎಂದು ಪ್ರಶ್ನಿಸಲಾಗಿದೆ.
ಇಂದು ಸಂಜೆ ಈ ವರದಿ ಸಿದ್ದಗೊಳ್ಳುವ ವೇಳೆಗೆ ಬಂದಿತ ಕಾಂಗ್ರೆಸ್ ಪದಾದಿಕಾರಿಗಳು ಬಿಡುಗಡೆ ಗೊಂಡಿರುವ ಕುರಿತು ವರದಿಯಾಗಿದೆ.