ಭ್ರಷ್ಟ ಬಿಜೆಪಿ ಸರ್ಕಾರದ 40% ಕಮಿಷನ್ ದಂಧೆಯ ವಿರುದ್ಧ ಕಾಂಗ್ರೆಸ್ ರಣ ಕಹಳೆ ಮೊಳಗಿಸಿದೆ. ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿ ಮಾಡಿರುವ ಬಿಜೆಪಿ ಸರ್ಕಾರದ ವಿರುದ್ಧ ಡಿಜಿಟಲ್ ಹೋರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಸದಸ್ಯರ ಬಂಧನ ಖಂಡಿಸಿ ಇಂದು ರೇಸ್‌ಕೋರ್ಸ್ ರಸ್ತೆಯಲ್ಲಿ PayCM ಪೋಸ್ಟರ್ ಅಂಟಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂಧರ್ಭದಲ್ಲಿ ''ಇಡೀ ಸರ್ಕಾರವೇ 40% ಕಮಿಷನ್‌ಗಾಗಿ ಲಜ್ಜೆಗೆಟ್ಟು ಕೈಚಾಚುವಾಗ ಅಡ್ಡಿಯಾಗದ ಸ್ವಾಭಿಮಾನ #PayCM ಪೋಸ್ಟರ್ ಕಂಡಾಗ ಮಾತ್ರವೇಕೆ? ಗೋಡೆಗಳಿಗೆ ಅಂಟಿಸಿದ ಭಿತ್ತಿಚಿತ್ರವನ್ನು ನೀವು ಹರಿದು ಹಾಕಬಹುದು ಆದರೆ ನಿಮ್ಮ ದುರಾಡಳಿದ ಬಗೆಗಿನ ಆಕ್ರೋಶವನ್ನು ಜನರ ಮನದಿಂದ ಅಳಿಸಿಹಾಕಲು ಸಾಧ್ಯವಿಲ್ಲ'' ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಧ್ರುವನಾರಾಯಣ್ ಮತ್ತಿತರ ಮುಖಂಡರು ಬೆಂಗಳೂರಿನ ರೇಸ್ ಕೋರ್ಸ್ ಸಮೀಪ ಪೇ ಸಿಎಂ ಪೋಸ್ಟರ್ ಅಂಟಿಸಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾ ನಿರತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.