"ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ 40% ಕಮಿಷನ್ ದಂದೆಯಿಂದಾಗಿ, ಯಾವುದೇ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ಆಗದ ಕಾರಣಕ್ಕಾಗಿ ಬೆಂಗಳೂರು ಸಂಪೂರ್ಣವಾಗಿ ಕೃತಕ ನೆರೆಯಿಂದ ಮುಳುಗಿ ಹೋಗಿದೆ. ಅಲ್ಲದೇ ಇದೇ ಸರ್ಕಾರದ ನೇತೃತ್ವದಲ್ಲಿ ನಡೆದ ನೇಮಕಾತಿಯಲ್ಲಿನ ಭ್ರಷ್ಟಾಚಾರಕ್ಕೆ 54 ಸಾವಿರ PSI ಅಭ್ಯರ್ಥಿಗಳ ಬದುಕು ಅತಂತ್ರವಾಗಿದೆ, ಸರ್ಕಾರದ ಮುಂದೆ PSI ಹುದ್ದೆಗಳಲ್ಲಿ ಅಕ್ರಮ ನಡೆದಿರುವ ಸಾಕ್ಷಿ ಇದ್ದರು ಕೂಡ, ಮುಖ್ಯಮಂತ್ರಿ ಗಳು ಹಾಗೂ ಸಚಿವರಿಗಳು ಕುಂಭಕರ್ಣನ ರೀತಿ ಮಲಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿಪರ ಕೆಲಸ ಮಾಡದೇ ಕೇವಲ 40%ಕಮಿಷನ್ ದಂದೆಯಲ್ಲಿ ಮುಳುಗಿದ್ದು ಇದೀಗ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ಹಗರಣಗಳನ್ನು ಬಯಲಿಗೆಳೆಯುತ್ತವೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ. ಈ ಸರ್ಕಾರಕ್ಕೆ ಅಷ್ಟೊಂದು ಧೈರ್ಯ ಇದ್ದರೆ ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯಲಿ" ಎಂದು ಮಾಜಿ ಸಚಿವ, ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ, ಚಿತ್ತಾಪುರ ವಿಧಾನ ಸಭಾ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.
"ಕೇಂದ್ರದಲ್ಲಿ 8 ವರ್ಷದಿಂದ ಬಿಜೆಪಿ ಸರ್ಕಾರವಿದೆ, ರಾಜ್ಯದಲ್ಲಿ ಕಳೆದ 3 ವರ್ಷದಿಂದ ಬಿಜೆಪಿ ಸರ್ಕಾರವೇ ಇದ್ದರು ಸಹ ಜನರಿಗಾಗಿ ಏನನ್ನು ಮಾಡದೇ ಕೇವಲ ಭ್ರಷ್ಟಾಚಾರ ಮಾಡುತ್ತ ಕಾಲಹರಣ ಮಾಡುತ್ತಿದೆ" ಎಂದವರು ಆರೋಪಿಸಿದರು.
"ಜನೋತ್ಸವ ಮಾಡುತ್ತವೆ ಎಂದು ಮೂರರಿಂದ ನಾಲ್ಕು ಬಾರಿ ಮುಂದೂಡಿದ್ದಾರೆ, ಏಕೆಂದರೆ ಇವರು ಮಾಡುವುದು ಜನೋತ್ಸವವಲ್ಲ ಭ್ರಷ್ಟೋತ್ಸವ ಎಂದು ರಾಜ್ಯದ ಜನರು ಆಕ್ರೋಶದಿಂದ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಹಾಗೆ ಮಾಡಿದ್ದಾರೆ" ಎಂದವರು ಹೇಳಿದ್ದಾರೆ.
"ಬೆಂಗಳೂರಿನ ಉಸ್ತುವಾರಿಯನ್ನು ಮುಖ್ಯಮಂತ್ರಿಗಳೇ ಉಳಿಸಿಕೊಂಡಿರುವುದು ಏಕೆ? ಬೆಂಗಳೂರಿನಲ್ಲಿ 40% ಬದಲು 50% ಕಮಿಷನ್ ಸಿಗುತ್ತದೆ ಎಂಬ ಆಸೆಯಿಂದಲೇ? ಇದಕ್ಕಾಗಿಯೇ ಬೆಂಗಳೂರು ಉಸ್ತುವಾರಿ ಬೇಕೆಂದು ಕಿತ್ತಾಡುತ್ತಿರುವುದೇ?" ಎಂದು ಪ್ರಶ್ನಿಸಿದ್ದಾರೆ.
"ಬೆಂಗಳೂರಿನಲ್ಲಿ ಸತತ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ ಆದರೆ ನಗರದ 7 ಸಚಿವರು ಕಾಣೆಯಾಗಿದ್ದಾರೆ, ಕೇವಲ ಜನೋತ್ಸವ, ಭ್ರಷ್ಟೋತ್ಸವಕ್ಕೆ ಪ್ರತ್ಯಕ್ಷವಾಗಿ ಮತ್ತೆ ಕಾಣೆಯಾಗುತ್ತಾರೆ, ಕಾಂಗ್ರೆಸ್ ಕಾಲದ ಐಟಿಬಿಟಿ ಬೆಂಗಳೂರು ಇಂದು ಬಿಜೆಪಿ ಕಮಿಷನ್ ದುರಾಡಳಿತದಿಂದ ಜಲೋತ್ಸವ ಬೆಂಗಳೂರು ಆಗಿದೆ" ಎಂದು ಪ್ರಿಯಾಂಕ್ ಹೇಳಿದರು.
"PSI ಅಕ್ರಮದಲ್ಲಿ ಬಿಜೆಪಿ ಶಾಸಕನೇ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಸತ್ಯ ಒಪ್ಪಿಕೊಂಡರು ಸಹ ಸಿಎಂ, ಗೃಹಸಚಿವರು ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕುಳಿತಿರುವುದು ಏಕೆ? PSI ಹಗರಣವನ್ನು ಕೇವಲ ಪರೀಕ್ಷೆಗಳ ಮೇಲೆ ತನಿಖೆ ನಡೆಸಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಾರೆ ಎಂದು ನಾನು ಮೊದಲಿಂದಲೂ ಆರೋಪಿಸುತ್ತಲೇ ಬಂದಿದ್ದೇನೆ" ಎಂದು ಹೇಳಿದರು.
"ನನ್ನನ್ನು ನ್ಯಾಯಾಧೀಶರ ಮುಂದೆ ನಿಲ್ಲಿಸಿ ಈ ಅಕ್ರಮದ ಬಗ್ಗೆ ಎಲ್ಲವನ್ನು ಹೇಳುತ್ತೇನೆ ಎಂದು IPS ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರೇ ಹೇಳುತ್ತಿದ್ದಾರೆ, ಆದರೂ ಬೊಮ್ಮಾಯಿ ಸರ್ಕಾರ ಏಕೆ ಅವರನ್ನು ನ್ಯಾಯಾಲಯದ ಮುಂದೆ ಕರೆದುಕೊಂಡು ಹೋಗುತ್ತಿಲ್ಲ? ನಾನು ಅಂದಿನಿಂದಲೂ ಹೇಳುತ್ತಲೇ ಇದ್ದೇನೆ ಬಿಜೆಪಿಗರು ವಿಧಾನಸೌಧವನ್ನು ವ್ಯಾಪಾರಸೌಧವನ್ನಾಗಿ ಮಾಡುತ್ತಾರೆ ಎಂದು ಅದು ಈಗ ನಿಜವಾಗುತ್ತಿದೆ. ಅದಲ್ಲವಾದರೆ, ಬಿಜೆಪಿ ಶಾಸಕನೇ ಸ್ವತಃ ತಾನು PSI ಅಕ್ರಮದಲ್ಲಿ ಮಧ್ಯಸ್ಥಿಕೆ ವಹಿಸಿದ್ದೇನೆ ಎಂದು ಹೇಳಿಕೆ ನೀಡಿದ್ದರೂ ಇವರೇಕೆ ತನಿಖೆ ನಡೆಸುತ್ತಿಲ್ಲ" ಎಂದವರು ಪ್ರಶ್ನಿಸಿದ್ದಾರೆ.