Advertisement

ಮೀಸಲಾತಿಯನ್ನು ಕೇವಲ ಅಲ್ಪಸಂಖ್ಯಾತರು, ದಲಿತರು ಪಡೆಯುತ್ತಿಲ್ಲ.‌ ನೀವು, ನಾವೂ ಪಡೆಯುತ್ತಿದ್ದೇವೆ. ಯಾವ್ಯಾವ ಜಾತಿಗೆ ಎಷ್ಟೆಷ್ಟು ಪರ್ಸೆಂಟ್ ಗೊತ್ತೇ?

Advertisement

ಅಂಬೇಡ್ಕರ್ ಎಂದೊಡನೆ ಮಾನವತಾವಾದಿ ಗಳಿಗೆ "ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು" ಸಿದ್ದಾಂತದ ಸಂವಿಧಾನದ ನೆನಪಾದರೆ ಮನುವಾದಿ ಗಳಿಗೆ "ಮೀಸಲಾತಿ" ಯ ನೆನಪಾಗುತ್ತದೆ.

ಮೀಸಲಾತಿ ಎಂದರೆ ಕೇವಲ ಅಲ್ಪಸಂಖ್ಯಾತರು ಮತ್ತು ದಲಿತರಿಗೆ ಮಾತ್ರವೇ ನೀಡಲಾಗುತ್ತಿರುವ ವಿಶೇಷ ಸವಲತ್ತು ಎಂಬಂತೆ ದೇಶದಾದ್ಯಂತ ಅಪಪ್ರಚಾರ ನಡೆಸಿರುವ ವೈದಿಕಶಾಹಿ ವರ್ಗ ಒಕ್ಕಲಿಗರಲ್ಲಿ ಬಡವರು ಇಲ್ಲವೇ ಎಂದು ಒಕ್ಕಲಿಗರಲ್ಲಿ ಕೇಳಿದರೆ, ಕುರುಬರಲ್ಲಿ ಬಡವರು ಇಲ್ಲವೇ ಎಂದು ಆ ಜಾತಿಯವರಲ್ಲಿ, ಬಂಟರಲ್ಲಿ ಬಡವರು ಇಲ್ಲವೇ ಎಂದು ಬಂಟರಲ್ಲಿ , ಬಿಲ್ಲವರಲ್ಲಿ ಬಡವರಿಲ್ಲವೇ ಎಂದು ಆ ವರ್ಗದ ಜನರಲ್ಲಿ, ರಾಮಕ್ಷತ್ರೀಯರಲ್ಲಿ ಇಲ್ಲವೇ ಎಂದು ಅವರಲ್ಲಿ, ವಿಶ್ವಕರ್ಮರಲ್ಲಿ ಬಡವರಿಲ್ಲವೇ ಎಂದು ಅವರಲ್ಲಿ, ಮೀನುಗಾರ ಜಾತಿಯಲ್ಲಿ ಬಡವರು ಇಲ್ಲವೇ ಎಂದು ಆ ವರ್ಗದ ಜನರಲ್ಲಿ, ಕೊಡವರಲ್ಲಿ ಇಲ್ಲವೇ ಎಂದು ಆ ವರ್ಗದ ಜನರಲ್ಲಿ ಹೀಗೆ ಆಯಾಯ ವರ್ಗದವರಲ್ಲಿ ಕೇಳುವ ಮೂಲಕ ಮೀಸಲಾತಿ ವಿರೋದಿ ಭಾವನೆ ಬಿತ್ತುವ ಕಾರ್ಯದಲ್ಲಿ ತೊಡಗಿದೆ.

ಆದರೆ ಅದು ನಿಜವಲ್ಲ, ನಿಜವೇನು ಗೊತ್ತೇ?

ಮೀಸಲಾತಿ ಪಟ್ಟಿ;

EWS (ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ): 10%,

OBC (ಹಿಂದುಳಿದ ವರ್ಗ): 27%,

SC, ST (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ): 22.5%

General (ಸಾಮಾನ್ಯ ವರ್ಗ): 40.5%.

ಮೀಸಲಾತಿ ಪಡೆಯುವ ಜಾತಿಗಳ/ ವರ್ಗಗಳ ಶೇಕಡಾವಾರು ವಿವರಗಳು ಇಂತಿವೆ:

• ಕೇಂದ್ರದ ಮೋದಿ ಸರ್ಕಾರ ಜಾರಿಗೆ ತಂದ EWS ಕೆಟಗರಿಯಲ್ಲಿ ವಾರ್ಷಿಕ 8ಲಕ್ಷ ಕ್ಕಿಂತ ಹೆಚ್ಚು ಆದಾಯ ಹೊಂದಿಲ್ಲದ, 5ಎಕರೆ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿಲ್ಲದ ಬ್ರಾಹ್ಮಣ ಮತ್ತಿತರ ಮೇಲ್ಜಾತಿಗಳಿಗೆ ಶೇಕಡ 10

ಹಿಂದಿನಿಂದಲೂ ಇದ್ದ ಮೀಸಲಾತಿ:

• ಕೆಟಗರಿ 1 ರಲ್ಲಿ ಗೊಲ್ಲ, ಪಿಂಜಾರ, ಉಪ್ಪಾರ ಇತ್ಯಾದಿ 95 ಉಪಜಾತಿಗಳಿಗೆ ಶೇಕಡ 4ರಷ್ಟು ಮೀಸಲಾತಿ ಪಡೆಯುತ್ತಿದೆ.

• ಕೆಟಗರಿ 2(a) ರಲ್ಲಿ ಕುರುಬ, ಈಡಿಗ, ಮಡಿವಾಳ, ಕುಂಬಾರ, ವಿಶ್ವಕರ್ಮ, ಕ್ಷೌರಿಕ, ದೇವಾಂಗ, ತಿಗಳ, ಮತಾಂತರಗೊಂಡ ಕ್ರೈಸ್ತರು ಇತ್ಯಾದಿ 102 ಜಾತಿಗಳು ಸೇರಿ ಶೇಕಡ 15.

• ಕೆಟಗರಿ 2(b) ರಲ್ಲಿ ಮುಸ್ಲಿಂ ಮತ್ತಿತರ ಸಮಾನಂತರ ಜಾತಿಗಳಿಗೆ ಶೇಕಡ 2.

• ಕೆಟಗರಿ 3(a)ರಲ್ಲಿ ಒಕ್ಕಲಿಗ, ರೆಡ್ಡಿ, ಬಂಟ, ಕೊಡವ ಇತ್ಯಾದಿ 12 ಜಾತಿಗಳಿಗೆ ಶೇಕಡ 4.

• ಕೆಟಗರಿ 3(b) ರಲ್ಲಿ ಲಿಂಗಾಯತ ಮತ್ತಿತರ 42ಜಾತಿಗಳಿಗೆ ಶೇಕಡ 5.

• S.T ಕೆಟಗರಿಯಲ್ಲಿ ನಾಯಕ, ವಾಲ್ಮಿಕಿ, ಜೇನುಕುರುಬ, ಕಾಡು ಕುರುಬ, ಸೋಲಿಗ ಇತ್ಯಾದಿ 65ಜಾತಿಗಳಿಗೆ ಶೇಕಡ 3.

• SC ಕೆಟಗರಿಯಲ್ಲಿ ಹೊಲೆಯ, ಮಾದಿಗ, ಸಮಗಾರ, ಡೋಹಾರ, ಭೋವಿ, ಲಂಬಾಣಿ, ಕೊರಚ, ಕೊರಮ ಇತ್ಯಾದಿ 101 ಜಾತಿಗಳಿಗೆ ಶೇಕಡ 15.

ಈ ಮೇಲಿನ ಮೀಸಲಾತಿ ಪಡೆದ ಜಾತಿಗಳನ್ನು ಒಟ್ಟು ಸೇರಿಸಿದರೆ ಶೇಕಡ 49.5 ಮೀಸಲಾತಿ ಮಾತ್ರವೇ ನೀಡಿದಂತಾಗುತ್ತದೆ. ಇನ್ನುಳಿದ ಶೇಕಡ 50.5 ಮೀಸಲಾತಿ ಇರುವುದು ಸಾಮಾನ್ಯ ವರ್ಗಕ್ಕೆ ಅಂದರೆ ಶೈಕ್ಷಣಿಕ ವಾಗಿ, ಔದ್ಯೋಗಿಕ ವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರಿದ ವರ್ಗಕ್ಕೆ. ಆದರೆ ಒಂದು ವಿಷಯ ತಿಳಿದಿರಲಿ ಗೆಳೆಯರೆ, ಸ್ವಾತಂತ್ರ್ಯ ಸಿಗುವ ವೇಳೆಗೆ ಈ ದೇಶದಲ್ಲಿ ಈ ಮೇಲೆ ಹೇಳಿದ ಮುಂದುವರಿದ ವರ್ಗಕ್ಕೆ ಸಂಬಂಧ ಪಟ್ಟಂತೆ ಇದ್ದವರು ಬ್ರಾಹ್ಮಣ, ಪಟೇಲ್ ಸಮುದಾಯ ಮುಂತಾದ ಮೇಲ್ಜಾತಿಯ ವರ್ಗ ಮಾತ್ರವೇ ಆಗಿದೆ.

ಮೀಸಲಾತಿಯ ಇತಿಹಾಸ: ಮೀಸಲಾತಿ ಮೊದಲಿಗೆ ಆರಂಭಗೊಂಡದ್ದು ಕ್ರಿ.ಪೂ 185ರಲ್ಲಿ. ಅಂದು ಸುಮತಿಭಾರ್ಗವ ಮನುಸ್ಮೃತಿ ಯನ್ನು ರಚಿಸುವ ಮೂಲಕ ಮೀಸಲಾತಿಯನ್ನು ಜಾರಿಗೆ ತರುತ್ತಾನೆ. ಆ ಮೀಸಲಾತಿಯ ಪ್ರಕಾರ ಬ್ರಾಹ್ಮಣ ಮಾತ್ರವೇ ವಿದ್ಯೆ ಕಲಿತು ಆಸ್ಥಾನದಲ್ಲಿ ರಾಜಗುರು, ಮಂತ್ರಿ, ಖಜಾನಾಧಿಕಾರಿ ಮತ್ತಿತರ ಪ್ರಮುಖ ಹುದ್ದೆಯನ್ನು ನಿಬಾಯಿಸಬೇಕು. ಕ್ಷತ್ರಿಯನಾದವ ರಾಜ ಪಟ್ಟವನ್ನು ಏರಿ ರಾಜ್ಯವನ್ನು ವೈರಿ ರಾಜರುಗಳಿಂದ ರಕ್ಷಿಸಬೇಕು. ವೈಶ್ಯ ತಲೆಹೊರೆಯ ಮೂಲಕ, ದೋಣಿ , ಎತ್ತಿನಗಾಡಿಗಳ ಮೂಲಕ ಊರೂರಿಗೆ ತೆರಳಿ ವ್ಯಾಪಾರ- ವಹಿವಾಟು ನಡೆಸಿ ರಾಜ ಆಸ್ಥಾನಕ್ಕೆ ಕಾಲಕಾಲಕ್ಕೆ ತೆರಿಗೆಯನ್ನು ಸಲ್ಲಿಸಬೇಕು, ಶೂದ್ರ ವಂಶಪಾರಂಪರ್ಯ ವಾಗಿ ಇವರೆಲ್ಲರ ಗುಲಾಮನಾಗಿ ಕೆಲಸ ಮಾಡಿಕೊಂಡಿರಬೇಕು.

ಈ ಮನುಸ್ಮೃತಿ ಯ ಆದಾರದ ಮೇಲೆ ಪುಷ್ಯಮಿತ್ರ ಶುಂಗ ಎಂಬ ರಾಜ ಶಾಸನ ಮಾಡುತ್ತಾನೆ. ಆ ನಂತರ ಮನುಸ್ಮೃತಿ ಕಾನೂನುಗಳು ನಿರಂತರವಾಗಿ ಬೇರೆಬೇರೆ ಆಡಳಿತಗಾರರ ಕಾಲಮಾನಗಳಲ್ಲಿ ಧಾರ್ಮಿಕತೆ, ಸಂಪ್ರದಾಯ, ಪದ್ದತಿ, ಸಂಸ್ಕೃತಿ ಮುಂತಾದ ಹೆಸರಿನಲ್ಲಿ ನಡೆದುಕೊಂಡು ಬಂದು ಬರೋಬ್ಬರಿ 2000 ವರ್ಷಗಳಷ್ಟು ಕಾಲ ಚಾಲ್ತಿಯಲ್ಲಿದ್ದವು. ಈ 20ಶತಮಾನಗಳ ಅವಧಿಯಲ್ಲಿ ಹಿಂದುಳಿದ ವರ್ಗ, ದಲಿತರು ಮತ್ತು ಅಲ್ಪಸಂಖ್ಯಾತರ‌್ಯಾರು ಕೂಡ ಯಾವುದೇ ಸೌಲಭ್ಯಗಳ ಸುಖವನ್ನು ಅನುಭವಿಸಿರಲೇ ಇಲ್ಲ. ಬ್ರಾಹ್ಮಣ ವರ್ಗ ಮಾತ್ರವೇ ಈ ಭೂಮಿಯ ಸಕಲ ಸಂಪತ್ತು, ಸವಲತ್ತು ಮುಂತಾದ ಸುಖಗಳನ್ನು ಅನುಭವಿಸಿತ್ತು ಮತ್ತು ತಲೆತಲಾಂತರವಾಗಿ ಇತರ ವರ್ಗವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ, ದೈಹಿಕವಾಗಿ ಮತ್ತು ಲೈಂಗಿಕವಾಗಿ ಶೋಷಿಸಿತ್ತು.

1947ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಸಿಗುವ ತನಕವೂ ಈ ಶೋಷಣೆ ಮುಂದುವರಿದಿತ್ತು. ಆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 1950ರಲ್ಲಿ ಜಾರಿಗೊಳಿಸಿದ ಅಂಬೇಡ್ಕರ್ ಸಂವಿಧಾನವು ಸಂಪೂರ್ಣವಾಗಿ ಮನುಸ್ಮೃತಿ ಸಂವಿಧಾನಕ್ಕೆ ವಿರುದ್ದವಾಗಿ ಹಿಂದುಳಿದ ವರ್ಗ(OBC)ಕ್ಕೆ 27%, ಪರಿಶಿಷ್ಟ ವರ್ಗಕ್ಕೆ 15%, ಪರಿಶಿಷ್ಟ ಜಾತಿಗೆ 7.5% ಮತ್ತು ಸಾಮಾನ್ಯ ವರ್ಗಕ್ಕೆ 50.5% ಮೀಸಲಿಟ್ಟಿತ್ತು. ಇದೀಗ ಆ ಮೀಸಲಾತಿ ತಗೆದು ಹಾಕುವ ಕುರಿತು ಪ್ರಯತ್ನದಲ್ಲಿ ಆರೆಸ್ಸೆಸ್ ಮತ್ತಿತರ ಪುರೋಹಿತಶಾಹಿ ಪರ ಸಂಘಟನೆಗಳು ಪ್ರಯತ್ನಿಸುತ್ತಿವೆ.

ನಮ್ಮ ಪ್ರಶ್ನೆ ಇಷ್ಟೆ... 20ಶತಮಾನಗಳ ಕಾಲ ವೈದಿಕಶಾಹಿ ವರ್ಗ ಅನುಭವಿಸಿದ ಸೌಲಭ್ಯಗಳ ಮೀಸಲಾತಿ ಹಿಂದುಳಿದ ವರ್ಗ ಮತ್ತು ದಲಿತ ವರ್ಗಕ್ಕೆ ಕೇವಲ 70ವರ್ಷಗಳ ಕಾಲ ಕೊಟ್ಟರೆ ಸಾಕೇ? ಒಂದು ವೇಳೆ ಮೀಸಲಾತಿ ರದ್ದುಮಾಡುವುದೇ ಆದರೆ ದೇಶದ ಸಂಪತ್ತನ್ನು ತಲಾವಾರು ಆಧಾರದ ಮೇಲೆ ಸಮಾನವಾಗಿ ಹಂಚಿಕೆ ಮಾಡಿ ಆ ನಂತರವೇ ರದ್ದುಪಡಿಸ ಬೇಕಲ್ಲವೇ?

ಇಷ್ಟಾಗಿಯೂ ಬಿಜೆಪಿ ಪಕ್ಷದಲ್ಲಿದ್ದುಕೊಂಡು ಮೀಸಲಾತಿಯ ವಿರುದ್ದವಾದ ವೈದಿಕಶಾಹಿ ವರ್ಗದ ಜೊತೆ ದ್ವನಿ ಸೇರಿಸುವ ಹಿಂದುಳಿದ ಮತ್ತು ದಲಿತ ವರ್ಗದ ಯುವಕರಲ್ಲಿ ಒಂದು ಪ್ರಶ್ನೆ. ನಿಮ್ಮ ಹೋರಾಟ ಯಾರ ವಿರುದ್ದ? ಮುಂದಿನ ಜನಾಂಗದ ನಮ್ಮದೆ ಮಕ್ಕಳ, ಮೊಮ್ಮಕ್ಕಳ ವಿರುದ್ದವೇ?

ಇದಿಷ್ಟನ್ನು ನಾವು ಅರ್ಥ ಮಾಡಿಕೊಂಡರೆ ಅದುವೇ ನಾವು, ನಮ್ಮ ಪರವಾಗಿ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ.

ಮಾಹಿತಿ: ವಿವಿಧ ಮೂಲಗಳಿಂದ.

ಚಿತ್ರ ಕೃಪೆ: ಗೂಗಲ್

Advertisement
Advertisement
Recent Posts
Advertisement