'ಭೂತಕೋಲ ಹಿಂದೂ ಸಂಸ್ಕೃತಿ' ಎಂಬ ‘ಕಾಂತಾರ’ ಸಿನೆಮಾ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರ ಹೇಳಿಕೆಯ ಕುರಿತು ನಟ ಚೇತನ್ ಅಹಿಂಸಾ ಕುಮಾರ್ ಪ್ರತಿಕ್ರಿಯಿಸಿದ್ದು "3500 ಸಾವಿರ ವರ್ಷಗಳ ಹಿಂದೆ ಈ ನೆಲಕ್ಕೆ ವಲಸೆ ಬಂದು ನೆಲೆಸಿ ಇಲ್ಲಿ ಬ್ರಾಹ್ಮಣ್ಯದ ಚಾತುರ್ವರ್ಣ ವ್ಯವಸ್ಥೆ ಹುಟ್ಟುಹಾಕಿದ ವೈದಿಕ ಪರಂಪರೆಯ ಜನರು, ಇಲ್ಲಿನ ಮೂಲನಿವಾಸಿ ಆದಿವಾಸಿಗಳು ಕಳೆದ 75ಸಾವಿರ ವರ್ಷಗಳಿಗಿಂತಲೂ ಆಚರಿಸಿಕೊಂಡು ಬಂದಿರುವ ಭೂತಕೋಲ, ಪರಿಸರ ಮತ್ತು ಪ್ರಕೃತಿ ಆರಾಧನೆ ಮುಂತಾದ ಪರಂಪರೆಯನ್ನು ತಮ್ಮ ವೈದಿಕಶಾಹಿ ಹಿಂದೂ ಸಂಸ್ಕೃತಿ ಎಂದು ಬಿಂಬಿಸಿಕೊಳ್ಳುವ ಹುನ್ನಾರ ಹೊಂದಿದ್ದಾರೆ" ಎಂದು ಅಪಾದಿಸಿದ್ದು, ಇದೀಗ ಆ ಹೇಳಿಕೆ ಹಿಂದೂ ಧರ್ಮದ ಗುತ್ತಿಗೆದಾರರಂತೆ ವರ್ತಿಸುವ ವೈದಿಕ ಬ್ರಾಹ್ಮಣೀಯ ಮೂಲಭೂತವಾದಿಗಳ ವಲಯದಲ್ಲಿ ಮತ್ತು ಅವರು ಹರಡುವ ಸುಳ್ಳುಗಳನ್ನು ಕಣ್ಮುಚ್ಚಿ ಬೆಂಬಲಿಸುವ ಅತಿ ಕಡಿಮೆ ಸಂಖ್ಯೆಯ ಹಿಂದುಳಿದ ಮತ್ತು ದಲಿತ ವರ್ಗದ ಜನರ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದರೆ ಬಹುಸಂಖ್ಯಾತ ಹಿಂದುಳಿದ ವರ್ಗ ಮತ್ತು ದಲಿತ ವರ್ಗದ ಮೂಲನಿವಾಸಿ ಚಿಂತಕರ ವಲಯದಲ್ಲಿ "ಚರ್ಚಾರ್ಹ ಹೇಳಿಕೆ" ಎಂದು ತೀವ್ರ ಪ್ರಶಂಶೆಗೆ ಒಳಗಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಚೇತನ್, 'ಭೂತಕೋಲ ಹಿಂದೂ ಸಂಸ್ಕೃತಿ ಎಂಬ ರಿಷಬ್ ಶೆಟ್ಟಿ ಹೇಳಿಕೆ ಸರಿಯಲ್ಲ, ಅದು ವೈದಿಕ ಬ್ರಾಹ್ಮಣೀಯ ಆರ್ಯರು ಈ ನೆಲಕ್ಕೆ ಕಾಲಿಡುವ ಸುಮಾರು 75ಸಾವಿರ ವರ್ಷಗಳ ಹಿಂದಿನಿಂದಲೂ ಬಳಕೆಯಲ್ಲಿದ್ದ ಸಂಸ್ಕೃತಿ ಆಗಿದೆ' ಎಂದು ಹೇಳಿದ್ದರು.
ಸಿನೇಮಾ ಓಕೆ.. ಹೇಳಿಕೆ ತಪ್ಪು?
ನಮ್ಮ ಕನ್ನಡದ ಚಲನಚಿತ್ರ 'ಕಾಂತಾರ'ವು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ತುಂಬಾ ಖುಷಿಯ ಸಂಗತಿ. ಆದರೆ, ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನಿಂದಲೂ ಇರುವವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಅದರಾಚೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ಟ್ವೀಟ್ ಮಾಡಿದ್ದರು.