Advertisement

ಉಡುಪಿ: ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ; ಪ್ರಕರಣ ದಾಖಲಿಸುವಂತೆ ಸಿಪಿಎಂ ಒತ್ತಾಯ

Advertisement

ಉಡುಪಿ ಜಿಲ್ಲಾ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಉಡುಪಿ ನಗರದಲ್ಲಿ ರವಿವಾರ ನಡೆದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶಿಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿವೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಎಂ ಉಡುಪಿ ಜಿಲ್ಲಾ ಸಮಿತಿಯು "ಅಕ್ಟೋಬರ್ 2ರಂದು ಉಡುಪಿಯಲ್ಲಿ ನಡೆಸಲಾಗಿದ್ದ ದುರ್ಗಾ ದೌಡ್ ಸಂದರ್ಭದಲ್ಲಿ ನಡೆಸಲಾಗಿದ್ದ ಮೆರವಣಿಗೆಯಲ್ಲಿ ತಲವಾರು ಮತ್ತು ಖಡ್ಗಗಳ ಪ್ರದರ್ಶನ ಹಾಗೂ ಸಭೆಯಲ್ಲಿ ಕೇಳಿಬಂದ ಪ್ರಚೋದನಕಾರಿ ಭಾಷಣದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ" ಉಡುಪಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

"ದುರ್ಗಾದೌಡ್ ಮೆರವಣಿಗೆಯ ಸಂದರ್ಭದಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಗೆ ವಿರುದ್ಧವಾಗಿ ಹಾಡುಹಗಲೇ ನಡುರಸ್ತೆಯಲ್ಲಿ ಖಡ್ಗವನ್ನು ಝಳಪಿಸುತ್ತಾ ಮೆರವಣಿಗೆ ನಡೆಸಿದ್ದು ಮಾತ್ರವಲ್ಲದೇ ಸಭೆಯಲ್ಲಿ ಸಂವಿಧಾನ ವಿರೋಧಿಯಾದ, ಉದ್ರೇಕಕಾರಿ ಭಾಷಣವನ್ನು ಕೂಡ ಮಾಡಲಾಗಿದ್ದು ಆ ಕುರಿತು ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ" ಎಂದು ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

"ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವ ವಿ.ಸುನಿಲ್‌ಕುಮಾರ್ ಹಾಗೂ ಕೆಲವು ಶಾಸಕರು ಕೂಡ ಭಾಗವಹಿಸಿದ್ದು ಅವರ ಎದುರಿನಲ್ಲೇ ಇಂತಹ ಕಾರ್ಯಕ್ರಮಗಳು ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನರು ಇಂತಹ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳ ವಿರುದ್ಧ ಧ್ವನಿಯಾಗಬೇಕು ಎಂದು ಸಿಪಿಎಂ ಮನವಿ ಮಾಡುತ್ತದೆ" ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement