"ಪಿಎಸ್ಐ ನೇಮಕಾತಿಯಲ್ಲಿ ಲಂಚ ಪಡೆವ ಮೂಲಕ ಹಗರಣ ನಡೆಸಿ, ಕಷ್ಟಪಟ್ಟು ಓದಿದ್ದ ಅಭ್ಯರ್ಥಿಗಳ ಬದುಕಲ್ಲಿ ಆತಂಕ ಸೃಷ್ಟಿಸಿದ್ದ 40% ಕಮಿಷನ್ ನ ಬಿಜೆಪಿ ಸರ್ಕಾರ ಇದೀಗ, ಮೊನ್ನೆ ನಡೆದ ಶಾಲಾ ಶಿಕ್ಷಕರ ನೇಮಕಾತಿಯ ವಿಷಯದಲ್ಲೂ ಹಲವು ಗೊಂದಲಗಳನ್ನು ಸೃಷ್ಟಿಸಲು ಹೊರಟಿದೆ. 2022 ರ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಬರೆದು ವಿವಿಧ ಮೀಸಲಾತಿಗಳ ಅಡಿಯಲ್ಲಿ ಇದೀಗ ದಾಖಲೆ ಪರಿಶೀಲನೆಗೆ ಆಯ್ಕೆಯಾಗಿರುವ ಹೆಣ್ಣು ಮಕ್ಕಳ ಜಾತಿ ಪ್ರಮಾಣ ಪತ್ರದ ವಿಷಯದಲ್ಲಿ ಸರ್ಕಾರವು ಅತ್ಯಂತ ಗೊಂದಲ ಮೂಡಿಸುತ್ತಿದೆ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಆರೋಪಿಸಿದ್ದಾರೆ.
"ದಾಖಲೆ ಪರಿಶೀಲನೆಗೆ ಆಯ್ಕೆಯಾದ ವಿವಾಹಿತ ಹೆಣ್ಣು ಮಕ್ಕಳು ತಮ್ಮ ತಂದೆಯ ಜಾತಿಯ ಪ್ರಮಾಣ ಪತ್ರವನ್ನು ಸಲ್ಲಿಸುವಂತಿಲ್ಲ. ಬದಲಿಗೆ ಅವರು ತಮ್ಮ ಗಂಡನ ಜಾತಿ ಪ್ರಮಾಣವನ್ನು ಸಲ್ಲಿಸಬೇಕು ಎಂದು ಸರ್ಕಾರ ವಿವಾಹಿತ ಹೆಣ್ಣು ಮಕ್ಕಳಿಗೆ ಸೂಚಿಸಿದೆ. ಆದರೆ ಇಲಾಖೆಯ ಪ್ರಕಟಣೆಯಲ್ಲಿ ಕೇವಲ ಜಾತಿ ಪತ್ರದ ಸಂಖ್ಯೆಯನ್ನು ಮಾತ್ರ ನಮೂದಿಸಲು ಹೇಳಲಾಗಿರುತ್ತದೆ. ಪರಿಸ್ಥಿತಿ ಹೀಗಿದ್ದರೂ ನಿಯಮಗಳಿಗೆ ವಿರುದ್ಧವಾಗಿ ಸರ್ಕಾರವು ಬೇಕಾಬಿಟ್ಟಿಯಾಗಿ ನಿಯಮಗಳನ್ನು ಅಭ್ಯರ್ಥಿಗಳ ಮೇಲೆ ಹೇರಲು ಹೊರಟಿದೆ" ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಿಯಮಾವಳಿಗೆ ವಿರುದ್ಧವಾಗಿ
ಹೊಸ ಹೊಸ ನಿಯಮಗಳನ್ನು ಹೇರುತ್ತಿರುವ ಸರ್ಕಾರಕ್ಕೆ ಅಂತರ್ಜಾತೀಯ ವಿವಾಹ, ಅಂತರ್ ಧರ್ಮೀಯ ವಿವಾಹದ ಸಂದರ್ಭದಲ್ಲಿ ಏನು ಕ್ರಮ ಅನುಸರಿಸಬೇಕೆಂದು ತಿಳಿಸಿಲ್ಲ. ಇದು ಸಾಲದು ಎಂಬಂತೆ ಗಂಡನ ಜಾತಿಯ ಜಾತಿ ಪತ್ರವನ್ನು ಸಲ್ಲಿಸದಿದ್ದರೆ ಆಯ್ಕೆಯಾದ ಅಭ್ಯರ್ಥಿಗಳ ಮೀಸಲಾತಿ ರದ್ದುಪಡಿಸಿ ಅವರನ್ನು ಸಾಮಾನ್ಯ ಅಭ್ಯರ್ಥಿಗಳ ಪಟ್ಟಿಗೆ ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ. ಇದು ಬಿಜೆಪಿಗರ ಮೀಸಲಾತಿ ವಿರೋಧಿ ಧೋರಣೆ ಆಗಿದ್ದು, ಈ ನೇಮಕಾತಿಯಲ್ಲೂ ಕೂಡಾ ಲಂಚ ಹೊಡೆಯುವ ಹುನ್ನಾರ ಮಾಡುತ್ತಿರುವರೇ ಎಂಬ ಅನುಮಾನ ಮೂಡ ತೊಡಗಿದೆ. ಕೂಡಲೇ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಈ ಅನಗತ್ಯವಾದ ಗೊಂದಲವನ್ನು ಪರಿಹರಿಸಿ ಪರೀಕ್ಷೆ ಬರೆದು ಆಯ್ಕೆಯಾಗಿರುವ ಹೆಣ್ಣು ಮಕ್ಕಳ ಆತಂಕವನ್ನು ದೂರ ಮಾಡಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ!" ಎಂದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.