"ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ತೊಡಗಿಸಿಕೊಂಡಿರುವ ದ.ಕ ಜಿಲ್ಲೆಯ ಕಾಂಗ್ರೆಸ್‌ನ ನಾಯಕಿ ಪ್ರತಿಭಾ ಕುಳಾಯಿ ಅವರ ಮನೆಗೆ ಪೊಲೀಸರು ನೋಟಿಸ್ ಜಾರಿ ಮಾಡಲು ಮಧ್ಯರಾತ್ರಿ ತೆರಳಿರುವುದು ಅಕ್ಷಮ್ಯ. ಹಾಗೆ ಮಹಿಳೆಯೊಬ್ಬರ ಮನೆಗೆ ನಡು ರಾತ್ರಿ ಹೋಗಿ ನೋಟಿಸು ನೀಡಲು ಅವರೇನು ಕೊಲೆ ಮಾಡಿದ್ದಾರೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟದಲ್ಲಿ ತೊಡಗಿಸಿಕೊಳ್ಳುವುದು ದೇಶದ್ರೋಹವೇ?" ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಪ್ರಶ್ನಿಸಿದ್ದಾರೆ.
"ಕಳೆದ ಹಲವಾರು ವರ್ಷಗಳಿಂದ ಸುರತ್ಕಲ್ ನಲ್ಲಿ ಅಕ್ರಮವಾಗಿ ಟೋಲ್ ಪ್ಲಾಜಾ ಕಾರ್ಯಾಚರಣೆ ನಡೆಸುತ್ತಿದ್ದು ಇದಕ್ಕೆ 20 ಕಿ.ಮಿ ಸಮೀಪದಲ್ಲೇ ಹೆಜಮಾಡಿಯಲ್ಲಿ ಕೂಡ ಟೋಲ್ ಪ್ಲಾಜಾ ಇರುವುದರಿಂದ ಯಾವುದಾದರೂ ಒಂದನ್ನು ತೆರವುಗೊಳಿಸುವಂತೆ ಹೋರಾಟಗಾರರು ಮನವಿ ಮಾಡುತ್ತಾ ಬಂದರೂ ಕೂಡ ಬಿಜೆಪಿ ಸಂಸದರು ಮತ್ತು ಶಾಸಕರು ಕಿವಿ ಕೇಳಿಯೂ ಕೇಳದಂತೆ ನಟಿಸುತ್ತಿದ್ದಾರೆ. ಸರಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆಯ ವಿರುದ್ದ ಅಕ್ಟೋಬರ್ 18ರಂದು ಆಯೋಜಿಸಿರುವ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರಕಾರ ಪೊಲೀಸರ ಮೂಲಕ ನೋಟಿಸ್ ನೀಡಿ ಬೆದರಿಸುವ ಕೆಲಸ ಮಾಡುತ್ತಿದೆ" ಎಂದವರು ಆಕ್ರೋಶ ವ್ಯಕ್ತಪಡಿಸಿದರು.
"ಪೊಲೀಸರಿಗೆ ಒಂದು ವೇಳೆ ನೋಟಿಸ್ ನೀಡುವ ಅಗತ್ಯತೆ ಇದ್ದದ್ದೇ ಆದರೆ ಹಗಲು ಹೊತ್ತು ಬರುವುದನ್ನು ಬಿಟ್ಟು, ಮಹಿಳೆಯೊಬ್ಬರ ಮನೆಗೆ ಮಧ್ಯರಾತ್ರಿ ಬರುವ ಅಗತ್ಯತೆ ಖಂಡೀತವಾಗಿಯೂ ಇರಲಿಲ್ಲ. ಅದು ಸಂವಿಧಾನ ವಿರೋಧಿ ಕೃತ್ಯ ಕೂಡ ಹೌದು. ಪೊಲೀಸರ ಈ ವರ್ತನೆಯಿಂದ ಪ್ರತಿಭಾ ಅವರ ವಯೋವೃದ್ಧ ಅತ್ತೆ ಭಯಬೀತರಾಗಿದ್ದು ಇದಕ್ಕೆ ಯಾರು ಹೊಣೆ? ಪ್ರತಿಭಾ ಕುಳಾಯಿ ಅವರ ಹೋರಾಟದೊಂದಿಗೆ ಎಲ್ಲರೂ ಕೈಜೋಡಿಸಿ ಟೋಲ್ ನ್ನು ಮುಚ್ಚಬೇಕು" ಎಂದವರು ಆಗ್ರಹಿಸಿದ್ದಾರೆ.