Advertisement

ಜಾತಿವ್ಯವಸ್ಥೆಯ ಮೂಲಕ ಅಸಮಾನತೆಯನ್ನು ಕಾಪಾಡುವುದೇ ಆರೆಸ್ಸೆಸ್ ಚಿಂತನೆ

Advertisement

"ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭದಲ್ಲಿ 1988ರಲ್ಲಿ ಕನಕದಾಸರ 500ನೇ ಜಯಂತ್ಯುತ್ಸವ ಬರುತ್ತಿದ್ದು, ಇದನ್ನು ಸರ್ಕಾರದಿಂದ ಒಂದು ವರ್ಷ ಕಾಲ ಆಚರಣೆ ಮಾಡಬೇಕು ಎಂದು ಅಂದಿನ ಮುಖ್ಯಮಂತ್ರಿ ಎಸ್.ಆರ್‌ ಬೊಮ್ಮಾಯಿ ಅವರಿಗೆ ಹೇಳಿದ್ದೆ, ಅವರು ಅದಕ್ಕೆ ಒಪ್ಪಿಗೆ ನೀಡಿದ್ದರು. ಕನಕ ಜಯಂತಿ ಆಚರಣೆ ಸಮಿತಿಯ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ್ದೆ. ಆದರೆ ಮಧ್ಯದಲ್ಲಿ ಸರ್ಕಾರ ಹೊರಟು ಹೋಗಿ ಬೇರೆ ಸರ್ಕಾರ ಬಂತು. ವರ್ಷ ಪೂರ್ತಿ ಆಚರಣೆ ಮಾಡಿ ಕೊನೆಗೆ 1989ರ ನವೆಂಬರ್‌ ತಿಂಗಳಿನಲ್ಲಿ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನೇ ಹೊಸ ಸರ್ಕಾರ ಆಚರಣೆ ಮಾಡಿಲ್ಲ. ಇದನ್ನು ನೀವೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು" ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಇಂದು ಮೈಸೂರಿನಲ್ಲಿ ಆಯೋಜಿಸಿದ್ದ ಕನಕ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

"ಕನಕದಾಸರ ಸಾಹಿತ್ಯ ಕೃತಿಗಳಾದ ರಾಮಧಾನ್ಯ ಚರಿತೆ, ಹರಿಭಕ್ತ ಸಾರ, ಮೋಹನ ತರಂಗಿಣಿ, ನಳ ಚರಿತೆ ಇವುಗಳು ಕಡಿಮೆ ದರದಲ್ಲಿ ಕರ್ನಾಟಕದ ಜನರಿಗೆ ಸಿಗಬೇಕು ಎಂದು ಮುಂದೆ ನಿಂತು ಪ್ರಿಂಟ್‌ ಮಾಡಿಸಿ ರಾಜ್ಯಾದ್ಯಂತ ಹಂಚಿದ್ದೆ. ನಮ್ಮ ಸರ್ಕಾರ ಇದನ್ನು ಆಚರಣೆ ಮಾಡುವ ವರೆಗೆ ಕನಕ ಜಯಂತಿಯನ್ನು ಇಷ್ಟು ವ್ಯಾಪಕವಾಗಿ ಆಚರಣೆ ಮಾಡುತ್ತಿರಲಿಲ್ಲ. ನಂತರದ ಚುನಾವಣೆಯಲ್ಲಿ ನಾನು ಸೋತ ಕಾರಣ ಐದು ವರ್ಷಗಳ ಕಾಲ ರಾಜ್ಯಾದ್ಯಂತ ಸುತ್ತಾಡಿ ಎಲ್ಲಾ ತಾಲೂಕು, ಜಿಲ್ಲೆಗಳಲ್ಲಿ ಕನಕ ಜಯಂತಿ ಆಚರಣೆ ಮಾಡಿಸಿದೆ. ಇದರಿಂದ ನಮ್ಮ ಕುರುಬ ಸಮಾಜದಲ್ಲಿ ಜಾಗೃತಿ ಮೂಡಲು ಆರಂಭವಾಯಿತು. ಇದಕ್ಕೂ ಮೊದಲು ತಾವು ಕುರುಬ ಎಂದು ಹೇಳಿಕೊಳ್ಳಲಿ ಕೂಡ ನಾಚಿಕೆ ಪಟ್ಟುಕೊಳ್ಳುತ್ತಿದ್ದರು. ನಾನು ವಿದ್ಯಾರ್ಥಿಯಾಗಿದ್ದಾಗ ಕೆಲವು ಹುಡುಗರು ತಮ್ಮನ್ನು ಗೌಡರು ಎಂದು ಹೇಳಿಕೊಳ್ಳುತ್ತಿದ್ದರು. ಯಾವ ಗೌಡ ಎಂದು ಹೇಳುತ್ತಿರಲಿಲ್ಲ, ಕುರುಬರಲ್ಲೂ ಗೌಡ ಎಂಬ ಉಪನಾಮ ಇದೆ. ನನ್ನ ತಂದೆ, ತಮ್ಮ, ಅಣ್ಣ ಎಲ್ಲರ ಹೆಸರಲ್ಲೂ ಗೌಡ ಇದೆ ಆದರೆ ನನ್ನ ಹೆಸರಿನ ಮುಂದೆ ಇದ್ದ ಗೌಡ ಎಂಬುದನ್ನು ನಮ್ಮ ಶಾಲೆಯ ಶಿಕ್ಷಕರು ತೆಗೆದು ಹಾಕಿದ್ದರು. ನಾನು ಮತ್ತು ವಿಶ್ವನಾಥ ಅವರು ಮೈಸೂರಿನ ಎಲ್ಲಾ ಕಾಲೇಜುಗಳನ್ನು ಸುತ್ತಿ, ವಿದ್ಯಾರ್ಥಿಗಳನ್ನು ಸಂಘಟಿಸಿ ಕಾಳಿದಾಸ ವಿದ್ಯಾರ್ಥಿ ಬಳಗವನ್ನು ಉದ್ಘಾಟನೆ ಮಾಡಿದೆವು. ನಂತರ ನಾನು ಲಾಯರ್‌ ವೃತ್ತಿ ಆರಂಭ ಮಾಡಿದೆ. ಹೀಗೆ ವಿದ್ಯಾರ್ಥಿ ಸಂಘಟನೆ ಆರಂಭ ಮಾಡಿದ ಮೇಲೆ ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಕುರುಬ ಎಂದು ಹೇಳಿಕೊಳ್ಳುವ ಧೈರ್ಯ ಬಂದಿತು" ಎಂದವರು ಮಾರ್ಮಿಕವಾಗಿ ವಿವರಿಸಿದ್ದಾರೆ.

''1991ರಲ್ಲಿ ಸಂಸತ್‌ ಚುನಾವಣೆಗೆ ಕೊಪ್ಪಳದಿಂದ ಸ್ಪರ್ಧೆ ಮಾಡಿದ್ದಾಗ ಅನೇಕ ಹಳ್ಳಿಗಳ ಜನ ನೀವು ನಮ್ಮ ಊರಿಗೆ ಬರುವುದು ಬೇಡ, ನಿಮಗೇ ಮತ ಹಾಕುತ್ತೇವೆ ಎಂದು ಹೇಳುತ್ತಿದ್ದರು. ಕನಕ ಜಯಂತಿ ಆಚರಣೆ ಆರಂಭ ಆದ ಮೇಲೆ ಈ ಭಯ ಜನರಿಂದ ದೂರವಾಗಿದೆ. ನಂತರ ಕನಕ ಗುರುಪೀಠ ಸ್ಥಾಪನೆ ಆಯಿತು. ಈಗ ಜನ ಖುಷಿಯಿಂದ ಸಮುದಾಯದ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಇದು ಇತಿಹಾಸ. ಈ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕು" ಎಂದವರು ಹೇಳಿದ್ದಾರೆ.

"ಕನಕದಾಸರ ವ್ಯಾಸಕೂಟದಲ್ಲಿ ಸೇರಿಕೊಂಡಿರುವಾಗ ಅಲ್ಲಿ ಎಲ್ಲ ಮೇಲ್ಜಾತಿಯ ಜನರಿದ್ದರು. ಕನಕ ದಾಸರು ಮಾತ್ರ ಶೂದ್ರ ಸಮುದಾಯಕ್ಕೆ ಸೇರಿದವರು. ಅಂತಹ ಪರಿಸ್ಥಿತಿಯನ್ನು ಕನಕದಾಸರು ನಿಭಾಯಿಸಿದ ರೀತಿಯನ್ನು ನಾವು ಮೆಚ್ಚಬೇಕಾಗುತ್ತದೆ. ಅವರನ್ನು ಪ್ರತೀ ಹೆಜ್ಜೆಗೆ ಅವಮಾನ ಮಾಡಲಾಗುತ್ತದೆ. ಕನಕದಾಸರು ವ್ಯಾಸ ರಾಯರ ಬಳಿ ತಾವು ಮಂತ್ರ ಕಲಿಯಬೇಕು ಎಂದಾಗ 'ನೀನು ಕುರುಬ, ನಿನಗೆಂತ ಮಂತ್ರವಯ್ಯ?' ಎಂದು ಕೇಳಿದ್ದರು. ಈ ಹಿಂದೆ ಶೂದ್ರ ವರ್ಗದ ಜನರಿಗೆ ಮಂತ್ರ ಕಲಿಯುವುದು ಇರಲಿ, ವಿಧ್ಯೆ ಕಲಿಯಲು ಕೂಡ ಅವಕಾಶ ಇರಲಿಲ್ಲ. ಇಂದು ನಾವು ನೀವೆಲ್ಲ ಶಿಕ್ಷಿತರಾಗಬೇಕಾದರೆ, ನಾನು ಮುಖ್ಯಮಂತ್ರಿಯಾಗಬೇಕಾದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ನೀಡಿರುವ ಸಂವಿಧಾನ ಕಾರಣ. ಜಾತಿ ವ್ಯವಸ್ಥೆ, ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರು ಕನಕ ದಾಸರು, ಬುದ್ಧ, ಬಸವಣ್ಣ, ಅಂಬೇಡ್ಕರ್‌, ಗಾಂಧೀಜಿ ಅವರು" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ನಮ್ಮ ದೇಶದ ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಯಾವ ವ್ಯವಸ್ಥೆಗೆ ಚಲನೆ ಇರುವುದಿಲ್ಲ ಅಲ್ಲಿ ಬದಲಾವಣೆ ಅಸಾಧ್ಯ. ಚಲನೆ ಸಿಗಬೇಕಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಶಕ್ತಿ ಬರಬೇಕು. ನಾನು ಊರಿಗೆ ಹೋದಾಗ ನಮ್ಮಪ್ಪ ನನಗೆ ದನ ಕರುಗಳಿಗೆ ನೀರು ಕುಡಿಸುವ ಕೆಲಸ ನೀಡುತ್ತಿದ್ದರು. ಹಕ್ಕಿ ಗೂಡು, ಗಾಳಿ ಮಳೆಗೆ ಬಾವಿ ತುಂಬಾ ಕಸ ತುಂಬಿರುತ್ತಿತ್ತು, ಬಿಂದಿಗೆಯನ್ನು ನೀರಿಗೆ ಬಿಟ್ಟು ಸ್ವಲ್ಪ ಮೇಲೆ ಕೆಳಗೆ ಮಾಡಿದಾಗ ಕಸ ಪಕ್ಕ ಸರಿದು ಶುದ್ಧ ನೀರು ಸಿಗುತ್ತಿತ್ತು, ಸ್ವಲ್ಪ ಹೊತ್ತಿನ ನಂತರ ಮತ್ತೆ ಕಸ ಒಂದಾಗಿ ಬಾವಿ ಮಧ್ಯದಲ್ಲಿ ಬಂದು ನಿಲ್ಲುತ್ತಿತ್ತು. ನಮ್ಮ ಜಾತಿ ವ್ಯವಸ್ಥೆಯ ಕತೆಯೂ ಹೀಗೆ, ಅನೇಕ ಜನ ಸಮಾಜ ಸುಧಾರಕರು ಹೋರಾಟ ಮಾಡಿದಾಗ ಸ್ವಲ್ಪ ಬದಲಾದಂತೆ ಕಂಡು ಕೆಲವು ಸಮಯದ ನಂತರ ಮತ್ತೆ ಹಿಂದಿನಂತಾಗುತ್ತದೆ" ಎಂದವರು ವಿವರಿಸಿದರು.

"ಆರ್‌,ಎಸ್‌,ಎಸ್‌ ಸಂಘ ಪರಿವಾರ ಜಾತಿ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಬಯಸದವರು. ಜನರನ್ನು ಶೋಷಣೆ ಮಾಡಬೇಕು ಎಂದರೆ ಸಮಾಜದಲ್ಲಿ ಅಸಮಾನತೆ ಇರಬೇಕು. ಅಸಮಾನತೆಯನ್ನು ಜಾತಿ ವ್ಯವಸ್ಥೆ ಮೂಲಕ ಕಾಪಾಡಿಕೊಂಡು ಹೋಗಬಹುದು ಎಂಬುದು ಅವರ ಚಿಂತನೆ. ಮುಸ್ಲಿಂಮರನ್ನು ಬೆದರು ಗೊಂಬೆಗಳಂತೆ ಮುಂದಿಟ್ಟುಕೊಂಡು ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂಥವರ ಬಗ್ಗೆ ಜಾಗರೂಕರಾಗಿರಬೇಕು" ಎಂದು ಸಿದ್ದರಾಮಯ್ಯ ಕರೆನೀಡಿದ್ದಾರೆ.

"ವಿಧಾನಸೌಧದ ಮುಂಭಾಗ ವಾಲ್ಮೀಕಿ ಪ್ರತಿಮೆ ನಿರ್ಮಾಣ ಮಾಡಿದವರು ನಾವು. ಕನಕದಾಸರ ಪ್ರತಿಮೆಯನ್ನು ನಾವೇ ನಿರ್ಮಾಣ ಮಾಡಿದ್ದು. ಆದರೆ ಇದರ ಲಾಭ ಪಡೆಯುತ್ತಿರುವುದು ಬೇರೆಯವರು. ಅಸಮಾನತೆ, ಜಾತಿ ವ್ಯವಸ್ಥೆ ನಿರ್ಮಾಣ ಮಾಡಿದವರ ಜೊತೆ ನಾವು ಹೋಗಬೇಕೇ? ಬೇಡವೇ? ಎಂದು ಜನ ಯೋಚನೆ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರರ ಕೊಡುಗೆಗಳನ್ನು ಜನ ಅರ್ಥ ಮಾಡಿಕೊಳ್ಳಬೇಕು" ಎಂದವರು ಕರೆನೀಡಿದ್ದಾರೆ.

"ನಾವು ದೇಶಭಕ್ತರು ಎಂದು ಆರ್‌,ಎಸ್‌,ಎಸ್‌ ನವರು ಬಹಳ ನಾಜೂಕಾಗಿ ಮಾತನಾಡುತ್ತಾರೆ, 1925ರಲ್ಲಿ ಆರ್‌,ಎಸ್‌,ಎಸ್‌ ಹುಟ್ಟಿದರೂ ದೇಶದ ಸ್ವಾತಂತ್ರ್ಯಕ್ಕಾಗಿ ಅವರಲ್ಲಿ ಎಷ್ಟು ಜನ ಪ್ರಾಣಾರ್ಪಣೆ ಮಾಡಿದ್ದಾರೆ? ಯಾರೊಬ್ಬರೂ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿಲ್ಲ. ಗಾಂಧಿಜಿ, ನೆಹರು, ಅಂಬೇಡ್ಕರ್‌, ಮೌಲಾನಾ ಆಜಾದ್‌ ಮುಂತಾದವರು ನಿಜವಾದ ದೇಶಭಕ್ತರು. ಸಂಗೊಳ್ಳಿ ರಾಯಣ್ಣ ದೇಶಭಕ್ತ, ಈ ಆರ್‌,ಎಸ್‌,ಎಸ್‌ ನವರು ದೇಶಭಕ್ತರಲ್ಲ" ಎಂದವರು ಇತಿಹಾಸವನ್ನು ಬಿಚ್ಚಿಟ್ಟರು.

"ಕನಕದಾಸರು ಕುಲ ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರೂ ಬಲ್ಲಿರಾ? ಬಲ್ಲಿರಾ? ಎಂದು ಹೇಳಿದ್ದರು. ಒಬ್ಬ ಕನಕದಾಸರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ಮಾಡಿದಂತೆ ನಿಮ್ಮಲ್ಲಿ ಪ್ರತಿಯೊಬ್ಬರು ಧ್ವನಿ ಎತ್ತುವ ಕೆಲಸ ಮಾಡಬೇಕು, ಈ ಕಾರಣಕ್ಕಾಗಿಯೇ ನಾವಿಂದು ಕನಕದಾಸ ಜಯಂತಿ ಆಚರಣೆ ಮಾಡುತ್ತಿರುವುದು. ಕನಕದಾಸರ ಆಶಯಗಳಂತೆ ಬದುಕುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂಬುದನ್ನು ಮರೆಯಬಾರದು" ಎಂದು ಸಿದ್ದರಾಮಯ್ಯನವರು ಕರೆ ನೀಡಿದ್ದಾರೆ.

ಸಮಾರಂಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹಾಗೂ ಅಧ್ಯಕ್ಷ ಸುಬ್ರಹ್ಮಣ್ಯ ಭಾಗವಹಿದ್ದರು.

Advertisement
Advertisement
Recent Posts
Advertisement