"ಭಾರೀ ಹೋರಾಟ, ನಿರಂತರ ಪ್ರತಿಭಟನೆಗೆ ಕಾರಣವಾಗಿರುವ ಸುರತ್ಕಲ್ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್ ಅನ್ನು ಕೊನೆಗೂ ಹೆಜಮಾಡಿ ಟೋಲ್ ಪ್ಲಾಝಾ ಜತೆ ವಿಲೀನಗೊಳಿಸಿದ್ದಲ್ಲದೆ ದುಬಾರಿ ಟೋಲ್ ದರ ವಿಧಿಸಿರುವುದು ಸಂಸದ ನಳಿನ್ ಕುಮಾರ್ ಕಟೀಲ್ ಅವರ 40% ಕಮೀಷನ್ ಗೆ ಮತ್ತೊಂದು ಉದಾಹರಣೆಯಾಗಿದೆ" ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾವೇನೋ ಬಹು ದೊಡ್ಡ ಸಾಧನೆ ಮಾಡಿರುವುದಾಗಿ ಬಿಂಬಿಸಿಕೊಂಡು ಕೇಂದ್ರ ಭೂಸಾರಿಗೆ ಸಚಿವರಿಗೆ ಧನ್ಯವಾದ ಅರ್ಪಿಸಿದ ಸಂಸದ ನಳಿನ್ ಕುಮಾರ್ ಆದಿಯಾಗಿ ಎರಡೂ ಜಿಲ್ಲೆಗಳ ಬಿಜೆಪಿಯ ಶಾಸಕರು, ಸಂಸದರುಗಳು ಸುರತ್ಕಲ್ ಟೋಲ್ ರದ್ದು ಮಾಡದೆ ಅದನ್ನು ಹೆಜಮಾಡಿ ಟೋಲ್ ಪ್ಲಾಜಾ ಜತೆ ವಿಲೀನಗೊಳಿಸಿರುವುದು ಕರಾವಳಿಯ ಜನರಿಗೆ ಮಾಡಿದ ಬಹುದೊಡ್ಡ ದ್ರೋಹವಾಗಿದೆ. ಅದಕ್ಕೂ ಮೀರಿ ದುಬಾರಿ ಟೋಲ್ ದರವನ್ನು ಹೆಜಮಾಡಿ ಟೋಲ್ ಪ್ಲಾಜಾ ದಲ್ಲಿ ವಿಧಿಸಿ ಜನರನ್ನು ಇನ್ನಷ್ಟು ಲೂಟಿ ಮಾಡಲು ಹೊರಟಿರುವ ಬಿಜೆಪಿಯ ವರ್ತನೆಗೆ ಅವರ ಭಕ್ತಗಣ ಏನು ಹೇಳುತ್ತದೆ?
ಪರಿಷ್ಕೃತ ದರಪಟ್ಟಿ ನೋಡಿದರೆ "ಅಳಿಯ ಅಲ್ಲ ಮಗಳಗಂಡ" ಎಂಬ ಗಾದೆಮಾತು ನೆನಪಾಗದೆ ಉಳಿಯದು.
ಏನೇ ಮಾಡಿದರೂ ದೇಶಕ್ಕಾಗಿ ಎನ್ನುವ ಬಿಜೆಪಿಗರೇ ಬಡ ವಾಹನ ಸವಾರರಿಂದ ಪ್ರತಿನಿತ್ಯ ಟೋಲ್ ರೂಪದಲ್ಲಿ ಲೂಟಿ ಮಾಡಿ ಮೋದಿ ಸರಕಾರಕ್ಕೆ 40% ಕಮೀಷನ್ ಒಟ್ಟು ಮಾಡಿಕೊಡಲು ಹೊರಟಿದ್ದಾರೆಯೇ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲಿ.
ಸದಾ ನಾ ಖಾವೂಂಗ ನಾ ಖಾನೆ ದೂಂಗಾ ಎನ್ನುವ ಮೋದಿಯವರು ತನ್ನ ಸಚಿವರು ಸಂಸದರು ಇಷ್ಟು ದೊಡ್ಡ ಮಟ್ಟದ ಲೂಟಿ ಮಾಡುತ್ತಿರುವಾಗಲೂ ಕೂಡ ಏನೂ ಆಗಿಲ್ಲ ಎಂಬಂತೆ ಮೌನವಹಿಸಿದ್ದಾರೆ ಎಂದರೆ ಇದಕ್ಕೆ ಅವರ ನೇರ ಬೆಂಬಲ ಇರುವುದು ಸ್ಪಷ್ಟವಾಗುತ್ತದೆ.
ಈ ವರೆಗೆ ಸುರತ್ಕಲ್ ಗೆ ಸೀಮಿತ ವಾದ ಟೋಲ್ ಹೋರಾಟ ಸಧ್ಯ ಎರಡು ಪಟ್ಟಿಗೂ ಮೀರಿರುವ ದರ ಹೆಚ್ಚಳದಿಂದ ಹೆಜಮಾಡಿಗೆ ಸ್ಥಳಾಂತರವಾಗಿದೆ. ಈ ಭಾಗದ ಸಂಸದೆ ಶೋಭಾ ಕರಂದ್ಲಾಜೆ, ಎಲ್ಲಾ ಬಿಜೆಪಿ ಶಾಸಕರು ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಬೇಕಾಗಿದೆ ಶಾಸಕ ಲಾಲಾಜಿ ಮೆಂಡನ್, ರಘುಪತಿ ಭಟ್ ಸೇರಿದಂತೆ ಎಲ್ಲಾ ಬಿಜೆಪಿ ಶಾಸಕರು ಯಾವುದೇ ಜನವಿರೋಧಿ ವಿಚಾರ ಬಂದಾಗ ಕೂಡ ಮುಂದೆ ಅತ್ತಂತೆ ಮಾಡಿ ಹಿಂದಿನಿಂದ ಬೆಂಬಲಿಸುವ ಜಾಯಮಾನವನ್ನು ಬಿಟ್ಟು ಪಕ್ಷಬೇಧ ಬಿಟ್ಟು ಹೋರಾಟಕ್ಕೆ ಕೈಜೋಡಿಸಲಿ ಆಗ ಅವರ ನೈಜ ಬಡ ಜನರ ಮೇಲಿನ ಪ್ರೀತಿ ಜಗಜ್ಜಾಹೀರಾಗಲಿದೆ ಇಲ್ಲವಾದರೆ ಕೇವಲ ಅವರದ್ದು ಪ್ರಚಾರದ ಹೇಳಿಕೆ ಎಂದು ಜನ ಅರ್ಥೈಸಿಕೊಳ್ಳಬೇಕಾಗುತ್ತದೆ.
ಕೂಡಲೇ ಕೇಂದ್ರ ಸರಕಾರ ಹೊರಡಿಸಿರುವ ಪರಿಷ್ಕೃತ ಟೋಲ್ ದರವನ್ನು ಹಿಂಪಡೆದು ಎಲ್ಲರೂ ಒಪ್ಪುವ ದರವನ್ನು ನಿಗದಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.