ಭಾರತಿ ನಗರದಲ್ಲಿ ವಾಸವಿದ್ದ, ಗಾರೆ ಕೆಲಸ ಮಾಡುತ್ತಿದ್ದ ಅನಾಥೆ ಕಸ್ತೂರಿ (30) ಎಂಬ ಮಹಿಳೆಗೆ ಬುಧವಾರ ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಒಬ್ಬಂಟಿ
ಯಾಗಿದ್ದ ಆಕೆಯನ್ನು ಅಕ್ಕಪಕ್ಕದ ಮನೆಯ ಮಹಿಳೆಯರು ಜಿಲ್ಲಾ ಆಸ್ಪತ್ರೆಗೆ ಕರೆದು
ಕೊಂಡು ಹೋಗಿದ್ದರು. ಆದರೆ, ಆಕೆಯ ಬಳಿ "ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್" ಇಲ್ಲ ಎಂಬ ನೆಪದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಲು ನಿರಾಕರಿಸಿದ ಕಾರಣ, ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆ ತೀವ್ರ ರಕ್ತ ಸ್ರಾವದಿಂದ ಗುರುವಾರ ಮೃತಪಟ್ಟಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಆಕೆಯ ಗರ್ಭದಲ್ಲಿದ್ದ ಅವಳಿ ಶಿಶುಗಳು ಕೂಡ ಮೃತಪಟ್ಟಿವೆ. ಆ ಮಹಿಳೆಗೆ ಈ ಮೊದಲೇ ಓರ್ವ ಆರು ವರ್ಷದ ಹೆಣ್ಣುಮಗುವಿದೆ.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ನೈತಿಕ ಹೊಣೆಹೊತ್ತು ಅಯೋಗ್ಯ ಆರೋಗ್ಯ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿದೆ.
"ತುಮಕೂರು ಜಿಲ್ಲಾಸ್ಪತ್ರೆ ವ್ಯೆದ್ಯರು ಮತ್ತು ಸಿಬಂದಿಗಳ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಆಕೆಯ ಇಬ್ಬರು ನವಜಾತ ಶಿಶುಗಳ ಸಾವಿಗೆ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ರಾಜೀನಾಮೆ ನೀಡಬೇಕು" ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.
"ಅನಾಥ, ಬಡ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಆಸ್ಪತ್ರೆಯ ಬಾಗಿಲಿಗೆ ಬಂದು ಬೇಡಿಕೊಂಡರೂ ಕೂಡ ತಾಯಿ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆಗೆ ದಾಖಲಿಸಿಕೊಳ್ಳದೆ ವಾಪಾಸು ಕಳುಹಿಸಿದ್ದು, ಆಕೆ ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡುವಾಗ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವುದು ಆರೋಗ್ಯ ಸಚಿವ ಡಾ ಸುಧಾಕರ್ ಅವರ ಆಡಳಿತದ ಇಲಾಖೆ ಎಷ್ಟೊಂದು ಹದಗೆಟ್ಟಿದೆ ಎನ್ನುವುದಕ್ಕೆ ದುರಂತ ಸಾಕ್ಷಿಯಾಗಿದೆ. ಈ ಘಟನೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮತ್ತು ಸರಕಾರ ನೇರ ಹೊಣೆಯಾಗಿದೆ. ಸ್ವತಃ ವೈದ್ಯರೆಂದು ಹೇಳಿಕೊಳ್ಳುವ ಆರೋಗ್ಯ ಸಚಿವರ ಇಲಾಖೆ ಮಾನವೀಯತೆ ಇಲ್ಲದೆ ವರ್ತಿಸಿರುವುದು ಖಂಡನೀಯ" ಎಂದವರು ಹೇಳಿದ್ದಾರೆ.
"ಮಾನವೀಯತೆ ಮರೆತ ಆಸ್ಪತ್ರೆಯ ಸಿಬಂದಿಗಳನ್ನು ಕೇವಲ ಆಮಾನತು ಮಾಡಲಾಗಿದ್ದು, ಅಂತಹವರ ವಿರುದ್ದ ಕೂಡಲೇ ಪ್ರಕರಣ ದಾಖಲಿಸಬೇಕು. ಇದರೊಂದಿಗೆ ಈ ಸರಕಾರಿ ಕೊಲೆಗೆ ಕಾರಣವಾದ ಆರೋಗ್ಯ ಇಲಾಖೆಯ ಸಚಿವ ಡಾ. ಸುಧಾಕರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು
ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ಮೇಲೆ ಚುನಾವಣೆಗಳಿಗೆ ಸೀಮಿತವಾಗಿದ್ದು, ಅಭಿವೃದ್ಧಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಕೊರೋನಾ ಕಾಲದಲ್ಲಿ ಆರೋಗ್ಯ ಇಲಾಖೆಯ ಬೇಜವಾಬ್ದಾರಿ ನಡವಳಿಕೆಯಿಂದ ನೂರಾರು ಅಮಾಯಕ ಜೀವಗಳು ಕಳೆದುಕೊಂಡಿದ್ದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಆರೋಗ್ಯ ಸಚಿವರಾಗಿ ಮುಂದುವರಿದರೆ ಸರಣಿ ವೈದ್ಯಕೀಯ ಹತ್ಯೆಗಳು ಮುಂದುವರೆಯಲಿದೆ. ಇದನ್ನು ತಪ್ಪಿಸಬೇಕಾದರೆ ಕೂಡಲೇ ಸಚಿವರು ರಾಜೀನಾಮೆ ನೀಡಬೇಕು" ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.