Advertisement

ಸಿದ್ದರಾಮಯ್ಯನವರ ಕೊಲೆಬೆದರಿಕೆಯ ಹಿಂದಿನ ಅಸಲಿಯತ್ತೇನು ಗೊತ್ತೇ?

Advertisement

ಮಾಚಯ್ಯ ಎಂ. ಹಿಪ್ಪರಗಿಯವರ ಯೋಚನೆಗೆ ಹಚ್ಚುವ ಬರಹ- ಅಗತ್ಯವಾಗಿ ಓದಿ.

"ಸಿದ್ದು ಕೊಲೆಗೆ ಅಶ್ವತ್ಥ್ ನಾರಾಯಣರಿಂದ ಪ್ರಚೋದನೆ"

ಒಕ್ಕಲಿಗರು ಪ್ರಜ್ಞಾವಂತರೆಂಬುದನ್ನು ಸಾಬೀತು ಮಾಡಬೇಕಾದ ಕಾಲ ಇದು!

ನಿಜ ಹೇಳಬೇಕೆಂದರೆ, ಒಕ್ಕಲಿಗ ಸಮುದಾಯಕ್ಕೆ ಇಂತದ್ದೊಂದು ಜರೂರತ್ತೇನೂ ಇಲ್ಲ. ನಾಡಪ್ರಭು ಕೆಂಪೇಗೌಡರ ನಾಡಪ್ರೇಮದ ಪರಂಪರೆಯನ್ನು ಇವತ್ತಿಗೂ ಕಾಪಿಟ್ಟುಕೊಂಡು ಬಂದಿರುವ ಒಕ್ಕಲಿಗರು ನೆಲ, ಜಲ, ಭಾಷೆಯ ವಿಚಾರಕ್ಕೆ ಚ್ಯುತಿಯಾದಾಗಲೆಲ್ಲ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ಬಂದಿದ್ದಾರೆ. ಕೆಂಗಲ್ ಹನುಮಂತಯ್ಯನವರಿಂದ ಶುರುವಾಗಿ ಇತ್ತೀಚಿನ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್‌ರವರೆಗೆ ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ತನ್ನ ಛಾಪು ಮೂಡಿಸುತ್ತಾ ಬಂದ; ಸಮುದಾಯದ ಮೇಲೆ ಕೇಳಿಬಂದ ಒಂದಷ್ಟು ಫ್ಯೂಡಲ್ ಅಪವಾದಗಳ ಹೊರತಾಗಿಯೂ, ನಾಡಿಗೆ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪು ಅವರನ್ನು ಕೊಡುಗೆ ಕೊಟ್ಟ ಸಮುದಾಯ ಒಕ್ಕಲಿಗರದ್ದು. ಕರ್ನಾಟಕದ ಮಟ್ಟಿಗೆ, ನೈತಿಕ ರಾಜಕಾರಣಕ್ಕೆ ಯಾರನ್ನಾದರು ನಿದರ್ಶಿಸಬೇಕಾದರೆ ನಾವು ಇವತ್ತಿಗೂ ಶಾಂತವೇರಿ ಗೋಪಾಲಗೌಡರ ಹೆಸರನ್ನೇ ಪರಿಗಣಿಸುತ್ತೇವೆ. ನಿತ್ಯ ಸಚಿವ ಅಂತಲೇ ಹೆಸರಾಗಿದ್ದ ಕೆ.ವಿ.ಶಂಕರೇಗೌಡರ ಸಾಮಾಜಿಕ ಬದ್ಧತೆಯನ್ನು ಯಾರೆಂದರೆ ಯಾರೂ ಗುಮಾನಿಸಲಿಕ್ಕೆ ಸಾಧ್ಯವಿಲ್ಲ. ಅಷ್ಟೆಲ್ಲ ಯಾಕೆ, ಪ್ರಧಾನಿ ಹುದ್ದೆಗೇರಿದ ಕನ್ನಡ ನೆಲದ ಏಕೈಕ ರಾಜಕಾರಣಿ ದೇವೇಗೌಡರು ಇದೇ ಸಮುದಾಯದವರು ಅನ್ನೋದನ್ನು ಮರೆಯಲಾಗದು. ಹಾಗಾಗಿ ಒಕ್ಕಲಿಗರ ಸಾಮಾಜಿಕ ‘ಪ್ರಜ್ಞೆ’ಯ ಕುರಿತು ಹೆಚ್ಚೇನು ಕಳವಳಗೊಳ್ಳುವ ಅಗತ್ಯವಿಲ್ಲ. ಇಂಥಾ ಪರಂಪರೆಯ ಒಕ್ಕಲಿಗರು ಇವತ್ತು ತಮ್ಮನ್ನು ತಾವು ಪ್ರಜ್ಞಾವಂತರೆಂದು ಪುನರ್‌ರೂಪಿಸಬೇಕಾದ ತುರ್ತು ಹೊಣೆಗಾರಿಕೆ ಎದುರಾಗಿದೆ. ಇದೇ ದೊಡ್ಡ ವಿಪರ್ಯಾಸ!

ಭಾರತೀಯ ಸಮಾಜದಲ್ಲಿ ಆಳವಾಗಿ ವ್ಯಾಪಿಸಿರುವ ‘ಜಾತಿ’ ಎಂಬು ಜಾಢ್ಯ ರಾಜಕೀಯ ಕ್ಷೇತ್ರವನ್ನೂ ಬಿಟ್ಟಿಲ್ಲ. ಇದು ವಾಸ್ತವ. ಉತ್ತರಕ್ಕೆ ಹೋದರೆ ಯಾದವರು, ಪಂಜಾಬಿನಲ್ಲಿ ಜಾಟರು, ಗುಜರಾತಿನಲ್ಲಿ ಪಟೇಲರು, ಆಂದ್ರದಲ್ಲಿ ರೆಡ್ಡಿ-ನಾಯ್ಡುಗಳು, ತಮಿಳುನಾಡಿನಲ್ಲಿ ತೇವರ್-ವೆನ್ನಿಯಾರ್-ವೆಲ್ಲಲಾರ್‌ಗಳು, ಒಡಿಶಾದಲ್ಲಿ ಖಂಡಾಯಸ್ತ-ಕಾಯಸ್ತರು ಹೀಗೆ ಆಯಾ ಪ್ರಾದೇಶಿಕ ಭಾಗದಲ್ಲಿ ಪ್ರಬಲ ಎನಿಸಿಕೊಂಡ ಜಾತಿಗಳು ರಾಜಕಾರಣವನ್ನು ನಿಯಂತ್ರಿಸುತ್ತಾ ಬಂದಿವೆ. ಇದನ್ನೆಲ್ಲ ಮೀರಬೇಕೆನ್ನುವುದು ಸಾಂವಿಧಾನಿಕ ಪ್ರಜಾತಾಂತ್ರಿಕ ವ್ಯವಸ್ಥೆಯ ಆಶಯವಾದರೂ, ಅದಕ್ಕೆ ಬೇಕಾದ ಸಾಮಾಜಿಕ ಪ್ರಬುದ್ಧತೆ ನಮ್ಮ ಇಡೀ ಸಮಾಜದಲ್ಲಿ ಇನ್ನೂ ಮೇಳೈಸಿಲ್ಲ ಎನ್ನುವುದು ಕಟುಸತ್ಯ. ಅಂತೆಯೇ ಕರ್ನಾಟಕದ ರಾಜಕಾರಣವನ್ನೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯಗಳು ಪ್ರಭಾವಿಸುತ್ತಾ ಬಂದಿರೋದೂ ಅಷ್ಟೇ ಸತ್ಯ. ಈ ಕಾರಣಕ್ಕೆ ಅಂಚಿಗೊತ್ತಲ್ಪಟ್ಟ ಸಣ್ಣಪುಟ್ಟ ಜಾತಿಗಳಲ್ಲಿ ಈ ಎರಡೂ ಸಮುದಾಯಗಳ ರಾಜಕೀಯ ಯಜಮಾನಿಕೆಯ ಬಗ್ಗೆ ಅಪಸ್ವರ ಇದೆಯಾದರೂ, ಯಾರು ಸಹಾ ಇದುವರೆಗೆ ಒಕ್ಕಲಿಗ ಸಮುದಾಯವನ್ನು ’ಕೊಲೆಗಡುಕ’ ಸಮುದಾಯವೆಂದು ಭಾವಿಸಿಲ್ಲ.

ಆದರೆ ತನ್ನ ರಾಜಕೀಯ ಲಾಭಕ್ಕಾಗಿ ಒಕ್ಕಲಿಗ ಸಮುದಾಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಯ ಇತ್ತೀಚಿನ ರಾಜಕೀಯ ವೇಗ ನೋಡಿದರೆ, ಒಕ್ಕಲಿಗ ಸಮುದಾಯಕ್ಕೆ ‘ಕೊಲೆಗಡುಕ’ ಹಣೆಪಟ್ಟಿ ಅಂಟಿಸುವ ಅಪಾಯ ಕಾಣುತ್ತಿದೆ. ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ’ಟಿಪ್ಪೂವನ್ನು ಹೊಡೆದುಹಾಕಿದಂತೆ ಸಿದ್ದರಾಮಯ್ಯನನ್ನೂ ಹೊಡೆದು ಹಾಕಬೇಕು’ ಎಂಬ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದು ರಾಜಕೀಯ ವೈಷಮ್ಯಕ್ಕಾಗಿ, ವೇದಿಕೆಯ ಮೇಲೆ ತೂರಿಬಂದ ಉನ್ಮಾದದ ಒಂದು ಮಾತು ಅಂತ ನಾವೇನಾದರೂ ಪರಿಗಣಿಸಿದರೆ, ನಮಗಿಂತ ಮುಠ್ಠಾಳರು ಮತ್ತೊಬ್ಬರಿರಲಿಕ್ಕಿಲ್ಲ.

ಇಷ್ಟು ದಿನ ಅಧಿಕಾರ ನಡೆಸಿ, ಈಗ ಚುನಾವಣೆಗೆ ಹೋಗಬೇಕಿರುವ ಬಿಜೆಪಿಗೆ ಹೇಳಿಕೊಳ್ಳುವಂತಹ ಯಾವ ಅಭಿವೃದ್ಧಿ ಕಾರ್ಯಗಳೂ ಇಲ್ಲದಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯವರು ಇಂಥಾ ಹೇಳಿಕೆ ನೀಡುತ್ತಿದ್ದಾರೆ ಅನ್ನೋ ವಾದವು ಸಹಾ, ಅಶ್ವತ್ಥ್ ನಾರಾಯಣರ ವಿಚಾರದಲ್ಲಿ ಸಂಪೂರ್ಣ ಸತ್ಯವೆನಿಸಿಕೊಳ್ಳದು. ಇದರ ಹಿಂದೆ ಬಿಜೆಪಿಯ, ನಿರ್ದಿಷ್ಟವಾಗಿ ಹೇಳಬೇಕೆಂದರೆ ಆರ್‌ಎಸ್‌ಎಸ್‌ನ ಸ್ಪಷ್ಟ ಲೆಕ್ಕಾಚಾರಗಳಿವೆ.

ಬೇರೆಲ್ಲ ಪಕ್ಷಗಳನ್ನು ಜಾತಿ ಪಕ್ಷಗಳು, ಕುಟುಂಬ ರಾಜಕಾರಣದ ಪಕ್ಷಗಳು ಅಂತ ಲೇವಡಿ ಮಾಡುವ ಸ್ವತಃ ಬಿಜೆಪಿಯೇ, ಒಂದು ನಿರ್ದಿಷ್ಟ ಜಾತಿಯ ಏಳಿಗೆಗೆ ದುಡಿಯುತ್ತಿರುವ ಪಕ್ಷ. ಇ.ಡಬ್ಲ್ಯೂ.ಎಸ್ ೧೦% ಮೀಸಲಾತಿಯ ಮೂಲಕ ಅದರ ಹಿಡೆನ್ ಅಜೆಂಡಾ ಬಟಾಬಯಲಾಗಿದೆ. ಅದೇ ಕಾರಣಕ್ಕೆ ಇತ್ತೀಚೆಗೆ ಕುಮಾರಸ್ವಾಮಿಯವರು ‘ಬ್ರಾಹ್ಮಣ ಸಿಎಂ’ ಕುರಿತು ಕಮೆಂಟ್ ಮಾಡಿದಾಗ, ಇಡೀ ಬಿಜೆಪಿ ಪಕ್ಷ ಗಲಿಬಿಲಿಗೆ ತುತ್ತಾಗಿತ್ತು. ಕರ್ನಾಟಕದಲ್ಲಿ ತಾವಂದುಕೊಂಡ ರಾಜಕಾರಣವನ್ನು ನಡೆಸಬೇಕೆಂದರೆ ಲಿಂಗಾಯತರು ಮತ್ತು ಒಕ್ಕಲಿಗರೆಂಬ ಎರಡು ಪ್ರಧಾನ ಜಾತಿಗಳನ್ನು ತಮ್ಮ ಕೈವಶ ಮಾಡಿಕೊಳ್ಳಬೇಕೆಂಬ ಸ್ಪಷ್ಟ ಅಧ್ಯಯನ ಮತ್ತು ಪೂರ್ವ ತಯಾರಿಯೊಂದಿಗೆ ಸಂಘ ಪರಿವಾರ ಇಲ್ಲಿ ಕಾರ್ಯಾಚರಣೆಗಿಳಿದಿದೆ. ಈಗಾಗಲೇ ಯಡಿಯೂರಪ್ಪನವರನ್ನು ಬಳಸಿಕೊಂಡು ಲಿಂಗಾಯತ ಸಮುದಾಯದೊಳಗೆ ಪ್ರವೇಶಿಸಿದ ಬಿಜೆಪಿ, ಅಲ್ಲಿನ ಯುವ ಪೀಳಿಗೆಗೆ ಕೋಮುವಾದದ ಅಫೀಮು ನೆತ್ತಿಗೇರಿಸಿ, ಯಡಿಯೂರಪ್ಪನವರಿಲ್ಲದೆಯೂ ನಾವು ಲಿಂಗಾಯತ ವೋಟ್‌ಬ್ಯಾಂಕ್ ಮ್ಯಾನೇಜ್ ಮಾಡಬಹುದೆಂಬ ವಿಶ್ವಾಸಕ್ಕೆ ಬಂದಾಗಿದೆ. ಹಾಗಾಗಿಯೇ ಯಡಿಯೂರಪ್ಪನವರನ್ನು ಅಷ್ಟು ಸಲೀಸಾಗಿ ರಾಜ್ಯ ರಾಜಕಾರಣದಲ್ಲಿ ಮೂಲೆಗುಂಪು ಮಾಡಲು ಬಿಜೆಪಿಗೆ ಸಾಧ್ಯವಾಗಿರೋದು.

ಈಗವರ ಮುಂದಿನ ಗುರಿ ಒಕ್ಕಲಿಗರು. ಅದಕ್ಕಾಗಿ ಈಗಾಗಲೇ ಅವರು ಇತಿಹಾಸವನ್ನು ತಿರಚುವ ಸಾಹಸಕ್ಕೂ ಮುಂದಾಗಿದ್ದಾರೆ. ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ಕಟ್ಟುಕಥೆಗಳನ್ನು ಸೃಷ್ಟಿಸಿ, ಅವರೇ ಟಿಪ್ಪೂವನ್ನು ಕೊಂದರು ಎಂದು ಪುಕಾರೆಬ್ಬಿಸಿದ್ದಾರೆ. ಮುಸಲ್ಮಾನರ ವಿರುದ್ಧ ಒಕ್ಕಲಿಗರನ್ನು ಎತ್ತಿಕಟ್ಟಿ, ಒಕ್ಕಲಿಗ ಯುವ ಪೀಳಿಗೆಯಲ್ಲಿ ಕೋಮುದ್ವೇಷ ಪ್ರಚೋದಿಸುವುದು ಇದರ ಹಿಂದಿರುವ ಹುನ್ನಾರ. ಇತಿಹಾಸದ ದಾಖಲೆಗಳನ್ನು ತಿರುವಿ ನೋಡಿದಾಗ ಉರೀಗೌಡ, ನಂಜೇಗೌಡ ಟಿಪ್ಪೂವನ್ನು ಕೊಂದಿದ್ದೇ ಅಪ್ಪಟ ಸುಳ್ಳು ಎಂಬುದು ಗೊತ್ತಾಗುತ್ತೆ. ಟಿಪ್ಪೂವಿನ ಕೊನೇ ಕ್ಷಣಗಳನ್ನು ಯುದ್ಧಭೂಮಿಯಲ್ಲಿ ಕಣ್ಣಾರೆ ಕಂಡ ಮೇಜರ್ ಡೇವಿಡ್ ಪ್ರೈಸ್ ಎಂಬ ಬ್ರಿಟಿಷ್ ಅಧಿಕಾರಿಯ ’ಮೆಮೋರೀಸ್ ಆಫ್ ಅರ್ಲಿ ಲೈಫ್ ಅಂಡ್ ಸರ್ವಿಸಸ್ ಆಫ್ ಎ ಫೀಲ್ಡ್ ಆಫೀಸರ್ ಕೃತಿ ತಿರುವಿಹಾಕಿದರೆ ಸತ್ಯ ಗೊತ್ತಾಗುತ್ತೆ. ಸರ್ ಡೇವಿಡ್ ಬಯಾರ್ಡ್ ಎಂಬ ಬ್ರಿಟಿಷ್ ಸೇನಾಧಿಕಾರಿಯ ಫಿರಂಗಿಯಿಂದ ಟಿಪ್ಪೂ ಅಸುನೀಗಿದ್ದು. ಕ್ಯಾಪ್ಟನ್ ಡಬ್ಲ್ಯು.ಎಚ್.ವಿಲ್ಕಿನ್ ಕೂಡಾ ಇದನ್ನು ದೃಢೀಕರಿಸಿದ್ದಾನೆ. ಉರೀಗೌಡ, ನಂಜೇಗೌಡ ಎಂಬ ಪಾತ್ರಗಳು ಒಕ್ಕಲಿಗರನ್ನು ಟಿಪ್ಪೂ ವಿರುದ್ಧ, ಆ ಮೂಲಕ ಮುಸಲ್ಮಾನರ ವಿರುದ್ಧ ಎತ್ತಿಕಟ್ಟಿ ತನ್ನ ಕೋಮುವಾದ ರಾಜಕಾರಣದ ಕಾಲಾಳುಗಳಾಗಿ ಮಾಡಿಕೊಳ್ಳುವ ಹುನ್ನಾರದಿಂದ ಬಿಜೆಪಿ ಹುಟ್ಟುಹಾಕಿರುವ ಕಾಲ್ಪನಿಕ ಪಾತ್ರಗಳಷ್ಟೆ.

ಅಶ್ವತ್ಥ್‌ನಾರಾಯಣರ ‘ಕೊಲೆಗಡುಕ’ ಹೇಳಿಕೆಯ ಮೂಲಕ ತನ್ನ ಜಾತಿ ಲೆಕ್ಕಾಚಾರದ ಮುಂದಿನ ಹಂತಕ್ಕೆ ಬಿಜೆಪಿ ಹೆಜ್ಜೆಯಿಟ್ಟಿದೆ. ಸಿದ್ದರಾಮಯ್ಯನವರನ್ನು ಇಲ್ಲಿ ಟಾರ್ಗೆಟ್ ಮಾಡಿರೋದು ಅವರು ಕಾಂಗ್ರೆಸ್ ಪಕ್ಷದ ಪ್ರಮುಖ ಎದುರಾಳಿ ಅನ್ನುವ ಕಾರಣಕ್ಕೆ ಮಾತ್ರವಲ್ಲ, ಅದರ ಹಿಂದೆಯೂ ಬಿಜೆಪಿ ಸ್ಪಷ್ಟ ಜಾತಿ ಲೆಕ್ಕಾಚಾರಗಳಿವೆ. ಒಂದು ಕಾಲಕ್ಕೆ ಗುರು-ಶಿಷ್ಯರಂತಿದ್ದ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ನಂತರದ ದಿನಗಳಲ್ಲಿ, ನಿರ್ದಿಷ್ಟವಾಗಿ ಕುಮಾರಸ್ವಾಮಿಯವರ ರಾಜಕೀಯ ಪ್ರವೇಶದ ನಂತರ, ಎರಡು ವಿರುದ್ಧ ದೃವಗಳಂತಾದದ್ದಕ್ಕೆ ಇಡೀ ರಾಜ್ಯವೇ ಸಾಕ್ಷಿ. ಇವತ್ತಿಗೂ ಕುಮಾರಸ್ವಾಮಿಯವರು ಸಿದ್ದರಾಮಯ್ಯನವರ ಮೇಲೆ, ಸಿದ್ದರಾಮಯ್ಯನವರು ಜೆಡಿಎಸ್ ಮೇಲೆ ರಾಜಕೀಯ ವಾಗ್ದಾಳಿ ಮಾಡೋದನ್ನು ನೋಡುತ್ತಲೇ ಇದ್ದೇವೆ. ರಾಜಕೀಯ ಜಿದ್ದಾಜಿದ್ದಿಗಳು ವೈಯಕ್ತಿಕ ಸಂಘರ್ಷದ ಮಟ್ಟಕ್ಕೆ ಹೋಗುವುದು ನಮ್ಮ ನೆಲದಲ್ಲಿ ಹೊಸದೇನೂ ಅಲ್ಲ. ಆದರೆ ಆ ಸಂಘರ್ಷದಲ್ಲೂ ಒಂದು ಘನತೆಯಿರಬೇಕಾಗುತ್ತದೆ, ಸಂವಿಧಾನದ ನೀತಿ-ಚೌಕಟ್ಟುಗಳಿಗೆ ಬದ್ಧವಾಗಿರಬೇಕಾಗುತ್ತದೆ. ಇದರಾಚೆಗೆ, ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಘನತೆಯುಕ್ತ ಬಾಂಧವ್ಯ ಉಳಿದುಕೊಂಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಕಾವೇರಿ ನೀರಿನ ಹಂಚಿಕೆಯ ಚರ್ಚೆಗೆಂದು ದೇವೇಗೌಡರು ಮುಖ್ಯಮಂತ್ರಿಗಳ ಗೃಹಕಚೇರಿಗೆ ಹೋದಾಗ, ಸಿದ್ದರಾಮಯ್ಯನವರು ಸ್ವತಃ ಮನೆ ಬಾಗಿಲಿನವರೆಗೆ ಬಂದು, ದೇವೇಗೌಡರನ್ನು ಕಾರಿನಿಂದ ಇಳಿಸಿಕೊಂಡು ಸ್ವಾಗತಿಸಿದ್ದುಂಟು. ಅದಾದ ಮೇಲೆಯು, ರಾಜಕೀಯ ಕೆಸರೆರಚಾಟಗಳು ನಿರಂತರವಾಗಿ ಮುಂದುವರೆದುಕೊಂಡು ಬಂದಿವೆಯಾದರೂ ಅವು ತಮ್ಮ ಘನತೆಯನ್ನು ಎಂದೂ ಕಳೆದುಕೊಂಡಿಲ್ಲ.

ಒಕ್ಕಲಿಗ ಸಮುದಾಯದಲ್ಲಿ ರಾಜಕೀಯ ವೈವಿಧ್ಯತೆ ಇದ್ದಾಗ್ಯೂ, ಸಮುದಾಯದ ಒಂದು ಬಹುದೊಡ್ಡ ವರ್ಗವು ದೇವೇಗೌಡರು ಮತ್ತು ಅವರ ಕುಟುಂಬದ ಮೇಲೆ ಅಪಾರ ಅಭಿಮಾನ ಇರಿಸಿಕೊಂಡು ಬಂದಿದ್ದಾರೆ. ಜೆಡಿಎಸ್ ಪಕ್ಷದ ಮತಗಳಿಕೆಯ ಪ್ರಮಾಣವನ್ನು ನೋಡಿದಾಗ, ಹಳೇ ಮೈಸೂರು ಪ್ರಾಂತ್ಯದಲ್ಲೇ ಅದು ಹೆಚ್ಚು ಸ್ಥಾನಗಳನ್ನು ಗಳಿಸುತ್ತಾ ಬಂದಿರೋದು ಇದಕ್ಕೆ ಸಾಕ್ಷಿ. ಹಾಗಾಗಿ, ಈ ಅಭಿಮಾನಿ ವರ್ಗದ ಒಕ್ಕಲಿಗ ಸಮುದಾಯಕ್ಕೆ ಸಹಜವಾಗಿಯೇ ಸಿದ್ದರಾಮಯ್ಯನವರ ಮೇಲೆ ಅಸಮಾಧಾನವಿದೆ. ೨೦೧೮ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಸೋತಿದ್ದರ ಹಿಂದೆ ಈ ಅಸಮಾಧಾನದ ಪ್ರಭಾವವನ್ನು ನಿರಾಕರಿಸಲಾಗದು.

ಇದನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ, ಇದೀಗ ಅದೇ ಒಕ್ಕಲಿಗ ಸಮುದಾಯದ ಸಿ.ಎನ್.ಅಶ್ವತ್ಥ್‌ನಾರಾಯಣ್ ಅವರ ಮೂಲಕ, ಒಕ್ಕಲಿಗ ಪ್ರಾಬಲ್ಯವಿರುವ ಮಂಡ್ಯದಲ್ಲಿ, ಒಕ್ಕಲಿಗ ಕಾಲ್ಪನಿಕ ಪಾತ್ರಗಳಾದ ಉರೀಗೌಡ ಮತ್ತು ನಂಜೇಗೌಡರನ್ನು ಉಲ್ಲೇಖಿಸಿ ‘ಸಿದ್ದರಾಮಯ್ಯನವರ ಹತ್ಯೆಗೆ’ ಪ್ರಚೋದನಕಾರಿ ಹೇಳಿಕೆ ಕೊಡಿಸಿದೆ. ಯೋಜನೆ ಸ್ಪಷ್ಟವಾಗಿದೆ. ಇಂಥಾ ಹೇಳಿಕೆಗೆ ಕಾಂಗ್ರೆಸ್‌ನಿಂದ ಅಲ್ಲದಿದ್ದರೂ, ಸಿದ್ದರಾಮಯ್ಯನವರ ಬೆಂಬಲಿಗರಿಂದ ಖಂಡಿತ ವಿರೋಧಗಳು ವ್ಯಕ್ತವಾಗುತ್ತವೆ. ಆ ವಿರೋಧ, ಹೇಳಿಕೆ ಕೊಟ್ಟ ಅಶ್ವತ್ಥ್ ನಾರಾಯಣ್‌ರನ್ನೇ ಕೇಂದ್ರವಾಗಿಸಿಕೊಂಡಿರುತ್ತವೆ. ಜಾತಿಯಿಂದ ಒಕ್ಕಲಿಗರಾಗಿರುವ ಅಶ್ವತ್ಥ್ ನಾರಾಯಣ್ ವಿರುದ್ಧ ಸಿದ್ದರಾಮಯ್ಯನವರ ಬಳಗ ಮುಗಿಬಿದ್ದಷ್ಟೂ, ಸಿದ್ದರಾಮಯ್ಯನವರಿಗೆ ಒಕ್ಕಲಿಗ ವಿರೋಧಿ ಪಟ್ಟಕಟ್ಟಿ, ಆ ಮೂಲಕ ಒಕ್ಕಲಿಗ ಸಮುದಾಯದ ಮೇಲೆ ದೇವೇಗೌಡರ ಕುಟುಂಬದ ಪ್ರಭಾವವನ್ನು ಕುಗ್ಗಿಸಿ, ತನ್ನ ಹಸಿ ಕೋಮುವಾದದ ಪ್ರಭಾವ ಹಿಗ್ಗಿಸಿಕೊಳ್ಳುವುದು ಬಿಜೆಪಿಯ ತತ್‌ಕ್ಷಣದ ಉದ್ದೇಶ.

ಆದರೆ ಬಿಜೆಪಿಯ ಹಿಂದಿನ ನಡೆಗಳನ್ನು ನೋಡುತ್ತಾ ಬಂದರೆ, ಅಶ್ವತ್ಥ್ ನಾರಾಯಣರ ಹೇಳಿಕೆಯ ಅನಾಹುತ ಇದಿಷ್ಟಕ್ಕೇ ಸೀಮಿತವಾಗುವಂತೆ ಕಾಣಿಸದು. ಈಗಾಗಲೇ ಇಂತಹ ಹುನ್ನಾರದ ಮೂಲಕ ಕರಾವಳಿ ಭಾಗದ ಎರಡು ಪ್ರಮುಖ ಸಮುದಾಯಗಳ ಯುವಪೀಳಿಗೆಯಲ್ಲಿ ಕೋಮುವೈಷಮ್ಯ ಬಿತ್ತಿ, ಹೆಣಗಳನ್ನು ಬೀಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಮುಂದೊಂದು ದಿನ ಒಕ್ಕಲಿಗ ಸಮುದಾಯವನ್ನೂ ಅಂತಹ ಅಪಾಯಕ್ಕೆ ತಳ್ಳದು ಎಂಬ ಭರವಸೆಯಿಲ್ಲ. ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವೆ ಅದೇನೆ ರಾಜಕೀಯ ಜಿದ್ದಾಜಿದ್ದಿಯಿದ್ದರೂ, ಯಾರೊಬ್ಬರು ಬಹಿರಂಗವಾಗಿ ಹೀಗೆ ಎದುರಾಳಿಯನ್ನು ಕೊಲೆ ಮಾಡಬೇಕೆನ್ನುವ ಕೀಳುಮಟ್ಟಕ್ಕೆ ಇಳಿದವರಲ್ಲ. ಬಹುಶಃ ಅಶ್ವತ್ಥ ನಾರಾಯಣರ ಹೇಳಿಕೆಯನ್ನು ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಖಂಡಿತ ಒಪ್ಪಲಾರರು.

ಈಗ ಒಕ್ಕಲಿಗರನ್ನು ಊರುಗೋಲಾಗಿಸಿಕೊಂಡು ನೇರ ‘ಕೊಲೆ ರಾಜಕಾರಣಕ್ಕೆ’ ಭಾಷ್ಯ ಬರೆಯುತ್ತಿರುವ ಬಿಜೆಪಿಯ ಈ ಅನೈತಿಕ ನಡೆಯನ್ನು ನಾಡಿನ ಎಲ್ಲರೂ ಕಟುವಾಗಿ ವಿರೋಧಸಬೇಕಿದೆ; ಆ ಹೊಣೆ ಒಕ್ಕಲಿಗ ಸಮುದಾಯದ ಮೇಲೆ ಹೆಚ್ಚಿದೆ. ಇಲ್ಲವಾದಲ್ಲಿ ಕರಾವಳಿ ಭಾಗದ ಕೋಮುಗಲಭೆಗಳಲ್ಲಿ ಹತರಾದವರು ಅಥವಾ ಹತ್ಯೆ ಮಾಡಿ ಜೈಲು ಸೇರಿದವರ ಜಾತಿ ಹಿನ್ನೆಲೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಹೇಗೆ ಒಂದೆರಡು ಪ್ರಬಲ ಜಾತಿಗಳ ಯುವಕರೇ ಕಣ್ಣಿಗೆ ಕಾಣುತ್ತಾರೋ, ಅಂತದ್ದೇ ಪರಿಸ್ಥಿತಿಗೆ ಒಕ್ಕಲಿಗರ ಯುವಪೀಳಿಗೆಯೂ ತುತ್ತಾಗಬೇಕಾಗುತ್ತೆ. ಒಕ್ಕಲಿಗರ ನಡುವೆ ವಿಶ್ವಮಾನವತೆಯ ಕುವೆಂಪು ಅವರು ಮರುಹುಟ್ಟು ಪಡೆಯಬೇಕಾದ ಕಾಲ ಇದು.

- ಮಾಚಯ್ಯ ಎಂ. ಹಿಪ್ಪರಗಿ (ಕೃಪೆ: ವಾಟ್ಸ್ಯಾಪ್)

Advertisement
Advertisement
Recent Posts
Advertisement